ಇಂದು ಅಂತಾರಾಷ್ಟ್ರೀಯ ಮಣ್ಣಿನ ದಿನ (International Mud Day). ಇತ್ತೀಚೆಗೆ ಮಣ್ಣಿನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಸುದ್ದಿಯನ್ನೇ ಕೇಳುತ್ತಿರುವ ನಮಗೆ ಮಣ್ಣಿನ ದಿನವೆಂದರೆ ಕಣ್ ಬಿಡುವಂತಾಗುವುದು ಸಹಜ. ಅಥವಾ ಎಂದಾದರೂ ಮಣ್ಣಲ್ಲಿ ಮಣ್ಣಾಗಿ ಹೋಗುವಂಥ ಆಧ್ಯಾತ್ಮದ ಬಗ್ಗೆ ಯೋಚಿಸಲೂ ಬಹುದು. ಇಂಥ ಯಾವ ವಿಷಯಕ್ಕೂ ಅಲ್ಲ, ಮಣ್ಣಾಟ ಆಡುವುದರಲ್ಲಿರುವ ಸೊಗಸನ್ನು ಎತ್ತಿ ಹಿಡಿಯುವ ಉದ್ದೇಶ ಈ ದಿನಕ್ಕಿದೆಯಂತೆ. ಮಣ್ಣು ಮುಕ್ಕುವುದೆಂದರೆ ಸೋಲುವ, ಮಣ್ಣೆರಚುವುದೆಂದರೆ ಹಾಳು ಮಾಡುವುದೆಂದೇ ಭಾವಿಸುವ ನಮಗೆ, ಮಣ್ಣಿನ ಸಾಂಗತ್ಯದಿಂದ ಬದುಕಿನಲ್ಲಿ ಆಗುವ ಧನಾತ್ಮಕ ಪರಿಣಾಮವನ್ನು ಅರಿಯುವುದಕ್ಕೆ ಇಂಥ ದಿನಗಳು ಅನುವು ಮಾಡಿಕೊಡುತ್ತವೆ. ಮಣ್ಣೆಂದರೆ ಕೃಷಿ ಎನ್ನುವ ಜನಪ್ರಿಯ ಕಲ್ಪನೆಯೇ ಮನಸ್ಸಿಗೆ ಬರುತ್ತದೆ. ಅದು ನಿಜವೂ ಹೌದು. ಅದಲ್ಲದೆ ಮಣ್ಣಿನ ಮಡಿಕೆಗಳಲ್ಲಿ ಆಹಾರ ಬೇಯಿಸುತ್ತಿದ್ದ ದಿನಗಳಿಂದ ಹಿಡಿದು ಮಣ್ಣನ್ನು ಔಷಧಿಯಾಗಿ ಉಪಯೋಗಿಸುವವರೆಗೆ ಬಹಳಷ್ಟು ಬಗೆಯಲ್ಲಿ ಮಣ್ಣಿನೊಂದಿಗೆ ನಮಗೆ ನಂಟಿದೆ. ಮಣ್ಣು ತಿಂದು ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿದ ತುಂಟ ಕೃಷ್ಣನಿಂದ ತೊಡಗಿ, ಮಣ್ಣಲ್ಲಾಡುವ ಎಲ್ಲ ಮಕ್ಕಳಿಗೂ ಕಲ್ಲು-ಮಣ್ಣುಗಳೇ ಮಿತ್ರರು. ಆದರೀಗ ಮಕ್ಕಳು ಮಣ್ಣಲ್ಲಾಡುವುದಕ್ಕಿಂತ ಮೊಬೈಲ್‌ನಲ್ಲಿ ಆಡುವುದೇ ಹೆಚ್ಚು. ಅಂದಹಾಗೆ, ಮಣ್ಣನ್ನು ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ ಎಂಬುದು ಗೊತ್ತೇ?
ಮಣ್ಣಿಗೂ ಮಹತ್ವವಿದೆ
ಈಜಿಪ್ತ್‌ನ ರಾಣಿ ಕ್ಲಿಯೋಪಾತ್ರ ತನ್ನ ಚೆಲುವಿಗೂ ಹೆಸರಾಗಿದ್ದವಳು. ಅವಳ ಚರ್ಮದ ಕಾಂತಿಯ ದೇಖರೇಖಿಯಲ್ಲಿ ಮೃತ ಸಮುದ್ರದ (ಡೆಡ್ ಸೀ) ಮಣ್ಣನ್ನು ಬಳಸುತ್ತಿದ್ದಳಂತೆ. ಇಷ್ಟೇ ಅಲ್ಲ, 19ನೇ ಶತಮಾನದಲ್ಲಿ ಐರೋಪ್ಯ ದೇಶಗಳ ಸ್ಪಾಗಳಲ್ಲಿ ʻಮಡ್ ಬಾತ್ʼ ಜನಪ್ರಿಯಗೊಂಡಿತು. ನೋವುಗಳಿಂದ ಮುಕ್ತರಾಗುವುದಕ್ಕೆ, ಚರ್ಮದ ಕಾಂತಿಗೆ ಹಾಗೂ ಇನ್ನೂ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇದೇ ಮದ್ದು ಎಂಬಂತೆ ಇದನ್ನು ಬಿಂಬಿಸಲಾಗುತ್ತಿತ್ತು. ಇವೆಲ್ಲ ನಿಜವೇ? ಮಣ್ಣನ್ನು ಮೈಗೆಲ್ಲ ಮೆತ್ತಿಕೊಳ್ಳುವುದರಿಂದ ಆರೋಗ್ಯ ಚೆನ್ನಾಗಿ ಆಗುವುದೇ ಅಥವಾ ಇದೂ ಗಾಳಿ ಮೇಲಿನ ಗುಳ್ಳೆಯೇ? ಅಂತಾರಾಷ್ಟ್ರೀಯ ಮಣ್ಣಿನ ದಿನದ ಹಿನ್ನೆಲೆಯಲ್ಲಿ ಮಣ್ಣಿನ ಆರೋಗ್ಯ ಮತ್ತು ಸೌಂದರ್ಯವರ್ಧಕ ಅಂಶಗಳ ಬಗ್ಗೆ ಮಾಹಿತಿ.
