ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಿಮ್ಮ ಸುಂದರ ನಗುವಿಗೆ ಕಾರಣವಾಗುವ ಹಲ್ಲುಗಳ ಸೌಂದರ್ಯ ಹೆಚ್ಚಿಸಲು ಇದೀಗ ಟೂತ್ ಜ್ಯುವೆಲರಿಗಳು (Tooth Jewel trend) ಆಗಮಿಸಿವೆ. ಬೀಡ್ಸ್, ಕ್ರಿಸ್ಟಲ್, ರಾಶಿ ಚಿನ್ಹೆಗಳು, ಸ್ಟಾರ್, ಹಾರ್ಟ್, ರೂಬಿ, ಎ ಟು ಝಡ್ ಅಕ್ಷರಗಳು ಇಂದು ಟ್ರೆಂಡಿಯಾಗಿರುವ ಟೂತ್ ಜ್ಯುವೆಲರಿ ಡಿಸೈನ್‌ನಲ್ಲಿ ಸೇರಿವೆ. ಅದರಲ್ಲೂ ಅಲ್ಟ್ರಾ ಮಾಡರ್ನ್ ಯುವಕ-ಯುವತಿಯರನ್ನು ಈ ಟೂತ್ ಜ್ಯುವೆಲರಿ ಫ್ಯಾಶನ್ ತನ್ನತ್ತ ಬರ ಸೆಳೆಯುತ್ತಿದೆ.
ಡೆಂಟಲ್ ಡಾಕ್ಟರ್ ಸಾಥ್
ಮೊದಲೆಲ್ಲಾ ಕೇವಲ ಹಲ್ಲುನೋವು ಎಂದು ದಂತವೈದ್ಯರನ್ನು ಭೇಟಿಯಾಗುತ್ತಿದ್ದವರು, ಇಂದು ತಮ್ಮ ಹಲ್ಲಿನ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಲ್ಲಿಗೆ ಜ್ಯುವೆಲರಿ, ಟ್ಯಾಟೂ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಮೈ ಮೇಲೆ ಹಚ್ಚೆ , ಟ್ಯಾಟೂ ಹಾಕಿಸಿಕೊಳ್ಳುವ ರೀತಿಯಲ್ಲಿ ಕಾಂತಿವರ್ಧಕ ಹಲ್ಲಿಗೆ ಅಲಂಕಾರ ಮಾಡಿಸಿಕೊಳ್ಳುವ ಕ್ರೇಝ್ ಇದೀಗ ಕಾಣ ಸಿಗತೊಡಗಿದೆ ಎನ್ನುತ್ತಾರೆ ಆಲ್ ಸ್ಮೈಲ್‌ದಂತ ವೈದ್ಯರು.
ವಿದೇಶದಲ್ಲಿ ಹೆಚ್ಚು ಬೇಡಿಕೆ
ರಾಶಿ ಚಿನ್ಹೆಗಳು, ಸ್ಟಾರ್, ಹಾರ್ಟ್, ಡೈಮಂಡ್, ನಂಬರ್ಸ್, ರೂಬಿ, ಎ ಟು ಝಡ್ ಅಕ್ಷರಗಳು, ಚಿಹ್ನೆ, ಸ್ಕಲ್, ಸಂಗೀತ ಚಿಹ್ನೆ ನಾನಾ ಬಗೆಯ ವಿವಿಧ ರೀತಿಯ ಆಕಾರಗಳ ಟೂತ್ ಜ್ಯುವೆಲರಿಗಳನ್ನು, ಶ್ವೇತ ವರ್ಣದ ಹಲ್ಲಿಗೆ ಅಲಂಕರಿಸಿದಾಗ ಹಲ್ಲಿಗೆ ಡಿಫರೆಂಟ್ ಲುಕ್ ಸಿಗುತ್ತದೆ. ವಿದೇಶದಲ್ಲಿ ಈ ಸ್ಟೈಲಿಂಗ್‌ಗೆ ಹೆಚ್ಚು ಬೇಡಿಕೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹಲ್ಲಿಗೆ ಹಾನಿಯಾಗದಂತೆ ಫಿಕ್ಸ್ ಮಾಡುವ ವಿಧಾನ
