-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದುಪಟ್ಟಾಗಳು ಇಂದು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ, ಪ್ರಿಂಟ್ಸ್‌ನಲ್ಲಿ ಬಿಡುಗಡೆಗೊಳ್ಳುತ್ತಿವೆ. ಮೊದಲೆಲ್ಲಾ ಡಿಸೈನರ್‌ವೇರ್‌ಗಳ ಜೊತೆಗೆ ದೊರೆಯುತ್ತಿದ್ದ ದುಪಟ್ಟಾಗಳು (Dupatta Selection Tips) ಇದೀಗ ಪ್ರತ್ಯೇಕವಾಗಿಯೂ ದೊರೆಯುತ್ತಿವೆ. ಅಷ್ಟು ಮಾತ್ರವಲ್ಲ, ಡಿಸೈನ್ ಮಾಡಿಸುವ ಉಡುಗೆಗೆ ತಕ್ಕಂತೆ ದುಪಟ್ಟಾ ಮ್ಯಾಚ್ ಮಾಡುವ ಕ್ರೇಝ್ ಮೊದಲಿಗಿಂತ ಹೆಚ್ಚಾಗಿದೆ. ಕೆಲವೊಮ್ಮೆಯಂತೂ ದುಪಟ್ಟಾಗಳೇ ಡಿಸೈನರ್‌ವೇರ್‌ಗಿಂತ ಆಕರ್ಷಕವಾಗಿ ಕಾಣಿಸುತ್ತವೆ. ಆ ಮಟ್ಟಿಗೆ ದುಪಟ್ಟಾಗಳು ಇಂದು ಪ್ರಾಮುಖ್ಯತೆ ಪಡೆದುಕೊಂಡಿವೆ.
ದುಪಟ್ಟಾಗಳ ಪ್ರಮುಖ ಪಾತ್ರ
“ದುಪಟ್ಟಾಗಳು ಇಂದು ಎಥ್ನಿಕ್ ಡಿಸೈನರ್‌ವೇರ್‌ಗಳಿಗೆ ಸಾಥ್ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅದು ಯಾವುದೇ ಗ್ರ್ಯಾಂಡ್ ಡ್ರೆಸ್ ಆಗಿರಲಿ ಸಿಂಪಲ್ ಉಡುಪಾಗಿರಲಿ ಅವುಗಳ ಡಿಸೈನ್‌ಗೆ ತಕ್ಕಂತೆ ದುಪಟ್ಟಾ ಧರಿಸುವುದು ಆಯಾ ಯುವತಿಯ ಅಭಿರುಚಿಯನ್ನು ತೋರ್ಪಡಿಸುತ್ತದಂತೆ” ಹಾಗೆನ್ನುತ್ತಾರೆ ಸ್ಟೈಲಿಸ್ಟ್ ಗೀತಾ. ಅವರು ಹೇಳುವಂತೆ, ಇವುಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡುವಾಗ ಒಂದಿಷ್ಟು ಸಲಹೆಗಳನ್ನು ಪಾಲಿಸುವುದು ಉತ್ತಮ ಎನ್ನುತ್ತಾರೆ.
ಗ್ರ್ಯಾಂಡ್ ಡಿಸೈನರ್‌ವೇರ್‌ಗೆ ಮ್ಯಾಚಿಂಗ್
ಗ್ರ್ಯಾಂಡ್ ಡಿಸೈನರ್‌ವೇರ್‌ಗೆ ದುಪಟ್ಟಾ ಆಯ್ಕೆ ಮಾಡುವಾಗ ಆದಷ್ಟೂ ಡಿಸೈನ್ ಹಾಗೂ ಕಲರ್‌ಗೆ ಪ್ರಾಮುಖ್ಯತೆ ನೀಡಬೇಕು. ಟ್ರೆಂಡಿಯಾಗಿರುವ ದುಪಟ್ಟಾ ಖರೀದಿಸಿದರಷ್ಟೇ ಸಾಲದು, ಅದಕ್ಕೆ ತಕ್ಕಂತೆ ಮ್ಯಾಚ್ ಮಾಡುತ್ತಿರುವ ಎಥ್ನಿಕ್ ಉಡುಪುಗಳು ಮ್ಯಾಚ್ ಆಗಬೇಕು.
