ಮೇಷ: ಅವಸರದ ನಿರ್ಣಯ ಬೇಡ
ಹೂವಿನ ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು, ಕೋಳಿ ಫಾರ್ಮ್, ಹಳೆ ಸಾಮಾನು ಮಾರಾಟಗಾರರು ಸರ್ರನೆ ನಿರ್ಣಯಕ್ಕೆ ಬಂದು, ವಾಗ್ದಾನ ಕೊಡುವ ಅವಸರದ ಮಾತನಾಡಬೇಡಿ. ಯೋಚಿಸಿ ಹೇಳುತ್ತೇನೆ ಎನ್ನುವ ಮಾತು ಬಾಯಲ್ಲಿ ಬರಲಿ. ಏಕಾಏಕಿ ಸಗಟು ಧಾನ್ಯ ಖರೀದಿ, ಐಟಿ/ಬಿಟಿ ಕೆಲಸಗಾರರು ಕೆಲಸದ ಜಾಗದಲ್ಲಿ ವೈಮನಸ್ಸು ಕಟ್ಟಿಕೊಳ್ಳುವ ಉಸಾಬರಿಗೆ ಹೋಗದಿರಿ. ಒಂಟಿಯಾಗಿ ನಿರ್ಜನ ಪ್ರದೇಶದಲ್ಲಿ ತಿರುಗಾಡದಿರಿ. ಕಾಡು ಪ್ರಾಣಿಗಳ ಹಾವಳಿ ಆದೀತು ಎಚ್ಚರ. ಶಿವ ಸ್ತುತಿಯಿಂದ ಕ್ಷೇಮ.
ಶುಭ ಸಂಖ್ಯೆ: 6 ಶುಭ ದಿಕ್ಕು: ಈಶಾನ್ಯ
ವೃಷಭ: ಧನಲಾಭಕ್ಕೆ ಅವಕಾಶ ಜಾಸ್ತಿ
ನಿಮ್ಮನ್ನು ಕೆಲಸಕ್ಕಾಗಿ ಉಪಯೋಗಿಸಿಕೊಳ್ಳುವಾಗ ನೀನೇ ಇಂದ್ರ, ನೀನೇ ಚಂದ್ರ, ನೀನೇ ದುರ್ಗಾ, ನೀನೇ ಲಕ್ಷ್ಮೀ ಎಂಬ ಕೇವಲ ಪ್ರಶಂಸೆಯ ಮಾತನಾಡಿ, ಕೆಲಸವಾದ ಮೇಲೆ ತಕ್ಷಣ ಮೂಲೆಗುಂಪು ಮಾಡುವ ಜನ ಇರುತ್ತಾರೆ. ಮೋಸ ಹೋಗದಿರಿ. ಕೆಂಪು ವಸ್ತ್ರ ಧಾರಣೆ ಮಾಡಬೇಡಿ. ಇರುವೆ ಇರುವ ಜಾಗೆಯಲ್ಲಿ ತುಸು ಸಕ್ಕರೆ ಇರಿಸಿ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದ ಕೆಲಸಗಳು ಕೈಗೂಡಲು ಇದರಿಂದ ಸಹಾಯ. ಸದಾ ಶ್ರೀಕರನಾದ ಮಹಾವಿಷ್ಣುವನ್ನು ಆರಾಧಿಸಿ. ಧನಲಾಭಕ್ಕೆ ಅವಕಾಶ ಜಾಸ್ತಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಆಗ್ನೇಯ
ಮಿಥುನ: ಮಾತಿನ ಮೇಲೆ ಹಿಡಿತವಿರಲಿ
ನಿಮಗೆ ನೀವೇ ವೈರಿಗಳಾಗುವ ಅವಕಾಶವನ್ನು ನಿಮ್ಮ ಖಾರವಾದ ನಾಲಿಗೆಯಿಂದ ಮಾಡಿಕೊಳ್ಳಬೇಡಿ. ಸಹಾಯ ಮಾಡುವವರೂ ದೂರವಾಗಲು ಅವಕಾಶ ಒದಗಿಸಬೇಡಿ. ಲಾಟರಿ, ರೇಸು, ಬೆಟ್ಟಿಂಗ್‌ಗಳ ದಾರಿ ನಿಮ್ಮನ್ನು ಆಕರ್ಷಿಸಲು ರೋಚಕತೆಯನ್ನು ಸೃಷ್ಟಿಸಬಹುದು. ಹಣದ ವಿಷಯದಲ್ಲಿ ಎಚ್ಚರ, ಎಚ್ಚರ. ಹತ್ತಿರದವರನ್ನು ಹತ್ತಿರವಾಗಲಿ, ದೂರವಾಗಲಿ ಮಾಡಿಕೊಳ್ಳದಿರಿ. ಯಾವ ಹುತ್ತದಲ್ಲಿ ಯಾವ ಹಾವು ಎಂಬ ವಿಚಾರ ತಲೆ ತಿನ್ನುವುದು ನಿಶ್ಚಿತ. ಶ್ರೀ ಮಂಜುನಾಥನನ್ನು ಸ್ತುತಿಸಿದರೆ ಕ್ಷೇಮ.
