-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀವು ಫಿಶ್ ಸ್ಪಾ ಪ್ರಿಯರೇ? ಎಲ್ಲಾದರೂ ಫಿಶ್ ಸ್ಪಾ ಕಂಡಾಕ್ಷಣ ನಿಮ್ಮ ಪಾದಾರವಿಂದಗಳನ್ನು ಮೀನುಗಳಿಗೆರುವ ನೀರಿನ ಟ್ಯಾಂಕ್‌ನಲ್ಲಿಟ್ಟು, ನ್ಯಾಚುರಲ್ ಪೆಡಿಕ್ಯೂರ್ ಇದು ಎಂದು ಸಂತಸ ಪಡುತ್ತೀರಾ! ಹಾಗಾದಲ್ಲಿ, ಇದಕ್ಕೂ ಮುನ್ನ, ಒಮ್ಮೆ ಈ ಲೇಖನ ಓದಿ ಬಿಡಿ (Fish Spa Awareness) ಎನ್ನುತ್ತಾರೆ ಸ್ಕಿನ್ ಸ್ಪೆಷಲಿಸ್ಟ್‌ಗಳು.
ಸ್ವಚ್ಛತೆಗೆ ಆದ್ಯತೆ ನೀಡಿ
ಕೆಲವು ಮಾಲ್‌ಗಳಲ್ಲಿ , ರೆಸಾರ್ಟ್‌ಗಳಲ್ಲಿ, ಎಕ್ಸಿಬೀಷನ್‌ಗಳಲ್ಲಿ, ಜಾತ್ರೆ, ವಸ್ತು ಪ್ರದರ್ಶನಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅತಿ ಕಡಿಮೆ ಬೆಲೆಗೆ ಫಿಶ್ ಸ್ಪಾ ಮಾಡಿಸಿಕೊಳ್ಳಿ ಎಂಬ ನಾಮಫಲಕ ತಗುಲಿ ಹಾಕಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ಒಂದೇ ಉದ್ದದ ಟ್ಯಾಂಕ್‌ನಲ್ಲಿ ನಾಲ್ಕೈದು ಮಂದಿ ಕಾಲು ಇಳೆ ಬಿಟ್ಟು, ಆರಾಮವಾಗಿ ರಿಲ್ಯಾಕ್ಸ್ ಮಾಡುತ್ತಿರುವುದನ್ನು ಕಾಣುತ್ತಿರುತ್ತೇವೆ. ಅರ್ಧ ಗಂಟೆ, ಒಂದು ಗಂಟೆಗೆ ಇಂತಿಷ್ಟು ಎಂದು ಕೂಲಾಗಿ ಸ್ಪಾ ಟ್ರೀಟ್‌ಮೆಂಟ್ ಪಡೆಯುವುದನ್ನು ಕಣ್ಣಾರೆ ಕಂಡಿರುತ್ತೇವೆ. ಆದರೆ, ಇಂತಹ ಆಮಿಷಕ್ಕೆ ನೀವು ಮನಸೋಲಬೇಡಿ. ಕಡಿಮೆ ಬೆಲೆಯಲ್ಲಿ ಫಿಶ್ ಸ್ಪಾ ಸಿಗುತ್ತದಲ್ಲ! ಎಂದು ಮುಂದಾಗಬೇಡಿ ಎನ್ನುತ್ತಾರೆ ಸ್ಕಿನ್ ಸ್ಪೆಷಲಿಸ್ಟ್‌ಗಳು. ಇನ್ನು, ಸ್ಪಾಗೆ ನೀವು ಒಳಗಾಗಲೇ ಬೇಕಿದ್ದಲ್ಲಿ ಮೊದಲು ಅಲ್ಲಿನ ವಾತಾವರಣ ಹಾಗೂ ಟ್ಯಾಂಕ್ ಸ್ವಚ್ಛತೆಗೆ ಮಾನ್ಯತೆ ನೀಡಿರುವುದನ್ನು ನೋಡಿ ಮುಂದುವರೆಯಿರಿ ಎಂದು ಎಚ್ಚರಿಸುತ್ತಾರೆ.
ನಿಮಗೆ ಇದು ಗೊತ್ತೇ!