ಲೆಹೆಂಗಾ ದುಪಟ್ಟಾ
ಲೆಹೆಂಗಾಗಳಿಗೆ ದುಪಟ್ಟಾ ಹೊಂದಿಸುವುದಾದಲ್ಲಿ ಇಂದು ಟ್ರೆಂಡಿಯಾಗಿರುವ ಕಾಂಟ್ರಾಸ್ಟ್ ಶೇಡ್‌ನವನ್ನು ಆಯ್ಕೆ ಮಾಡಿ. ಸಿಂಪಲ್ ಆದ್ರೆ ಸಾಕು ಎನ್ನುವವರು ಮಾನೋಕ್ರೋಮ್ ಶೇಡ್ಸ್‌ಗೆ ಮೊರೆ ಹೋಗಬಹುದು. ದುಪಟ್ಟಾ ಉದ್ದನಾಗಿರಬೇಕು. ಅದನ್ನು ದಾವಣಿ ಎನ್ನಲಾಗುತ್ತದೆ.
ಫ್ಯಾಬ್ರಿಕ್ ಸೆಲೆಕ್ಷನ್
ದುಪಟ್ಟಾ ಫ್ಯಾಬ್ರಿಕ್ ನೋಡಿ ಸೆಲೆಕ್ಷನ್ ಮಾಡಿ. ಯಾಕೆಂದರೇ, ಔಟ್‌ಫಿಟ್ ಭಾರಿ ಡಿಸೈನ್ ಹಾಗೂ ಫ್ಯಾಬ್ರಿಕ್‌ನದ್ದಾದಲ್ಲಿ ಆದಷ್ಟೂ ಲೈಟ್‌ವೈಟ್ ಸಾಫ್ಟ್ ಶೀರ್, ನೆಟ್ಟೆಡ್ನಂತಹ ಪಾರದರ್ಶಕ ದುಪಟ್ಟಾಗಳು ಉತ್ತಮ.
ಸಲ್ವಾರ್ ಕಮೀಝ್/ಚೂಡಿದಾರ್ ಸೆಟ್
ಸಾದಾ ಸೆಟ್‌ಗಳಿಗೆ ಭಾರಿ ಡಿಸೈನ್‌ನ ದುಪಟ್ಟಾ ಆಯ್ಕೆ ಬೆಸ್ಟ್. ಗ್ರ್ಯಾಂಡ್ ಡಿಸೈನ್‌ನವಕ್ಕೆ ಸಿಂಪಲ್ ದುಪಟ್ಟಾ ಓಕೆ. ಇನ್ನು, ಧರಿಸುವ ಕುರ್ತಾಗಿಂತ ದುಪಟ್ಟಾ ಉದ್ದನಾಗಿ ಕಾಣಿಸಬೇಕು. ಪಾದಗಳಿಗೆ ತಾಗಬಾರದು.
ಇದನ್ನೂ ಓದಿ: Ambani Family Fashion: ಅಂಬಾನಿ ಕುಟುಂಬದ ಮಹಿಳೆಯರ ಜ್ಯುವೆಲರಿ ಡಿಸೈನ್ಸ್ ಕಾಪಿ ಮಾಡಿ ಟ್ರೆಂಡಿಯಾದ ಜ್ಯುವೆಲರಿಗಳಿವು!
ಗೋಲ್ಡನ್ ಶೇಡ್ ದುಪಟ್ಟಾ
ಗ್ರ್ಯಾಂಡ್ ದುಪಟ್ಟಾಗಳನ್ನು ಬಹುತೇಕ ಎಲ್ಲಾ ಗ್ರ್ಯಾಂಡ್ ಉಡುಪುಗಳಿಗೂ ಮಿಕ್ಸ್ ಮ್ಯಾಚ್ ಮಾಡಬಹುದು. ಅದರಲ್ಲೂ ಬಂಗಾರ ವರ್ಣದ ದುಪಟ್ಟಾಗಳು ಎಲ್ಲಾ ಗೋಲ್ಡ್ ಹಾಗೂ ಸಿಲ್ವರ್ ಝರಿ ಅಥವಾ ಬಾರ್ಡರ್ ಇರುವಂತಹ ಎಥ್ನಿಕ್ ಉಡುಪುಗಳಿಗೆ ಹೊಂದುತ್ತವೆ.
( ಲೇಖಕಿ ಫ್ಯಾಷನ್ ಪತ್ರಕರ್ತೆ )