-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜಾನ್ವಿ ಕಪೂರ್ ಮೊತ್ತ ಮೊದಲ ಬಾರಿಗೆ ಪ್ಯಾರಿಸ್‌ನ ಹಾಟ್ ಕೌಚರ್ ವೀಕ್ 2024ರಲ್ಲಿ ಹೆಜ್ಜೆ ಹಾಕಿದ್ದಾರೆ. ಹೌದು, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಫ್ಯಾಷನ್ ವೀಕ್‌ನಲ್ಲಿ, ಸೆಲೆಬ್ರೆಟಿ ಡಿಸೈನರ್ ರಾಹುಲ್ ಮಿಶ್ರಾ ಅವರ ಔರಾ ಬ್ರಾಂಡ್‌ನ ಆಕರ್ಷಕ ಮೆರ್ಮೈಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಜಾನ್ವಿ ಸೌಂದರ್ಯ ಹೆಚ್ಚಿಸಿದ ಮೆರ್ಮೈಡ್ ಡಿಸೈನರ್‌ವೇರ್
ರಾಹುಲ್ ಮಿಶ್ರಾ ಅವರು, ಜಾನ್ವಿ ಅವರಿಗಾಗಿಯೇ ಬಾಡಿಕಾನ್ ಮೆರ್ಮೈಡ್ ಸಿಕ್ವೀನ್ಸ್ ಸ್ಕರ್ಟ್ ಅದಕ್ಕೆ ಹೊಂದುವಂತಹ ಡಾರ್ಕ್ ಶೇಡ್‌ನ ಬಿಕಿನಿಯಂತಿರುವ ಸ್ಟ್ರಾಪ್‌ಲೆಸ್ ಬ್ಲೌಸ್ ಡಿಸೈನ್ ಮಾಡಿದ್ದು, ಜಾನ್ವಿ ವಾಕ್ ಮಾಡುವಾಗ ನೆಲವನ್ನು ಸಾವರಿಸಿಕೊಂಡು ಹೋಗುತ್ತಿದ್ದ ಲಾಂಗ್ ಸ್ಕರ್ಟ್ ಅಲ್ಲಿನ ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮೀನಿನ ಚರ್ಮದಂತೆ ಬಿಂಬಿಸುವ ಬ್ಲ್ಯಾಕ್ ಹಾಗೂ ಗ್ರೇ ವರ್ಣದ ಡಿಸೈನ್ ಹೊಂದಿದ್ದ ಈ ಡಿಸೈನರ್‌ವೇರ್ ಜಾನ್ವಿಯ ಸೌಂದರ್ಯವನ್ನು ಹೆಚ್ಚಿಸಿತ್ತು. ವಿದೇಶಿಗರನ್ನು ಹೆಚ್ಚಾಗಿ ಸೆಳೆಯಿತು ಎಂದು ಖುದ್ದು ಡಿಸೈನರ್ ರಾಹುಲ್ ಮಿಶ್ರಾ ಸಂತಸ ಹಂಚಿಕೊಂಡಿದ್ದಾರೆ.
ಜಾನ್ವಿ ಕಪೂರ್ ಮೊದಲ ವಿದೇಶಿ ಫ್ಯಾಷನ್ ವೀಕ್
ಇದುವರೆಗೂ ಸ್ಥಳೀಯ ರ‍್ಯಾಂಪ್ ಹಾಗೂ ಫ್ಯಾಷನ್ ಶೋಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಜಾನ್ವಿ ಕಪೂರ್, ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್ ವೀಕ್‌ನಲ್ಲಿ, ಅದರಲ್ಲೂ ಪ್ಯಾರಿಸ್‌ನಲ್ಲಿ ಕಾಣಿಸಿಕೊಂಡಿರುವುದಂತೆ. ಈ ಹಿಂದೆ ಜಾನ್ವಿ ತಂಗಿ ಖುಷಿ ಕಪೂರ್, ಇದೇ ಫ್ಯಾಷನ್ ವೀಕ್‌ನಲ್ಲಿ ಕಾಣಿಸಿಕೊಂಡಿದ್ದರು. ಆಗ ಜಾನ್ವಿ, ಸಿನಿಮಾ ಶೂಟಿಂಗ್‌ಗಳಲ್ಲಿ ಸಾಕಷ್ಟು ಬ್ಯುಸಿ ಇದ್ದ ಕಾರಣ, ವಿದೇಶಿ ಫ್ಯಾಷನ್ ವೀಕ್‌ಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲವಂತೆ ಹಾಗೆನ್ನುತ್ತವೆ ಅವರ ಆಪ್ತ ಮೂಲಗಳು.
ಇದನ್ನೂ ಓದಿ: Twinning Fashion: ಪರ್ಫೆಕ್ಟ್ ಟ್ವಿನ್ನಿಂಗ್ ಫ್ಯಾಷನ್‌ಗೆ ಇಲ್ಲಿದೆ 5 ಐಡಿಯಾ!
ಫ್ಯಾಷನ್ ವಿಮರ್ಶಕರ ಮಾತು
ಇನ್ನು ಫ್ಯಾಷನ್ ವಿಮರ್ಶಕರಾದ ಜಾನ್ ಪ್ರಕಾರ, ಜಾನ್ವಿ ಅವರು ಪ್ರತಿ ಫ್ಯಾಷನ್ ಶೋಗಳಲ್ಲೂ ತಮ್ಮದೇ ಆದ ರ‍್ಯಾಂಪ್ ವಾಕ್ ಮೂಲಕ ಸೆಳೆಯುತ್ತಾರೆ. ಪ್ಯಾರಿಸ್‌ನ ಫ್ಯಾಷನ್ ವೀಕ್‌ಗಳಲ್ಲಿ, ರ‍್ಯಾಂಪ್ ಬದಲು ಫ್ಲೋರ್ ಮೇಲೆ ಮಾಡೆಲ್ಸ್ ವಾಕ್ ಮಾಡುವುದು ಸಾಮಾನ್ಯ ದೃಶ್ಯ. ನೆರೆದಿದ್ದ ಫ್ಯಾಷನ್ ಪ್ರಿಯರ ನಡುವೆಯೇ ಹಾದು ಹೋಗುತ್ತಾ, ಹೆಜ್ಜೆ ಹಾಕುವುದು, ಇವರೆಲ್ಲರ ಮಧ್ಯೆಯೇ ಸುಳಿದಾಡುವುದು ಇಲ್ಲಿನ ಫ್ಯಾಷನ್ ವೀಕ್‌ಗಳ ವಿಶೇಷತೆ. ಇದಕ್ಕೆ ತಕ್ಕಂತೆ ಜಾನ್ವಿ ಕೂಡ ಹೆಜ್ಜೆ ಹಾಕಿದ್ದಾರೆ. ಶೋ ಸ್ಟಾಪರ್ ಎನ್ನುವುದಕ್ಕಿಂತ ಇಂಟರ್‌ನ್ಯಾಷನಲ್ ಮಾಡೆಲ್‌ಗಳೊಂದಿಗೆ ಸೂಪರ್ ಮಾಡೆಲ್‌ನಂತೆ ನಡೆದಾಡಿದ್ದಾರೆ ಎನ್ನುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)