ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅತ್ಯಾಕರ್ಷಕ ವಿನ್ಯಾಸದ ಡೈಮಂಡ್ ಜ್ಯುವೆಲರಿಗಳನ್ನು ಧರಿಸಿದ ಮಾಡೆಲ್ಗಳು ರ್ಯಾಂಪ್ ಮೇಲೆ ಹೆಜ್ಜೆ ಇರಿಸುತ್ತಿದ್ದಲ್ಲಿ, ಅವರು ಧರಿಸಿದ್ದ, ಆಭರಣಗಳು ನೆರೆದಿದ್ದ ಜ್ಯುವೆಲರಿ ಪ್ರಿಯರ ಕಣ್ಮನ ಸೆಳೆದವು. ಇದಕ್ಕೆ ಪೂರಕ ಎಂಬಂತಿದ್ದ, ಡಿಸೈನರ್ಗಳ ಡಿಸೈನರ್ವೇರ್ಗಳು ಮಾಡೆಲ್ಗಳ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದವು. ಟ್ರೆಡಿಷನಲ್ವೇರ್, ಹಸಿರು, ಬ್ಲಾಕ್ ಡಿಸೈನರ್ವೇರ್ಗಳನ್ನು ಧರಿಸಿದ ಸುಮಾರು 20 ಪ್ರೊಫೆಷನಲ್ ಮಾಡೆಲ್ಗಳು ಸೆಲೆಬ್ರೆಟಿ ಡಿಸೈನರ್, ಕೊರಿಯಾಗ್ರಾಫರ್ ಹಾಗೂ ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿಯವರ ನೇತೃತ್ವದಲ್ಲಿ ಈ ಫ್ಯಾಷನ್ ಶೋನ ಕಳೆ ಹೆಚ್ಚಿಸಿದ್ದರು.
ಟ್ರೆಂಡಿ ಆಭರಣಗಳ ಅನಾವರಣ
ಅಂದಹಾಗೆ, ಇದು ನಡೆದದ್ದು, ಉದ್ಯಾನನಗರಿಯಲ್ಲಿ. ವಿಂಟರ್ ಸೀಸನ್ನ್ನಲ್ಲಿ ನಡೆದ ಈ ಟ್ರೆಂಡಿ ಡೈಮಂಡ್ ಜ್ಯುವೆಲರಿಗಳ ಫ್ಯಾಷನ್ ಶೋವನ್ನು ಭೀಮಾ ಜ್ಯುವೆಲರರ್ಸ್ನವರು ಆಯೋಜಿಸಿದ್ದರು. ವೆಡ್ಡಿಂಗ್ ಸೀಸನ್ ಹಾಗೂ ಸೀಸನ್ ಆಭರಣಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.
ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿ ಕಮಾಲ್
ಎಂದಿನಂತೆ, ಇಡೀ ಶೋವನ್ನು ಅತ್ಯಾಕರ್ಷಕವಾಗಿ ನಡೆಸಿದ ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿಯವರು ಮಾತನಾಡಿ, ಮಾಡೆಲ್ಗಳು ಈ ಸೀಸನ್ನ ಟ್ರೆಂಡಿ ವಜ್ರದ ಆಭರಣಗಳೊಂದಿಗೆ ವಾಕ್ ಮಾಡಿದ್ದು, ವಿಭಿನ್ನವಾಗಿರುವುದರೊಂದಿಗೆ ಮನಮೋಹಕವಾಗಿತ್ತು ಎಂದು ಹೇಳಿದರು.
ಟ್ರೆಡಿಷನಲ್ ಜ್ಯುವೆಲರಿ ಪ್ರದರ್ಶನ
ವಜ್ರಾಭರಣಗಳ ಥೀಮ್ ಹೊಂದಿದ ಈ ಫ್ಯಾಷನ್ ಶೋನಲ್ಲಿ, ಮೊದಲಿಗೆ ಟ್ರೆಡಿಷನಲ್ ಡಿಸೈನ್ನ ಜ್ಯುವೆಲರಿಗಳನ್ನು ಪ್ರದರ್ಶಿಸಲಾಯಿತು. ಎಥ್ನಿಕ್ ಲುಕ್ನಲ್ಲಿ ಕಾಣಿಸಿಕೊಂಡ ಮಾಡೆಲ್ಗಳು ಮೊದಲಿಗೆ ಬ್ರೈಡರ್ವೇರ್ ಆಭರಣಗಳನ್ನು ಅನಾವರಣಗೊಳಿಸಿದರು.
ಇಂಡೋ-ವೆಸ್ಟರ್ನ್ ಕಲೆಕ್ಷನ್
ಎರಡನೇ ಸುತ್ತಿನಲ್ಲಿ ಇಂಡೋ-ವೆಸ್ಟರ್ನ್ ಸಾಲಿಟೈರ್ ಒಳಗೊಂಡ ಆಭರಣಗಳು ಪ್ರದರ್ಶನಗೊಂಡವು. ಈ ಜನರೇಷನ್ನವರು ಧರಿಸಬಹುದಾದಂತಹ ನೆಕ್ಲೇಸ್, ಇಯರಿಂಗ್ಸ್, ಬ್ರೇಸ್ಲೆಟ್ ಹಾಗೂ ಫಿಂಗರ್ ರಿಂಗ್ಗಳ ವೈವಿಧ್ಯಮಯ ವಿನ್ಯಾಸಗಳು ನೆರೆದಿದ್ದ ಆಭರಣ ಪ್ರಿಯರ ಮನ ಗೆದ್ದವು. ಮೂರನೇ ಸುತ್ತಿನಲ್ಲಿ ಕಾಕ್ಟೇಲ್ ಡಿಸೈನರ್ವೇರ್ಗಳನ್ನು ಜ್ಯುವೆಲರಿಗಳೊಂದಿಗೆ ಮ್ಯಾಚ್ ಮಾಡಲಾಗಿತ್ತು. ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿ, ಸಂಸ್ಥೆಯ ಸಂಸ್ಥಾಪಕಿ ಶಿಲ್ಪಾ ಭಟ್ ಕೂಡ ಮಾಡೆಲ್ಗಳೊಂದಿಗೆ ಹೆಜ್ಜೆ ಹಾಕಿದರು. ಕಾರ್ಯಕ್ರಮವನ್ನು ಸೈಕೂಲ್ ಇವೆಂಟ್ಸ್ನ ಅವಿನಾಶ್ ವಹಿಸಿಕೊಂಡಿದ್ದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Saree Fashion: ಕಡಲೆಕಾಯಿ ಪರಿಷೆಯಲ್ಲಿ ದೇಸಿ ಸೀರೆಯೊಂದಿಗೆ ನಟಿ ತೇಜಸ್ವಿನಿ ಶರ್ಮಾ ಸಂಭ್ರಮ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