-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜಾರ್ಜೆಟ್ ರಫಲ್ ಲೆಹೆಂಗಾ ಸೀರೆಗಳು (Saree Fashion) ಸೀರೆ ಲೋಕಕ್ಕೆ ಲಗ್ಗೆ ಇಟ್ಟಿವೆ. ಹೌದು. ಇದೀಗ ಜಾರ್ಜೆಟ್ ಫ್ಯಾಬ್ರಿಕ್‌ನಲ್ಲಿ, ಫ್ಲೋರಲ್ ಪ್ರಿಂಟ್ಸ್ ಇರುವಂತಹ ರಫಲ್ ವಿನ್ಯಾಸದ ಬಗೆಬಗೆಯ ಲೆಹೆಂಗಾ ಸೀರೆಗಳು ನಾರಿಯರನ್ನು ಆವರಿಸಿಕೊಂಡಿವೆ. ಉಟ್ಟಾಗ ವಿಭಿನ್ನವಾಗಿ ಕಾಣಿಸುವ ಈ ಸೀರೆಗಳು ಲೆಕ್ಕವಿಲ್ಲದಷ್ಟು ಹೂವುಗಳ ಚಿತ್ತಾರದ ಪ್ರಿಂಟ್ಸ್‌ನಲ್ಲಿ ಬಂದಿವೆ. “ಲೆಹೆಂಗಾ ಸೀರೆಗಳಲ್ಲಿ ಇದೀಗ ಜಾರ್ಜೆಟ್ ಫ್ಯಾಬ್ರಿಕ್‌ನವಕ್ಕೆ ಬೇಡಿಕೆ ಹೆಚ್ಚು. ಅದರಲ್ಲೂ ಫ್ಲೋರಲ್ ವಿನ್ಯಾಸದವು ಈ ಸೀಸನ್‌ಗೆ ಹೇಳಿ ಮಾಡಿಸಿದಂತಿರುತ್ತವೆ. ಅಲ್ಲದೇ ಅವುಗಳ ಶೇಡ್‌ಗಳು ಕೂಡ ಮನಸ್ಸನ್ನು ಉಲ್ಲಾಸಿತಗೊಳಿಸುತ್ತವೆ. ಅಂತಹ ಕಲರ್ ಕಾಂಬಿನೇಷನ್‌ಗಳಲ್ಲಿ ಈ ಸೀರೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ” ಎನ್ನುತ್ತಾರೆ ಸೀರೆ ಡಿಸೈನರ್ಸ್ ಚರಿತಾ. ಅವರ ಪ್ರಕಾರ ಜಾರ್ಜೆಟ್ ಲೆಹೆಂಗಾ ಸೀರೆಗಳು ಎಲ್ಲರಿಗೂ ಡಿಫರೆಂಟ್ ಲುಕ್ ನೀಡುತ್ತವೆ ಎನ್ನುತ್ತಾರೆ.
ಏನಿದು ಜಾರ್ಜೆಟ್ ಲೆಹೆಂಗಾ ಸೀರೆ?
ಇದು ಹೆಸರಿಗೆ ಮಾತ್ರ ಸೀರೆಯಷ್ಟೇ! ಇದನ್ನು ರೆಡಿ ಸೀರೆ ಕೂಡ ಎನ್ನಬಹುದು. ಲೆಹೆಂಗಾ ಶೈಲಿಯಲ್ಲಿ ಅಥವಾ ರಫಲ್ ಲೆಹೆಂಗಾ ವಿನ್ಯಾಸದಲ್ಲಿ ಸ್ಟಿಚ್ ಮಾಡಲಾಗಿರುತ್ತದೆ. ರೆಡಿಯಾಗಿರುವ ಉಡುಪಿನಂತೆ ಧರಿಸಿದರೇ ಸಾಕು. ನೋಡಲು ಸೀರೆಯಂತೆಯೂ ಕಾಣುತ್ತದೆ. ಇತ್ತ ಲೆಹೆಂಗಾದಂತೆಯೂ ಬಿಂಬಿಸುತ್ತದೆ. ಬ್ಲೌಸ್ ಕೂಡ ಈ ಸೆಟ್‌ನೊಳಗೆ ಸೇರಿರುತ್ತದೆ. ಹುಡುಗಿಯರ ಚಾಯ್ಸ್‌ನಲ್ಲಿ ಇದೀಗ ಈ ಸೀರೆಗಳು ಸೇರಿವೆ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ಸ್. ಅವರು ಹೇಳುವಂತೆ, ಈ ಸೀಸನ್‌ನಲ್ಲಿ ಲೈಟ್‌ವೈಟ್ ಇರುವ ಜಾರ್ಜೆಟ್ ಫ್ಯಾಬ್ರಿಕ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಈ ಮೊದಲು ಸಾದಾ ವರ್ಣದವು ಹೆಚ್ಚು ಟ್ರೆಂಡಿಯಾಗಿದ್ದವು. ಇದೀಗ ಪ್ರಿಂಟ್ಸ್ ಅದರಲ್ಲೂ ಸಮ್ಮರ್ ಫ್ಲೋರಲ್ ಪ್ರಿಂಟ್ಸ್‌ನವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಲಿಲ್ಲಿ, ಸೇವಂತಿ, ವೆರೈಟಿ ರೋಸ್, ಟುಲಿಪ್ ಸೇರಿದಂತೆ ನಾನಾ ಬಗೆಯ ಗಾರ್ಡನ್ ಪ್ರಿಂಟ್ಸ್ ಕೂಡ ಪ್ರಚಲಿತದಲ್ಲಿವೆ.
