Site icon Vistara News

Ayodhya Ram Mandir: ಕೇವಲ ಎಳನೀರು ಸೇವನೆ, ಬರೀ ನೆಲದಲ್ಲಿ ನಿದ್ದೆ; ಕಠಿಣ ವ್ರತ ಕೈಗೊಂಡ ಮೋದಿ ದಿನಚರಿ ಹೇಗಿದೆ?

modi

modi

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ತಲೆ ಎತ್ತುತ್ತಿರುವ ರಾಮ ಮಂದಿರದಲ್ಲಿ (Ayodhya Ram Mandir) ರಾಮ ಲಲ್ಲಾ (Rama lalla) ವಿಗ್ರಹ ಪ್ರಾಣ ಪ್ರತಿಷ್ಠೆ(Pran prathishta)ಗೆ ಕ್ಷಣಗಣನೆ ಆರಂಭವಾಗಿದೆ. ಜನವರಿ 22ರಂದು ನಡೆಯುವ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಕಠಿಣ ವ್ರತವನ್ನು ಕೈಗೊಂಡಿದ್ದಾರೆ. ಎಳನೀರನ್ನು ಮಾತ್ರ ಸೇವಿಸುತ್ತಿರುವ ಅವರು ಬರಿ ನೆಲದ ನೆಲದ ಮೇಲೆ ಮಲಗುತ್ತಿದ್ದಾರೆ.

ಪ್ರಾಣ ಪ್ರತಿಷ್ಠಾಪನೆಗೆ ನರೇಂದ್ರ ಮೋದಿ ಅವರೇ ಪ್ರಧಾನ ಯಜಮಾನರಾಗಿರುತ್ತಾರೆ. ಹೀಗಾಗಿ ಅವರು ಕಠಿಣ ವ್ರತ ಕೈಗೊಂಡಿದ್ದಾರೆ. ಸಮಾರಂಭವನ್ನು ನಡೆಸಲು ಕಡ್ಡಾಯವಾದ ಸಾತ್ವಿಕ ಆಹಾರದ ಭಾಗವಾಗಿ ಎಳನೀರನ್ನು ಮಾತ್ರ ಸೇವಿಸುತ್ತಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಕಳೆದ ವಾರ ಮೋದಿ ಅವರು, ಪವಿತ್ರ ಕಾರ್ಯಕ್ರಮಕ್ಕೆ ಮೊದಲು 11 ದಿನಗಳ ಕಾಲ ಆಚರಿಸುವ ಯಮ ನಿಯಮವನ್ನು ಅನುಸರಿಸುವುದಾಗಿ ಘೋಷಿಸಿದ್ದರು. ಅನುಷ್ಠಾನದ ಹಿನ್ನೆಲೆಯಲ್ಲಿ ವಿವಿಧ ಸಂಪ್ರದಾಯಗಳನ್ನು ನಡೆಸುವ ಕುರಿತೂ ತಿಳಿಸಿದ್ದಾರೆ.

ಮೋದಿ ಹೇಳಿದ್ದೇನು?

“ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕೇವಲ 11 ದಿನಗಳು ಮಾತ್ರ ಉಳಿದಿವೆ. ಈ ಶುಭ ಸಂದರ್ಭಕ್ಕೆ ಸಾಕ್ಷಿಯಾಗುವ ಅದೃಷ್ಟ ನನ್ನದಾಗಿದೆ. ಸಮಾರಂಭದಲ್ಲಿ ಭಾರತದ ಜನರನ್ನು ಪ್ರತಿನಿಧಿಸುವಂತೆ ದೇವರು ನನ್ನನ್ನು ಕೇಳಿದ್ದಾನೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾನು ಇಂದಿನಿಂದ 11 ದಿನಗಳ ವಿಶೇಷ ಅನುಷ್ಠಾನವನ್ನು ಪ್ರಾರಂಭಿಸುತ್ತಿದ್ದೇನೆ. ನಾನು ನಿಮ್ಮೆಲ್ಲರ ಆಶೀರ್ವಾದವನ್ನು ಕೋರುತ್ತೇನೆ” ಎಂದು ಮೋದಿ ಕಳೆದ ವಾರ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಿಳಿಸಿದ್ದರು.

ದಿನಚರಿ ಹೇಗಿದೆ?

ಜನವರಿ 12ರಂದು ಮೋದಿ ಅವರು ನಾಸಿಕ್‌ನ ಪಂಚವಟಿ ಪ್ರದೇಶದ ಗೋದಾವರಿ ತಟದಲ್ಲಿರುವ ಶ್ರೀ ಕಾಲ ರಾಮ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ಅನುಷ್ಠಾನ ಪ್ರಾರಂಭಿಸಿದರು. ಅಲ್ಲದೆ ಅವರು ಕೇರಳದ ಗುರುವಾಯೂರು ದೇವಸ್ಥಾನ ಮತ್ತು ಆಂಧ್ರ ಪ್ರದೇಶದ ವೀರಭದ್ರ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ವಾರಾಂತ್ಯದಲ್ಲಿ ಮೋದಿ ತಮಿಳುನಾಡಿನ ಸರಣಿ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಅವರು ಶನಿವಾರ (ಜನವರಿ 20) ತಿರುಚಿರಾಪಳ್ಳಿಯ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಕಂಬ ರಾಮಾಯಣದ ಶ್ಲೋಕಗಳನ್ನು ಪಠಿಸುವ ವಿವಿಧ ವಿದ್ವಾಂಸರೊಂದಿಗೆ ಸಮಯ ಕಳೆಯಲಿದ್ದಾರೆ. ನಂತರ ಅವರು ರಾಮೇಶ್ವರಂಗೆ ತೆರಳುತ್ತಾರೆ. ಅಲ್ಲಿ ಅವರು ಸಂಸ್ಕೃತ, ಅವಧಿ, ಕಾಶ್ಮೀರಿ, ಗುರುಮುಖಿ, ಅಸ್ಸಾಮಿ, ಬಂಗಾಳಿ, ಮೈಥಿಲಿ ಮತ್ತು ಗುಜರಾತಿ ಭಾಷೆಗಳ ರಾಮಾಯಣವನ್ನು ಆಲಿಸಲಿದ್ದಾರೆ. ಸಂಜೆ ಶ್ರೀ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಭಜನೆ, ಭಕ್ತಿಗೀತೆಗಳನ್ನು ಆಲಿಸಲಿದ್ದಾರೆ. ಭಾನುವಾರ ಮೋದಿ ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಮತ್ತು ನಂತರ ರಾಮ ಸೇತುವನ್ನು ನಿರ್ಮಿಸಿದ ಸ್ಥಳವೆಂದು ಹೇಳಲಾಗುವ ಅರಿಚಲ್ ಮುನೈಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ ಜನವರಿ 22ರ ಸಮಾರಂಭಕ್ಕೆ ಅನುಗುಣವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುವಂತೆ ಬಿಜೆಪಿ ತನ್ನ ಎಲ್ಲ ಸದಸ್ಯರು ಮತ್ತು ಕಾರ್ಯಕರ್ತರಿಗೆ ಸೂಚಿಸಿದೆ. ಈ ಸಂದರ್ಭದಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲು ಮತ್ತು ದೀಪಾವಳಿಯಂತೆ ಆಚರಣೆ ನಡೆಸಲು ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಎಲ್ಲ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: Ayodhya Ram Mandir: ರಾಮಮಂದಿರ ಪ್ರಾಣ ಪ್ರತಿಷ್ಠೆ ದಿನ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ

Exit mobile version