Site icon Vistara News

Navavidha Bhakti : ಪಾದಸೇವೆಯಿಂದಲೂ ಭಕ್ತಿಯ ವೃದ್ಧಿ

navavidha bhakti about pada sevanam bhakti you should know in kannada

ಪಾದ ಸೇವೆ

ಡಾ. ಸಿ. ಆರ್. ರಾಮಸ್ವಾಮಿ
ನವಧಾಭಕ್ತಿಯಲ್ಲಿ (Navavidha Bhakti) ನಾಲ್ಕನೆಯ ಹೆಜ್ಜೆ “ಪಾದಸೇವನಂ”. ‘ಪಾದಸೇವನಂ’ ಎಂದರೆ ಭಗವಂತನ ಪಾದಗಳನ್ನು ಸೇವಿಸುವುದು. ಸೇವಿಸುವುದು, ಸೇವೆ ಮಾಡುವುದೆಂದರೆ ಸಾಷ್ಟಾಂಗ ನಮಸ್ಕಾರ ಮಾಡುವುದು ಅಥವಾ ಅವನ ಪಾದವನ್ನು ಒತ್ತುವುದು ಎನ್ನುವ ಅರ್ಥದಲ್ಲಿದೆ. ಪಾದಸ್ಪರ್ಶ ಮಾಡುವುದು, ಪಾದಪೂಜೆ ಮಾಡುವುದು ಮುಂತಾದ ವಿಷಯಗಳು ಭಾರತೀಯರ ಸಂಪ್ರದಾಯದಲ್ಲುಂಟು.

ಸಾಕ್ಷಾತ್ ಮಹಾಲಕ್ಷ್ಮೀಯು ಸದಾಕಾಲದಲ್ಲಿಯೂ ವೈಕುಂಠದಲ್ಲಿ ಭಗವಂತನ ಪಾದಸೇವೆಯನ್ನು ಮಾಡುತ್ತಿರುತ್ತಾಳೆ ಎಂಬುದನ್ನು ಪುರಾಣಗಳಿಂದ ತಿಳಿಯುತ್ತೇವೆ. “ಸರ್ವಾಭೀಷ್ಟಫಲಪ್ರದೆ”ಯಾಗಿರುವ (ಎಲ್ಲರಿಗೂ ಎಲ್ಲ ಅಭಿಲಾಷೆಗಳನ್ನೂ ದಯಪಾಲಿಸುವವಳು) ಆ ಮಹಾಮಾತೆಯು ಸೇವೆ ಮಾಡುವುದು ಯಾವ ಫಲಕ್ಕಾಗಿಯೂ ಅಲ್ಲ – ಸ್ವಯಂ ಪ್ರೇರಿತಳಾಗಿ, ಸ್ವಂತ ಸುಖಕ್ಕಾಗಿ. ಮಹಾಲಕ್ಷ್ಮೀಗೆ ಯಾವ ಫಲದ ಅಪೇಕ್ಷೆಯೂ ಇಲ್ಲವಷ್ಟೇ. ಏಕೆಂದರೆ, ಧನ-ಧಾನ್ಯ-ಸಂತಾನ-ವಿದ್ಯಾ ಮುಂತಾದ ಅಷ್ಟೈಶ್ವರ್ಯಗಳಿಗೂ ಸ್ವಾಮಿನಿ ಶ್ರೀಲಕ್ಷ್ಮೀ ಅವಳೇ.

ಪಾದವೇ ಏಕೆ?

ವೈಕುಂಠದಲ್ಲಿ ಮಹಾಲಕ್ಷ್ಮೀಯು ಪಾದಸೇವೆ ಮಾಡಿದರೆ ಆ ಪಾದಸೇವೆಯನ್ನು ಸ್ಮರಣೆಮಾಡಿಕೊಳ್ಳುವುದೇ ನಾವು ಮಾಡುವ ಪಾದಸೇವೆಯಾಗುತ್ತದೆ. ಅದೇ ನಿಜವಾಗಲೂ ನಮ್ಮನ್ನು ಮೂಲಕ್ಕೆ ಕರೆದುಕೊಂಡು ಹೋಗುವುದು. ಉನ್ನತವಾದ-ಶಿರಸ್ಥಾನದಲ್ಲಿ ಇರುವ ಸಹಸ್ರಾರದಲ್ಲಿ ಜೀವ-ದೇವರ ಯೋಗ ಉಂಟಾಗುತ್ತದೆ ಎಂಬುದನ್ನು ಹಿಂದೆಯೇ ಸ್ಮರಿಸಿಕೊಂಡಿದ್ದೆವು. ಹಾಗೆ ಶಿರಸ್ಸಿನ ಸ್ಥಾನಕ್ಕೆ ನೇರವಾಗಿ ಆರೋಹಣ ಮಾಡುವುದು ಕಷ್ಟಸಾಧ್ಯವಾದದ್ದು. ಆದರೆ, ಅವನ ಪಾದವನ್ನು ಹಿಡಿದುಕೊಂಡಾಗ ಅವನೇ ನಮ್ಮನ್ನು ಮೇಲಕ್ಕೆತ್ತಿ ಸಹಸ್ರಾರದ ಸ್ಥಾನಕ್ಕೆ ಕರೆದೊಯ್ಯುತ್ತಾನೆ. ಆ ಯೋಗವನ್ನು ದಯಪಾಲಿಸುತ್ತಾನೆ.

