ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೋಡಲು ಪಕ್ಕಾ ನೈಜ ಹೂವುಗಳಂತೆಯೇ ಕಾಣಿಸುವ ಆರ್ಟಿಫಿಶಿಯಲ್ ಹೇರ್ ಫ್ಲವರ್‌ಗಳು ಈ ಹಬ್ಬದ (Ugadi Fashion) ಸೀಸನ್‌ನ ಹೇರ್‌ಸ್ಟೈಲ್‌ಗೆ ಸಾಥ್ ನೀಡಲು ಎಂಟ್ರಿ ನೀಡಿವೆ. “ಈ ಯುಗಾದಿ ಹಬ್ಬದ ಸೀಸನ್‌ನಲ್ಲಿ ಕೇಶಾಲಂಕಾರಕ್ಕೆ ಸಾಥ್ ನೀಡುವ ಬಗೆಬಗೆಯ ಅಲಂಕಾರಿಕ ಕೃತಕ ಹೂವುಗಳ ದಿಂಡುಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಕೂದಲಿಗೆ ಸಿಂಗರಿಸಿದಾಗ ತಕ್ಷಣ ನೋಡಲು ನೈಜ ಎನಿಸುವ ಈ ಆರ್ಟಿಫಿಶಿಯಲ್ ಫ್ಲವರ್ ಸೆಟ್‌ಗಳು ಕೈಗೆಟಕುವ ದರದಲ್ಲಿ ದೊರೆಯುತ್ತಿವೆ. ಹಬ್ಬದ ಸಮಯದಲ್ಲಿ ಮಾತ್ರವಲ್ಲ, ಇತರೇ ಸಂದರ್ಭಗಳಲ್ಲೂ ಧರಿಸಬಹುದಾದ ಈ ಹೂವುಗಳ ದಂಡೆಗಳು, ಮಾನಿನಿಯರ ಕೂದಲನ್ನು ಅಲಂಕರಿಸುತ್ತಿವೆ. ಬನ್ ಹೇರ್‌ಸ್ಟೈಲ್‌ಗೆ ಮಾತ್ರವಲ್ಲ, ಜಡೆ ಹಾಗೂ ನಾನಾ ಬಗೆಯ ಕೂದಲ ವಿನ್ಯಾಸಗಳ ಜೊತೆಯೂ ಕಾಣಿಸಿಕೊಳ್ಳುತ್ತಿವೆ. ಎಷ್ಟು ಬಾರಿಯಾದರೂ ಧರಿಸಿ, ಎತ್ತಿಟ್ಟು, ಮತ್ತೆ ಮತ್ತೆ ವಿಭಿನ್ನವಾಗಿ ಧರಿಸಬಹುದು” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್ ದಿಯಾ. ಅವರ ಪ್ರಕಾರ, ಈ ಕೃತಕ ಹೂ ದಂಡೆಗಳನ್ನು ಯಾವ ಶೈಲಿಯಲ್ಲಿ ಬೇಕಾದರೂ ಧರಿಸಬಹುದು ಎನ್ನುತ್ತಾರೆ.
ಹೂ ದಂಡೆಗಳ ವಿನ್ಯಾಸ
ದುಂಡು ಮಲ್ಲಿಗೆ, ಮೈಸೂರು ಮಲ್ಲಿಗೆ, ಜಾಜಿ ಮಲ್ಲಿಗೆ, ಮಂಗಳೂರು ಮಲ್ಲಿಗೆ, ಕನಕಾಂಬರ, ಸೂಜು ಮಲ್ಲಿಗೆಯ ತದ್ರೂಪದಂತೆ ಕಾಣಿಸುವ ಹೂವಿನ ದಂಡೆಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇನ್ನು ಕೃತಕವಾಗಿ ಕಂಡರೂ ಕೇಶ ವಿನ್ಯಾಸಕ್ಕೆ ಸಾಥ್ ನೀಡುವ ರೋಸ್, ಗೋಲ್ಡನ್ ಕಲರ್‌ನ ದಂಡೆ, ಸಿಲ್ವರ್ ಬಣ್ಣದ ಹೂವಿನ ದಂಡೆ, ಮಿಕ್ಸ್ ಫ್ಲವರ್ ಕ್ಲಿಪ್ ಶೈಲಿಯವು, ತಂತಿಯಲ್ಲಿ ನುಲಿದಿರುವಂತಹ ಬಂಚ್ ಹೂವುಗಳು ಸೇರಿದಂತೆ ಬಗೆಬಗೆಯವು ಮಾರುಕಟ್ಟೆಯಲ್ಲಿ ಆಗಮಿಸಿವೆ. ಇನ್ನು, ಹಬ್ಬದ ಗ್ರ್ಯಾಂಡ್ ಲುಕ್ ನೀಡಲು ಒಂದಿಷ್ಟು ಹೊಸ ಬಗೆಯ ಶಿಮ್ಮರ್ ಇರುವಂತಹ ಹೂವಿನ ದಂಡೆಗಳು ಎಂಟ್ರಿ ನೀಡಿವೆ.
ಹೇರ್‌ಸ್ಟೈಲ್‌ಗೆ ತಕ್ಕಂತೆ ಹೂವಿನ ಅಲಂಕಾರ
ಬನ್ ಅಥವಾ ತುರುಬಿನ ಹೇರ್‌ಸ್ಟೈಲ್‌ಗೆ ಯಾವ ಬಗೆಯ ಕೃತಕ ಹೂವಿನ ದಂಡೆಯನ್ನಾದರೂ ಸರಿಯೇ ಧರಿಸಬಹುದು. ಎಲ್ಲವೂ ಆಕರ್ಷಕವಾಗಿಯೇ ಕಾಣಿಸುತ್ತವೆ. ಇನ್ನು ಮಿಕ್ಸ್ ಮ್ಯಾಚ್ ಕೇಶ ವಿನ್ಯಾಸಕ್ಕಾದಲ್ಲಿ ಕ್ಲಿಪ್ ಬಗೆಯವನ್ನು ಆಯ್ಕೆ ಮಾಡಬಹುದು. ಕಂಟೆಂಪರರಿ ಲುಕ್‌ಗೆ ಆದಲ್ಲಿ ವೆರೈಟಿ ಹೂವುಗಳಿರುವ ತಂತಿಯಿಂದ ನುಲಿದಿರುವ ಕ್ಲಿಪ್ ಶೈಲಿಯವನ್ನು ಧರಿಸಬಹುದು. ಜಡೆಗಾದಲ್ಲಿ ಆದಷ್ಟೂ ಕೆಳಗಿನ ಭಾಗದಿಂದ ಮೇಲಿನ ತನಕ ಎತ್ತಿ ಕಟ್ಟಬಹುದಾದ ದಂಡೆಯನ್ನು ಬಳಸಬಹುದು.
ನೈಜವಾಗಿ ಕಾಣಿಸಲು ಹೀಗೆ ಮಾಡಿ
- ಆದಷ್ಟೂ ಸಾಮಾನ್ಯವಾಗಿ ದೊರಕುವ ಹೂವುಗಳ ಡಿಸೈನ್ ಆಯ್ಕೆ ಮಾಡಿ.
- ಮಲ್ಲಿಗೆ, ಕನಕಾಂಬರ ಹೂವುಗಳ ಕೃತಕ ದಂಡೆ ನೈಜತೆ ಹೆಚ್ಚಿಸುತ್ತದೆ.
- ಹೇರ್ಸ್ಟೈಲ್ ಮಾಡಿದ ನಂತರ ಧರಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)