Site icon Vistara News

Nita Ambani Saree Fashion: ಮಾರುಕಟ್ಟೆಗೆ ಬಂತು ನೀತಾ ಅಂಬಾನಿಯ ಸೀರೆಗಳ ಮಾಡೆಲ್‌!

Nita Ambani Saree Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಗನ ಮದುವೆ ಸಮಾರಂಭಗಳಲ್ಲಿ ನೀತಾ ಅಂಬಾನಿಯವರು (Nita Ambani Saree Fashion) ಉಟ್ಟಿದ್ದ ನಾನಾ ಬಗೆಯ ದುಬಾರಿ ಡಿಸೈನರ್‌ ಸೀರೆಗಳನ್ನೇ ಹೋಲುವ ರಿಪ್ಲಿಕಾ ಸೀರೆಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಾಗೆಂದು, ಇವ್ಯಾವು ಓರಿಜಿನಲ್‌ ಕ್ರಿಯೇಷನ್‌ ಸೀರೆಗಳಲ್ಲ! ಬದಲಿಗೆ ತದ್ರೂಪದಂತೆ ಕಾಣಿಸುವ ಕಾಪಿಕ್ಯಾಟ್ ಸೀರೆಗಳು ಅಥವಾ ರಿಪ್ಲಿಕಾ ಸೀರೆಗಳು ಎನ್ನುತ್ತಾರೆ ಸೀರೆ ಮಾರಾಟಗಾರರು.

ರಿಪ್ಲಿಕಾ ಸೀರೆಗಳ ಹಾವಳಿ

ನೀತಾ ಅಂಬಾನಿಯವರು ಉಟ್ಟಿದ್ದ, ಬಹುತೇಕ ಸೀರೆಗಳು, ಈಗಾಗಲೇ ಮಹಿಳೆಯರನ್ನು ಸೆಳೆದಿವೆ. ಪರಿಣಾಮ, ಮಾರುಕಟ್ಟೆಯಲ್ಲಿ ಇವರ ಸೀರೆಗಳಂತೆ ಕಾಣಿಸುವ ಕೈಗೆಟಕುವ ಬೆಲೆಯ ಡಿಸೈನರ್‌ ಸೀರೆಗಳು, ಜಗಮಗಿಸುವ ಸೀರೆಗಳು ಆಗಮಿಸಿವೆ. ಹಾಗೆಂದು, ನೀತಾ ಅಂಬಾನಿಯವರ ಓರಿಜಿನಲ್‌ ಸೀರೆಗಳಲ್ಲಿ ಬಳಸಿರುವ ಹಾಗೇ ಇಲ್ಲಿ ಚಿನ್ನ ಹಾಗೂ ಡೈಮಂಡ್‌ ಡಿಸೈನ್‌ಗಳ ನೆರಳನ್ನೂ ಕೂಡ ನೋಡಲು ಸಾಧ್ಯವೇ ಇಲ್ಲ! ಬದಲಿಗೆ ಆರ್ಟಿಫಿಷಿಯಲ್‌ ಜರತಾರಿ, ಸಿಲ್ವರ್‌ ಗೋಲ್ಡನ್‌ ಶೇಡ್‌ನ ಮೆಷಿನ್‌ ಥ್ರೆಡ್‌ ವರ್ಕ್‌ ಇರುವಂತ ಡಿಸೈನ್‌ ಹೊಂದಿರುವುದನ್ನಷ್ಟೇ ಕಾಣಬಹುದು. ಸಂತಸದ ವಿಚಾರವೆಂದರೇ, ಸಾಮಾನ್ಯ ಮಹಿಳೆಯೂ ಕೂಡ ಕೈಗೆಟಕುವ ಬೆಲೆಯಲ್ಲಾದರೂ ಸರಿಯೇ, ಅವರಂತೆ ಕಾಣುವ ರಿಪ್ಲಿಕಾ ಸೀರೆಗಳನ್ನು ಉಟ್ಟು ಆನಂದಿಸಬಹುದಲ್ಲ! ಎನ್ನುತ್ತಾರೆ ಕಮರ್ಷಿಯಲ್‌ ಸ್ಟ್ರೀಟ್‌ನ ಡಿಸೈನರ್‌ ಸೀರೆ ಶಾಪ್‌ ಮಾಲೀಕ ಅಲಿ ಹಕೀಂ. ನೋಡಲು ಹೆವ್ವಿ ಎಂದೆನಿಸುವ ಈ ಡಿಸೈನರ್‌ ಸೀರೆಗಳು ಕಡಿಮೆ ಬೆಲೆಯ ಸಿಕ್ವಿನ್ಸ್, ಥ್ರೆಡ್‌ ಹಾಗೂ ಜರಿಗಳನ್ನು ಹೊಂದಿರುತ್ತವಂತೆ. ಬಾಳಿಕೆ ಬರುವುದು ಕಡಿಮೆ. ಮೂರ್ನಾಲ್ಕು ಬಾರಿ ಉಟ್ಟು ಸಂಭ್ರಮಿಸಬಹುದಷ್ಟೇ! ಎನ್ನುತ್ತಾರೆ. ಇನ್ನು ಸೀರೆ ಡ್ರೇಪರ್‌ ರಜಿಯಾ ಪ್ರಕಾರ, ಇವ್ಯಾವು ಪಕ್ಕಾ ಅದೇ ಸೀರೆಗಳನ್ನು ಹೋಲುವುದಿಲ್ಲ, ಬದಲಿಗೆ ಒಂದಿಷ್ಟು ಕಾನ್ಸೆಪ್ಟ್ ಹಾಗೂ ಡಿಸೈನ್‌ಗಳಿಂದಾಗಿ ನೀತಾ ಅಂಬಾನಿ ಸೀರೆಗಳೆಂದು ನಾಮಕರಣ ಗೊಂಡಿವೆ ಎನ್ನುತ್ತಾರೆ.