ಆನ್‌ಲೈನ್‌ನಲ್ಲಿ ಹೆಚ್ಚು ಡಿಸೈನ್ಸ್ ಲಭ್ಯ
ಅಂದಹಾಗೆ, ಈ ಸೀರೆಗಳು ಆನ್‌ಲೈನ್ ಸೀರೆ ಶಾಪ್‌ಗಳಲ್ಲಿ ಅತಿ ಹೆಚ್ಚು ಡಿಸೈನ್‌ನಲ್ಲಿ ಲಭ್ಯ. ಈ ಸೀಸನ್‌ನ ಸನ್ ಕಲರ್‌ನಿಂದಿಡಿದು, ಪೀಚ್, ಪಿಂಕ್ ಸೇರಿದಂತೆ ನಾನಾ ಬಗೆಯ ಪಾಸ್ಟೆಲ್ ಶೇಡ್‌ಗಳಲ್ಲೂ ದೊರೆಯುತ್ತಿವೆ. ಸೀರೆ ಖರೀದಿಸುವವರು ಅವರವರ ಪರ್ಸನಾಲಿಟಿಗೆ ತಕ್ಕಂತೆ ಸೈಝ್‌ಗೆ ತಕ್ಕಂತೆ ಆಯ್ಕೆ ಮಾಡಿ, ಖರೀದಿಸುವ ಸೌಲಭ್ಯಗಳನ್ನು ಆನ್‌ಲೈನ್ ಸೀರೆ ಶಾಪಿಗ್ ಸೆಂಟರ್‌ಗಳು ನೀಡಿವೆ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ ರಕ್ಷಾ.
ಇದನ್ನೂ ಓದಿ: Denim Tube Tops Fashion: ಡೆನಿಮ್‌ನಲ್ಲೂ ಬಂತು ಟ್ಯೂಬ್ ಟಾಪ್ ಫ್ಯಾಷನ್!
ಜಾರ್ಜೆಟ್ ಲೆಹೆಂಗಾ ಸೀರೆ ಆಯ್ಕೆಗೆ 5 ಟಿಪ್ಸ್
- ಆದಷ್ಟೂ ಲೈಟ್‌ವೈಟ್ ಜಾರ್ಜೆಟ್ ಖರೀದಿಸಿ.
- ಗಾರ್ಡನ್ ಪ್ರಿಂಟ್ಸ್ ಎಲ್ಲಾ ಸೀಸನ್ಗೂ ಹೊಂದುತ್ತವೆ.
- ಬ್ಲೌಸ್ ಸಮೇತ ಸೆಟ್ನಲ್ಲಿ ದೊರಕುತ್ತವೆ.
- ಡ್ರೇಪಿಂಗ್ ನೋಡಲು ಆಕರ್ಷಕವಾಗಿರಲಿ.
- ಫಾಲ್ಸ್ ಹಾಕಿಸುವ ಅಗತ್ಯವಿರುವುದಿಲ್ಲ.
( ಲೇಖಕಿ ಫ್ಯಾಷನ್ ಪತ್ರಕರ್ತೆ )