-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಧಿಕಾ ಮರ್ಚೆಂಟ್ ತಮ್ಮ ಪ್ರಿ –ವೆಡ್ಡಿಂಗ್‌ನ ಅರಿಷಿಣ ಶಾಸ್ತ್ರದಲ್ಲಿ ಧರಿಸಿದ್ದ ದುಬಾರಿ ಫ್ಲೋರಲ್ ದುಪಟ್ಟಾ, ಇದೀಗ ಕೇವಲ 2 ಸಾವಿರ ರೂ.ಗಳಿಗೆ ಮರು ಸೃಷ್ಟಿಯಾಗಿದೆ. ಹೌದು. ದಿಲ್ಲಿ ಮೂಲದ ಫ್ಯಾಷನ್ ಇನ್‌ಫ್ಲೂಯೆನ್ಸರ್ ಅರುಶಿ ಪಾಹ್ವಾ ಎಂಬುವರು ಈ ಫ್ಲೋರಲ್ ದುಪಟ್ಟಾವನ್ನು ಮರು ಸೃಷ್ಟಿಸಿದ್ದು, ಫ್ಯಾಷನ್ ಲೋಕದಲ್ಲಿ ಇವರ ಈ ಕ್ರಿಯೇಟಿವಿಟಿಗೆ ಪ್ರಶಂಶೆಯ ಸುರಿಮಳೆಯಾಗಿದೆ.
ಕೈಗೆಟಕುವ ಬೆಲೆಯಲ್ಲಿ ಫ್ಲೋರಲ್ ದುಪಟ್ಟಾ ರೀ ಕ್ರಿಯೇಷನ್
ಅಬ್ಬಬ್ಬಾ… ಕೆಲವು ಸೆಲೆಬ್ರೆಟಿಗಳ ಡಿಸೈನರ್‌ವೇರ್‌ಗಳನ್ನು ನೋಡಿದಾಗ, ದುಬಾರಿಯಾಗಿರುವ ಇಂಥವನ್ನು ಸಾಮಾನ್ಯ ಹೆಣ್ಣು ಮಕ್ಕಳು ಕೊಳ್ಳಲು ಅಥವಾ ಧರಿಸಲು ಸಾಧ್ಯವೇ ಇಲ್ಲ ಎಂಬುದನ್ನು ಸುಳ್ಳಾಗಿಸಿದ್ದಾರೆ ಫ್ಯಾಷನ್ ಇನ್‌ಫ್ಲೂಯೆನ್ಸರ್ ಅರುಶಿ. ಇದು ಸಾಕಷ್ಟು ಸ್ಥಳೀಯ ಹಾಗೂ ಭಾವಿ ಡಿಸೈನರ್‌ಗಳಿಗೆ ಮಾದರಿಯಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಜಿಯಾ.
ದುಂಡು ಮಲ್ಲಿಗೆ ದುಪಟ್ಟಾ ರೀ ಕ್ರಿಯೇಟ್ ಮಾಡಿದ ಕಥೆ
ಅಂದಹಾಗೆ, ಅರುಶಿಯವರು, ರೀ ಕ್ರಿಯೇಟ್ ಮಾಡುವ ಮೊದಲು ಎಲ್ಲಾ ಹೂ ಮಾರಾಟಗಾರರು ಹಾಗೂ ಡಿಸೈನರ್‌ಗಳ ಬಳಿ ಹೋಗಿ ವಿಚಾರಿಸಿ ಕೇಳಿದರಂತೆ. ಕೆಲವರು ಕನಿಷ್ಟವೆಂದರೂ ಹದಿನೈದು ಸಾವಿರ ರೂ.ಗಳಾಗಬಹುದು ಎಂದರಂತೆ. ಇನ್ನು, ಕೆಲವರು ಅತಿ ಬೇಗ ಮುದುಡುವ ಹೂವಾದ್ದರಿಂದ ರೆಡಿ ಮಾಡಿಕೊಡಲು ಒಲ್ಲೆ ಎಂದರಂತೆ. ಆಗ ಅರುಶಿ, ತಾವೇ ಖುದ್ದು ರೀ ಕ್ರಿಯೇಟ್ ಮಾಡುವ ಕೆಲಸಕ್ಕೆ ಕೈ ಹಾಕಿದರಂತೆ. ಇದನ್ನು