ಮೇಷ: ನಿಮ್ಮ ಕುಶಾಗ್ರತೆಗೆ ಮನ್ನಣೆ
ದುಡಿಯುತ್ತೀರಿ, ಹಣಗಳಿಸುತ್ತೀರಿ. ಏನೋ ಒಂದು ಉತ್ತಮ ಮೊತ್ತ ದೊರಕಿದ ಸಮಾಧಾನವನ್ನೂ ಪಡೆಯುತ್ತೀರಿ. ಆದರೆ ಹಣ ನಿಲ್ಲಲಾರದು ಎಂಬ ಹಳ ಹಳಿಕೆ ದೂರವಾಗದು. ಕೃಷಿ ಹೈನೋದ್ಯಮ, ಕುರಿ ಸಾಕಣಿಕೆ, ಕೋಳಿ ಸಾಕಣಿಕೆ, ವಾಣಿಜ್ಯ ಕೃಷಿ ಉತ್ಪನ್ನಗಳು ಇತ್ಯಾದಿ ಕೈ ಹಿಡಿಯಬಲ್ಲವು. ತಾಂತ್ರಿಕ ಪರಿಣಿತರು, ವಿದ್ಯುನ್ಮಾನ ತಂತ್ರಜ್ಞರು ಬಳಲಿಕೆ ಇದ್ದರೂ ನಿಮ್ಮ ಕುಶಾಗ್ರತೆಗೆ ಮನ್ನಣೆ ಸಿಗುವ ವರ್ತಮಾನ ನಿಮಗೆ ಅನುಕೂಲಕರವಾಗಿ ಒದಗಿ ಬರಬಲ್ಲದು. ಮಹಾಗಣಪತಿಯ್ನು ಸ್ತುತಿಸಿ, ಲಾಭ ಇದೆ.
ಶುಭ ಸಂಖ್ಯೆ: 6 ಶುಭ ದಿಕ್ಕು: ಪಶ್ಚಿಮ
ವೃಷಭ: ಮಾನಸಿಕ ಶಾಂತಿಯೇ ನಿಮಗೆ ವಜ್ರಾಯುಧ!
ಮೂಗಿನ ತುದಿಗೇ ಕೋಪ ಎಂಬುದನ್ನು ಕೈ ಬಿಡಿ. ಹಲವು ಉನ್ನತ ಸ್ಥಾನಮಾನ, ಪ್ರಮೋಷನ್ ಇತ್ಯಾದಿ ಸಂಪಾದಿಸಲು ಕಾಲ ಸರಳವಾಗುತ್ತದೆ. ಮಾತಿನ ಮೇಲೆ ನಿಯಂತ್ರಣ ಇರಲಿ. ವಿನಯ ಪೂರ್ಣವಾದ ನಡೆ ನುಡಿಗಾಗಿ ಪ್ರಯತ್ನಿಸುವಿರಾದರೂ ಅನಾವಶ್ಯಕವಾಗಿ ನಿಮ್ಮನ್ನು ಕೆರಳಿಸುವವರ ಮಾತಿಗೆ ಕಿವಿಕೊಡದಿರಿ. ಹಲವು ವಿರೋಧಿಗಳಿಂದಲೇ ನಿಮಗೆ ಸಹಾಯ ಒದಗಿ ಬರಬಲ್ಲದು. ಮಾನಸಿಕ ಶಾಂತಿಯೇ ನಿಮ್ಮ ವಜ್ರಾಯುಧವಾಗಿದ್ದು ಕಾವೇರಿದ ವಾತಾವರಣ ನಿಗ್ರಹಿಸಿ. ಮಹಾಗಣಪತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಆಗ್ನೇಯ
ಮಿಥುನ: ನಿಮ್ಮ ವರ್ಚಸ್ಸು ಹೆಚ್ಚುವ ಸಮಯ
ವರ್ಚಸ್ವೀ ವ್ಯಕ್ತಿಯಾಗಿ ಎದ್ದು ನಿಲ್ಲುವಲ್ಲಿ ವರ್ತಮಾನ ನಿಮ್ಮ ಸಹಾಯಕ್ಕೆ ಒದಗಿ ಬರಲಿದೆ. ಹಾಗೆಯೇ ಕೌಟುಂಬಿಕ ವಿಚಾರದಲ್ಲಿ ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುವ ವ್ಯವಧಾನ ಕಳಕೊಳ್ಳದಿರಿ. ನಿಮ್ಮ ಪಾಲಿನ ಕೆಲವು ಪ್ರಾಪ್ತಿಯನ್ನು ಪಡೆಯುವಲ್ಲಿ ಕೆಲ ಹಿರಿಯರಿಂದ ನಿಮಗೆ ಉತ್ತಮ ಬೆಂಬಲ ಲಭ್ಯ. ಮಕ್ಕಳ ಬಗೆಗೆ ಗಮನ ಇರಲಿ. ಅನಾವಶ್ಯಕ ಮೊಂಡಾಟಗಳಿಗೆ ಮಕ್ಕಳು ಹೆಜ್ಜೆ ಇರಿಸಲು ಸಾಧ್ಯ. ಮಕ್ಕಳನ್ನು ನಿಯಂತ್ರಿಸಿ. ಆದರೆ ಒತ್ತಡದಿಂದ ನಿಯಂತ್ರಿಸದಿರಿ, ಮಮತೆ ಇರಲಿ. ಶಿವನ ಸ್ತುತಿ ಕ್ಷೇಮ.