ಮಣ್ಣಿನ ಸ್ನಾನ
ಹಲವಾರು ಶತಮಾನಗಳಿಂದ ಮಣ್ಣಿನ ಸ್ನಾನವನ್ನು ಚಿಕಿತ್ಸೆಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಹಳೆಯ ಕಾಲದ ಈಜಿಪ್ತ್, ಗ್ರೀಕ್ ಮತ್ತು ರೋಮನ್ನರು ಇದನ್ನು ಸ್ವಾಸ್ಥ್ಯ ಮತ್ತು ಸೌಂದರ್ಯವನ್ನು ಉದ್ದೀಪಿಸುವ ಮಾರ್ಗವಾಗಿ ಬಳಸುತ್ತಿದ್ದರು. ಬೆಚ್ಚಗಿನ ಮಣ್ಣಿನಲ್ಲಿ ದೇಹವನ್ನು ನೆನೆಸುವುದು, ಆ ಮೂಲಕ ಆರ್ಥರೈಟಿಸ್ ನೋವುಗಳನ್ನು ಕಡಿಮೆ ಮಾಡಿಕೊಳ್ಳುವುದು ಅವರ ಕ್ರಮವಾಗಿತ್ತು. ಇದಕ್ಕಾಗಿ ಬಿಸಿನೀರಿನ ಬುಗ್ಗೆಗಳ ಪ್ರದೇಶವನ್ನು ಅವಲಂಬಿಸುತ್ತಿದ್ದರು. ಅದಲ್ಲದೆ, ಮಣ್ಣಿನ ಪುಟ್ಟ ಕೊಳಗಳನ್ನೂ ನಿರ್ಮಿಸಿಕೊಳ್ಳುತ್ತಿದ್ದರು. ಈ ನಿಸರ್ಗ ಚಿಕಿತ್ಸೆ ಇಂದಿಗೂ ಜನಪ್ರಿಯವಾಗಿದೆ. ಇದಕ್ಕಾಗಿ ಹಲವು ರೀತಿಯ ಮಣ್ಣುಗಳನ್ನು ಬಳಸಲಾಗುತ್ತದೆ. ಒಂದೊಂದು ಬಗೆಯ ಮಣ್ಣಿಗೂ ಅದರದ್ದೇ ಆದ ಅನುಕೂಲಗಳಿವೆ.
- ಮೃತ ಸಮುದ್ರದ ಮಣ್ಣು: ಖನಿಜಗಳಿಂದ ಭರಿತವಾದ ಮಣ್ಣಿದು. ಮೆಗ್ನೀಶಿಯಂ, ಸೋಡಿಯಂ ಮತ್ತು ಪೊಟಾಶಿಯಂ ಅಂಶಗಳು ಇದರಲ್ಲಿ ಅತ್ಯಂತ ಸಾಂದ್ರವಾಗಿರುತ್ತವೆ. ಇದನ್ನು ಡಿಟಾಕ್ಸ್ ಮಾಡುವುದಕ್ಕೆ ಮತ್ತು ಚರ್ಮದ ತೇವ ಹೆಚ್ಚಿಸುವುದಕ್ಕೆ ಉಪಯೋಗಿಸಲಾಗುತ್ತದೆ.
- ಜ್ವಾಲಾಮುಖಿಯ ಬೂದಿ-ಮಣ್ಣು: ಇದನ್ನು ಜ್ವಾಲಾಮುಖಿ ಇದ್ದಂಥ ಜಾಗಗಳಿಂದ ಮಾತ್ರವೇ ಸಂಗ್ರಹಿಸಬಹುದು. ಇದರ ಬೂದಿಯಲ್ಲಿ ಬಹಳಷ್ಟು ರೀತಿಯ ಖನಿಜಗಳು ಸೇರಿಕೊಂಡಿರುತ್ತವೆ. ಚರ್ಮವನ್ನು ಎಕ್ಫಾಲಿಯೇಟ್ ಮಾಡುವುದಕ್ಕೆ ಮತ್ತು ಶುದ್ಧೀಕರಿಸುವುದಕ್ಕೆ ಇದಕ್ಕಿಂತ ಒಳ್ಳೆಯದು ಇನ್ನೊಂದಿಲ್ಲ ಎಂಬ ಅಭಿಪ್ರಾಯವಿದೆ.