ಪಾಪುಲರ್‌ ಆದ ನೀತಾ ಅಂಬಾನಿ ಸೀರೆಗಳು

ಅಂದಹಾಗೆ, ನೀತಾ ಅಂಬಾನಿಯವರ ಪಾಪುಲರ್‌ ಆದ ಸೀರೆಗಳ ಸಂಕ್ಷೀಪ್ತ ವಿವರ ಇಲ್ಲಿದೆ.

ಟಿಶ್ಯೂ ಬನರಾಸಿ ಸೀರೆ

ಗುಜರಾತಿ ಶೈಲಿಯ ಈ ಸೀರೆಯನ್ನು ಕಂಪ್ಲೀಟ್‌ ಬಂಗಾರ ಹಾಗೂ ಬೆಳ್ಳಿಯ ಹ್ಯಾಂಡ್‌ ಎಂಬ್ರಾಯ್ಡರಿಯಿಂದ ಡಿಸೈನ್‌ ಮಾಡಲಾಗಿದೆ. ಇದನ್ನು ಸಿದ್ಧಪಡಿಸಲು ಸುಮಾರು 70 ದಿನಗಳ ಕಾಲ ಬೇಕಾಯಿತಂತೆ.

ವೆಡ್ಡಿಂಗ್‌ ರಿಸೆಪ್ಷನ್‌ ಸೀರೆ

ಬ್ರೋಕೆಡ್‌ ಪಿಂಕ್‌ ಶೇಡ್‌ನ ಮಲ್ಟಿ ರೇಷ್ಮೆ ಸೀರೆಯ ಒಡಲಿನ ತುಂಬೆಲ್ಲಾ ಬೆಳ್ಳಿಯ ದಾರದಿಂದ ಮಾಡಿದ ಹ್ಯಾಂಡ್‌ ಎಂಬ್ರಾಯ್ಡರಿಯಿದೆ. ಇದಕ್ಕೆ ಪರ್ಪಲ್‌ ಡಿಸೈನರ್‌ ಬ್ಲೌಸ್‌ ಗ್ರ್ಯಾಂಡ್‌ ಲುಕ್‌ನೀಡಿದೆ. ರಿಯಲ್‌ ಸಿಲ್ವರ್‌ ಜರಿ ಡಿಫರೆಂಟ್‌ ಲುಕ್‌ ನೀಡಿದೆ.

ಇದನ್ನೂ ಓದಿ: Ambani Wedding Fashion: ನೀತಾ ಅಂಬಾನಿಯ ಗ್ರ್ಯಾಂಡ್‌ ಘಾಗ್ರ ಬ್ಲೌಸ್‌ ಮೇಲೆ ಬಂಗಾರದಲ್ಲಿ ಮೂಡಿದ ಕುಟುಂಬದವರ ಹೆಸರು!

ರಂಗ್ಕಟ್‌ ಸೀರೆ

ವಾರಣಾಸಿಯ ಹೆರಿಟೇಜ್‌ ಬಿಂಬಿಸುವ 28 ಚೌಕಗಳ ರಂಗ್ಕಟ್‌ ಸೀರೆ ಸಿದ್ಧಪಡಿಸಲು ಸುಮಾರು 6 ತಿಂಗಳ ಕಾಲ ಬೇಕಾಯಿತಂತೆ. ಫ್ಲೋರಲ್‌ ಮೋಟಿಫ್‌ ಹೊಂದಿರುವ ಈ ಸೀರೆ ವೈಬ್ರೆಂಟ್‌ ಜರಿ ಹೊಂದಿದೆ ಎನ್ನುತ್ತಾರೆ ಡಿಸೈನರ್ಸ್.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version