-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯುಗಾದಿ ಹಬ್ಬ ಸಮೀಪಿಸುತ್ತಿದೆ. ಆಗಲೇ ಎಲ್ಲೆಡೆ ಹಬ್ಬದ ಶಾಪಿಂಗ್ (Ugadi Shopping) ಸಂಭ್ರಮ ಹೆಚ್ಚಾಗಿದೆ. ಹಿರಿಯರ ಕಿರಿಯರು ಧರಿಸುವ ಎಥ್ನಿಕ್‌ವೇರ್‌ನಿಂದ ಹಿಡಿದು ಚಿನ್ನಾಭರಣಗಳ ಆಭರಣಗಳ ಖರೀದಿ, ಹೋಮ್ ಅಪ್ಲೈಯೆನ್ಸ್‌ಗಳ ಕೊಳ್ಳುವಿಕೆ ಸೇರಿದಂತೆ ಎಲ್ಲೆಡೆ ಶಾಪಿಂಗ್ ಸಂಭ್ರಮ ಮನೆಮಾಡಿದೆ.
“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಹೌದು. ಹಬ್ಬ ಇನ್ನೇನು ಬಂದೇ ಬಿಡ್ತು. ಆಗಲೇ ಮಾಲ್‌ಗಳು, ಶೋರೂಮ್‌ಗಳು ನಳನಳಿಸುತ್ತಿವೆ. ಚಿನ್ನಾಭರಣ ಅಂಗಡಿಗಳು ಕಳೆಗಟ್ಟಿವೆ. ಇನ್ನು ವೀಕೆಂಡ್ ಕೂಡ ಬಂದಿಲ್ಲ, ಆಗಲೇ ಶಾಪ್‌ಗಳಲ್ಲಿ ಖರೀದಿಯ ಸಡಗರ –ಸಂಭ್ರಮ ಹೆಚ್ಚಾಗಿದೆ” ಎನ್ನುತ್ತಾರೆ ಶಾಪಿಂಗ್ ಪ್ರಿಯರಾದ ಕನ್ನಿಕಾ, ರಾಗ. ಇನ್ನು ಹಬ್ಬಗಳು ಬಂದ್ರೆ, ಮಾರಾಟಗಾರರಿಗೆ ಸುಗ್ಗಿಕಾಲ ಬಂದಂತೆ. ಇನ್ನು ಗ್ರಾಹಕರಿಗೆ ಈ ದಿನಗಳಲ್ಲಿ ಸಿಗುವ ಡಿಸ್ಕೌಂಟ್ಸು, ಆಫರ್ಸು, ಕೂಪನ್ಸು ಸುರಿಮಳೆಯಿಂದ ಶಾಪಿಂಗ್ ಉತ್ಸಾಹ ಎಲ್ಲೆ ಮೀರಿರುತ್ತದೆ ಎನ್ನುತ್ತಾರೆ ಮಾಲ್‌ವೊಂದರ ಎಥ್ನಿಕ್ ಶಾಪಿಂಗ್ ಸೆಂಟರ್‌ನ ಮ್ಯಾನೇಜರ್.
ಎಂಟ್ರಿ ನೀಡಿದ ಎಥ್ನಿಕ್ ಉಡುಪುಗಳು
ಹಬ್ಬದ ಸಂಭ್ರಮ ಹೆಚ್ಚಿಸಲು ಇದೀಗ ನಾನಾ ಬಗೆಯ ಎಥ್ನಿಕ್ ಶೈಲಿಯ ಉಡುಪುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲೂ ಮುಂಬರುವ ಬೇಸಿಗೆಗೆ ಸೂಟ್ ಆಗುವಂತಿರುವ ಟ್ರಾಪಿಕಲ್ ಪ್ರಿಂಟ್ಸ್, ಕುರ್ತಾಸ್, ಟುಲಿಪ್ ಡಿಸೈನ್ಸ್‌ನ ಹೆಣ್ಣುಮಕ್ಕಳ ಡ್ರೆಸ್‌ಗಳು, ವೆರೈಟಿ ಕಾಟನ್ ಬಾರ್ಡರ್ ಉಡುಪುಗಳು ಬಂದಿವೆ. ಹೊಸ ಡಿಸೈನ್‌ನ ಲಂಗ-ದಾವಣಿ ಹಾಗೂ ರೇಷ್ಮೆ ಸೀರೆಗಳು ಲಗ್ಗೆ ಇಟ್ಟಿವೆ. ಇನ್ನು ಪುರುಷರಿಗೆ ಎಥ್ನಿಕ್ ಲುಕ್ ನೀಡುವ ಬಂದಗಾಲ ಸೂಟ್ ಹಾಗೂ ವೇಸ್‌ಕೋಟ್ಸ್ ಹಾಗೂ ಶಾರ್ಟ್ ಕುರ್ತಾಗಳು ಎಂಟ್ರಿ ನೀಡಿವೆ. ಇನ್ನು ಮಕ್ಕಳಿಗೆಂದೇ ನಾನಾ ಬಗೆಯ ಉಡುಪುಗಳು ಆಗಮಿಸಿವೆ. ಮಿನಿ ಗಾಗ್ರಾ ಚೋಲಿ, ತ್ರೀ ಫೋರ್ತ್, ಶಾರ್ಟ್ ಟಾಫ್ ಫ್ರಾಕ್, ಮಿಡಿ, ಮಿನಿ, ಹೀಗೆ ಹಲವಾರು ಬಗೆಯ ಉಡುಪುಗಳು ಚಿಣ್ಣರ ಸೈಝ್‌ನಲ್ಲಿ ಬಿಡುಗಡೆಗೊಂಡಿವೆ.
