Site icon Vistara News

National Handloom day 2024: ಕರ್ನಾಟಕದ ಹೆಮ್ಮೆಯ ವಿಶ್ವ ಪ್ರಸಿದ್ಧ ಹ್ಯಾಂಡ್‌ ಲೂಮ್‌ ಸೀರೆಗಳಿವು

National Handloom day 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕರ್ನಾಟಕದಲ್ಲಿ ನಾನಾ (National Handloom day 2024) ಹ್ಯಾಂಡ್‌ಲೂಮ್‌ ಸೀರೆಗಳು ತಯಾರಾಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವುಗಳಲ್ಲಿ ಕೆಲವು ಹ್ಯಾಂಡ್‌ಲೂಮ್‌ ಸೀರೆಗಳು, ಇತ್ತೀಚೆಗೆ ಗಡಿಯಾಚೆಗೂ ದಾಟಿ ಜನಪ್ರಿಯಗೊಂಡಿವೆ. ಜಾಗತಿಕ ಮಟ್ಟದಲ್ಲಿ ಮಹಿಳೆಯರನ್ನು ಸವಾರಿ ಮಾಡತೊಡಗಿವೆ. ಹಾಗಾದಲ್ಲಿ ಈ ಕೆಟಗರಿಯಲ್ಲಿ ಬರುವ ಹ್ಯಾಂಡ್‌ಲೂಮ್‌ ಸೀರೆಗಳು ಯಾವುವು? ಅವುಗಳ ವಿಶೇಷತೆಯೇನು? ಈ ಕುರಿತಂತೆ ಸೀರೆ ಪರಿಣತರು ಇಲ್ಲಿ ವಿವರಿಸಿದ್ದಾರೆ.

ಇಳಕಲ್‌ ಸೀರೆಗಳು

ಉತ್ತರ ಕರ್ನಾಟಕದ ಸೀರೆಗಳಿವು. ಮೂಲತಃ ಇಳಕಲ್‌ನಲ್ಲಿ ಸಿದ್ಧಗೊಳ್ಳುವ ಈ ಸೀರೆಗಳನ್ನು 8ನೇ ಶತಮಾನದಲ್ಲೆ ಉಡಲಾಗುತ್ತಿತ್ತು ಎಂದು ಇತಿಹಾಸ ಹೇಳುತ್ತದೆ. ಅಂದಿನಿಂದ ಇಂದಿನವರೆಗೂ ಇಳಕಲ್‌ ಸೀರೆಗಳು ಯೂನಿಕ್‌ ಡಿಸೈನ್‌ ಆದ ಚುಕ್ಕಿ ಬಾರ್ಡರ್‌, ತೆನಿ ಪಲ್ಲು ಡಿಸೈನ್‌ನಿಂದಲೇ ಸೆಳೆಯುತ್ತಿವೆ.

ಪಟ್ಟೆದ ಅಂಚು ಸೀರೆಗಳು

ವೃತ್ತಿಪರ ಮಹಿಳೆಯರ ಆಯ್ಕೆಯಲ್ಲಿ, ಇತ್ತೀಚೆಗೆ ಸೇರಿರುವ ಈ ಪಟ್ಟೆದ ಅಂಚು ಸೀರೆಗಳು 10ನೇ ಶತಮಾನದಿಂದಲೇ ಇದೆ. ಸೀರೆಯ ಬಾರ್ಡರ್‌ ಮತ್ತು ಚೆಕ್ಸ್ ವಿನ್ಯಾಸವನ್ನು ಹೈಲೈಟ್‌ ಮಾಡುವ ಇವು ಎದ್ದು ಕಾಣುವ ಹಳದಿ, ಕೆಂಪು, ಹಸಿರು ಹಾಗೂ ಗುಲಾಬಿ ಶೇಡ್‌ನಲ್ಲಿ ದೊರೆಯುತ್ತವೆ.

ಗುಳೆದಗುಡ್ಡ ಖಾನ ಸೀರೆಗಳು

ಬಾಗಲಕೋಟೆಯ ಗುಳೇದಗುಡ್ಡ ಗ್ರಾಮದಲ್ಲಿ ಸಿದ್ಧಗೊಳ್ಳುವ ಈ ಸೀರೆಗಳೀಗ ವ್ಯಾಪ್ತಿ ಪ್ರದೇಶವನ್ನು ಮೀರಿ ಖ್ಯಾತಿ ಗಳಿಸಿವೆ. ಗುಳೇದಗುಡ್ಡ ಖಾನ ಫ್ಯಾಬ್ರಿಕ್‌ನಿಂದ ತಯಾರಾಗುವ ಈ ಸೀರೆ ಇದೀಗ ಶರ್ಟ್, ಡ್ರೆಸ್‌ ಹಾಗೂ ಪಿಲ್ಲೋ ಕವರ್‌, ಪರದೆಗಳಿಗೂ ಬಳಕೆಯಾಗುತ್ತಿದೆ.

ಮೊಳಕಾಲ್ಮೂರು ಸಿಲ್ಕ್ ಸೀರೆ

ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ತಯಾರಾಗುವ ಸಿಲ್ಕ್‌ ಸೀರೆಗಳಿವು. ಮೈಸೂರು ಮಹಾರಾಜರ ಕಾಲದಿಂದಲೇ ಸಾಕಷ್ಟು ಜನಪ್ರಿಯಗೊಂಡಿದ್ದ ಸೀರೆಗಳಿವು. ಬಾರ್ಡರ್‌ ಹಾಗೂ ಪಲ್ಲುವಿನಲ್ಲಿ ಮೊಟಿಫ್‌ ಸೇರಿದಂತೆ ನಾನಾ ಡಿಸೈನ್‌ ಒಳಗೊಂಡಿರುತ್ತವೆ.

ಗಜೇಂದ್ರಗಢ್‌ನ ಸೀರೆ

ಗದಗ್‌ ಜಿಲ್ಲೆಯ ಗಜೇಂದ್ರಗಢ್‌ನ ಕೋಟೆ ಕಾಟನ್‌ ಸೀರೆಗಳು ಈ ಮೊದಲು ಅಷ್ಟಾಗಿ ಜನಪ್ರಿಯಗೊಂಡಿರಲಿಲ್ಲ. ಇದೀಗ ಆನ್‌ಲೈನ್‌ನಲ್ಲಿ ದೊರಕಲಾರಂಭಿಸಿದ ನಂತರ ಹೆಚ್ಚು ಪಾಪುಲಾರಿಟಿ ಪಡೆದುಕೊಂಡಿವೆ. ಇವುಗಳಲ್ಲಿ ರಿವರ್ಸಿಬಲ್‌ ಪಲ್ಲು ಇರುವಂತವು ಲಭ್ಯ.

ಉಡುಪಿ ಕಾಟನ್‌ ಸೀರೆಗಳು

ಕದಿಕೆ ಟ್ರಸ್ಟ್‌ ,ತಾಳಿಪಾಡಿ ನೇಕಾರರ ಸಹಕಾರ ಸಂಘದ ಸಹಯೋಗದೊಂದಿಗೆ ನೈಜ ಬಣ್ಣಗಳಿಂದ ತಯಾರಾಗುವ ಈ ಉಡುಪಿ ಸೀರೆಗಳು ಪರಿಸರ ಸ್ನೇಹಿ ಸೀರೆಗಳು. ಈ ಸೀರೆಗಳ ಪುನಶ್ಚೇತನದ ಹಿಂದೆ ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಅವರ ಪರಿಶ್ರಮವಿದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version