Site icon Vistara News

AIIMS Delhi: ರಾಮಮಂದಿರ; ಟೀಕೆಗಳ ಬೆನ್ನಲ್ಲೇ ರಜೆ ಕ್ಯಾನ್ಸಲ್‌ ಮಾಡಿದ ದೆಹಲಿ ಏಮ್ಸ್!‌

AIIMS Delhi

AIIMS Delhi Reverses Closure Decision, OPD to Operate Normally Amid Ram Mandir Event

ನವದೆಹಲಿ: ಅಯೋಧ್ಯೆ ರಾಮಮಂದಿರದಲ್ಲಿ (Ram Mandir) ಸೋಮವಾರ (ಜನವರಿ 22) ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ (Pran Pratishtha) ನಡೆಯಲಿದ್ದು, ಹಲವು ರಾಜ್ಯಗಳಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ಕೇಂದ್ರ ಸರ್ಕಾರವೂ ನೌಕರರಿಗೆ ಅರ್ಧ ದಿನ ರಜೆ ಘೋಷಿಸಿದೆ. ಇದರ ಬೆನ್ನಲ್ಲೇ, ದೆಹಲಿಯಲ್ಲಿರುವ ಏಮ್ಸ್‌ (AIIMS Delhi) ಆಸ್ಪತ್ರೆಯೂ ಸೋಮವಾರ ಮಧ್ಯಾಹ್ನ 2.30ರವರೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಆದರೆ, ಇದು ವಿವಾದ, ಟೀಕೆಗಳಿಗೆ ಗುರಿಯಾದ ಕಾರಣ ರಜೆಯನ್ನು ಏಮ್ಸ್‌ ಸ್ಥಗಿತಗೊಳಿಸಿದೆ.

ರಜೆ ರದ್ದುಗೊಳಿಸಿರುವ ಕುರಿತು ಏಮ್ಸ್‌ ಆಡಳಿತ ಮಂಡಳಿಯು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ. “ಅಪಾಯಿಂಟ್‌ಮೆಂಟ್‌ ಪಡೆದಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಯಾವುದೇ ವ್ಯತ್ಯಯ ಆಗಬಾರದು ಎಂದು ಜನವರಿ 22ರಂದು ಹೊರರೋಗಿಗಳ ವಿಭಾಗವು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಎಲ್ಲ ಅವಶ್ಯಕ ಚಿಕಿತ್ಸೆಗಳನ್ನೂ ನೀಡಲಾಗುತ್ತದೆ. ಎಲ್ಲ ವಿಭಾಗಗಳ ಮುಖ್ಯಸ್ಥರು, ಬ್ರಾಂಚ್‌ ಆಫೀಸರ್‌ಗಳು ಹೊಸ ಆದೇಶದ ಮಾಹಿತಿಯನ್ನು ಸಿಬ್ಬಂದಿಗೆ, ವೈದ್ಯರಿಗೆ ರವಾನಿಸಬೇಕು” ಎಂದು ಏಮ್ಸ್‌ ಮನವಿ ಮಾಡಿದೆ.

ವಿವಾದಕ್ಕೆ ಕಾರಣವಾಗಿದ್ದ ಆದೇಶ

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಧ್ಯಾಹ್ನ 2.30ರವರೆಗೆ ಏಮ್ಸ್‌ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ನಿರ್ಧಾರದ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. “ದೇಶದ ಬೃಹತ್‌ ಸರ್ಕಾರಿ ಆಸ್ಪತ್ರೆ ಎನಿಸಿದ ಏಮ್ಸ್‌ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ. ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳು ಆಸ್ಪತ್ರೆಯ ಹೊರಗಡೆಯೇ ನರಳಬೇಕಾಗುತ್ತದೆ. ಜನ ಅಪಾಯಿಂಟ್‌ಮೆಂಟ್‌ ಪಡೆಯಲು ಆಸ್ಪತ್ರೆ ಗೇಟ್‌ ಹೊರಗಡೆ ಕಾಯುವ ಪರಿಸ್ಥಿತಿ ಇರುವಾಗ ಇಂತಹ ರಜೆ ಬೇಕಾಗಿರಲಿ” ಎಂದು ಜನ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದಾಗಿ ಏಮ್ಸ್‌ ಆದೇಶ ಹಿಂಪಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Ram Mandir: ನಾಳೆ ರಾಮಮಂದಿರದಲ್ಲಿ 5 ಗಂಟೆ ಕಳೆಯಲಿರುವ ಮೋದಿ; ಕಂಪ್ಲೀಟ್ ಮಾಹಿತಿ ಇಲ್ಲಿದೆ

ರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ವಿಮಾ ಕಂಪನಿಗಳು, ಹಣಕಾಸು ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಸೇರಿದಂತೆ ಎಲ್ಲ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಜನವರಿ 22ರಂದು ಅರ್ಧ ದಿನ ರಜೆ ಘೋಷಿಸಲಾಗಿದೆ.

ದೇಶದ ಜನತೆಯ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅರ್ಧ ದಿನ ಕಚೇರಿ ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗುರುವಾರ ತಿಳಿಸಿದ್ದಾರೆ. “ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ್ ಪ್ರತಿಷ್ಠೆಯನ್ನು ಭಾರತದಾದ್ಯಂತ 22ನೇ ಜನವರಿ 2024ರಂದು ಆಚರಿಸಲಾಗುತ್ತದೆ. ಆಚರಣೆಯಲ್ಲಿ ಭಾಗವಹಿಸಲು ನೌಕರರನ್ನು ಸಕ್ರಿಯಗೊಳಿಸಲು, ಭಾರತದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳನ್ನು ಮಧ್ಯಾಹ್ನ 12.40 ಗಂಟೆಯವರೆಗೆ ಅರ್ಧ ದಿನ ಮುಚ್ಚಲು ನಿರ್ಧರಿಸಲಾಗಿದೆ” ಎಂದು ಎಲ್ಲ ಕೇಂದ್ರ ಸರ್ಕಾರದ ಸಚಿವಾಲಯಗಳು/ ಇಲಾಖೆಗಳಿಗೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version