ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಲಿಯಾ ಕಟ್ ಸೂಟ್, ಕುರ್ತಾ ಹಾಗೂ ಗೌನ್ ಸೆಟ್‌ಗಳು (Alia Cut Kurta Set Fashion) ಸಖತ್ ಟ್ರೆಂಡ್‌ನಲ್ಲಿವೆ. ಹೌದು, ಹೆಚ್ಚು ಪಾಪ್ಯುಲರ್ ಆಗಿವೆ. ಅದರಲ್ಲೂ ಫ್ಲೋರಲ್ ಪ್ರಿಂಟ್‌ನವು ಹೆಚ್ಚು ಚಾಲ್ತಿಯಲ್ಲಿವೆ. ಎಥ್ನಿಕ್ ಲುಕ್ ನೀಡುವ ಇವು ಈ ಸೀಸನ್‌ನ ಇಂಡಿಯನ್ ಔಟ್‌ಫಿಟ್‌ಗಳ ಟಾಪ್ ಲಿಸ್ಟ್‌ನಲ್ಲಿ ಸೇರಿವೆ.
ಏನಿದು ಅಲಿಯಾ ಕಟ್ ಡ್ರೆಸ್?
ಎಥ್ನಿಕ್ ಲುಕ್ ನೀಡುವ ಟ್ರೆಡಿಷನಲ್ ಕುರ್ತಾ, ಸೂಟ್‌ಗಳಿವು. ವೇಸ್ಟ್‌ಸ್ಟೈಲ್‌ನಿಂದ ಮೇಲಿನ ಭಾಗ ಎರಡ್ಮೂರು ಕಟ್ಟಿಂಗ್ ಒಳಗೊಂಡಿರುತ್ತದೆ. ಬಟಲ್‌ಲೆಸ್ ಆಗಿದ್ದರೂ ಲೇಸ್ ವರ್ಕ್‌ನಿಂದ ಪ್ರತ್ಯೇಕವಾಗಿರುವಂತೆ ಕಾಣುತ್ತದೆ. ಧರಿಸಿದಾಗ ಮಂಡಿಯಿಂದ ಕೆಳಗಿನ ತನಕ ನಿಲ್ಲುತ್ತದೆ. ಕೊಂಚ ದೊಗಲೆಯಾಗಿರುತ್ತದೆ.
ಅಲಿಯಾ ಕಟ್ ಹೆಸರು ಯಾಕೆ ಬಂತು!
ಹಿಂದಿ ಸಿನಿಮಾವೊಂದರಲ್ಲಿ ನಟಿ ಅಲಿಯಾ ಭಟ್ ಧರಿಸಿದ್ದ ಕುರ್ತಾವಿದು. ಆಕೆ ಧರಿಸಿದ ನಂತರ ಈ ಕುರ್ತಾ ಹೊಸ ಹೆಸರನ್ನು ಪಡೆಯುವುದರೊಂದಿಗೆ ನಾನಾ ಶೈಲಿಯಲ್ಲಿ ಮಾನಿನಿಯರನ್ನು ಸವಾರಿ ಮಾಡತೊಡಗಿತು. ಸಾಮಾನ್ಯ ಮಹಿಳೆಯರು ಇದಕ್ಕೆ ಅಲಿಯಾ ಕಟ್ ಕುರ್ತಾ ಅಥವಾ ಸೂಟ್ ಎಂದು ನಾಮಕರಣ ಮಾಡಿದರು. ಮೊಬೈಲ್‌ನಲ್ಲಿ ಆಕೆ ಧರಿಸಿರುವ ಈ ಕುರ್ತಾ ಇಲ್ಲವೇ ಸೂಟ್ ಫೋಟೋ ತೋರಿಸಿ, ಅಂಗಡಿಗಳಲ್ಲಿ ಕೇಳುವ ಪರಿಪಾಟ ಹೆಚ್ಚಾಗಿ, ಇದೇ ಹೆಸರು ಚಾಲ್ತಿಗೆ ಬಂದಿತು ಎನ್ನುತ್ತಾರೆ ಡಿಸೈನರ್‌ಗಳು. ಅವರ ಪ್ರಕಾರ, ಈ ಉಡುಪು ಯಾವ ಮಟ್ಟಿಗೆ, ಟ್ರೆಂಡಿಯಾಯಿತೆಂದರೇ, ನಾರ್ತ್ ಇಂಡಿಯಾ ಮಾತ್ರವಲ್ಲ, ದಕ್ಷಿಣ ಭಾರತದ ಮಹಿಳೆಯರು ಕೂಡ ಈ ಬಗೆಯ ಕುರ್ತಾ, ಸೂಟ್ ಇಲ್ಲವೇ ಗೌನ್ ಶೈಲಿಯವನ್ನು ಹೆಚ್ಚೆಚ್ಚು ಧರಿಸಲಾರಂಭಿಸಿದರು. ಹಾಗೆಂದು ಈ ಶೈಲಿಯ ಕುರ್ತಾ-ಸೂಟ್‌ಗಳು ಹೊಸ ಅವಿಷ್ಕಾರವೇನಲ್ಲ! ಎನ್ನುತ್ತಾರೆ. ಇನ್ನು, ಟ್ರೆಡಿಷನಲ್ ಲುಕ್ ಇರುವ ಈ ಉಡುಪು ಎಂತಹ ಪರ್ಸನಾಲಿಟಿಯವರಿಗೂ ಹೊಂದುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಟ್ರೆಂಡ್‌ನಲ್ಲಿರುವ ಅಲಿಯಾ ಕಟ್ ಸೂಟ್/ಕುರ್ತಾ/ಗೌನ್ ಡಿಸೈನ್ಸ್
ಟ್ರಾಪಿಕಲ್ ಪ್ರಿಂಟ್ಸ್, ಪ್ಲಾಂಟ್ಸ್, ಗಾರ್ಡನ್ ಪ್ರಿಂಟ್‌ನವು ಪ್ರಚಲಿತದಲ್ಲಿವೆ. ಆದರೆ, ಇವೆಲ್ಲಕ್ಕಿಂತ ಹೆಚ್ಚಾಗಿ ಆಕರ್ಷಕವಾಗಿ ಕಾಣುವ ಲೈಟ್ ಶೇಡ್‌ನ ಫ್ಲೋರಲ್ ಪ್ರಿಂಟೆಡ್‌ನವು ಹೆಚ್ಚು ಟ್ರೆಂಡ್‌ನಲ್ಲಿವೆ. ಕಾಟನ್, ಕಾಟನ್ ಸಿಲ್ಕ್, ಲೆನಿನ್, ರಯಾನ್ ಫ್ಯಾಬ್ರಿಕ್‌ನವಲ್ಲೂ ಇವನ್ನು ಕಾಣಬಹುದು. ಇನ್ನು, ನಾನಾ ಪ್ರಯೋಗಾತ್ಮಕ ವಿನ್ಯಾಸದವು ಎಂಟ್ರಿ ನೀಡಿವೆ. ಆದರೆ, ಮೂಲ ಡಿಸೈನ್‌ನ ಲಾಂಗ್ ಅಲಿಯಾ ಕಟ್ ಕುರ್ತಾ ಸೆಟ್ ಬೇಡಿಕೆ ಮಾತ್ರ ಮೊದಲಿಗಿಂತ ಹೆಚ್ಚಿದೆ ಎನ್ನುತ್ತಾರೆ ಮಾರಾಟಗಾರರು.
ಅಲಿಯಾ ಕಟ್ ಕುರ್ತಾ/ಸೂಟ್/ಗೌನ್ ಪ್ರಿಯರಿಗೆ 5 ಟಿಪ್ಸ್
- ಸೀಸನ್ ಶೇಡ್ನದ್ದನ್ನು ಆಯ್ಕೆ ಮಾಡಿ.
- ಈ ಔಟ್ಫಿಟ್ ಎಥ್ನಿಕ್ ಲುಕ್ ನೀಡುವುದು ಗ್ಯಾರಂಟಿ.
- ಈ ಉಡುಪಿಗೆ ಲೈಟ್ ಮೇಕಪ್ ಕೂಡ ಅಂದವಾಗಿ ಕಾಣುತ್ತದೆ.
- ದುಪಟ್ಟಾ ಇಲ್ಲದೆಯೂ ಧರಿಸಬಹುದು.
- ತೀರಾ ದೊಗಲೆಯಾಗಿರುವುದನ್ನು ಆಯ್ಕೆ ಮಾಡಬೇಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)