ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆ ಸೀರೆಗಳ ಆಯ್ಕೆ (Wedding Saree Selection) ಮಾಡುವುದು ಸುಲಭವೇನಲ್ಲ! ಹೌದು, ಇದರಲ್ಲಿ ಮದುವೆಯಾಗುತ್ತಿರುವ ಮದುಮಗಳ ಆಯ್ಕೆ ಮಾತ್ರವಲ್ಲ, ಆಪ್ತರ, ಮನೆಯವರ ಪಾತ್ರವೂ ಇರುತ್ತದೆ. ಕೆಲವೊಮ್ಮೆ ಕುಟುಂಬದವರ ಇಷ್ಟನುಸಾರವಾಗಿಯೂ ಸೀರೆಯ ಆಯ್ಕೆ ನಡೆಯುತ್ತದೆ. ಇನ್ನು, ಕೆಲವೊಮ್ಮೆ ಸಂಪ್ರಾದಾಯಗಳನ್ನು ಪಾಲಿಸಲು ಆಯಾ ಶಾಸ್ತ್ರಕ್ಕೆ ಹೊಂದುವ ಡಿಸೈನ್ಸ್ ಒಪ್ಪಿಕೊಳ್ಳಬೇಕಾಗುತ್ತದೆ. ಇವೆಲ್ಲದರ ಮಧ್ಯೆ ಮದುವೆ ಮನೆಯ ಇಡೀ ಕುಟುಂಬದ ಹೆಣ್ಣುಮಕ್ಕಳ ಸೀರೆ ಸೆಲೆಕ್ಷನ್ ಕೂಡ ಇದೇ ಸಮಯದಲ್ಲಿ ನಡೆಯುತ್ತದೆ. ಹಾಗಾಗಿ ಸೀರೆ ಸೆಲೆಕ್ಷನ್ ಮಾಡುವುದು ವೆಡ್ಡಿಂಗ್ ಕೆಲಸಗಳಲ್ಲಿ ಟಾಸ್ಕ್ ಇದ್ದಂತೆ. ಇಂತಹ ಸನ್ನಿವೇಶಗಳಲ್ಲಿ ಕೆಲವು ಸಿಂಪಲ್ ಟಿಪ್ಸ್ ಪಾಲಿಸಿದಲ್ಲಿ, ಹೆಚ್ಚು ತಲೆ ಬಿಸಿಯಿಲ್ಲದೇ ಟ್ರೆಂಡಿ ಮದುವೆ ಸೀರೆಗಳನ್ನು ಸೆಲೆಕ್ಟ್ ಮಾಡಬಹುದು ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ಸ್.
“ಕೆಲವೊಮ್ಮೆ ಮದುವೆ ಹೆಣ್ಣಿನ ಸೀರೆಗಳೊಂದಿಗೆ ಕುಟುಂಬದ ಇತರೇ ಹೆಣ್ಣುಮಕ್ಕಳ ಸೀರೆಗಳನ್ನೂ ಆಯ್ಕೆ ಮಾಡಬೇಕಾಗುತ್ತದೆ. ಇದು ಕೂಡ ಒಂದು ಅತಿ ದೊಡ್ಡ ಟಾಸ್ಕ್. ಸಿಂಪಲ್ ಸುಲಭೋಪಾಯಗಳನ್ನು ಕಂಡುಕೊಂಡು ಒಂದಿಷ್ಟು ಐಡಿಯಾ ಫಾಲೋ ಮಾಡಿದಲ್ಲಿ ನಿರಾತಂಕವಾಗಿ ಸೆಲೆಕ್ಟ್ ಮಾಡಬಹುದು” ಎನ್ನುತ್ತಾರೆ ಸೀರೆ ಡ್ರೇಪರ್ಸ್. ಈ ಕುರಿಂತಂತೆ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.
