ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿಷ್ಠಿತ ಬ್ರಾಂಡೆಡ್ ಟ್ರೆಂಡಿ ಹ್ಯಾಂಡ್‌ಬ್ಯಾಗ್‌ಗಳ (Costliest Handbags) ಬೆಲೆ ಲಕ್ಷ ರೂ. ಗಳಿಗಿಂತ ಹೆಚ್ಚು ಎಂದರೇ ನಂಬುತ್ತೀರಾ! ಖಂಡಿತಾ. ಹೌದು. ಹಾಲಿವುಡ್ ಸೆಲೆಬ್ರೆಟಿಗಳ ಹಾಗೂ ಶ್ರೀಮಂತರ ಕೈಗಳನ್ನು ಸೇರುವ ಈ ವ್ಯಾನಿಟಿ ಬ್ಯಾಗ್‌ಗಳು, ಸಾಮಾನ್ಯ ಡಿಸೈನ್ ಹೊಂದಿದ್ದರೂ ಕೂಡ ದುಬಾರಿ ಬೆಲೆಯ ಟ್ಯಾಗ್‌ಗಳನ್ನು ತಗುಲಿಹಾಕಿಕೊಂಡಿವೆ.
ನಮ್ಮಲ್ಲಿ ಕಾಲೇಜು ಹುಡುಗಿಯರಿದಿಂದಿಡು ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರ ನೆಚ್ಚಿನ ಲಿಸ್ಟ್‌ಗೆ ಸೇರುವ ಹ್ಯಾಂಡ್‌ಬ್ಯಾಗ್‌ಗಳು ಕಡಿಮೆಯೆಂದರೂ ಐನೂರು ರೂ.ಗಳಿರುತ್ತವೆ. ಹೆಚ್ಚೆಂದರೇ, ಸ್ಥಳೀಯ ಬ್ರಾಂಡ್‌ಗಳವು ಮೂರ್ನಾಲ್ಕು ಅಥವಾ ಒಂದೈದು ಸಾವಿರ ರೂ.ಗಳವರೆಗೆ ಇರುತ್ತವೆ. ಇನ್ನು ಏರ್‌ಪೋರ್ಟ್ ಹಾಗೂ ಮಾಲ್‌ಗಳಲ್ಲಿ ದೊರೆಯುವ ಬ್ರಾಂಡೆಡ್ ಹ್ಯಾಂಡ್ ಬ್ಯಾಗ್‌ಗಳು ಹೆಚ್ಚೆಂದರೇ ಒಂದಿಪ್ಪತ್ತು ಸಾವಿರ ದಾಟಬಹುದು. ಆದರೆ, ಲಕ್ಷಗಟ್ಟಲೇ ಬೆಲೆ ಬಾಳುವ ಹ್ಯಾಂಡ್ ಬ್ಯಾಗ್‌ಗಳು ಆನ್‌ಲೈನ್ ಮಾರುಕಟ್ಟೆಯಲ್ಲಿ ಬಿಕರಿಗೊಳ್ಳುತ್ತಿವೆ ಎಂದರೇ ಅಚ್ಚರಿಯಾಗುತ್ತದಲ್ಲವಾ! ಆದರೆ, ಇದು ನಿಜ. ಆನ್‌ಲೈನ್ ಮಾರುಕಟ್ಟೆಗಳಲ್ಲಿ ಆಯಾ ಬ್ರಾಂಡ್‌ಗಳ ಲಕ್ಷರೂ. ಬೆಲೆ ಬಾಳುವ ಬ್ಯಾಗ್‌ಗಳು ಸುಲಭವಾಗಿ ಲಭ್ಯ. ಶ್ರೀಮಂತ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡ ಇಂಟರ್‌ನ್ಯಾಷನಲ್ ಬ್ಯಾಂಡ್‌ಗಳು ಆಗಾಗ್ಗೆ ಇಲ್ಲಿ ಬಿಡುಗಡೆಗೊಳಿಸುತ್ತಿರುತ್ತವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಇನ್ನು, ಇದಕ್ಕೆ ಸಾಕ್ಷಿ ಎಂಬಂತೆ ಲೂಯಿಸ್ ವ್ಯುಟಾನ್ ಬ್ರಾಂಡ್‌ನ ಹ್ಯಾಂಡ್‌ಬ್ಯಾಗ್‌ಗಳನ್ನು ಉದಾಹರಣೆಯಾಗಿ ನೀಡಬಹುದು. ಇದೇ ರೀತಿ ಸದ್ಯಕ್ಕೆ ಯಾವ್ಯಾವ ಡಿಸೈನ್‌ನವು ಈ ದುಬಾರಿ ಲಿಸ್ಟ್‌ನಲ್ಲಿವೆ ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷೀಪ್ತ ವಿವರ.
