ನವದೆಹಲಿ: ಚಿನ್ನ (gold) ಯಾರಿಗೆ ಪ್ರಿಯವಿಲ್ಲ ಹೇಳಿ? ಆದರೆ ಇತ್ತೀಚೆಗೆ ವಿಪರೀತ ಏರುತ್ತಿರುವ ಚಿನ್ನದ ದರ ಶೀಘ್ರದಲ್ಲೇ ಲಕ್ಷದ ಗಡಿ ದಾಟುವ ಹಾಗೆ ತೋರುತ್ತಿದೆ. ಚಿನ್ನ ಎಷ್ಟೇ ದುಬಾರಿಯಾದರೂ ಮದುವೆ ಇತ್ಯಾದಿ ಶುಭ ಸಂದರ್ಭಗಳಲ್ಲಿ ಇದರ ಖರೀದಿಗೆ (shopping) ಜನ ಮುಗಿಬೀಳುತ್ತಾರೆ. ಜಾಗತಿಕ ಅನಿಶ್ಚಿತತೆ ಪರಿಣಾಮವಾಗಿ ಶೀಘ್ರದಲ್ಲೇ ಫೆಡರಲ್ ರಿಸರ್ವ್ (Federal Reserve) ದರ ಇಳಿಸುವ ನಿರೀಕ್ಷೆ, ಮದುವೆ ಸೀಸನ್ (Wedding season) ಪ್ರಾರಂಭ ಇತ್ಯಾದಿ ಕಾರಣಗಳಿಂದ ಈ ಬಾರಿ ಚಿನ್ನದ ದರ (Gold Price Explainer) ಮಾತ್ರ ಸಾರ್ವಕಾಲಿಕ ದಾಖಲೆ ಬರೆದಿದೆ. 24 ಕ್ಯಾರೆಟ್‌ನ ಪ್ರತಿ ಹತ್ತು ಗ್ರಾಮ್ ಚಿನ್ನದ ದರ 71,652 ರೂ. ಗರಿಷ್ಠ ಮಟ್ಟವನ್ನು ತಲುಪಿದೆ.
ಚಿನ್ನ ಎಷ್ಟೇ ದುಬಾರಿಯಾದರೂ ಖರೀದಿ ಮಾಡುವವರು ಮಾತ್ರ ಕಡಿಮೆ ಆಗಿಲ್ಲ. ಹೀಗಾಗಿಯೇ ಇದು ಹೂಡಿಕೆ ದಾರರನ್ನು ಸದಾ ಆಕರ್ಷಿಸುತ್ತಿದೆ.
ಚಿನ್ನ ಯಾಕೆ ದುಬಾರಿಯಾಗುತ್ತಿದೆ?
ಚಿನ್ನದಲ್ಲಿ ಹೂಡಿಕೆ ಸುರಕ್ಷಿತವಾಗಿರುವುದರಿಂದಲೇ ಚಿನ್ನ ಹೆಚ್ಚು ದುಬಾರಿಯಾಗುತ್ತಿದೆ. ಆರ್ಥಿಕ ಅನಿಶ್ಚಿತತೆ, ಭೌಗೋಳಿಕ, ರಾಜಕೀಯ ಪ್ರಕ್ಷುಬ್ಧತೆಯ ಅವಧಿಯಲ್ಲಿ ಸ್ಥಿರತೆಯನ್ನು ಬಯಸುವ ಹೂಡಿಕೆದಾರರಿಗೆ ಚಿನ್ನದ ಮೇಲಿನ ಹೂಡಿಕೆಯು ಹೆಚ್ಚು ಸುರಕ್ಷಿತವಾಗಿ ಕಾಣುತ್ತಿದೆ. ಹೀಗಾಗಿಯೇ ಚಿನ್ನದ ದರ ಗಗನಕ್ಕೇರುತ್ತಿದೆ.
ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ಮತ್ತೆ ದಾಖಲೆ ಏರಿಕೆ; 10 ಗ್ರಾಂಗೆ 73,000 ಮೀರಿಸಿದ ಬೆಲೆ
1. ಹಣದುಬ್ಬರ
ಚಿನ್ನವನ್ನು ಸಾಮಾನ್ಯವಾಗಿ ಹಣದುಬ್ಬರದ ವಿರುದ್ಧ ಹೆಡ್ಜ್ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಹೊಸ ನೋಟು, ನಾಣ್ಯಗಳನ್ನು ಹೊರತರಬೇಕಾದರೆ ಅಷ್ಟೇ ಪ್ರಮಾಣದ ಚಿನ್ನವನ್ನು ಆರ್‌ಬಿಐ ತೆಗೆದಿರುಸುತ್ತದೆ. ದೇಶದಲ್ಲಿ ಹಣದುಬ್ಬರದ ಒತ್ತಡದಿಂದಾಗಿ ಕರೆನ್ಸಿಗಳ ಮೌಲ್ಯ ಕಡಿಮೆಯಾಗುತ್ತದೆ. ಆಗ ಚಿನ್ನದ ಬೆಲೆ ತನ್ನಿಂತಾನೇ ಏರಿಕೆಯಾಗುತ್ತದೆ. ಈ ಮೂಲಕ ದೇಶದಲ್ಲಿ ಕರೆನ್ಸಿಗಳ ಮೌಲ್ಯ ಕಾಪಾಡಿಕೊಳ್ಳಬಹುದು.