ಅಂತಹ ಸಾಮರ್ಥ್ಯ ಭಗವಂತನ ಪಾದಕ್ಕೆ-ಪಾದಸ್ಪರ್ಶಕ್ಕುಂಟು. ಪಾದಾಂಗುಷ್ಠಕ್ಕೂ ಶಿರಸ್ಸಿಗೂ (ಸಹಸ್ರಾರಕ್ಕೂ)ಒಂದು ನೇರ-ಸಂಬಂಧ ಉಂಟು ಎಂದು ನಾಡೀಶಾಸ್ತ್ರವು ತಿಳಿಸುತ್ತದೆ. ಭಗವಂತನ ಅಥವಾ ಬ್ರಹ್ಮಜ್ಞಾನಿಗಳ ಪಾದಾಂಗುಷ್ಠವನ್ನು ಮುಟ್ಟಿದಕೂಡಲೇ ಸ್ಪರ್ಶಿಸಿದವರ ಮನಸ್ಸು ಮತ್ತು ಪ್ರಾಣಗಳು ಊರ್ಧ್ವಮುಖವಾಗುವುದು. ಉನ್ನತಸ್ಥಾನಕ್ಕೇರುವುದು. ಆದ್ದರಿಂದಲೇ ಪಾದಸ್ಪರ್ಶವೆನ್ನುವುದು ವಿಶೇಷವೆಂದು ಗುರುತಿಸಲ್ಪಟ್ಟಿದೆ.

ಅವತಾರ ಕಾಲದಲ್ಲಿ ಹೇಗಿತ್ತು?

ಭಗವಂತನ ಅವತಾರವಾದ ರಾಮಾವತಾರ, ಕೃಷ್ಣಾವತಾರ ಮುಂತಾದವುಗಳಲ್ಲಿ ಅವನ ಪಾದಸ್ಪರ್ಶ ಮಾಡಿದವರು ಅನೇಕ ಮಂದಿ. ಸಾಧ್ವಿನಿಯಾದ ಅಹಲ್ಯೆಗೆ ಶಾಪವಿಮೋಚನವಾಗಿದ್ದುದು ಶ್ರೀರಾಮನ ಪಾದಸ್ಪರ್ಶಮಾತ್ರದಿಂದಲೇ ಅಲ್ಲವೇ. ಈ ಘಟನೆಯನ್ನು ಸ್ಮರಿಸಿ, ರಾಮನ ಪಾದದಲ್ಲಿರುವ ವಿಶೇಷ ಮೂಲಿಕೆಯ ಸ್ಪರ್ಶದಿಂದ ಶಿಲೆಯೂ ಸ್ತ್ರೀ ರೂಪತಾಳಿತೆಂದು ಊಹಿಸಿದವ ಭಕ್ತಶಿರೋಮಣಿಯೂ ರಾಮನ ಪರಮ ಮಿತ್ರನೂ ಆದ ಗುಹ. ಆದುದರಿಂದಲೇ ಆ ಪಾದಸ್ಪರ್ಶದಿಂದ ತನ್ನ ಹಡಗೂ ಸ್ತ್ರೀಯಾದರೆ ತನ್ನ ವೃತ್ತಿಗೇ ಅಪಾಯವಾದೀತೆಂದು ವಿನೋದದಿಂದ ನುಡಿದು ಆ ಪರಮಪಾವನವಾದ ಪಾದಗಳನ್ನು ತೊಳೆದೇ ನಾವೆಯಲ್ಲಿ ಕೂರಿಸಿದ ನಾವಿಕಶ್ರೇಷ್ಠ ಗುಹಮಹಾಶಯ!

