Site icon Vistara News

Ram Halwa: ರಾಮಮಂದಿರ ಉದ್ಘಾಟನೆಗಾಗಿ ಸಿದ್ಧವಾಗಲಿದೆ 7 ಸಾವಿರ ಕೆಜಿ ರಾಮ ಹಲ್ವಾ; ವಿಶೇಷ ಏನು?

Ram Halwa

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ರಾಮಮಂದಿರ (Ram Mandir) ಉದ್ಘಾಟನೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ ಆಗಮಿಸುವ ಸಾವಿರಾರು ಗಣ್ಯರಿಗೆ ಸಕಲ ವ್ಯವಸ್ಥೆ, ಭದ್ರತೆ ಸೇರಿ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇನ್ನು ರಾಮಮಂದಿರ ಲೋಕಾರ್ಪಣೆ ದಿನ ವಿಶೇಷ ‘ರಾಮ ಹಲ್ವಾ’ (Ram Halwa) ತಯಾರಿಸಲಾಗುತ್ತದೆ. ವಿಶೇಷ ಪ್ರಸಾದವನ್ನು ನಾಗ್ಪುರ ಮೂಲದ, ಅಂತಾರಾಷ್ಟ್ರೀಯ ಖ್ಯಾತಿಯ ಬಾಣಸಿಗ (Chef) ವಿಷ್ಣು ಮನೋಹರ್‌ (Vishnu Manohar) ಅವರು ತಯಾರಿಸಲಿದ್ದಾರೆ.

ಹೌದು, ವಿಷ್ಣು ಮನೋಹರ್‌ ಅವರು ರಾಮಮಂದಿರ ಉದ್ಘಾಟನೆಯ ದಿನ ಸುಮಾರು 7 ಸಾವಿರ ಕೆ.ಜಿ ರಾಮ ಹಲ್ವಾ ತಯಾರಿಸಲಿದ್ದಾರೆ. ಇದಕ್ಕಾಗಿ ಅವರು 12 ಸಾವಿರ ಲೀಟರ್‌ ನೀರಿನ ಸಾಮರ್ಥ್ಯದ ಬೃಹತ್‌ ಕಡಾಯಿಯೊಂದನ್ನು ಕೂಡ ತಯಾರಿಸಿದ್ದಾರೆ. “900 ಕೆಜಿ ರವೆ, 1 ಸಾವಿರ ಕೆಜಿ ತುಪ್ಪ, ಸಾವಿರ ಕೆಜಿ ಸಕ್ಕರೆ, 2 ಸಾವಿರ ಲೀಟರ್‌ ಹಾಲು, 2,500 ಲೀಟರ್‌ ನೀರು, 300 ಕೆಜಿ ಡ್ರೈ ಫ್ರೂಟ್ಸ್‌, 75 ಕೆಜಿ ಏಲಕ್ಕಿ ಪೌಡರ್‌ ಬಳಸಿಕೊಂಡು ವಿಶೇಷ ರಾಮ ಹಲ್ವಾ ತಯಾರಿಸಲಾಗುವುದು” ಎಂದು ವಿಷ್ಣು ಮನೋಹರ್‌ ತಿಳಿಸಿದ್ದಾರೆ.

“ಸುಮಾರು ಒಂದೂವರೆ ಲಕ್ಷ ಜನರಿಗೆ ರಾಮ ಹಲ್ವಾ ಪ್ರಸಾದ ವಿತರಣೆ ಮಾಡುವ ಕಾರಣ ದೊಡ್ಡ ಕಡಾಯಿಯನ್ನು ತಯಾರಿಸಲಾಗಿದೆ. ಕಡಾಯಿಯ ತೂಕವೇ 1,300-1,400 ಕೆಜಿ ಇದೆ. ಇದು 10 ಅಡಿ ಎತ್ತರ ಹಾಗೂ 10 ಅಡಿ ಅಗಲ ಇದೆ. ಇದನ್ನು ಕ್ರೇನ್‌ ಮೂಲಕವೇ ಎತ್ತಬೇಕಾಗುತ್ತದೆ. ನಮ್ಮ ತಂಡವು ರಾಮ ಹಲ್ವಾ ತಯಾರಿಸಲು ಉತ್ಸಾಹದಿಂದ ಸಜ್ಜಾಗಿದೆ. ಇದಕ್ಕಾಗಿ ಬೇಕಾಗುವ ಎಲ್ಲ ವಸ್ತುಗಳನ್ನು ಖರೀದಿಸಲಾಗಿದೆ” ಎಂದು ವಿಷ್ಣು ಮನೋಹರ್‌ ಮಾಹಿತಿ ನೀಡಿದ್ದಾರೆ. ಹಾಗೆಯೇ, ಅಯೋಧ್ಯೆಯಲ್ಲಿ, ರಾಮಮಂದಿರ ಆವರಣದಲ್ಲಿ ರಾಮಾಯಣ ಕಾಲದ ತಳಿಯ ಸಸಿಗಳನ್ನು ನೆಡಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Rama Mandir : ರಾಮಲಲ್ಲಾನ ಯಾವ ವಿಗ್ರಹ ವಿಗ್ರಹ‌ ಪ್ರತಿಷ್ಠಾಪನೆ?; ಜ. 17ರಂದು ಘೋಷಣೆ

ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನ ಪ್ರಾಯೋಗಿಕವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version