“ಹಲ್ಲುಗಳನ್ನು ಕೊರೆದು ರಂಧ್ರ ಮಾಡುವುದಾಗಲೀ, ನೋವು ಬರುವ ರೀತಿಯಲ್ಲಿ ಜ್ಯುವೆಲರಿ ಹಾಕುವ ವಿಧಾನ ಇಲ್ಲಿಲ್ಲ. ತುಂಬಾ ಸರಳವಾದ ವಿಧಾನಗಳಿಂದ ತಾತ್ಕಾಲಿಕವಾಗಿ, ಹಲ್ಲಿಗೆ ಹಾನಿಯಾಗದಂತೆ ಹಾಕಲಾಗುತ್ತದೆ. ಮುಂದಿನ ಸಾಲಿನ ಹಲ್ಲುಗಳಿಗೆ ಡೆಂಟಲ್ ಸಿಮೆಂಟ್ ಮೂಲಕ ಇಷ್ಟವಾದ ಚಿಹ್ನೆಯನ್ನು ಸ್ಟಿಕ್ ಮಾಡಲಾಗುತ್ತದೆ. ಆದರೆ, ಇದು ಶಾಶ್ವತವಾದುದಲ್ಲ. ಯಾವಾಗ ಬೇಕಾದರೂ ತೆಗೆಸಬಹುದು ಎನ್ನುತ್ತಾರೆ ದಂತ ವೈದ್ಯರಾದ ಡಾ. ತ್ರಿವಿಕ್ರಮ್. ಅವರ ಪ್ರಕಾರ, ಇದು ಕನಿಷ್ಟ ಹತ್ತು ವರ್ಷ ಹಲ್ಲಿನ ಮೇಲಿರುತ್ತದಂತೆ. ಆದರೆ, ಇದಕ್ಕಾಗಿ ಕೊಂಚ ಎಕ್ಸ್‌ಟ್ರಾ ಕೇರ್ ತೆಗೆದುಕೊಳ್ಳಬೇಕಾಗುತ್ತದೆ ಎನ್ನುತ್ತಾರೆ.
ಮೆಟಾಲಿಕ್ ಕ್ಯಾಪ್ಸ್ ಮೂಲಕ ಜೋಡಣೆ
ಹಲ್ಲನ್ನು ಸ್ವಲ್ಪ ಟ್ರಿಮ್ ಮಾಡಿ, ಹಲವು ಬಗೆಯ ಕ್ಯಾಪ್‌ಗಳಿಂದ ಡೆಂಟಲ್ ಸಿಮೆಂಟ್ ಬಳಸಿ ಹಲ್ಲಿಗೆ ಕೂರಿಸಲಾಗುತ್ತದೆ. ಇವು ಸ್ಟೈನ್‌ಲೆಸ್ ಸ್ಟೀಲ್, ಗೋಲ್ಡ್, ಸೆರಾಮಿಕ್ ಕ್ಯಾಪ್‌ಗಳಾಗಿರುತ್ತವೆ ಎನ್ನುತ್ತಾರೆ ಡೆಂಟಲ್ ಕಾಸ್ಮೆಟಿಕ್ ಸರ್ಜನ್.
ಟೂತ್ ಜ್ಯುವೆಲರಿ ಹಾಕಿಸುವವರ ಗಮನಕ್ಕೆ
- • ದವಡೆ ಹಲ್ಲಿಗೆ ಟೂತ್ ಜ್ಯುವೆಲರಿ ಹಾಕಿಸುವುದು ಬೇಡ.
- • ಹಲ್ಲುಗಳಿಗೆ ಹೊಂದುವಂತಹ ಜ್ಯುವೆಲರಿ ಫಿಕ್ಸ್ ಮಾಡಿಸಿ.
- • ಫಿಕ್ಸ್ ಮಾಡಿದ ನಂತರ ಜೋರಾಗಿ ಬ್ರಶ್ ಮಾಡಕೂಡದು.
- • ಟೂತ್ ಜ್ಯುವೆಲರಿಗಳು ಅಡ್ಡ ಪರಿಣಾಮ ಬೀರುವುದಿಲ್ಲ.
- • ನಿಮ್ಮ ಹಲ್ಲುಗಳು ವಕ್ರವಾಗಿದ್ದಲ್ಲಿ ಚೆನ್ನಾಗಿ ಕಾಣಿಸದು.
- • ಮುಂದಿನ ಹಲ್ಲಿಗೆ ಫಿಕ್ಸ್ ಮಾಡಿಸುವುದು ಉತ್ತಮ.
- • ಹಲ್ಲಿನ ಸಮಸ್ಯೆಗಳು ಹೆಚ್ಚಿದ್ದಲ್ಲಿ ಫಿಕ್ಸ್ ಮಾಡಿಸಬೇಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಸಮ್ಮರ್ ಬಿಂದಾಸ್ ಫ್ಯಾಷನ್‌ಗೆ ರೀ ಎಂಟ್ರಿ ನೀಡಿದ ಗ್ಲಾಮರಸ್ ಆಫ್ ಶೋಲ್ಡರ್ ಡ್ರೆಸ್!