“ಸರ್ವತೀರ್ಥಗಳೂ ತನ್ನ ಪಾದದಲ್ಲೇ ನೆಲೆಸಿವೆ” ಎಂಬ ತತ್ತ್ವಾರ್ಥವನ್ನು– ಕೈಗಳನ್ನು ತನ್ನ ಪಾದಗಳ ಕಡೆಗೆ ನಿರ್ದೇಶಿಸುವುದರ ಮೂಲಕ ಬಲರಾಮರಿಗೆ ಬೋಧಿಸಿದವನು ಶ್ರೀಕೃಷ್ಣ. ಹಿಂದೆ ತ್ರಿವಿಕ್ರಮಾವತಾರದಲ್ಲಿ ತನ್ನ ಒಂದು ಪಾದ ಬ್ರಹ್ಮಲೋಕವನ್ನು ವ್ಯಾಪಿಸಿದಾಗ ಬ್ರಹ್ಮದೇವರು ತಮ್ಮ ಕಮಂಡಲದ ಗಂಗೆಯಿಂದ ಆ ಪಾದಗಳನ್ನು ತೊಳೆದರಂತೆ. ಆ ಪಾದೋದಕವೇ ಮುಂದೆ ಧರೆಗಿಳಿದು ಲೋಕವನ್ನೆಲ್ಲಾ ಪಾವನಮಾಡಿದ ಗಂಗೆ ಎಂಬುದೂ ಸುಪ್ರಸಿದ್ಧ.

ಪಾದ ಸಿಗದಿದ್ದರೆ ಪಾದುಕೆಗಳ ಪೂಜೆ

ಪಾದಕ್ಕೆ ನಮಸ್ಕಾರ ಮಾಡಿದ್ರೆ ಒಳ್ಳೆಯದಾಗುತ್ತಾ? | Motivational Speech In Kannada | Pada Seva Bhakti

ಭಗವಂತನ ಪಾದುಕೆಗಳಿಗೆ ಪೂಜೆ ಮಾಡುವುದು ಮತ್ತೊಂದು ಕ್ರಮ. ಅದಕ್ಕೂ ಕೂಡ ಅಷ್ಟೇ ಬೆಲೆ ಉಂಟು ಎಂಬುದಾಗಿ ಜ್ಞಾನಿಗಳು ಹೇಳುತ್ತಾರೆ. ಸಂಪ್ರದಾಯದಲ್ಲೂ ಪಾದುಕೆಗಳಿಗೆ ಪೂಜೆಮಾಡುವ ಕ್ರಮವುಂಟು. ಅದನ್ನು ಪೂಜೆ ಮಾಡಿದರೂ ಅದು ಭಗವಂತನ ಪಾದಕ್ಕೆ ಮಾಡುವಂತಹ ಸೇವೆಯೇ ಆಗುತ್ತದೆ.

ಇದಕ್ಕೆ ಪ್ರಸಿದ್ಧವಾದ ಉದಾಹರಣೆಯೊಂದನ್ನು ಶ್ರೀಮದ್ರಾಮಾಯಾಣದಲ್ಲಿ ನೋಡಬಹುದಾಗಿದೆ. ಶ್ರೀರಾಮನು ವನವಾಸದ ಪ್ರಾರಂಭದಲ್ಲಿ ಚಿತ್ರಕೂಟದಲ್ಲಿರುವಾಗ ಭರತನು ರಾಮನನ್ನು ಅಯೋಧ್ಯೆಗೆ ಹಿಂತಿರುಗುವಂತೆ ಪ್ರಾರ್ಥಿಸಲು ಅಲ್ಲಿಗೆ ಬರುತ್ತಾನೆ. ಇಬ್ಬರಿಗೂ ಒಂದು ತರಹದ ಪ್ರೀತಿಯ-ವಾಗ್ಯುದ್ಧವೇ ನಡೆಯುತ್ತದೆ. ಭರತ ಪರಮಭಕ್ತ. ಅತ್ಯಂತ ಪ್ರೀತಿಯಿಂದ ರಾಮನನ್ನು “ನೀನೇ ರಾಜ್ಯವನ್ನಾಳಬೇಕು. ನನಗೆ ಆ ಯೋಗ್ಯತೆ ಇಲ್ಲ” ಎಂದು ಹೇಳಿ ಅವನನ್ನು ಆಯೋಧ್ಯೆಗೆ ಕರೆದೊಯ್ಯಲು ನಾನಾರೀತಿಯ ಪ್ರೇಮಭರಿತ ಮಾತುಗಳಿಂದ ಕಟ್ಟಿಹಾಕುತ್ತಾನೆ.

