ವಿಶೇಷ ಸಂದರ್ಶನ: ಶೀಲಾ ಸಿ. ಶೆಟ್ಟಿ
ಸರಕಾರದ ಮುಖ್ಯ ಕಾರ್ಯದರ್ಶಿ, ಮಹಿಳಾ ಐಎಎಸ್ ಅಧಿಕಾರಿ, ಡಾ. ಶಾಲಿನಿ ರಜನೀಶ್ (Shalini Rajaneesh) ಮೇಡಂ ಯಾರಿಗೆ ಗೊತ್ತಿಲ್ಲ! ಸದಾ ಒಂದಲ್ಲ ಒಂದು ರಾಜ್ಯ ಸರಕಾರದ ಯೋಜನಾ ಕಾರ್ಯದಲ್ಲಿ ನಿರತರಾಗಿರುವ ಅವರ ಕಲೆ- ಸಂಸ್ಕೃತಿಯನ್ನು ಬಿಂಬಿಸುವಂತಹ ಅವರ ಸೀರೆ ಇಮೇಜ್ ಕೂಡ ಅಷ್ಟೇ ಫೇಮಸ್!
ಅಂದಹಾಗೆ, ಈ ಹಿಂದೆ ಮೈಸೂರು ಉದ್ಯೋಗ್ ಸೇರಿದಂತೆ, ರಾಜ್ಯದ ಕೈಮಗ್ಗ ನೇಯ್ಗೆಗಾರರಿಗೆ ಅದರಲ್ಲೂ, ಸ್ಥಳೀಯ ಹ್ಯಾಂಡ್‌ಲೂಮ್ ಕ್ಷೇತ್ರಕ್ಕೆ ಸಂಬಂಧಿಸಿದ ಸಾಕಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಅಲ್ಲಿನ ನೇಕಾರರನ್ನು ಬೆಳಕಿಗೆ ತರುವಲ್ಲಿ, ಶಾಲಿನಿ ರಜನೀಶ್ ಅವರು, ಪ್ರಮುಖ ಪಾತ್ರವಹಿಸಿದ್ದರು. ಉದ್ಯಾನನಗರಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರನ್ನು ವಿಸ್ತಾರ ನ್ಯೂಸ್ ಸಂದರ್ಶಿಸಿದಾಗ, ತಮ್ಮ ಲೈಫ್ಸ್ಟೈಲ್ ಹಾಗೂ ಇತರ ವಿಷಯಗಳ ಕುರಿತಂತೆ ಮಾತನಾಡಿದರು. ಅವರ ಸಂದರ್ಶನದ ಸಾರಂಶ ಇಲ್ಲಿದೆ.
ವಿಸ್ತಾರ ನ್ಯೂಸ್: ಸದಾ ಒಂದಲ್ಲ ಒಂದು ಕಾರ್ಯದಲ್ಲಿ ಬ್ಯುಸಿಯಾಗಿರುವ ನೀವು ಫಿಟ್ನೆಸ್ ಫ್ರೀಕ್ ಎಂಬುದನ್ನು ಕೇಳಿದ್ದೇವೆ. ಇದು ನಿಜವೇ!
ಶಾಲಿನಿ ರಜನೀಶ್ : ಖಂಡಿತ. ಇದು ನಿಜ. ಮುಂಜಾನೆ 4.30ಕ್ಕೆ ಆರಂಭವಾಗುವ ನನ್ನ ದಿನಚರಿಯಲ್ಲಿ ವರ್ಕೌಟ್‌ಗೆ ಮೊದಲ ಆದ್ಯತೆ. ಕನಿಷ್ಠವೆಂದರೂ ದಿನಕ್ಕೆ ಒಟ್ಟಾರೆ, ಸರಿ ಸುಮಾರು 3 ಗಂಟೆ ಸಮಯವನ್ನು ವ್ಯಾಯಾಮಕ್ಕೆ ಮೀಸಲಿಡಲು ಪ್ರಯತ್ನಿಸುತ್ತೇನೆ.
ವಿಸ್ತಾರ ನ್ಯೂಸ್: ನಿಮ್ಮ ಯೂನಿಕ್ ಫ್ಯಾಷನ್ ಏನು?
ಶಾಲಿನಿ ರಜನೀಶ್: ಪ್ರತಿ ಕಾರ್ಯಕ್ರಮದಲ್ಲೂ ನಮ್ಮ ಸಂಸ್ಕೃತಿ ಬಿಂಬಿಸುವ ನಮಸ್ಕಾರ ಎನ್ನುವುದರಿಂದಲೇ ಮಾತನ್ನು ಆರಂಭಿಸುತ್ತೇನೆ. ಇನ್ನು, ಎಲ್ಲರಿಗೂ ತಿಳಿದಿರುವಂತೆ ನಾನು ಆಲ್ಟೈಮ್ ಸೀರೆ ಪ್ರೇಮಿ. ಸೀರೆಯಲ್ಲಿ ಕಾಣಿಸಿಕೊಳ್ಳುವುದು , ಹಣೆಗೆ ಅಗಲವಾದ ರೆಡ್ ಬಿಂದಿ ಇಡುವುದು ಎಂದಿಗೂ ಬದಲಾಗದ ನನ್ನ ಯೂನಿಕ್ ಫ್ಯಾಷನ್ ಸ್ಟೇಟ್ಮೆಂಟ್.