ಶುಭ ಸಂಖ್ಯೆ : 8 ಶುಭ ದಿಕ್ಕು: ದಕ್ಷಿಣ
ಕಟಕ: ಗೊಂದಲದಿಂದ ಕೂಡಿದ ಸಮಯ
ನಿಮ್ಮನ್ನು ಶನೈಶ್ವರನು ಕಾಡುವ ದಿನಗಳಾಗಿವೆ. ವ್ಯವಧಾನವಿರದು. ಒಂದು ಕೆಲಸ ಮಾಡುವಾಗು ಇನ್ನೊಂದು ಕೆಲಸ ನೆನಪಿಗೆ ಬರುತ್ತದೆ. ಕಸಿವಿಸಿ ಪ್ರಾರಂಭವಾಗಿ ಯಾವ ಕೆಲಸವೂ ಸಾಧ್ಯವಾಗಲಾರದು. ಕವಡೆ ಕಾಸಿನ ಲಾಭವೂ ಇರದ ಜನ ತಾಸುಗಟ್ಟಲೆ ಫೋನಿನಲ್ಲಿ ಮಾತನಾಡುತ್ತಿರುತ್ತಾರೆ. ಅವರಿಗೆ ಬೇಕಾದ ಅವಶ್ಯಕತೆ, ಸೂಕ್ತ ವೇಳೆ ಇದ್ದಾಗ ಮಾತು, ಮಾತು, ಮಾತು ಆಗುತ್ತದೆ. ನಂತರ ಮಾಡಿ ಎಂದು ಹೇಳಲಾಗದ ಅತಂತ್ರ ಸ್ಥಿತಿ ನಿರ್ಮಾಣ ಸಾಧ್ಯ. ಒಳಿತಿಗಾಗಿ ಮಹಾಬಲನಾದ ಮಾರುತಿ ಆರಾಧನೆ ಮಾಡಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಪೂರ್ವ
ಸಿಂಹ: ಸೋಲೇ ಗೆಲುವಿನ ಸೋಪಾನ
ನಿಮ್ಮ ಪಾಲಿಗೆ ಇದು ಸೂಕ್ತ ಹಿತಕಾರಿ ಸಂದರ್ಭ ಹೌದಾದರೂ ಸೂರ್ಯನ ಓಡಾಟದ ಸಂದರ್ಭ ನಿಮಗೆ ಅನುಕೂಲಕರವಾಗಿಲ್ಲ. ಬೆಳಕೇನೋ ಇದೆ. ಕತ್ತಲಿನ ಅನುಭವವೇ ಆಗುತ್ತಿರುತ್ತದೆ. ಆರೋಗ್ಯದ ಬಗೆಗೆ ಎಚ್ಚರ ಇರಲಿ. ಧನ ಲಾಭದ ದಾರಿ ನಿಮಗೆ ಲಭ್ಯವಾಗಲೂಬಹುದು. ಹಿರಿಯರ ಮಾರ್ಗದರ್ಶನದಿಂದಲೇ ಸಾಧ್ಯ. ಬಾಳ ಸಂಗಾತಿಯೊಡನೆ ವಾಗ್ಯುದ್ಧ ಬೇಡ. ಸೋಲಲು ಹಿಂಜರಿಯದಿರಿ. ಸೋತು ಗೆಲ್ಲುತ್ತೀರಿ. ಹೀಗಾಗಿ ತಾಳ್ಮೆ ನಿಮ್ಮ ಬದುಕಿನ ಈ ಸಂದರ್ಭದ ಸಂಜೀವಿನಿ. ರವಿ ಅಷ್ಟೋತ್ತರ ಪಠಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ವಾಯವ್ಯ