ಇದನ್ನೂ ಓದಿ: Iti Acharya: ಫ್ಯಾಷನ್ ಶೋನಲ್ಲಿ ಅಪ್ಸರೆಯಂತೆ ಕಂಡ ಇತಿ ಆಚಾರ್ಯ
ಚಿನ್ನಾಭರಣಗಳ ಖರೀದಿ
ಇದೀಗ ಹಬ್ಬಗಳಿಗೂ ಆಭರಣ ಖರೀದಿಸುವವರ ಸಂಖ್ಯೆ ಈಗ ಮೊದಲಿಗಿಂತ ಹೆಚ್ಚಾಗಿದೆ ಎನ್ನುವ ಜ್ಯುವೆಲರಿಯೊಂದರ ಸೇಲ್ಸ್ ಮ್ಯಾನ್ ಪ್ರಕಾರ, ಜ್ಯುವೆಲರಿ ಶಾಪ್‌ಗಳು ನೀಡುತ್ತಿರುವ ಡಿಸ್ಕೌಂಟ್ಸ್, ನೋ ವೆಸ್ಟೇಜ್, ನೋ ಮೇಕಿಂಗ್ ಚಾರ್ಜ್‌ನಂತಹ ಹಬ್ಬದ ರಿಯಾಯಿತಿ ಹಾಗೂ ವಿನಾಯಿತಿ ಆಫರ್ಸ್ ಇದಕ್ಕೆ ಕಾರಣವಂತೆ.
“ಇತ್ತೀಚೆಗೆ ಹಬ್ಬಗಳಿಗೆ ಶಾಪಿಂಗ್ ಮಾಡುವಾಗ ಮೊದಲು ಚಿನ್ನದ ಖರೀದಿಗೆ ಆದ್ಯತೆ ನೀಡುತ್ತೇವೆ. ಚಿನ್ನಾಭರಣಗಳ ಚೀಟಿ ಹಾಕಿರುವ ಹಣದಲ್ಲಿ ಆಭರಣ ಖರೀದಿಸುತ್ತೇವೆ” ಎನ್ನುತ್ತಾರೆ ಆಭರಣ ಪ್ರಿಯ ಗ್ರಾಹಕರು.
ಮಾಲ್‌ಗಳಲ್ಲಿ ಶಾಪಿಂಗ್ ಸಂಭ್ರಮ
ಒಂದೇ ಸೂರಿನಡಿ ಎಲ್ಲವನ್ನೂ ಕೊಳ್ಳಲು ಬಯಸುವವರು ಮಾಲ್‌ಗಳಿಗೆ ಭೇಟಿ ನೀಡುವುದು ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ ಮಾಲ್‌ಗಳು ಕೂಡ, ನಾನಾ ಬಗೆಯ ಆಕರ್ಷಕ ಗಿಫ್ಟ್ ವೋಚರ್‌ಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸುತ್ತಿವೆ.
ಯುಗಾದಿ ಹಬ್ಬಕ್ಕೆ ಹೊಸ ಕೊಡುಗೆಗಳು
ಅಡುಗೆಮನೆಯ ಸಾಮಗ್ರಿಯಿಂದಿಡಿದು, ಹಾಲ್‌ನೊಳಗಿನ ಲಕ್ಷಗಟ್ಟಲೆ ಬೆಲೆಬಾಳುವ ಎಲೆಕ್ಟ್ರಾನಿಕ್ ಐಟಂಗಳು, ಸಾವಿರಗಟ್ಟಲೆ ಬೆಲೆಬಾಳುವ ಧರಿಸುವ ಉಡುಪುಗಳು ಹೀಗೆ ಎಲ್ಲಾ ಬಗೆಯ ವಸ್ತುಗಳ ಮೇಲೂ ರಿಯಾಯಿತಿ-ವಿನಾಯಿತಿಯ ಟ್ಯಾಗ್‌ಗಳು ಗ್ರಾಹಕರನ್ನು ಸ್ವಾಗತಿಸುತ್ತಿವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)