ಮೊದಲು ಪ್ಲಾನ್ ಮಾಡಿ
ಮದುವೆ ಹೆಣ್ಣಿನ ಸೀರೆ ಖರೀದಿಗೆ ತೆರಳುವ ಮುನ್ನವೇ, ಯಾವ ಅಂಗಡಿಗೆ ತೆರಳಬೇಕು? ಎಲ್ಲೆಲ್ಲಿ ತಮಗೆ ಅವಶ್ಯವಿರುವಂತಹ ರೇಷ್ಮೆ ಸೀರೆಗಳು ದೊರೆಯುತ್ತವೆ? ಯಾವುದೆಲ್ಲಾ ಲಭ್ಯ? ಎಷ್ಟು ಸಮಯ ತೆಗೆದುಕೊಳ್ಳಬಹುದು? ಯಾರೆಲ್ಲಾ ಹೋಗಬೇಕು? ಯಾವ ಸಮಯದಲ್ಲಿ ತೆರಳುವುದು ಉತ್ತಮ? ಬಜೆಟ್ ಏನು? ಎಂಬುದರ ಕುರಿತಂತೆ ಮೊದಲೇ ಪ್ಲಾನ್ ಮಾಡಿ, ನೋಡಿ.
ಗ್ರೂಪ್‌ಗೆ ಜವಾಬ್ದಾರಿ ವಹಿಸಿ
ಮದುವೆಯ ಸೀರೆ ಖರೀದಿಸಲು ತೆರಳುವಾಗ ಆದಷ್ಟೂ ಎಲ್ಲಾ ಕುಟುಂಬದವರು ಗ್ರೂಪ್‌ನಲ್ಲಿ ತೆರಳುತ್ತಾರೆ. ಹಾಗಾಗಿ, ಮೊದಲೇ ಯಾವ ಗ್ರೂಪ್‌ನ ಸದಸ್ಯರು ಯಾರ್ಯಾರಿಗೆ ಸೀರೆ ಕೊಳ್ಳಬೇಕು? ಮದುಮಗಳ ಸೀರೆ ಆಯ್ಕೆಗೆ ಯಾರು ಆಕೆಯ ಜತೆಗಿರಬೇಕು? ಎಂಬುದನ್ನು ನಿರ್ಧರಿಸಬೇಕು. ಆಗ ಯಾರಿಗೂ ಕನ್‌ಫ್ಯೂಸ್ ಆಗುವುದಿಲ್ಲ. ಆಯ್ಕೆ ಸುಲಭವಾಗುವುದು.
ಮೊದಲು ಮದುಮಗಳ ಸೀರೆ ಖರೀದಿಸಿ
ರೇಷ್ಮೆ ಸೀರೆ ಕೊಳ್ಳುವಾಗ ಮೊದಲು ಮದುಮಗಳ ಸೀರೆಯನ್ನು ಆಯ್ಕೆ ಮಾಡಿ. ನಂತರ ಉಳಿದವರ ಯೋಚನೆ ಮಾಡಿ. ಮೊದಲೇ ಇತರರಿಗೆ ಸೀರೆ ಖರೀದಿ ಮಾಡಿ ನಂತರ, ಆಕೆಯ ಸೀರೆ ಖರೀದಿಗೆ ಹೋಗುವುದಾದಲ್ಲಿ ಅಷ್ಟರೊಳಗೆ ಎಲ್ಲರ ಎನರ್ಜಿಯು ಕಡಿಮೆಯಾಗುವುದು, ಉತ್ಸಾಹ ಕುಂದಬಹುದು. ಹಾಗಾಗಿ, ಮೊದಲೇ ಮದುಮಗಳ ರೇಷ್ಮೆ ಸೀರೆ ಆಯ್ಕೆ ಮಾಡಿ.
ಟ್ರೆಂಡಿ ಡಿಸೈನ್ ಹಾಗೂ ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡಿ
ಸದ್ಯ ಟ್ರೆಂಡಿಯಾಗಿರುವ ಡಿಸೈನ್ ರೇಷ್ಮೆ ಸೀರೆಗಳನ್ನು ಮೊದಲು ನೋಡಿ. ಮೊದಲೇ ಅದೇ ಬೇಕು, ಇದೇ ಬೇಕು ಎನ್ನುವುದಾದಲ್ಲಿ ಅಂತಹ ಡಿಸೈನ್‌ನದ್ದನ್ನು ತೆಗೆಸಿ, ಚೆಕ್ ಮಾಡಿ. ಸಿಲ್ಕ್ ಮಾರ್ಕ್ ಇರುವಂತಹದ್ದನ್ನು ನೋಡಿ ಖರೀದಿಸಿ.