ಶುಭ ಸಂಖ್ಯೆ : 1 ಶುಭ ದಿಕ್ಕು: ಈಶಾನ್ಯ
ಕಟಕ: ಅತಿಯಾದ ಆತ್ಮವಿಶ್ವಾಸದಿಂದ ಕೇಡು
ಬಿರುಗಾಳಿಯ ಹೊಡೆತಕ್ಕೆ ಸಿಕ್ಕುಬಿದ್ದ ಅನುಭವ ಎದುರಾಗಬಹುದು. ಎದೆಗುಂದದೆಯೇ ಮುಂದೆ ಸಾಗುವ ಧೈರ್ಯ ಹೊಂದಿರಿ. ಅನಾವಶ್ಯಕವಾದ ವಿವಾದವನ್ನು ಯಾರ ಜತೆಗೂ ಮಾಡದಿರಿ. ಹಾಗೆಯೇ ಬಾಳ ಸಂಗಾತಿಯ ಜತೆಗೂ ಸಮಾಧಾನ ಮತ್ತು ಹೊಂದಾಣಿಕೆಯ ನಿಲುವಿರಲಿ. ಮನಸ್ಸಿನ ಶಾಂತಿಯ ಮೂಲಕವೇ ಕೆಲವು ಸಕಾರಾತ್ಮಕ ಬೆಳವಣಿಗೆಯ ಬಗೆಗಾಗಿನ ದಾರಿ ಲಭ್ಯವಾಗಲು ಸರಳವಾಗುತ್ತದೆ. ಧ್ಯೋಯೋದ್ದೇಶ ಗಳನ್ನು ನೆನಪಿನಲ್ಲಿಡಿ, ಹೊರತೂ ಅವಮಾನಕ್ಕಾಗಿ ಕುಗ್ಗದಿರಿ. ಭವಾನಿ ಶಂಕರನನ್ನು ಸ್ತುತಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಉತ್ತರ
ಸಿಂಹ: ಧೈರ್ಯದಿಂದ ಮುನ್ನುಗ್ಗಲು ಸೂಕ್ತ ಕಾಲ
ಉತ್ತಮವಾದ ಕಾಲಘಟ್ಟವಾದರೂ ಕೆಲವು ಕೀಳು ಮನೋಭಾವದ ಜನರ ಒರಟುತನವನ್ನು ನೀವು ಸಹಿಸಿಕೊಳ್ಳಲೇಬೇಕಾಗುತ್ತದೆ. ಮಕ್ಕಳ ವಿಚಾರದಲ್ಲಿ ಶುಭ ವಾರ್ತೆ ಇದೆ. ವಿವಾಹಾಪೇಕ್ಷಿಗಳಿಗೆ ಇದು ಸೂಕ್ತ ಕಾಲ. ಕಾಲದ ಕತ್ತಲು ಕತ್ತುಹಿಸುಕದಂತೆ ರಾಹು ಕವಚ ಓದಿ. ನರಸಿಂಹನನ್ನೂ ಸ್ತುತಿಸಿ, ಒಳತಿದೆ. ಧೈರ್ಯದಿಂದ ಮುನ್ನುಗ್ಗಲು ಕೂಡ ಈಗ ಕಾಲ ನಿಮಗೆ ಸ್ನೇಹಶೀಲವಾಗಿದೆ. ಹಣಕಾಸಿನ ಸ್ಥಿತಿಯ ಬಗೆಗೂ ನಿಮಗೆ ಪ್ರತಿಕೂಲ ಸನ್ನಿವೇಶ ಬರಲಾರದು. ವೈದ್ಯರುಗಳಿಗೆ ಸಂತಸದ ವಾರ್ತೆ. ಒಟ್ಟಿನಲ್ಲಿ ಒಳಿತಿನ ಕಾಲ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪಶ್ಚಿಮ
ಕನ್ಯಾ: ಕೆಲಸದ ಸ್ಥಳದಲ್ಲಿ ಎಲ್ಲರಿಂದ ಪ್ರಶಂಸೆ