ಸ್ಯಾಂಡ್‌ವಿಚ್ ಬ್ಯಾಗ್
ಸ್ಯಾಂಡ್‌ವಿಚ್ ಆರ್ಡರ್ ಮಾಡಿದಾಗ ಡಿಲಿವರಿ ಮಾಡುವ ಪೇಪರ್ ಬ್ಯಾಗ್‌ನಂತೆ ಹೋಲುವ ಬ್ಯಾಗ್ ವಿನ್ಯಾಸವನ್ನೇ ಹೋಲುವಂತಹ ಲೆದರ್ ಬ್ಯಾಗ್ ಇದು. ಲೂಯಿಸ್ ವ್ಯುಟಾನ್ ಬ್ರಾಂಡ್ ಇದೀಗ ಈ ಕಾನ್ಸೆಪ್ಟ್‌ನ ಬ್ಯಾಗ್ ಬಿಡುಗಡೆ ಮಾಡಿದ್ದು ಇದರ ಬೆಲೆ ಭಾರತೀಯ ಬೆಲೆಯಲ್ಲಿ ಸರಿಸುಮಾರು 2.8 ಲಕ್ಷ ರೂ. ಬೆಲೆಯಂತೆ.
ವಿಮಾನ ಆಕಾರದ ಹ್ಯಾಂಡ್ ಬ್ಯಾಗ್
2021ರಲ್ಲಿ ಬಿಡುಗಡೆಗೊಂಡ ಏರೋಪ್ಲೇನ್ ಶೇಪ್‌ನ ಈ ಬ್ರಾಂಡ್‌ನ ಬ್ಯಾಗ್ ಬೆಲೆ ಕೂಡ 39,000 ಡಾಲರ್ ಇತ್ತು. ಇನ್ನು ಭಾರತೀಯ ರೂಪಾಯಿಗಳಲ್ಲಿ 28 ಲಕ್ಷ ರೂ.ಗಳೆನ್ನಬಹುದು. ಇದು ಕೂಡ ಹಾಲಿವುಡ್‌ನ ಬೆರಳೆಣಿಕೆ ನಟಿಯರ ಕೈಗಳಲ್ಲಿ ಕಾಣಿಸಿಕೊಂಡಿತ್ತು.
ಚಿಪ್ಸ್ ಪ್ಯಾಕ್ ರಿಪ್ಲೀಕಾ ಹ್ಯಾಂಡ್ ಬ್ಯಾಗ್
ಲೆಯಿಸ್ ಚಿಪ್ಸ್ ಪ್ಯಾಕೆಟ್ ಹೋಲುವ ಬ್ಯಾಲೆನ್ಸಿಯಾಗ ಬ್ರಾಂಡ್‌ನ ಹ್ಯಾಂಡ್ ಬ್ಯಾಗ್ ಕೂಡ ಒಂದಿಷ್ಟು ಸಮಯ ವಿದೇಶದಲ್ಲಿ ಟ್ರೆಂಡ್ ಹುಟ್ಟು ಹಾಕಿತ್ತು. ಅಷ್ಟು ಮಾತ್ರವಲ್ಲದೇ, ಕೆಲವು ರಾಷ್ಟ್ರಗಳಲ್ಲಿ ನಗೆಪಾಟಲಿಗೀಡಾಗಿತ್ತು. ಯಾಕೆಂದರೇ, ಅದಕ್ಕೆ ಲಕ್ಷಗಟ್ಟಲೆ ರೂ. ಕೊಟ್ಟು ಈ ಬ್ಯಾಗ್ ಕೊಳ್ಳಬೇಕಾ! ಎಂದು ಸಾಕಷ್ಟು ಫ್ಯಾಷನ್ ಪ್ರೇಮಿಗಳು ತಮ್ಮ ಬ್ಲಾಗ್‌ಗಳಲ್ಲಿ ಬರೆದುಕೊಂಡಿದ್ದರು.ಭಾರತೀಯ ರೂಪಾಯಿಯಲ್ಲಿ ಇದರ ಬೆಲೆ ಹೇಳುವುದಾದಲ್ಲಿ 1.24 ಲಕ್ಷ ರೂ.ಗಳೆನ್ನಲಾಗಿದೆ.
ಟೋಟೆ ಹ್ಯಾಂಡ್‌ಬ್ಯಾಗ್
2017ರಲ್ಲಿ ಬಿಡುಗಡೆಗೊಂಡ ಟೋಟೆ ಬ್ಯಾಗ್‌ನಂತೆ ಕಾಣುವ ಹ್ಯಾಂಡ್‌ಬ್ಯಾಗ್ ಬೆಲೆ ಎಷ್ಟು ಎಂದು ಕೊಂಡಿದ್ದೀರಾ! 2000 ಡಾಲರ್, ಅಂದರೇ, ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 1.65 ಲಕ್ಷ ರೂ. ಬೆಲೆ ಎನ್ನಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Jhumka Neck Chain Fashion: ಯುವತಿಯರ ಕುತ್ತಿಗೆ ಅಲಂಕರಿಸಲು ಬಂತು ಜುಮ್ಕಾ ಸರಗಳು!