ಕನ್ಯಾ: ಹೊಸ ಕೆಲಸಕ್ಕೆ ಸೂಕ್ತ ಸಮಯ
ನಿಮ್ಮ ಮಕ್ಕಳ ಬಗೆಗೆ ಆರೈಕೆ, ಬೆಂಬಲ ಒದಗಿಸಲು ಅನುಕೂಲಕರ ಸಂದರ್ಭ. ಮಕ್ಕಳಿಂದ ಒಳ್ಳೆಯ ವಾರ್ತೆ ಇದೆ. ರಾಹು ಪೀಡೆಯೇ ತುಸು ಆತಂಕದ ವಿಷಯ. ಸುಖಾಸುಮ್ಮನೆ ಆಲಸ್ಯವನ್ನು ಬಿತ್ತುತ್ತಿರುತ್ತದೆ. ಏತನ್ಮಧ್ಯೆ ಹೊಸ ಕೆಲಸ ಸಿಗಲು ತಾಯಿ ಚಂಡಿಕಾಳ ದಯೆಯು ನಿಮಗೆ ಒದಗಿ ಬರಲು ಸಾಧ್ಯ. ಮೇಲಾಧಿಕಾರಿಗಳ ಬಳಿ ಲವಲವಿಕೆ ಮತ್ತು ಸ್ನೇಹದಿಂದಿರಿ. ಇತರರು ನಿಮ್ಮ ಕಾಲೆಳೆಯಲು ಪ್ರಯತ್ನಿಸುವರಾದರೂ ಅದೃಷ್ಟ ನಿಮ್ಮನ್ನು ಕಾಪಾಡುತ್ತದೆ. ಗೌರಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಪಶ್ಚಿಮ
ತುಲಾ: ಅವಸರದ ನಿರ್ಧಾರ ಬೇಡ
ನಿಮ್ಮದು ಸದ್ಯ ಪಂಚಮ ಶನಿ ಸ್ವಾಮಿ ಕಾಟದಲ್ಲಿ ಬೇಯುತ್ತಿರುವ ಸಮಯವಾಗಿದೆ. ಬಿರುಗಾಳಿಯ ದಿನಗಳಾದರೂ ಆತ್ಮವಿಶ್ವಾಸ ತ್ಯಜಿಸದಿರಿ. ಯಾವುದೇ ರೀತಿಯ ನಿರ್ಣಯಗಳನ್ನಾದರೂ ಅವಸರದಲ್ಲಿ, ಸರ್ರನೆ ತಳೆದು ಮಾತು ಕೊಟ್ಟು ಪರಿತಪಿಸುವ ವಿಚಾರವನ್ನಾಗಲೀ ಆಹ್ವಾನಿಸಬೇಡಿ. ನಿಮಗೆ ನೀವೇ ಬೆಂಬಲಕ್ಕೆ ಬರುವ, ಸಂಭಾಳಿಸಿಕೊಳ್ಳುವ ಕಾಲಘಟ್ಟ ಇದು. ಪ್ರತಿಭಾ ಸಂಪನ್ನರಾಗಿರುವ ನೀವು ದೊಡ್ಡ ಬಂಡವಾಳ ಹಾಕದೇ ಬುದ್ಧಿ ಬಲದಿಂದ ವಹಿವಾಟು ನಡೆಸಿ ಗೆಲ್ಲಿ. ರಾಮರಕ್ಷಾ ಸ್ತ್ರೋತ್ರ ಪಠಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ನೈಋತ್ಯ
ವೃಶ್ಚಿಕ: ಧನ ಲಾಭದ ಅವಕಾಶವಿದೆ
