-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯ ಸೀಸನ್‌ನಲ್ಲಿ ಬ್ರೈಡಲ್ ಮೇಕಪ್‌ಗೆ (Wedding Makeup Trends) ಮೊದಲಿಗಿಂತ ಡಿಮ್ಯಾಂಡ್ ಹೆಚ್ಚಾಗಿದೆ. ಸಾಮಾನ್ಯವಾಗಿ ಕಾಣುವ ಮದುಮಗಳನ್ನು ಸ್ವರ್ಗದಿಂದಿಳಿದ ದೇವತೆಯಂತೆ ಬಿಂಬಿಸಬಲ್ಲ ಬಗೆಬಗೆಯ ಮನಮೋಹಕ ಮೇಕಪ್ ಕಾನ್ಸೆಪ್ಟ್‌ಗೆ ಬೇಡಿಕೆ ಸೃಷ್ಟಿಯಾಗಿದೆ.
ಟ್ರೆಂಡ್‌ನಲ್ಲಿರುವ ನಾನಾ ಬಗೆಯ ಬ್ರೈಡಲ್ ಮೇಕಪ್
ಸೆಲೆಬ್ರಿಟಿಯಂತೆ ಕಾಣಲು ಬಯಸುವವರು ಹೈ ಡೆಫನೇಷನ್ ಮೇಕಪ್‌ಗೆ ಪ್ರಾಮುಖ್ಯತೆ ನೀಡಲಾರಂಭಿಸಿದ್ದಾರೆ. ಎಂತಹವರನ್ನು ಆಕರ್ಷಕವಾಗಿಸುವ ಈ ಎಚ್‌ಡಿ ಮೇಕಪ್ ಮುಖದ ಓರೆ-ಕೊರೆಗಳನ್ನು ಮರೆಮಾಚುತ್ತದೆ. ಹಾಗಾಗಿ ಈ ಮೇಕಪ್ ಕಾನ್ಸೆಪ್ಟ್ ಟ್ರೆಂಡ್‌ನ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಸೇರಿದೆ.
ಇನ್ನು ಆರೋಗ್ಯಕರ ಚರ್ಮದವರಿಗಾಗಿ ಏರ್‌ಬ್ರಷ್ ಮೇಕಪ್ ಎಂಟ್ರಿ ನೀಡಿದೆ. ಹೇರ್ ಕಂಪ್ರೆಸ್ಸರ್ ಮೂಲಕ ಸ್ಪ್ರೇ ಮಾಡಿ ಮಾಡಲಾಗುವ ಈ ಮೇಕಪ್ ಹೆಚ್ಚು ಹೊತ್ತು ಉಳಿಯುತ್ತದೆ. ಅಲ್ಲದೇ, ಇದು ವಾಟರ್ ಪ್ರೂಫ್ ಜತೆಗೆ ನ್ಯಾಚುರಲ್ ಲುಕ್ ನೀಡುತ್ತದೆ. ತೀರಾ ಸೂಕ್ಷ್ಮ ತ್ವಚೆಯನ್ನು ಹೊಂದಿರುವವರ ಮೊಡವೆ ಹಾಗೂ ಕಲೆಗಳನ್ನು ಮರೆಮಾಚುವ ಮಿನೆರಲ್ ಮೇಕಪ್ ಮೊದಲಿನಂತೆ ಇಂದಿಗೂ ಟ್ರೆಂಡ್‌ನಲ್ಲಿ ಉಳಿದಿದೆ. ಹೆಚ್ಚು ಲೇಯರ್‌ಗಳಿಲ್ಲದೆ, ಕಲರ್‌ಗಳನ್ನು ಬಳಸದೇ ಮಾಡುವ ಈ ಮೇಕಪ್ ಎಲ್ಲಾ ಬಗೆಯ ಚರ್ಮಕ್ಕೂ ಸೂಟ್ ಆಗುತ್ತದೆ. ವಿಂಟರ್ ಸೀಸನ್‌ಗೆ ಹೊಂದುವ ಒಣ ಚರ್ಮಕ್ಕೆ ಗ್ಲೊಸಿ ಲುಕ್ ನೀಡುವ ಹೈ ಶೈನ್ ಮೇಕಪ್, ಕಾಂಬಿನೇಷನ್ ಚರ್ಮಕ್ಕೆ ಹೊಂದುವ ಮ್ಯಾಟ್ ಫಿನಿಶಿಂಗ್ ಮೇಕಪ್ ಕೂಡ ಲಿಸ್ಟ್‌ನಲ್ಲಿದೆ. ಇಷ್ಟಾದರೂ ಮೇಕಪ್‌ನಿಂದ ಸಮಾಧಾನವಾಗದಿದ್ದವರಿಗೆಂದೇ ನುರಿತ ಸೌಂದರ್ಯ ತಜ್ಞರು ಕಸ್ಟಮೈಸ್ಡ್ ಮೇಕಪ್‌ಕಾನ್ಸೆಪ್ಟ್‌ಗಳನ್ನು ಪರಿಚಯಿಸತೊಡಗಿದ್ದಾರೆ.