ನಿರಾಳವಾಗಿರಲು ಬೇಕಾದ ಉತ್ತಮ ಕಾಲಘಟ್ಟವಾಗಿದೆ ಇದು. ಆದರೂ ಮಹತ್ವದ ಸಂದರ್ಭದಲ್ಲಿ ಕುಹಕಿಗಳ ಅಪಸ್ವರ ನಿಮ್ಮ ಮನಃಶಾಂತಿಯನ್ನು ಕದಡಲು ಸಾಧ್ಯವಿದೆ. ಆದರೆ ನಿಮ್ಮಲ್ಲಿನ ಬೌದ್ಧಿಕ ಸೂಕ್ಷ್ಮ ಹಾಗೂ ಕೆಡುಕು, ಒಳಿತುಗಳ ಬಗೆಗಿನ ಸೂಕ್ತ ವಿವೇಚನೆ, ಕುಹಕಿಗಳನ್ನು ಕಟ್ಟಿ ಹಾಕಲು ಯುಕ್ತಿಯನ್ನು ಒದಗಿಸಲು ಅನುಕೂಲಕರವೇ ಆಗಿರುತ್ತದೆ. ಶನಿ ಕಾಟದಿಂದ ಬೇಸತ್ತು ಖಿನ್ನತೆಗೆ ದೂಡಲ್ಪಟ್ಟ ನೀವೀಗ ವಿರೋಧಿಗಳನ್ನು ಎದುರಿಸಲು ಅವಕಾಶಗಳು ಲಭ್ಯ. ಎದುರಾಳಿಗಳೇ ಲಾಭ ತರಬಲ್ಲರು. ಮಹಾವಿಷ್ಣುವನ್ನು ಆರಾಧಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಉತ್ತರ
ತುಲಾ: ಒತ್ತಡಗಳಿರುವ ವಾರ
ನಿಮ್ಮ ನೆಮ್ಮದಿಯ ಕ್ಷಣಗಳು ತಕ್ಕಡಿಯಂತೆ ಮೇಲೆ ಕೆಳಗೆ ಹೊಯ್ದಾಡುತ್ತ ಕಿರಿಕಿರಿ ಸೃಷ್ಟಿಸುತ್ತ ಹೋಗುವ ದಿನಗಳಾಗಿವೆ. ನಿಮ್ಮನ್ನು ಬಿಡಲಾರದ ಒತ್ತಡಗಳ ಬಗ್ಗೆ ತೀರಾ ಆಪ್ತರ ಬಳಿ ಮಾತ್ರ ಚರ್ಚಿಸಿ. ಇಲ್ಲದೇ ಹೋದರೆ ಕುಕೃತ್ಯಗಳಲ್ಲಿ ತೊಡಗಿಕೊಳ್ಳುವ, ತೊಡಗಿ ಕೊಂಡಿರುವ ಜನರು ಬ್ಯುಸಿನೆಸ್ ವಿಚಾರದಲ್ಲಿ ಅನೇಕ ಸಮಸ್ಯೆಗಳಿಗೆ ನಿಮ್ಮನ್ನು ದೂಡಿಯಾರು. ಪಾರ್ಟ್‌ನರ್‌ಶಿಪ್ ವಹಿವಾಟಿನಲ್ಲಿ ಎಚ್ಚರವಿರಲಿ. ಹಣವನ್ನು ಸಾಲವಾಗಿ ಕೊಡಲೇ ಬೇಡಿ. ಕೊಟ್ಟಿದ್ದು ವಾಪಾಸಾಗಲೂ ಪರದಾಡುವಿರಿ. ಎಚ್ಚರ, ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಈಶಾನ್ಯ
ವೃಶ್ಚಿಕ: ಯಶಸ್ಸಿನ ಮೆಟ್ಟಿಲೇರುವ ಸಮಯ
ರಾಜಕಾರಣ, ಸ್ಪರ್ಧಾತ್ಮಕ ಪರೀಕ್ಷೆಗಳು ಹೆಚ್ಚಿನ ಅಧಿಕಾರಯುತ ಸ್ಥಾನಕ್ಕಾಗಿನ ಅವಕಾಶಗಳು, ತೀರಾ ಮಹತ್ವದ ಪ್ರಮೋಷನ್ ಇತ್ಯಾದಿಗಳಿಗೆ ಕಾಲಘಟ್ಟ ಬಹಳ ಮಟ್ಟಿಗೆ ಸೂಕ್ತವಾಗಿದೆ. ಚುನಾವಣೆಯ ದಿನಗಳಾಗಿರುವ ಸಂದರ್ಭದಲ್ಲಿ ಸ್ಪರ್ಧೆಯ ಕುರಿತಾದ ವಿಚಾರವನ್ನು ನಿಯೋಜಿಸಬಹುದಾಗಿದೆ. ಬಾಸ್‌ಬಳಿ ಹಾರ್ದಿಕವಾದ ಸಂಬಂಧ ಹೊಂದಲು ಕಾಲದ ನೆರವು ನಿಮಗೀಗ ಲಭ್ಯ. ಬೌದ್ಧಿಕವಾಗಿ ಚುರುಕಾಗಿರುವ ಮಂದಿಗೆ ಅವಕಾಶಗಳು ವಾಣಿಜ್ಯ ರಂಗದಲ್ಲಿ ಒದಗಿ ಬರುವುದು ಸುಸ್ಪಷ್ಟ. ಶ್ರೀ ಗುರು ದತ್ತಾತ್ರೇಯನ್ನನು ಆರಾಧಿಸಿ.