ಕಾಲ ಘಟ್ಟದಲ್ಲಿ ನಿಮ್ಮದಾದ ಹಲವು ಕೆಲಸ ಕಾರ್ಯಗಳನ್ನು ಪೂರೈಸಿ ಗುರಿ ತಲುಪುವ ಸಂತೋಷ ಪಡೆಯುತ್ತೀರಾದರೂ, ಕಾಲೆಳೆಯುವವರ ಬಗ್ಗೆ ನಿಮ್ಮ ಲಕ್ಷ್ಯ ಇರಲಿ. ಮೈಮರೆತರೆ ನಿಮ್ಮನ್ನು ನಿಮ್ಮ ಧ್ಯೇಯೋದ್ದೇಶಗಳಿಂದ ವಿಫಲಗೊಳಿಸುವ ಹುನ್ನಾರ ನಡೆಯುತ್ತಿರುತ್ತದೆ. ತೆರೆ ಮರೆಯಲ್ಲಿ ವಿರೋಧಿಗಳು ಸದಾ ಇದ್ದಾರೆ. ಲಕ್ಷ್ಮೀ ರಮಣನಾದ ಗೋವಿಂದನನ್ನು ಸ್ತುತಿಸಿ. ಧನ ಲಾಭದ ಅವಕಾಶವಂತೂ ಇದೆ. ಹಿರಿಯರ ಸಂಬಂಧವಾದ ಆಸ್ತಿಯ ವಿಷಯದಲ್ಲಿ ಸಫಲತೆ ಇದೆ. ಶಿವ ಸ್ತುತಿಯಿಂದ ಕ್ಷೇಮ.
ಶುಭ ಸಂಖ್ಯೆ : 9 ಶುಭ ದಿಕ್ಕು: ಪಶ್ಚಿಮ
ಧನಸ್ಸು: ವಿದೇಶ ಪ್ರಯಾಣದ ಯೋಗವಿದೆ
ಗುರಿ ತಲುಪುವತ್ತ ಮನಸ್ಸನ್ನು ಕೇಂದ್ರೀಕರಿಸಿ. ಇದೀಗ ಗಾಣದಲ್ಲಿ ಎಣ್ಣೆ ಬರುವ ಹೊತ್ತು. ಕಣ್ಣು ಮುಚ್ಚಿ ಕುಳಿತಿರಬೇಡಿ. ವಿದೇಶ ಪ್ರಯಾಣವು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಥವಾ ಕೆಲಸ ಕಾರ್ಯಗಳಿಗಾಗಿ ಕೂಡಿ ಬರುವ ಸಮಯವೂ ಆಗಿದೆ. ಮಕ್ಕಳ ವಿಚಾರದಲ್ಲಿ ನಿಮ್ಮ ಲಕ್ಷ್ಯವು ಇರಲಿ. ಚಿಕ್ಕವರಾದ ಅವರಿಗೆ ನಿಮ್ಮ ಅನುಭವದ ರಕ್ಷೆ ಅವಶ್ಯವಾಗಿದೆ. ಮಂಗಳಕರನಾದ ಸೂರ್ಯನನ್ನು ಸ್ತುತಿಸಿ. ಅನೇಕ ನಿಟ್ಟಿನಲ್ಲಿ ಯಶಸ್ಸು ಲಭಿಸಲು ಸೂರ್ಯನ ಅನುಗ್ರಹ ಸಿಗಲಿದೆ.
ಶುಭ ಸಂಖ್ಯೆ : 1 ಶುಭ ದಿಕ್ಕು: ಆಗ್ನೇಯ
ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಮಕರ: ಹಣ ಕೊಟ್ಟು ಕೋಡಂಗಿಗಳಾಗಬೇಡಿ!