ಸಾಮಾನ್ಯವಾಗಿ ಫಿಶ್ ಸ್ಪಾಗಳಲ್ಲಿ ಡೆಡ್ ಸ್ಕಿನ್ ತಿನ್ನುವ ಗಾರ್ರಾ ರುಫಾ ಮೀನುಗಳನ್ನು ಬಳಸಲಾಗುತ್ತದೆ. ಇಲ್ಲಿ ಬಳಸುವ ನೀರಿನಿಂದ ಅತಿ ಸುಲಭವಾಗಿ ಬ್ಯಾಕ್ಟಿರಿಯಾ ಹಾಗೂ ಮೈಕ್ರೋ ವೈರಸ್‌ಗಳು ನಿಮ್ಮ ದೇಹವನ್ನು ಪ್ರವೇಶಿಸುವ ಸಾಧ್ಯತೆಗಳಿವೆಯಂತೆ. ಗಾಯ ಹಾಗೂ ಚರ್ಮಸಂಬಂಧಿ ಖಾಯಿಲೆ ಇರುವವರೇನಾದರೂ ಈ ಫಿಶ್ ಸ್ಪಾ ಬಳಸಿದ್ದಲ್ಲಿ, ಅಲ್ಲಿಯೇ ಕಾಲನ್ನು ಹಾಕಿ ಪೆಡಿಕ್ಯೂರ್‌ಗೆ ಒಳಗಾಗುವವರಿಗೂ ಸೋಂಕು ತಗುಲಬಹುದಂತೆ. ಈ ಹಿನ್ನೆಲೆಯಲ್ಲಿ, ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಫಿಶ್ ಸ್ಪಾ ಬ್ಯಾನ್ ಕೂಡ ಮಾಡಲಾಗಿದೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ಸ್.
ಫಿಶ್ ಸ್ಪಾದಿಂದ ಬೆರಳು ಕಳೆದುಕೊಂಡಿದ್ದ ಮಹಿಳೆ ಕಥೆ
ಕಳೆದ 2018ರಲ್ಲಿ ವಿದೇಶಿ ಮಹಿಳೆಯೊಬ್ಬಳು ಥೈಲ್ಯಾಂಡ್‌ನ ಫಿಶ್ ಸ್ಪಾದಲ್ಲಿ ಪಾದಗಳಿಗೆ ಸೋಂಕು ತಗುಲಿಸಿಕೊಂಡು, ತನ್ನ ಬಲಪಾದದ ಎಲ್ಲಾ ಬೆರಳುಗಳನ್ನು ಕಳೆದುಕೊಂಡಿದ್ದಳು. ಇದು ಅಂದು ದೊಡ್ಡ ನ್ಯೂಸ್ ಆಗಿತ್ತು. ಹಾಲಿಡೇ ಮುಗಿಸಿ, ಮನೆಗೆ ವಾಪಾಸ್ಸಾದಾಗ ಜ್ವರದಿಂದ ನರಳಿದ್ದ ಮಹಿಳೆಗೆ ಸಾಕಷ್ಟು ಪರೀಕ್ಷೆಗಳನ್ನು ಮಾಡಿಸಿದಾಗ ಕಂಡು ಬಂದದ್ದು, ಫಿಶ್ ಸ್ಪಾದಲ್ಲಿದ್ದ (Osteomyelitis) ಬ್ಯಾಕ್ಟಿರಿಯಾದಿಂದ ಮೂಳೆ ಸೋಂಕು ತಗುಲಿತ್ತಂತೆ. ನಂತರ ಆಕೆಗೆ ಅರಿವಿಲ್ಲದಂತೆಯೇ ಆ ಬ್ಯಾಕ್ಟಿರಿಯಾಗಳು ಬೆರಳುಗಳನ್ನೇ ತಿಂದು ಹಾಕಿದ್ದವಂತೆ. ಈ ಘಟನೆ ಫಿಶ್ ಸ್ಪಾ ಪ್ರಿಯರಿಗೆ ಎಚ್ಚರಿಕೆ ಗಂಟೆ ಬಾರಿಸಿತ್ತು ಎನ್ನುತ್ತಾರೆ ಸ್ಕಿನ್ ಸ್ಪೆಷಲಿಸ್ಟ್ ಡಾ. ರುತಿಜಾ.
ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್‌ನಲ್ಲಿ ಮಹಿಳೆಯರನ್ನು ಸೆಳೆಯುತ್ತಿವೆ ಈ 3 ಟ್ರೆಡಿಷನಲ್ ಮಾಟಿಗಳು
ಯಾರ್ಯಾರು ಫಿಶ್ ಪೆಡಿಕ್ಯೂರ್‌ಗೆ ಒಳಗಾಗಬಾರದು?
- ಡಯಾಬೀಟಿಸ್ ಇರುವಂತಹ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಫಿಶ್ ಪೆಡಿಕ್ಯೂರ್‌ಗೆ ಒಳಗಾಗಬಾರದು.
- ಇಮ್ಯೂನಿಟಿ ಕಡಿಮೆ ಇರುವವರು ಹಾಗೂ ಇಮ್ಯೂನಿಟಿ ಏರುಪೇರಾಗುವಂತವರು ಕೂಡ ಫಿಶ್ ಪೆಡಿಕ್ಯೂರ್ ಮಾಡಿಸಬಾರದು.
- ಚರ್ಮದ ಖಾಯಿಲೆ ಇರುವವರು ಫಿಶ್ ಸ್ಪಾ ಮಾಡಿಸಬಾರದು.
( ಲೇಖಕಿ ಫ್ಯಾಷನ್ ಪತ್ರಕರ್ತೆ )