ಆದರೂ ಶ್ರೀರಾಮನ ಧರ್ಮದ ಕಟ್ಟು ಸಡಿಲವಾಗುವುದಿಲ್ಲ. ಇವರಿಬ್ಬರ ನಡುವೆ ಸಂಭವಿಸಿದ ಪ್ರೇಮ-ಧರ್ಮದ ’ಸಂಗ್ರಾಮ’ವು ಜನಕ-ವಸಿಷ್ಠಾದಿಗಳನ್ನೂ ಮೂಕವಿಸ್ಮಯರನ್ನಾಗಿಸುತ್ತದೆ. “ಧರ್ಮವನ್ನು ಪಾಲಿಸಬೇಕು. ತಂದೆಯ ಮಾತನ್ನು ಉಳಿಸಬೇಕು” ಎಂದು ಹೇಳಿ ರಾಮನು ಹಿಂತಿರುಗಲು ಒಪ್ಪುವುದಿಲ್ಲ. ಕೊನೆಗೆ ಒಂದು ಒಪ್ಪಂದವಾಗುತ್ತದೆ. ಅದರಂತೆ ಸ್ವರ್ಣಾಲಂಕೃತವಾದ ಪಾದುಕೆಗಳ ಮೇಲೆ ಶ್ರೀರಾಮನು ತನ್ನ ಪಾದಗಳನ್ನಿರಿಸಿ ಭರತನಿಗೆ ಅನುಗ್ರಹಿಸಿ ಕೊಡುತ್ತಾನೆ. ಭರತನು ಆ ಪಾದುಕೆಗಳನ್ನು ಶಿರಸ್ಸಿನಲ್ಲಿ ಧರಿಸಿ ನಂದಿಗ್ರಾಮದಲ್ಲಿ ಅವುಗಳಿಗೆ ಪಟ್ಟಾಭಿಷೇಕವನ್ನು ಮಾಡುತ್ತಾನೆ. ರಾಜ್ಯದ ಸಕಲ ವ್ಯವಹಾರಗಳನ್ನೂ ಪಾದುಕೆಗಳಿಗೆ ನಿವೇದಿಸಿ ತಾನು ಅದರ ದಾಸನಾಗಿ ಕಾರ್ಯನಿರ್ವಹಿಸುತ್ತಾನೆ.

ಪಾದುಕೆ ಜಡವಸ್ತುವಲ್ಲವೇ? ಅದಕ್ಕೆ ಪಟ್ಟಾಭಿಷೇಕವೆಂದರೇನು? ರಾಜ್ಯದ ವ್ಯವಹಾರಗಳನ್ನು ನಿವೇದಿಸುವು ದೆಂದರೇನು? ಎಲ್ಲವೂ ಹಾಸ್ಯಾಸ್ಪದವಲ್ಲವೇ? ಎನ್ನಿಸಬಹುದು. ಶ್ರೀರಂಗಮಹಾಗುರುಗಳ ಮಾತುಗಳು ಇಲ್ಲಿ ಸ್ಮರಣೀಯ: ವ್ಯವಹಾರದಲ್ಲಿ ಜಡವಸ್ತುವೇ ಆಗಿದ್ದರೂ ಅದರಲ್ಲಿ ಒಂದು ಮುದ್ರೆಯನ್ನು ಒತ್ತಿದ್ದರೆ ಅದಕ್ಕೆ ಬೆಲೆಕೊಡುವುದಿಲ್ಲವೇ ನಾವು? ರಾಷ್ಟ್ರಧ್ವಜ ಕಾಗದದ ರೂಪದಲ್ಲೋ ಬಟ್ಟೆಯ ರೂಪದಲ್ಲೋ ಇರಬಹುದು. ಅದನ್ನು ಹರಿದರೆ ರಾಷ್ಟ್ರದ್ರೋಹಿಗಳೆನ್ನುತ್ತಾರೆ. ಅಲ್ಲಿ ಬೆಲೆ ಕಾಗದ/ಬಟ್ಟೆಗಲ್ಲ. ಅದರ ಮೇಲಿರುವ ರಾಷ್ಟ್ರದ ಭಾವಕ್ಕಾಗಿ. ಅಂತೆಯೇ ಸಂಕಲ್ಪ ಪೂರ್ವಕವಾಗಿ ರಾಮನು ತನ್ನ ಶಕ್ತಿಯನ್ನು ಅದರಲ್ಲಿ ಮುದ್ರಿಸಿದ್ದರೆ ಆಗ ಅವು ಬರಿ ಮರದ ಪಾದುಕೆಗಳಲ್ಲ. ಅವನ ಶಕ್ತಿಯನ್ನು ಹೊತ್ತ ಪಾದುಕೆಗಳಿಗೆ ಅವನಿಗೆ ಕೊಡುವ ಮರ್ಯಾದೆ-ಗೌರವಾದರಗಳನ್ನೇ ಸಲ್ಲಿಸಬೇಕು. “ಮರದ ಪಾದುಕೆಗಳಂತೆ ಕಂಡರೂ ಅವು ಅಮರಭಾವಕ್ಕೆ (ನಾಶವಿಲ್ಲದ ಸ್ಥಿತಿಗೆ) ಕೊಂಡೊಯ್ಯುವಂತಹವುಗಳು”.

