ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಷ್ಟ್ರಪ್ರೇಮ (Republic Day) ವ್ಯಕ್ತಪಡಿಸುವ ನೇಲ್ ಆರ್ಟ್ ಗಳು, ಇದೀಗ ಸೋಷಿಯಲ್ ಮೀಡಿಯಾ ಬ್ಯೂಟಿ ಬ್ಲಾಗ್‌ಗಳಲ್ಲಿ ಟ್ರೆಂಡಿಯಾಗಿವೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬ್ಯೂಟಿ ಪ್ರಿಯ ಯುವತಿಯರು ತಮ್ಮ ತಮ್ಮ ಉಗುರುಗಳ ಮೇಲೆ ದೇಶ ಪ್ರೇಮ ಬಿಂಬಿಸುವಂತಹ ನಾನಾ ಬಗೆಯ ಚಿತ್ತಾರಗಳನ್ನು ಮೂಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡತೊಡಗಿದ್ದಾರೆ. ಪರಿಣಾಮ, ಬ್ಯೂಟಿ ಬ್ಲಾಗ್‌ಗಳಲ್ಲಿ ಇದೀಗ ಈ ನೇಲ್ ಆರ್ಟ್ ಡಿಸೈನ್‌ಗಳದ್ದೇ ಹವಾ ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್ ಸೀಮಾ ಕಾಕತ್ಕರ್.
ಸೋಷಿಯಲ್ ಮೀಡಿಯಾ ಬ್ಯೂಟಿ ಬ್ಲಾಗ್‌ಗಳ ಕ್ರೇಜ್
“ ನೇಲ್ ಆರ್ಟ್ ಆಯಾ ಸೀಸನ್‌ಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಕ್ರಿಯಾತ್ಮಕ ನೇಲ್ ಡಿಸೈನರ್‌ಗಳು ತಮ್ಮದೇ ಆದ ಹೊಸ ಬಗೆಯ ಡಿಸೈನ್‌ಗಳನ್ನು ಆಗಾಗ್ಗೆ ಪರಿಚಯಿಸುತ್ತಿರುತ್ತಾರೆ. ಇನ್ನು, ಬ್ಯೂಟಿ ಪ್ರಿಯ ಹುಡುಗಿಯರು ಅಷ್ಟೇ! ಸೀಸನ್ ಅಥವಾ ಸಂದರ್ಭಕ್ಕೆ ತಕ್ಕಂತೆ ತಮ್ಮ ಉಗುರಿನ ನೇಲ್ ವಿನ್ಯಾಸಗಳನ್ನು ಬದಲಿಸುತ್ತಿರುತ್ತಾರೆ. ಇದೀಗ ಕಸ್ಟಮೈಸ್ ನೇಲ್ ಡಿಸೈನ್ ಕೂಡ ಲಭ್ಯವಿರುವುದರಿಂದ ಆಯಾ ಸಂದರ್ಭಕ್ಕೆ ತಕ್ಕಂತೆ ನೇಲ್ ಆರ್ಟ್ ಡಿಸೈನ್ ಮಾಡಿಸಬಹುದು. ಇದಕ್ಕೆ ಪೂರಕ ಎಂಬಂತೆ, ಗಣರಾಜ್ಯೋತ್ಸವದ ಸಂಭ್ರಮಕ್ಕೆ ಸಾಕಷ್ಟು ಕಾಲೇಜು ಹುಡುಗಿಯರು ಹಾಗೂ ಯುವತಿಯರು ಈ ಥೀಮ್‌ನ ನೇಲ್ ಡಿಸೈನ್ಸ್ ಚಿತ್ತಾರ ಮೂಡಿಸಿಕೊಂಡಿದ್ದಾರೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿಕೊಂಡಿದ್ದಾರೆ” ಎನ್ನುತ್ತಾರೆ ನೇಲ್ ಡಿಸೈನರ್ ರೀಟಾ. ಅವರ ಪ್ರಕಾರ, ನಮ್ಮ ರಾಷ್ಟ್ರದ ಹೆಮ್ಮೆಯ ತಿರಂಗಾ ಶೇಡ್‌ಗಳನ್ನು ಬಳಸಿ, ಚಿತ್ತಾರ ಮೂಡಿಸುವುದು ಖುಷಿ ಕೊಡುತ್ತದಂತೆ.