ಒತ್ತಡದಿಂದ ಕೆಲಸವನ್ನು ಒಪ್ಪಿಕೊಳ್ಳಬೇಡಿ. ಹೊರೆಯಾಗುವ ಸಾಲಕ್ಕೆ ಕೈ ಹಾಕಬೇಡಿ. ಸ್ವಂತ ಅಣ್ಣ ತಮ್ಮಂದಿರೇ ತೊಂದರೆ ತಂದಾರು. ಪರಿಶುದ್ಧನಾದ ಶ್ರೀ ದತ್ತಾತ್ರಯನನ್ನು ಹಾಗೂ ಮಹಾಬಲನೇ ಆದ ಮಾರುತಿಯನ್ನು ಆರಾಧಿಸಿ. ಕತ್ತಲಿನಿಂದ ಬೆಳಕಿನತ್ತ ಸಾಗುವ ದಾರಿ ಗೋಚರವಾಗಲಿದೆ. ಕಪಟತನದಿಂದ ಹಣ ಕೀಳಲೆತ್ನಿಸುವ ಜನರನ್ನು ನಂಬಬೇಡಿ. ಕೊಟ್ಟ ಹಣ ಬರಲಾರದು. ನಿಮ್ಮ ಕೆಲಸದ ಸ್ಥಳದಲ್ಲಿ ವಾದ, ಚರ್ಚೆ, ಯಾರೇ ಕೆಣಕಿದರೂ ಕೆರಳಿ ಜಗಳವಾಡಲು ಹೋಗದಿರಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಪೂರ್ವ
ಕುಂಭ: ತಣ್ಣೀರನ್ನು ತಣಿಸಿ ಕುಡಿಯಿರಿ…
ನಿಮ್ಮನ್ನು ಕರಿಮೋಡೆಗಳು ಸುತ್ತರಿದ ದಿನಗಳಿವು. ಲೋಕೋತ್ತರನಾದ, ರಘುಕುಲ ತಿಲಕ ಶ್ರೀರಾಮನನ್ನು ಸ್ತುತಿಸಿ. ರಾಮರಕ್ಷಾ ಸ್ತೋತ್ರ ಪಠಿಸಿ. ಕಾರ್ಮೋಡಗಳು ದೂರವಾಗಲು ಸುಲಭದ ದಾರಿ ದೊರಕಲು ಇದರಿಂದ ಸಹಾಯ ಸಿಗಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಒಮ್ಮೆಗೇ ಬಂಡವಾಳ ಸಂವರ್ಧಿಸಿ ಲಾಭ ಹೆಚ್ಚಿಸುವ ದಿಢೀರ್ ಯೋಚನೆಗೆ ಕೈ ಹಾಕದಿರಿ. ಬಾವಿಯಿಂದ ಎತ್ತಿ ತೆಗೆದ ನೀರೇ ಆದರೂ ತಂಪು ನೀರನ್ನು ಆರಿಸಿ, ತಣಿಸಿ ಕುಡಿಯಿರಿ. ಹನುಮಾನ್ ಚಾಲೀಸ್ ಓದಿ ಕ್ಷೇಮ.
ಶುಭ ಸಂಖ್ಯೆ : 4 ಶುಭ ದಿಕ್ಕು: ನೈಋತ್ಯ
ಮೀನ: ವಿವೇಕದಿಂದ ವರ್ತಿಸಬೇಕಾದ ಕಾಲ
ಹೊಸ ರೀತಿಯ ಪ್ರಯೋಗಗಳಿಗೆ ಸರ್ರನೆ ಮನೆ ಕಟ್ಟುವ, ಮನೆಯನ್ನು ಪುನರ್ ರೂಪಿಸಿಕಟ್ಟುವ ಕೆಲಸಕ್ಕೆ ಕೈ ಹಾಕದಿರಿ. ಏನೇ ವ್ಯಾಜ್ಯಗಳು ಆಸ್ತಿಯ ಬಗೆಗೆ ತಲೆದೋರಿದರೂ ಸಿಟ್ಟಿಗೆ ಬುದ್ಧಿ ಕೊಡಬೇಡಿ. ನಿಮ್ಮಿಂದ ತಪ್ಪು ಸಂಭವಿಸಲು ವೈರಿ ಕಾದು ಕುಳಿತಿರುತ್ತಾನೆ. ಸಮಯ, ಸಂದರ್ಭಗಳನ್ನು ನೀವೇ ಚರ್ಚಿಸಿ ನಿರ್ಧಾರಕ್ಕೆ ಬನ್ನಿ. ಕಾಲದ ಘಟ್ಟ ಸತ್ಯವನ್ನು ಸುಳ್ಳಾಗಿಸುವ ವಿವಂಚನೆಯ ಕಾಲವಾಗಿದೆ. ಹೀಗಾಗಿ ದಿನಗಳನ್ನು ವಿವೇಕದಿಂದಲೇ ಗೆಲ್ಲಲು ಮುಂದಾಗಿ. ರಾಮರಕ್ಷಾಸ್ತ್ರೋತ್ರ ಪಠಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಉತ್ತರ
ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್ ನಂ.: 9632980996
ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?