‘ಪಾದಸೇವನಂ’ ಕುರಿತು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ.

ಪಾದುಕಾಸಹಸ್ರ ಬಗ್ಗೆ ಗೊತ್ತೇ?

ವೇದಾಂತದೇಶಿಕರೆಂಬ ಶ್ರೀವೈಷ್ಣವ ಆಚಾರ್ಯರು ಪರಮಭಾಗವತರೂ-ಮಹಾವಿದ್ವಾಂಸರೂ ಆಗಿದ್ದರು. ಆಶುಕವಿತ್ವವನ್ನು ಹೊಂದಿದ್ದ ಮಹಾಕವಿಗಳೂ ಆಗಿದ್ದರು. ಒಂದು ರಾತ್ರಿಯಲ್ಲಿಯೇ ಭಗವಂತನ ಪಾದುಕೆಗಳನ್ನು ಕುರಿತು “ಪಾದುಕಾಸಹಸ್ರ”ವೆಂಬ ಒಂದು ಸಾವಿರ ಶ್ಲೋಕಗಳನ್ನು ರಚಿಸಿದ ಭಕ್ತ-ಕವಿಪುಂಗವರು. ಅಂದೇ ಅವರು ‘ಕವಿತಾರ್ಕಿಕಸಿಂಹ’ ಎಂಬ ಬಿರುದನ್ನು ಪಡೆದರು. ಈ ಕೃತಿಯಲ್ಲಿ, ಭಕ್ತಿಗೆ-ಭಕ್ತರಿಗೆ ಪ್ರಥಮ ಉದಾಹರಣೆಯಾಗಿಯೂ, ಶ್ರೀರಾಮನ ಪಾದುಕಾಪ್ರಭಾವವನ್ನು ಮೊಟ್ಟಮೊದಲು ಲೋಕಕ್ಕೆಲ್ಲ ಕೊಟ್ಟವನು ಭರತನು ಎಂಬುದಾಗಿಯೂ ಕೊಂಡಾಡುತ್ತಾರೆ.

ಮಹಾತ್ಮರ-ಭಕ್ತರ-ಜ್ಞಾನಿಗಳ-ಪಾದಸ್ಪರ್ಶವೂ ಪಾವನವಾದುದು. ಅವು ನಮ್ಮನ್ನು ಮುಕ್ತಿಮಾರ್ಗಕ್ಕೆ ಕರೆದೊಯ್ಯಲು ಸಹಾಯಕವಾಗುತ್ತದೆ. ಆದ್ದರಿಂದ ಇದೂ ಸಹ ಸಾಧಕನಿಗೆ ಭಕ್ತಿಯನ್ನು ವೃದ್ಧಿ ಮಾಡುವ ಉತ್ತಮ ಮಾರ್ಗವಾಗುತ್ತದೆ. ಇಷ್ಟಲ್ಲದೇ ಭಗವಂತನಲ್ಲಿ ತನ್ಮಯತೆಯನ್ನು ಹೊಂದಿದ ಭಾಗವತರ-ಸದ್ಗುರುಗಳ-ಆಚಾರ್ಯಶ್ರೇಷ್ಠರ ಪಾದುಕೆಗಳೂ ಸಹ ಪೂಜನೀಯವೇ.
(ಮುಂದುವರಿಯುವುದು)

– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ
, ಬೆಂಗಳೂರು

ಇದನ್ನೂ ಓದಿ: Navavidha Bhakti : ಭಕ್ತಿ- ಮುಕ್ತಿಗಳನ್ನೀವ ಭಗವಂತನ ಸ್ಮರಣೆ

Exit mobile version