ಟ್ರೆಂಡ್‌ನಲ್ಲಿರುವ ರಾಷ್ಟ್ರಪ್ರೇಮ ಬಿಂಬಿಸುವ ನೇಲ್ ಆರ್ಟ್
ತಿರಂಗಾ ಮಿನಿ ದ್ವಜ, ತ್ರಿವರ್ಣದ ಹೂವುಗಳು, ಮಿನಿ ಇಂಡಿಯಾ ಮ್ಯಾಪ್, ಪೋಲ್ಕಾ ಡಾಟ್ಸ್, ಕೇಸರಿ ಬಿಳಿ ಹಸಿರಿನ ಸ್ಲೈಡ್ಸ್, ಚೆಕ್ಸ್, ಜೆಮೆಟ್ರಿಕಲ್ ಡಿಸೈನ್ಸ್, ಮಿಕ್ಸ್ ಮ್ಯಾಚ್ ಶೇಡ್ಸ್ ಹೀಗೆ ನಾನಾ ಬಗೆಯ ರಾಷ್ಟ್ರಪ್ರೇಮ ಬಿಂಬಿಸುವ ಚಿತ್ತಾರಗಳು, ಯುವತಿಯರ ಕೈಗಳ ಬೆರಳಿನ ಉಗುರುಗಳ ಮೇಲೆ ಮೂಡಿವೆ.
ಇದನ್ನೂ ಓದಿ: Republic Day Bangle Styling: ಗಣರಾಜ್ಯೋತ್ಸವದ ಸಂಭ್ರಮಕ್ಕೆ ತಿರಂಗಾ ಬ್ಯಾಂಗಲ್ಸ್ ಸಾಥ್!
ನೀವೂ ಚಿತ್ತಾರ ಮೂಡಿಸಬಹುದು
ನೇಲ್ ಡಿಸೈನರ್ ಬಳಿ ಹೋಗದೇ ನೀವೂ ಕೂಡ ರಾಷ್ಟ್ರಪ್ರೇಮ ಮೂಡಿಸುವ ಚಿತ್ತಾರ ಮೂಡಿಸಬಹುದು. ಈ ಕುರಿತಂತೆ ನಾನಾ ವಿಡಿಯೋ ಕ್ಲಿಪ್‌ಗಳು ಬ್ಯೂಟಿ ಬ್ಲಾಗ್‌ಗಳಲ್ಲಿ ಹಾಗೂ ಆನ್‌ಲೈನ್‌ನಲ್ಲಿ ದೊರೆಯುತ್ತವೆ. ಇದಕ್ಕಾಗಿ ನಿಮ್ಮ ಬಳಿ ನೇಲ್ ಡಿಸೈನ್ ಕಿಟ್ ಇರಬೇಕು. ತಿರಂಗಾ ನೇಲ್ ಶೇಡ್ಸ್ ಇರಬೇಕು. ಬೇಸಿಕ್ ಕೋಟ್ ಹಚ್ಚಿದ ನಂತರ, ನಿಮಗೆ ಬೇಕಾದ ರೀತಿಯಲ್ಲಿ ತಿರಂಗಾ ವಿನ್ಯಾಸ ಮೂಡಿಸಿಕೊಳ್ಳಬಹುದು ಎಂದು ಸಿಂಪಲ್ ಟಿಪ್ಸ್ ನೀಡುತ್ತಾರೆ ನೇಲ್ ಡಿಸೈನರ್ ರಿಚಾ.
(ಲೇಖಕಿ ಫ್ಯಾಷನ್ ಪತ್ರಕರ್ತೆ)