ಮಾರಾಟಗಾರರ ಮಾತಿಗೆ ಮರುಳಾಗಬೇಡಿ
ಅಂಗಡಿಯವರ ಹಾಗೂ ಮಾರಾಟಗಾರರ ಮಾತಿಗೆ ಮರುಳಾಗಿ ಖರೀದಿಸಬೇಡಿ. ನಿಮಗೆ ಬೇಕಾದ್ದನ್ನು ಮೊದಲೇ ಮೊಬೈಲ್‌ನಲ್ಲಿ ಫೋಟೋ ಸೇವ್ ಮಾಡಿಕೊಂಡು ತೋರಿಸಿ ಕೇಳಿ ನೋಡಿ.
ಮದುವೆಗೆ ಆನ್‌ಲೈನ್ ಸೀರೆ ಖರೀದಿ ಬೇಡ
ಮದುವೆಯ ದುಬಾರಿ ಸೀರೆಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬೇಡಿ. ಯಾಕೆಂದರೇ, ನೀವು ನೋಡಿದ ಫ್ಯಾಬ್ರಿಕ್, ಬಂದ ನಂತರ ಬೇರೇ ರೀತಿಯಲ್ಲಿ ಕಾಣಿಸಬಹುದು. ಇಷ್ಟವಾಗದೇ ಹೋಗಬಹುದು. ಹಾಗಾಗಿ ಅಂಗಡಿಗೆ ತೆರಳಿ ಖರೀದಿಸಿ.
ಡ್ರೇಪಿಂಗ್ ಟ್ರಯಲ್ ನೋಡಿ
ದುಬಾರಿ ಸೀರೆಗಳನ್ನು ನೋಡಿದಾಕ್ಷಣ ಆಯ್ಕೆ ಮಾಡಬೇಡಿ. ನೀವು ಉಟ್ಟ ಉಡುಪಿನ ಮೇಲೆಯೇ ಟ್ರಯಲ್ ಮಾಡುವ ಸೌಲಭ್ಯವಿರುತ್ತದೆ. ಅಂತಹದ್ದನ್ನು ನೋಡಿ ಕೊಳ್ಳಿ. ಕೆಲವು ಸೀರೆಗಳು ನೋಡಿದಾಗ ಚೆನ್ನಾಗಿ ಕಾಣುತ್ತವೆ. ಉಟ್ಟಾಗ ಡಿಫರೆಂಟಾಗಿ ಕಾಣುತ್ತವೆ. ಹಾಗಾಗಿ ಮೊದಲೇ ಪರಿಶೀಲಿಸಿ.
ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವ ಬಣ್ಣದ ಆಯ್ಕೆ
ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವ ಬಣ್ಣದ ರೇಷ್ಮೆ ಸೀರೆಯ ಶೇಡ್ ಆಯ್ಕೆ ಮಾಡಿ. ಯಾಕೆಂದರೇ, ನಿಮ್ಮ ಮದುವೆಯ ದಿನ ಅದು ಮುಖದ ಕಾಂತಿ ಹೆಚ್ಚಿಸುವಲ್ಲಿ ಪಾತ್ರ ವಹಿಸುತ್ತದೆ. ಹಾಗಾಗಿ ಯಾರ ಮಾತು ಕೇಳದೇ ಬ್ಯೂಟಿ ಎಕ್ಸ್‌ಫರ್ಟ್ಸ್ ಸಲಹೆ ಪಡೆದು ಖರೀದಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Niveditha Gowda: ಗೋಲ್ಡನ್ ಲುಕ್‌ನಲ್ಲಿ ನಿವೇದಿತಾ ಗೌಡ ಕಮಾಲ್