2. ಜಾಗತಿಕ ಉದ್ವಿಗ್ನತೆಗಳು
ಇತ್ತೀಚಿನ ದಿನಗಳಲ್ಲಿ ಭೌಗೋಳಿಕ, ರಾಜಕೀಯ ಘರ್ಷಣೆಗಳು ಮಾರುಕಟ್ಟೆಯ ಅಸ್ಥಿರತೆಯನ್ನು ಉಂಟು ಮಾಡುತ್ತಿದೆ. ಇದು ಹೂಡಿಕೆದಾರರಿಗೆ ಚಿನ್ನದಂತಹ ಸುರಕ್ಷಿತ ಸ್ವತ್ತುಗಳನ್ನು ಖರೀದಿಸಲು ಪ್ರೇರೇಪಿಸುತ್ತದೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಸಮಯದಲ್ಲಿ ಅದು ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಉಕ್ರೇನ್ ಯುದ್ಧ ಮುಂದುವರಿಯುತ್ತಿರುವಾಗಲೇ ಈಗ ಇರಾನ್-ಇಸ್ರೇಲ್ ಯುದ್ಧದ ಛಾಯೆ ಆವರಿಸಿದೆ. ಇಂಥ ಸನ್ನಿವೇಶದಲ್ಲಿ ಸಹಜವಾಗಿಯೇ ಚಿನ್ನದ ಮೇಲಿನ ಹೂಡಿಕೆ ಹೆಚ್ಚುತ್ತದೆ. ಆಗ ದರ ಏರಿಕೆಯಾಗುತ್ತದೆ.
3. ಚೀನಾದ ಪ್ರಭಾವ
ಇತ್ತೀಚೆಗೆ ಚೀನಾದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ತನ್ನ ಸಂಗ್ರಹಕ್ಕೆ ಗಣನೀಯ ಪ್ರಮಾಣದ ಚಿನ್ನವನ್ನು ಸೇರಿಸುತ್ತಿದೆ. ಇದು ಅಮೆರಿಕ ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.
4. ಕಡಿಮೆ ಬಡ್ಡಿ ದರಗಳು
ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಕಡಿಮೆಯಾದಾಗ ಜನರಲ್ಲಿ ಹಣದ ಹರಿವಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದರಿಂದ ಚಿನ್ನ ಖರೀದಿ ಪ್ರಮಾಣ ಹೆಚ್ಚಾಗುತ್ತದೆ. ಇದು ಚಿನ್ನದ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತದೆ.
5. ಹೂಡಿಕೆ ಮಾಡಬಹುದೆ?
ಚಿನ್ನದ ಬೆಲೆಗಳು ಹೆಚ್ಚಾದಾಗ ಸಾಮಾನ್ಯವಾಗಿ ಇದು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮೊದಲೇ ಚಿನ್ನದ ಮೇಲೆ ಹೂಡಿಕೆ ಮಾಡಬೇಕು. ಇದರಿಂದ ಮಾರುಕಟ್ಟೆಯಲ್ಲಿ ಏರಿಳಿತದ ಅಪಾಯ ಕೊಂಚ ಕಡಿಮೆಯಾಗುತ್ತದೆ. ಹೂಡಿಕೆಯ ಉದ್ದೇಶವನ್ನು ಮೊದಲೇ ನಿರ್ಣಯಿಸುವುದು ಮತ್ತು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುವುದು ಕೂಡ ಬಹಳ ಮುಖ್ಯ. ಉದಾಹರಣೆಗೆ ಮದುವೆ ಅಥವಾ ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ಚಿನ್ನವನ್ನು ಖರೀದಿಸುವ ಉದ್ದೇಶ ಮೊದಲೇ ಇರುತ್ತದೆ. ಇದಕ್ಕೆ ಮುಂಚಿತವಾಗಿ ಹೂಡಿಕೆ ಮಾಡಬಹುದು. ಇದರಿಂದ ಬೆಲೆಗಳು ಸ್ಥಿರವಾಗಿದ್ದಾಗ ತಕ್ಷಣ ಖರೀದಿ ಮಾಡಬಹುದು.
6. ದರ ಹೆಚ್ಚಳದ ಪರಿಣಾಮ ಏನು?
ಈ ವರ್ಷದ ಆರಂಭದಿಂದಲೂ ಮಾರುಕಟ್ಟೆ ಹೆಚ್ಚು ಸಕ್ರಿಯವಾಗಿದೆ. ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ಮಾರುಕಟ್ಟೆ ಮೇಲೆ ಪರಿಣಾಮ ಬಿರುತ್ತಿದೆ. ಇದೇ ಬೆಳವಣಿಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಎರಡಕ್ಕೂ ಹೆಚ್ಚಿನ ಲಾಭವಿದೆ. ದರ ಕಡಿತದ ನಿರೀಕ್ಷೆಗಳು ಡಾಲರ್ ಸೂಚ್ಯಂಕ ಮತ್ತು ಯುಎಸ್ ಉತ್ಪಾದನೆಯ ಮೇಲೆ ಚಂಚಲತೆಯನ್ನು ಹೆಚ್ಚಿಸಿದೆ. ಚಿನ್ನದ ಟ್ರೆಂಡ್ ಇನ್ನೂ ಸಕಾರಾತ್ಮಕವಾಗಿದೆ. ಇದು ಮುಂದಿನ ಅವಧಿಯಲ್ಲಿ 72,800 ತಲುಪುವ ನಿರೀಕ್ಷೆ ಇದ್ದು, 70,000 ರೂ. ಗಿಂತ ಕಡಿಮೆ ಕುಸಿಯುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಹಾಗಾಗಿ ಚಿನ್ನದ ಮೇಲೆ ಹಣ ಹೂಡಿದರೆ ನಷ್ಟವಿಲ್ಲ ಎಂಬುದು ಆರ್ಥಿಕ ಪರಿಣತರ ಅಭಿಮತವಾಗಿದೆ.