-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಫ್ತಾನ್ ಕುರ್ತಾ ಫ್ಯಾಷನ್ ಇದೀಗ (Kaftan kurta fashion) ಮಹಿಳೆಯರನ್ನು ಸವಾರಿ ಮಾಡತೊಡಗಿವೆ. ಇದಕ್ಕೆ ಪೂರಕ ಎಂಬಂತೆ, ಸಿನಿಮಾ ನಟಿಯರು ಕೂಡ ತಮ್ಮ ಸಿಂಪಲ್ ಲುಕ್‌ಗಾಗಿ ಈ ಔಟ್‌ಫಿಟ್ ಧರಿಸಲಾರಂಭಿಸಿದ್ದಾರೆ. ತಕ್ಷಣಕ್ಕೆ ನೋಡಲು ದೊಗಲೆಯಾಗಿ ಕಾಣಿಸುವ, ಈ ಶೈಲಿಯ ಕುರ್ತಾ ಸೆಟ್ ಫ್ಯಾಷನ್ ಪ್ರತಿಯೊಬ್ಬರ ವಾರ್ಡ್ರೋಬ್‌ನಲ್ಲೂ ಸ್ಥಾನ ಪಡೆದಿದೆ. ಧರಿಸಿದಾಗ ನೋಡಲು ಫಿಟ್ಟಿಂಗ್ ಇಲ್ಲದಂತೆ ಕಾಣುವ ಈ ಉಡುಗೆ ಧರಿಸಿದವರಿಗೆ ಸಿಂಪಲ್ ಲುಕ್ ಕಲ್ಪಿಸುತ್ತಿವೆ. ಇತ್ತೀಚೆಗೆ ನಟಿ ರಕುಲ್ ಪ್ರೀತ್ ಧರಿಸಿದ ಈ ಶೈಲಿಯ ಕುರ್ತಾ ಸೆಟ್‌ಗಳು ಈಗಾಗಲೇ ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಪ್ಲಂಪಿಯಾಗಿರುವವರಿಗೆ ಉತ್ತಮ ಆಯ್ಕೆ
ಕಫ್ತಾನ್ ಶೈಲಿಯ ಕುರ್ತಾ-ಪ್ಯಾಂಟ್ ಸೆಟ್ ಫ್ಯಾಷನ್ ಹೊಸತೇನಲ್ಲ! ಬಹಳ ಹಿಂದಿನಿಂದಲೇ ಇದೆ. ಉತ್ತರ ಭಾರತದವರ ರಿಲ್ಯಾಕ್ಸಿಂಗ್ ಉಡುಗೆಯಿದು. ಅಂದಹಾಗೆ, ಕುರ್ತಾ –ಪ್ಯಾಂಟ್‌ಗಳಲ್ಲಿ ಊಹೆಗೂ ಮೀರಿದ ಡಿಸೈನ್‌ಗಳಿವೆ. ಅವುಗಳಲ್ಲಿ, ಇದೀಗ ಈ ಕಫ್ತಾನ್ ಶೈಲಿಯ ಕುರ್ತಾ ಫ್ಯಾಷನ್ ಸೇರಿಕೊಂಡಿದೆ. ತೆಳ್ಳಗಿರುವವರಿಗಿಂತ ಕೊಂಚ ಪ್ಲಂಪಿಯಾಗಿರುವವರಿಗೆ ಇವು ಚೆನ್ನಾಗಿ ಕಾಣಿಸುತ್ತವೆ. ಧರಿಸಿದಾಗ ದಪ್ಪಗಿರುವವರ ಓರೆ-ಕೋರೆಗಳನ್ನು ಮುಚ್ಚಿಹಾಕುತ್ತವೆ. ನೋಡಲು ಲೂಸಾಗಿರುವಂತೆ ಕಾಣುವ ಇವು ದೇಹದ ಆಕಾರವನ್ನು ಮರೆಮಾಚುತ್ತವೆ ಎನ್ನುತ್ತಾರೆ ಫ್ಯಾಷನ್ ಡಿಸೈನರ್ ಛಾಯಾ.
ಟ್ರೆಂಡಿಯಾಗಿರುವ ನಾನಾ ಬಗೆಯ ಕಫ್ತಾನ್ ಕುರ್ತಾ ಸೆಟ್ಸ್
ಕಫ್ತಾನ್ ಶೈಲಿಯಲ್ಲಿ ಇದೀಗ ಶಾರ್ಟ್ ಲೆಂಥ್‌ನ ಕುರ್ತಾ ಸೆಟ್, ಶರಾರ ಶೈಲಿಯ ಕುರ್ತಾ, ಸ್ಟ್ರೇಟ್ ಕಟ್ ಕುರ್ತಾ, ಅಸ್ಸೆಮ್ಮಿಟ್ರಿಕಲ್ ಕುರ್ತಾ, ಕೇಪ್ ಸ್ಟೈಲ್ ಕುರ್ತಾ ಸೇರಿದಂತೆ ನಾನಾ ವಿನ್ಯಾಸದವು ಟ್ರೆಂಡ್‌ನಲ್ಲಿವೆ. ಮಾನೋಕ್ರೋಮ್ ಬಗೆಯವು ಮಾರುಕಟ್ಟೆಯಲ್ಲಿ ಹೆಚ್ಚು ಚಾಲ್ತಿಯಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕಫ್ತಾನ್ ಕುರ್ತಾ ಪ್ರಿಯರ ಆಯ್ಕೆ ಹೀಗಿರಲಿ
- ತೀರಾ ದೊಗಲೆಯಾದವು ಆಕರ್ಷಕವಾಗಿ ಕಾಣಿಸುವುದಿಲ್ಲ!
- ಕಫ್ತಾನ್ ಕುರ್ತಾಗಳು ಹರಡಿಕೊಳ್ಳುವುದರಿಂದ ಸಾಫ್ಟ್ ಫ್ಯಾಬ್ರಿಕ್ನದ್ದನ್ನು ಚೂಸ್ ಮಾಡಿ.
- ಇವು ಕೋ –ಆರ್ಡ್ ಸೆಟ್ನಂತೆಯೂ ಕಾಣಿಸುವುದರಿಂದ ಟ್ರೆಂಡಿ ಶೇಡ್ನವನ್ನು ಧರಿಸಬಹುದು.
- ನೆಕ್ಲೈನ್ ಡಿಸೈನ್ ಪರಿಶೀಲಿಸಿ ಖರೀದಿಸಿ.
- ಪ್ರಿಂಟೆಡ್ನವು ಸದ್ಯ ಈ ಸೀಸನ್ನಲ್ಲಿಲ್ಲ !
( ಲೇಖಕಿ ಫ್ಯಾಷನ್ ಪತ್ರಕರ್ತೆ )