ಶುಭ ಸಂಖ್ಯೆ : 9ಶುಭ ದಿಕ್ಕು: ದಕ್ಷಿಣ
ಧನಸ್ಸು: ಧೈರ್ಯವೇ ನಿಮ್ಮ ಗೆಲುವಿನ ಗುಟ್ಟು
ಧೈರ್ಯವೇ ಇದೀಗ ನಿಮ್ಮ ಬಂಡವಾಳ. ಅಷ್ಟೇ ಅಲ್ಲ ಗೆಲುವಿನ ಗುರಿ ತಲುಪಲು ಇದು ಸಂಜೀವಿನಿ ಕೂಡಾ. ಅಧೈರ್ಯದಿಂದ ಉಂಟಾಗುವ ಹೊಯ್ದಾಟ ಬೇಡ. ಸೂಕ್ತವಾದ ನಿರ್ಣಯಕ್ಕೆ ಬನ್ನಿ. ಚುರುಕಿನ ವಾಕ್ ಚಾತುರ್ಯದಿಂದ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ. ವ್ಯವಹಾರಿಕ ವಿಚಾರದಲ್ಲಿ ಉದ್ಯಮಿಗಳು, ಆಡಳಿತಗಾರರು, ಷೇರು ಮಾರ್ಕೆಟ್‌ನ ಧನಪತಿಗಳು ನಿಮ್ಮ ಸಲಹೆ ಸೂಚನೆಗಳಿಗಾಗಿ ನಿಮ್ಮ ಬೆನ್ನು ಹಿಡಿಯುತ್ತಾರೆ. ಸೂಕ್ತವಾದ ಸಂಭಾವನೆ ಸರಿ, ಜಾಸ್ತಿ ಸಂಭಾವನೆಗೂ ಅವಕಾಶ ಜಾಸ್ತಿ. ಮಹಾಲಕ್ಷ್ಮೀಯನ್ನು ಸ್ತುತಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ನೈಋತ್ಯ
ಮಕರ: ತಪ್ಪು ನಿರ್ಧಾರ ಬೇಡವೇ ಬೇಡ
ಎದುರೇ ಎದ್ದೆದ್ದು ಬರುವ ಶರಧಿಯ ಹುಚ್ಚೆದ್ದ ತೆರೆಗಳು ಜೀವನದ ಸಂದರ್ಭದ ಚಟುವಟಿಕೆಗಳಲ್ಲಿ ರಭಸದಿಂದ ನಿಮ್ಮ ವಿರುದ್ಧ ದಾಳಿ ಎಬ್ಬಿಸಬಹುದಾಗಿದೆ. ನೆಲಕಚ್ಚಿ ನಿಲ್ಲಿ. ಸುಳಿಯ ವಿರುದ್ಧ ಹುಚ್ಚು ಆವೇಶದ ಕಡಲ ಅಲೆಗಳ ಸ್ವರೂಪದ ಸಮಸ್ಯೆಗಳಿರುವಾಗ ಹಗುರಾಗಿ ನಿರ್ಲಕ್ಷದಿಂದ ಈಜಾಡಲು ಹೋಗಬೇಡಿ. ಒಂದೇ ಒಂದು ತಪ್ಪು ನಿರ್ಧಾರ ದೊಡ್ಡದೇ ಬೆಲೆ ತೆರುವ ಪ್ರಮಾದ ಸೃಷ್ಟಿಸಬಹುದು. ಮನೆಯ, ಕುಟುಂಬದ ಜಗಳ ಹೊರ ಜನರ ದೃಷ್ಟಿಗೆ ಬಾರದಂತೆ ನೋಡಿ. ನಗೆಪಾಟಲು ಆಗದಿರಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ನೈಋತ್ಯ
