Site icon Vistara News

Gold rate : ಖರೀದಿದಾರರೇ ಮರೆಯದಿರಿ, ಕಳೆದ 5 ದಿನಗಳಿಂದ ಚಿನ್ನದ ದರ 2450 ರೂ. ಜಿಗಿತ, ಬೆಳ್ಳಿಯೂ ದುಬಾರಿ

gold

ಬೆಂಗಳೂರು: ಕಳೆದ ಐದು ದಿನಗಳಿಂದ ಬಂಗಾರದ ದರ (Gold rate) ಸ್ಫೋಟ ಸಂಭವಿಸಿದೆ. ಮಾರ್ಚ್‌ 10 ರಿಂದ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ‌ ಒಟ್ಟು 2450 ರೂ. ಹೆಚ್ಚಳವಾಗಿದ್ದು, ಬುಧವಾರ 24 ಕ್ಯಾರಟ್‌ನ 10 ಗ್ರಾಮ್‌ಗೆ ದರ 58,030 ರೂ.ಗೆ ವೃದ್ಧಿಸಿದೆ. ಈ ಮೂಲಕ 60,000 ರೂ. ಮೈಲಿಗಲ್ಲಿನತ್ತ ದಾಪುಗಾಲಿಕ್ಕಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಬಂಗಾರದ ದರ 53,200 ರೂ.ಗೆ ವೃದ್ಧಿಸಿತ್ತು. ಪ್ರತಿ ಕೆಜಿ ಬೆಳ್ಳಿ ದರದಲ್ಲೂ (silver) ಬುಧವಾರ 2500 ರೂ. ಹೆಚ್ಚಳವಾಗಿದ್ದು, 72,000 ರೂ.ಗೆ ಏರಿಕೆಯಾಗಿದೆ.

ದಿನಾಂಕ22K24K
ಮಾರ್ಚ್‌ 14, 202353,20058,030
ಮಾರ್ಚ್‌ 13, 202352,50057,270
ಮಾರ್ಚ್‌ 12, 202352,21056,950
ಮಾರ್ಚ್‌ 11, 202352,20056,940
ಮಾರ್ಚ್‌ 10, 202351,45056,110

62,000 ರೂ.ಗೆ ಏರಿಕೆ ಸಾಧ್ಯತೆ:

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್‌ (28 ಗ್ರಾಮ್)‌ ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1880 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್‌ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್.‌ 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು. ‌

ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ಪ್ರಕಾರ ವಾರ್ಷಿಕ ಚಿನ್ನದ ಬೇಡಿಕೆ 2022ರಲ್ಲಿ 18% ಹೆಚ್ಚಳವಾಗಿದೆ. ಇದು 2011ರಿಂದೀಚೆಗಿನ ಗರಿಷ್ಠ ಪ್ರಮಾಣವಾಗಿದೆ. ಸೆಂಟ್ರಲ್‌ ಬ್ಯಾಂಕ್‌ಗಳು 2022ರಲ್ಲಿ 1,136 ಟನ್‌ ಬಂಗಾರವನ್ನು ಖರೀದಿಸಿವೆ. ಕಳೆದ 55 ವರ್ಷದಲ್ಲಿಯೇ ಇದು ಹೆಚ್ಚು. 2021ರಲ್ಲಿ ಇದು ಕೇವಲ 450 ಟನ್‌ಗೆ ಸೀಮಿತವಾಗಿತ್ತು. ಆದರೆ 2022ರ ದ್ವಿತೀಯಾರ್ಧ ಒಂದರಲ್ಲಿಯೇ 800 ಟನ್‌ ಬಂಗಾರವನ್ನು ಸೆಂಟ್ರಲ್‌ ಬ್ಯಾಂಕ್‌ಗಳು ಖರೀದಿಸಿತ್ತು.

2022ರಲ್ಲಿ ಹೂಡಿಕೆಗೋಸ್ಕರ ಚಿನ್ನದ ಬೇಡಿಕೆ 10% ಏರಿಕೆಯಾಗಿತ್ತು. ಇಟಿಎಫ್‌ಗೆ ಹೂಡಿಕೆ ಕಡಿಮೆಯಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಬೇಡಿಕೆ ವೃದ್ಧಿಸಿತ್ತು. ಯುರೋಪಿನಲ್ಲಿ ಗಟ್ಟಿ ಮತ್ತು ನಾಣ್ಯದ ಒಟ್ಟು 300 ಟನ್‌ ಬಂಗಾರವನ್ನು ಹೂಡಿಕೆಗೆ ಬಳಕೆಯಾಗಿದೆ. ಮಧ್ಯಪ್ರಾಚ್ಯದಲ್ಲೂ ಹೂಡಿಕೆಗೋಸ್ಕರ ಬಂಗಾರಕ್ಕೆ ಬೇಡಿಕೆಯಲ್ಲಿ 42% ಹೆಚ್ಚಳವಾಗಿದೆ. ವಿಶೇಷವೆಂದರೆ 2022ರಲ್ಲಿ ಚಿನ್ನದ ಆಭರಣಗಳಿಗೆ ಬೇಡಿಕೆ 3% ತಗ್ಗಿತ್ತು. 2,086 ಟನ್‌ಗೆ ಇಳಿದಿತ್ತು.

2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಂದಿನಿಂದ ಐರೋಪ್ಯ ಬ್ಯಾಂಕ್‌ಗಳು ಬಂಗಾರದ ಮಾರಾಟವನ್ನು ಸ್ಥಗಿತಗೊಳಿಸಿವೆ. ಮತ್ತೊಂದು ಕಡೆ ಭಾರತ, ರಷ್ಯಾ, ಟರ್ಕಿಯಲ್ಲಿ ಚಿನ್ನದ ಖರೀದಿ ಹೆಚ್ಚಳವಾಗಿದೆ ಎಂದು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ವರದಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಆದರೆ ಕರೆನ್ಸಿ, ಬಾಂಡ್‌ಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹೀಗಾಗಿಯೇ ಸೆಂಟ್ರಲ್‌ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸುತ್ತವೆ. ಕಳೆದ ವರ್ಷ ಮೂರನೇ ಎರಡರಷ್ಟು ಸೆಂಟ್ರಲ್‌ ಬ್ಯಾಂಕ್‌ಗಳು ತಾವು ಖರೀದಿಸಿದ್ದ ಚಿನ್ನದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ ಎಂದು ಕೌನ್ಸಿಲ್‌ ವರದಿ ತಿಳಿಸಿದೆ.

ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:

ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.

Exit mobile version