ಅವರು ತಮ್ಮ ಯೂ ಟ್ಯೂಬ್‌ನಲ್ಲಿನ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ, ತಾವು ಇದಕ್ಕಾಗಿ ಚಾಂದನಿ ಚೌಕ್‌ನಿಂದ ಮೋತಿ ನಗರ್‌ವರೆಗೂ ಹೂವಿನ ಮಾರ್ಕೆಟ್‌ನಲ್ಲಿ ಅಲೆದಲೆದು, ಕೊಂಡು ಮನೆಗೆ ತಂದು, ಅವುಗಳನ್ನು ತಾಳ್ಮೆಯಿಂದ ಹೆಣೆದು, ಪೊಣಿಸಿ, ಕೊನೆಗೂ ರಾಧಿಕಾ ಫ್ಲೋರಲ್ ದುಪಟ್ಟಾದಂತೆಯೇ ಕಾಣುವ ದುಪಟ್ಟಾ ಮರು ಸೃಷ್ಠಿಸಿದರಂತೆ. ಆಗಾಗ್ಗೆ ಹೂಗಳು ಬಾಡದಂತೆ ನೀರನ್ನು ಸಿಂಪಡಿಸಿ, ಕಾಪಾಡಿದರಂತೆ. ನಂತರ ಥೇಟ್ ರಾಧಿಕಾಳಂತೆ ಸಿಂಗರಿಸಿಕೊಂಡು ದುಪಟ್ಟಾ ಧರಿಸಿ ಸಂತಸ ಪಟ್ಟಿದ್ದನ್ನು ಅವರು ಮರೆಯಲಾಗುವುದಿಲ್ಲವಂತೆ.
ಅರುಶಿಯನ್ನು ಹಾಡಿ ಹೊಗಳಿದ ಫ್ಯಾಷನ್ ವಿಶ್ಲೇಷಕರು
ಸೆಲೆಬ್ರೆಟಿ ಡಿಸೈನರ್ ಅನಾಮಿಕಾ ಖನ್ನಾ ಅವರ ಡಿಸೈನ್‌ನಲ್ಲಿ ತಯಾರಾದ ರಾಧಿಕಾ ಫ್ಲೋರಲ್ ದುಪಟ್ಟಾದಂತೆಯೇ, ಅರುಶಿ ಅವರು ಸಿದ್ಧಪಡಿಸಿದ ಹೂವುಗಳ ದುಪಟ್ಟಾ ಫ್ಯಾಷನ್ ವಿನ್ಯಾಸಕರ ಮನಗೆದ್ದಿದೆ. ಅಲ್ಲದೇ, ಅತಿ ಕಡಿಮೆ ಬೆಲೆಯಲ್ಲಿ, ಸುಮಾರು 12 ಗಂಟೆಗಳ ಕಾಲ ಕಷ್ಟಪಟ್ಟು, ರೀ ಕ್ರೀಯೇಟ್ ಮಾಡಿರುವುದು ಫ್ಯಾಷನ್ ವಿಶ್ಲೇಷಕರ ಮನ ಗೆದ್ದಿದೆ. ಸಾಮಾನ್ಯ ಮಹಿಳೆಯು ಕೂಡ ಕಡಿಮೆ ಖರ್ಚಿನಲ್ಲಿ ಸೆಲೆಬ್ರೆಟಿ ಲುಕ್ ನೀಡುವ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸಬಹುದಕ್ಕೆ ಮಾದರಿಯಾಗಿದೆ. ಇಂತಹವರನ್ನು ಪ್ರೋತ್ಸಾಹಿಸಬೇಕು ಎಂದಿದ್ದಾರೆ ಫ್ಯಾಷನಿಸ್ಟಾಗಳಾದ ವಿದ್ಯಾ ಹಾಗೂ ರಾಕಿ.
ಇದನ್ನೂ ಓದಿ: Monsoon Fashion: ಮಾನ್ಸೂನ್‌ಗೆ ಮರಳಿದೆ ಕಾರ್ಪೋರೇಟ್ ಯುವತಿಯರ ಬ್ಲೇಜರ್ ಜಾಕೆಟ್ ಫ್ಯಾಷನ್
(ಲೇಖಕಿ ಫ್ಯಾಷನ್ ಪತ್ರಕರ್ತೆ)