ಇದನ್ನೂ ಓದಿ | Kids winter Fashion | ಮಕ್ಕಳನ್ನು ಕ್ಯೂಟ್ ಆಗಿ ಬಿಂಬಿಸುವ ವಿಂಟರ್ ಫ್ಯಾಷನ್
ಸರಿಯಾದ ಮೇಕಪ್ ಪ್ಲಾನ್ ಮಾಡುವುದು ಹೇಗೆ?
ಮದುವೆಗೆ ಸಾಕಷ್ಟು ದಿನಗಳ ಸಮಯವಿರುವಾಗಲೇ ಮದುವೆಯ ದಿನ ಯಾವ ಮೇಕಪ್ ಹಚ್ಚಿದರೇ ಮ್ಯಾಚ್ ಆಗುವುದು ಎಂಬುದನ್ನು ತಿಳಿದುಕೊಂಡಿರಬೇಕು. ಮೊದಲೇ ನಿಮ್ಮ ತ್ವಚೆ ಯಾವ ಗುಣ ಹೊಂದಿದೆ ಎಂಬುದನ್ನು ಪರೀಕ್ಷೆ ಮಾಡಿಕೊಂಡಿರಬೇಕು. ಬೇಕಿದ್ದಲ್ಲಿ ಮದುವೆಗೆ ಮುನ್ನವೇ ಮೇಕಪ್ ಮಾಡಿ ಪ್ರಯೋಗಿಸಬಹುದು. ಈ ಬಗ್ಗೆ ಸೌಂದರ್ಯ ತಜ್ಞರ ಹತ್ತಿರ ಚರ್ಚಿಸಿ ಫೈನಲ್ ಮಾಡಿಕೊಂಡಿರಬೇಕು. ಮದುವೆಯ ಸಮಾರಂಭಗಳಿಗೆ ಧರಿಸುವ ಡಿಸೈನರ್‌ವೇರ್‌ಗೆ ಹೊಂದುವಂತಹ ಮೇಕಪ್ ಆಯ್ಕೆ ಮಾಡುವಲ್ಲಿ ಜಾಣತನ ತೋರಬೇಕು. ಉದಾಹರಣೆಗೆ, ಡಿಸೈನರ್‌ವೇರ್ ಗೋಲ್ಡನ್ ವರ್ಣವಿದ್ದಲ್ಲಿ ಕಣ್ಣಿನ ಮೇಕಪ್‌ಗೆ ಗೋಲ್ಡನ್ ಐ ಲೈನರ್ ಇಲ್ಲವೇ ಶ್ಯಾಡೋ ಬಳಸುವುದು. ಹಾಗೆಯೇ ಮುಖದ ಆಕಾರ ಹೈಲೈಟ್ ಆಗುವಂತಹ ಮೇಕಪ್‌ಗೆ ಒಳಗಾಗುವುದು ಸೂಕ್ತ ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ಮಂಜು. ಅವರ ಪ್ರಕಾರ, ಧರಿಸುವ ಉಡುಪಿನಂತೆ ಮುಖದ ಮೇಕಪ್ ಬಗ್ಗೆಯೂ ಪ್ರೀಪ್ಲಾನ್ ಮಾಡಬೇಕು.
ಬ್ರೈಡಲ್ ಮೇಕಪ್ ಪ್ರಿಯರಿಗೆ ಸಿಂಪಲ್ ಸಲಹೆ
- ಮೇಕಪ್ಗಾಗಿ ಸಮಯವನ್ನು ಮೀಸಲಿಡಿ.
- ಒಂದರ ನಂತರ ಮತ್ತೊಂದು ಕಾರ್ಯಕ್ರಮವಿದ್ದಲ್ಲಿ ಎರಡಕ್ಕೂ ಮ್ಯಾಚ್ ಆಗುವಂತಹ ಮೇಕಪ್ ಪ್ರಿಫರ್ ಮಾಡಿ.
- ಚಳಿಗಾಲದಲ್ಲಿ ತ್ವಚೆ ಒಣಗುವ ಸಾಧ್ಯತೆ ಇರುವುದರಿಂದ ಹೆಚ್ಚೆಚ್ಚು ನೀರು ಕುಡಿಯಿರಿ.
(ಲೇಖಕಿ ಶೀಲಾ ಸಿ. ಶೆಟ್ಟಿ)
ಇದನ್ನೂ ಓದಿ | Kids Fashion | ಥೀಮ್‌ಗೆ ತಕ್ಕಂತೆ ಬದಲಾಗುವ ಇಂದಿನ ಮಕ್ಕಳ ಫ್ಯಾಷನ್