Site icon Vistara News

DK Shivakumar : ಡಿ.ಕೆ. ಶಿವಕುಮಾರ್‌ ಮುಂದೆ ಮುಖ್ಯಮಂತ್ರಿಯಾಗುವುದು ಖಚಿತ ಎಂದ ರಾಜಗುರು ದ್ವಾರಕನಾಥ್‌

Rajaguru Dwarkanath said it is sure that Shivakumar will become Chief Minister

#image_title

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಜಾತಕದಲ್ಲಿ ಮುಖ್ಯಮಂತ್ರಿಯಾಗುವ ಯೋಗವಿದ್ದು, ಅವರಿಗೆ ಈ ಸ್ಥಾನ ತಪ್ಪಿಹೋಗುವ ಮಾತೇ ಇಲ್ಲ ಎಂದು ರಾಜಗುರು (rajaguru) ಬಿ.ಎಸ್.‌ ದ್ವಾರಕನಾಥ್‌ ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್‌ಗೆ ಈಗ ಮುಖ್ಯಮಂತ್ರಿ ಹುದ್ದೆ ತಪ್ಪಿರುವುದರಿಂದ ಮುಂದೆ ಅವರಿಗೆ ಆ ಯೋಗ ಇಲ್ಲ ಎಂದು ಕೆಲ ಜ್ಯೋತಿಷಿಗಳು ವಿಶ್ಲೇಷಿಸುತ್ತಿದ್ದಾರೆ. 2.5 ವರ್ಷದ ನಂತರ ಅವರಿಗೆ ಅಧಿಕಾರದ ಯೋಗ ಇರುವುದಿಲ್ಲ ಎಂಬ ವಾದ ಕೂಡ ಇದೆ. ಆದರೆ ಅವರಿಗೆ ಮುಖ್ಯಮಂತ್ರಿ ತಪ್ಪಿ ಹೋಗುವ ಮಾತೇ ಇಲ್ಲ. ಡಿ.ಕೆ. ಶಿವಕುಮಾರ್‌ ಅವರಿಗೆ ರಾಜ ಯೋಗವಿದೆ ಅವರು ಈ ರಾಜ್ಯದ ರಾಜನಾಗಿ ಆಡಳಿತ ನಡೆಸೇ ನಡೆಸುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಎಐಸಿಸಿಯ ವೀಕ್ಷಕರಾಗಿ ಆಗಮಿಸಿದ್ದ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ತಮ್ಮ ನಿವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಗುರು ದ್ವಾರಕನಾಥ್‌, ಡಿ.ಕೆ. ಶಿವಕುಮಾರ್‌ ಮುಂದೆ ಮುಖ್ಯಮಂತ್ರಿಯಾಗುವುದಿಲ್ಲ ಎಂಬೆಲ್ಲಾ ವಿಚಾರ ಶುದ್ಧ ಸುಳ್ಳು. ಜ್ಯೋತಿಷ್ಯದ ಪ್ರಕಾರವೇ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಸಾಬೀತುಪಡಿಸಲು ನಾನು ಸಿದ್ಧ. ನೀವು ಯಾವ ಜೋತಿಷಿಯನ್ನು ಬೇಕಾದರೂ ಕರೆದುಕೊಂಡು ಬನ್ನಿ ಎಂದು ಸವಾಲು ಹಾಕಿದ್ದಾರೆ.