ವಿಸ್ತಾರ ನ್ಯೂಸ್: ನಿಮಗೆ ಪ್ರಿಯವಾದ ಸೀರೆ ಯಾವುದು?
ಶಾಲಿನಿ ರಜನೀಶ್: ಖಾದಿ ಸಿಲ್ಕ್ ನನ್ನ ಎವರ್ಗ್ರೀನ್ ಫೇವರೇಟ್ ಸೀರೆ. ಇನ್ನು, ಹಳದಿ ಅಂದರೇ, ಸನ್ ಕಲರ್ ನನ್ನ ಆಲ್ಟೈಮ್ ಇಷ್ಟವಾದ ಬಣ್ಣ.
ವಿಸ್ತಾರ ನ್ಯೂಸ್: ನಿಮ್ಮ ಬ್ಯೂಟಿ ಸಿಕ್ರೇಟ್?
ಶಾಲಿನಿ ರಜನೀಶ್ : ಎಲ್ಲವೂ ಅಮ್ಮನಿಂದ ದೊರಕಿದ ವರ.
ವಿಸ್ತಾರ ನ್ಯೂಸ್: ಮೈಸೂರ್ ಸಿಲ್ಕ್ ಸೀರೆಗಳ ಉತ್ಪಾದನೆ ಹೆಚ್ಚಿಸುವ ಚಿಂತನೆ ನಡೆದಿದೆಯಂತೆ? ಇದು ನಿಜವೇ!
ಶಾಲಿನಿ ರಜನೀಶ್: ಹೌದು. ರಾಜ್ಯದ ಕಲೆ-ಸಂಸ್ಕೃತಿಯ ಪ್ರತೀಕವಾಗಿರುವ ಕೆಎಸ್ಐಸಿ ಮೈಸೂರ್ ರೇಷ್ಮೆ ಸೀರೆಗಳಿಗೆ ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಉತ್ಪಾದನೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ.
ವಿಸ್ತಾರ ನ್ಯೂಸ್: ಈ ಹಿಂದೆ ರಾಜ್ಯ ಸರಕಾರದ ವತಿಯಿಂದ ಸ್ಥಳೀಯ ಹ್ಯಾಂಡ್ಲೂಮ್ಸ್ ಕ್ಷೇತ್ರವನ್ನು ಉತ್ತೇಜಿಸುವಂತಹ ಯೋಜನೆಗೆ ನೀವು ಪ್ರೋತ್ಸಾಹ ನೀಡಿದ್ದರಂತೆ! ಈ ಬಗ್ಗೆ ಹೇಳಿ?
ಶಾಲಿನಿ ರಜನೀಶ್: ಹೌದು. ಅಳಿವಿನ ಅಂಚಿಗೆ ಸರಿಯುತ್ತಿದ್ದ ಸ್ಥಳೀಯ ಹ್ಯಾಂಡ್ಲೂಮ್ ನೇಯ್ಗೆಗಾರರನ್ನು ಉತ್ತೇಜಿಸುವಂತಹ ನಾನಾ ಸರಕಾರಿ ಕಾರ್ಯಕ್ರಮಗಳು ಮನಸ್ಸಿಗೆ ಖುಷಿ ಕೊಟ್ಟಿದ್ದವು. ಹಾಗೆಂದು, ಕೇವಲ ಸರಕಾರ ಇಂತಹವರನ್ನು ಪ್ರೋತ್ಸಾಹಿಸಿದರೇ ಸಾಲದು, ಮಹಿಳೆಯರು ಕೂಡ ಇಂತಹವರಿಂದಲೇ ಸೀರೆಗಳನ್ನು ಕೊಳ್ಳಬೇಕು. ಆಗಲೇ ಈ ಕ್ಷೇತ್ರದ ಉಳಿವು ಸಾಧ್ಯ.
ವಿಸ್ತಾರ ನ್ಯೂಸ್: ಹೊರ ರಾಜ್ಯದವರಾದರೂ ನೀವು ಎಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತಿರಲ್ಲ! ಹೇಗೆ?
ಶಾಲಿನಿ ರಜನೀಶ್ : ಸಾಕಷ್ಟು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದೇನೆ. ಕನ್ನಡವನ್ನು ಪ್ರೀತಿಸುತ್ತೇನೆ. ಹಾಗಾಗಿ, ಕನ್ನಡ ಭಾಷೆ ನನಗೆ ಒಲಿದಿದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)