- ಬೆಂಟೋನೈಟ್ ಮಣ್ಣು: ಇದು ಜೇಡಿಮಣ್ಣಿನಂಥದ್ದು. ಆದರೆ ಇದನ್ನೂ ಜ್ವಾಲಾಮುಖಿಯ ಪ್ರದೇಶದಿಂದಲೇ ಸಂಗ್ರಹಿಸಲಾಗುತ್ತದೆ.
- ಮುಲ್ತಾನಿ ಮಿಟ್ಟಿ (ಫುಲ್ಲರ್ಸ್ ಅರ್ಥ್): ಇದೂ ಸಹ ಜೇಡಿಮಣ್ಣಿನಂಥದ್ದೇ ಆಗಿದ್ದು, ಅತಿಯಾದ ಎಣ್ಣೆ ಸೂಸುವ ಮುಖಕ್ಕೆ ಇದನ್ನು ಬಳಸಲಾಗುತ್ತದೆ.
ಲಾಭಗಳೇನು?
ಮುಖಕ್ಕೆ ಮಣ್ಣಿನ ಲೇಪ ಮಾಡುವುದಕ್ಕೆ ಅದರದ್ದೇ ಆದ ಲಾಭಗಳಿವೆ. ಚರ್ಮದ ಕಶ್ಮಲಗಳನ್ನು ತೆಗೆದು, ಮುಖಕ್ಕೆ ಬೇಕಾದ ತೇವವನ್ನು ನೀಡುವುದು ಇದರ ಉದ್ದೇಶ. ಅದರಲ್ಲೂ ಖನಿಜಯುಕ್ತವಾದ ಮಣ್ಣನ್ನು ಲೇಪಿಸುವುದರಿಂದ ಚರ್ಮಕ್ಕೆ ಕಾಂತಿಯನ್ನು ಮರಳಿಸಬಹುದು. ಚರ್ಮದ ಮೇಲಿನ ಸತ್ತ ಕೋಶಗಳನ್ನು ತೆಗೆದು, ಹೊಳಪು ನೀಡುತ್ತದೆ. ನೋವುಗಳ ಪರಿಹಾರಕ್ಕಾಗಿ ಬೆಚ್ಚಗಿನ ಮಣ್ಣಿನಿಲ್ಲಿ ಹುದುಗಿ ಕೂರುವುದು ಜನಪ್ರಿಯ ಕ್ರಮ. ಇದರಿಂದ ಶರೀರಕ್ಕೆ ಬೇಕಾದ ವಿಶ್ರಾಂತಿಯನ್ನು ನೀಡಿ, ಒತ್ತಡವನ್ನೂ ನಿವಾರಿಸಿಕೊಳ್ಳಬಹುದು.
ಇದನ್ನೂ ಓದಿ: Orange Peel Benefits: ಕಿತ್ತಳೆ ಸಿಪ್ಪೆ ಎಸೆಯಬೇಡಿ; ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು!
ತೊಂದರೆಗಳಿವೆಯೇ?
ಎಲ್ಲಕ್ಕಿಂತ ಮುಖ್ಯವಾಗಿದ್ದು ಅಲರ್ಜಿ. ಮಣ್ಣಲ್ಲಿ ಇರಬಹುದಾದ ಕೆಲವು ಖನಿಜಗಳು ಹಲವರ ಚರ್ಮಕ್ಕೆ ಅಲರ್ಜಿಯನ್ನು ತರಬಹುದು. ಇದಲ್ಲದೆ ಸ್ವಚ್ಛತೆಯ ಬಗ್ಗೆಯೂ ಗಮನ ನೀಡಬೇಕು. ಯಾವುದೇ ಸ್ಪಾದಲ್ಲಿ ಇಂಥವನ್ನು ಬಳಸುವುದಾದರೂ, ಶುಚಿತ್ವದ ಬಗ್ಗೆ ಬಹಳ ಲಕ್ಷ್ಯ ವಹಿಸುವಂಥ ಜಾಗವನ್ನೇ ಆಯ್ಕೆ ಮಾಡಿ. ಈಗಾಗಲೇ ಒಣ ಚರ್ಮದ ಸಮಸ್ಯೆ ಇರುವವರಿಗೆ ಬೆಂಟೋನೈಟ್ ಮಣ್ಣಿನ ಪ್ಯಾಕ್ ಹಾಕಿದರೆ ಶುಷ್ಕತೆ ಹೆಚ್ಚುತ್ತದೆ. ಹಾಗಾಗಿ ಯಾರಿಗೆ ಯಾವುದು ಎಂಬ ಬಗ್ಗೆ ಮಾಹಿತಿ ಹೊಂದುವುದು ಅಗತ್ಯ.