ಯಾವುದೇ ರಾಜಕೀಯ ಮಾತನಾಡಲು ಸುಶೀಲ್‌ ಕುಮಾರ್‌ ಶಿಂಧೆ ತಮ್ಮ ಮನೆಗೆ ಬಂದಿರಲಿಲ್ಲ. ಅವರು ಬಹಳ ಹಿಂದಿನಿಂದಲೂ ತಮಗೆ ಆತ್ಮೀಯರು ಎಂದು ತಿಳಿಸಿದ ರಾಜಗುರು ದ್ವಾರಕನಾಥ್‌, ಅವರು ಬೆಂಗಳೂರಿಗೆ ಬಂದಿದ್ದರಿಂದ ನಮ್ಮ ಮನೆಗೆ ಭೇಟಿ ನೀಡಿದ್ದಾರೆ. ಇದರಿಂದ ಬಹಳ ಖುಷಿಯಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಜಯಗಳಿಸಿ ಅಧಿಕಾರ ಹಿಡಿಯುತ್ತದೆ ಎಂದು ನಾನು ಮೊದಲೇ ಹೇಳಿದ್ದೆ ಎಂದು ನೆನಪಿಸಿದ ಅವರು, ಒಳ್ಳೆಯ ಬಹುಮತವನ್ನು ಪಕ್ಷಕ್ಕೆ ಜನರು ನೀಡಿದ್ದಾರೆ. ಹೀಗಾಗಿ ಪಕ್ಷದ ನಾಯಕರು ನಿಸ್ವಾರ್ಥವಾಗಿ ಜನಸೇವೆ ಮಾಡಬೇಕು. ಹಿಂದಿನ ಸರ್ಕಾರ ಏನೆಲ್ಲಾ ಮಾಡಿ ಕಳೆದುಕೊಂಡ್ರು ಅಂತ ಗೊತ್ತಿದೆ. ಆ ತಪ್ಪುಗಳನ್ನು ಮಾಡದೇ ಆಡಳಿತ ನಡೆಸಬೇಕು ಎಂದು ಸಲಹೆ ನೀಡಿದರು.

ರಾಜಗುರು ದ್ವಾರಕನಾಥ್‌ ಕುಟುಂಬದವರೊಂದಿಗೆ ಸುಶೀಲ್‌ ಕುಮಾರ್‌ ಶಿಂಧೆ.

ಅಧಿಕಾರ ಹಂಚಿಕೆ ನನಗೆ ಗೊತ್ತಿಲ್ಲ!

ಈ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿ ವೀಕ್ಷಕರಾದ ಸುಶೀಲ್‌ ಕುಮಾರ್‌ ಶಿಂಧೆ ಅಧಿಕಾರ ಹಂಚಿಕೆಯ ಕುರಿತು ತಮಗೆ ಮಾಹಿತಿ ಇಲ್ಲ. ಪಕ್ಷದ ಉನ್ನತ ನಾಯಕರಾದ ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೂಕ್ತವಾದ ತೀರ್ಮಾನವನ್ನೇ ತೆಗೆದುಕೊಂಡಿರುತ್ತಾರೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್‌ ಪಕ್ಷಕ್ಕಾಗಿ ಮುಖ್ಯಮಂತ್ರಿ ಹುದ್ದೆಯನ್ನು ತ್ಯಾಗ ಮಾಡಿದರಾ ಎಂಬ ಪ್ರಶ್ನೆಗೆ ನನಗೇನೂ ಗೊತ್ತಿಲ್ಲ ಎಂದು ಉತ್ತರಿಸಿದ ಶಿಂಧೆ, ಎಲ್ಲರಿಗೂ ಮುಖ್ಯಮಂತ್ರಿ ಹುದ್ದೆ ಬೇಕೆಂಬ ಆಸೆ ಇರುತ್ತದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದರಲ್ಲದೆ, ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಾರೆ, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜಗುರು ಹೇಳಿದ್ದೇನು? ಇಲ್ಲಿ ನೋಡಿ.

ತಮ್ಮ ನಿವಾಸಕ್ಕೆ ಆಗಮಿಸಿದ ಸುಶೀಲ್‌ ಕುಮಾರ್‌ ಶಿಂಧೆಯವರನ್ನು ರಾಜಗುರು ದ್ವಾರಕನಾಥ್‌ ಕುಟುಂಬದ ಸದಸ್ಯರು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಅವರನ್ನು ಕುಟುಂಬದ ವತಿಯಿಂದ ಗೌರವಿಸಲಾಯಿತು. ಕೆಪಿಸಿಸಿ ವಕ್ತಾರರಾದ, ದ್ವಾರಕನಾಥ್ ಗುರೂಜಿ ಅವರ ಪುತ್ರ ಡಾ.ಶಂಕರ್ ಗುಹಾ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ : Astrology Answers : ನನ್ನ ಮದುವೆ ಯಾವಾಗ ಆಗುತ್ತದೆ ಗುರೂಜಿ?

Exit mobile version