ಕುಂಭ: ಎಚ್ಚರಿಕೆಯಿಂದಿರಬೇಕಾದ ಸಮಯ
ನಿಮ್ಮ ವಿಶ್ವಾಸದ ವಿಚಾರ ನಿಮಗೆ ಹಲವಾರು ಸಮಸ್ಯೆಗಳನ್ನು ಗೆಲ್ಲಿಸಿಕೊಟ್ಟಿರಬಹುದಾದರೂ ಈಗ “ಅರೆ ಭಾಯ್ , ಚಲೇಗಾ ಸಬ್ʼʼ ಎಂಬ ಧೋರಣೆ ಹೊಂದದಿರಿ. ಹಿಮಾಲಯವನ್ನು ಹತ್ತಿರಬಹುದು ನೀವು ಆದರೆ ಈಗ ಹುಲ್ಲ ಕಡ್ಡಿ ಎತ್ತುವುದೂ ದುಸ್ತರದ ವಿಷಯವಾಗಿದೆ. ಎಚ್ಚರ ಇರಲಿ. ಕಾಡಲ್ಲಿ ನೀವು ಇರದಿದ್ದರೂ ನಾಡಲ್ಲಿ ಹುಲಿಗಳು, ಚಿರತೆಗಳು ನಡೆದಾಡುವ ಕಾಲ ಘಟ್ಟ ಇದು, ಹುಶಾರಾಗಿರಿ. ಮತಿ ಹೀನರ ದುಡುಕು ನಿರ್ಧಾರ, ಮಾತುಗಳಿಗೆ ನೀವು ಬೆಲೆ ತೆರುವ ಸಮಯ. ಸದಾ ಶಿವ ಸ್ತುತಿ ಮಾಡಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ವಾಯವ್ಯ
ಮೀನ: ಒತ್ತಡ, ಗೊಂದಲಗಳಿರುವ ವಾರ
ಹೊಯ್ದಾಟ, ಒತ್ತಡ, ಹಾಗೊಂದು ರೀತಿಯ ಸಾಹಸಕ್ಕೆ ಮುನ್ನುಗ್ಗಲು ಏನೋ ಅಧೈರ್ಯ ಇತ್ಯಾದಿ ನಿಮ್ಮನ್ನು ಮುತ್ತಿಕೊಳ್ಳಲಿವೆ. ಲಾಭಕಾರಕನಾಗಿದ್ದ ಶನೈಶ್ವರ ಚಂದ್ರನನ್ನು ಕೈವಶ ಪಡಿಸಿಕೊಂಡು ನಿಮ್ಮ ಮನೋಮಂಡಲವನ್ನು ಸಂದಿಗ್ಧದಲ್ಲಿ ತೂಗುಯ್ಯಾಲೆಯಂತೆ ಗರಗರ ತಿರುಗಿಸಿ ಬಸವಳಿಸಲು ಸರ್ವ ಸನ್ನದ್ಧನಾಗಿದ್ದಾನೆ. ಅವಸರಿಸದೆ ನಿರ್ಣಯಕ್ಕೆ ಬನ್ನಿ. ಬಾಳ ಸಂಗಾತಿಯ ಸಹಾಯದಿಂದ ನಿಮ್ಮ ಮನಸ್ಸಿನ ಮಂಕುತನಕ್ಕೆ ಆಸ್ಪದವಾಗದ ಬಹಳ ತೂಕದ ಗುರುತರ ಬೆಂಬಲ, ಸಲಹೆಗಳು ಸಿಗಬಹುದು. ಶ್ರೀರಾಮ ರಕ್ಷಾ ಸ್ತೋತ್ರ ಓದಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಆಗ್ನೇಯ
ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್ ನಂ.: 9632980996
ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?