ಲಖನೌ: ಅಯೋಧ್ಯೆಯ ರಾಮ ಮಂದಿರ (Ayodhya Ram Mandir) ಇನ್ನೂ ಪೂರ್ಣಗೊಂಡಿಲ್ಲ. ಅಪೂರ್ಣವಾಗಿರುವ ಮಂದಿರದಲ್ಲಿ (Ayodhya Ram Temple) ಪ್ರಾಣ ಪ್ರತಿಷ್ಠಾಪನೆ ಮಾಡುವುದು ಶಾಸ್ತ್ರಕ್ಕೆ ವಿರುದ್ಧ ಎಂದು ಉತ್ತರಾಖಂಡದ ಜ್ಯೋತಿರ್ಮಠದ ಪೀಠಾಧೀಶ ಶಂಕರಾಚಾರ್ಯ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ (Avimukteshwaranand Saraswati of Jyotir Mutt) ಅವರು ಹೇಳಿದ್ದಾರೆ.
ಹಿಂದೂ ಧರ್ಮದ ನಾಲ್ಕು ಶಂಕರಾಚಾರ್ಯರಲ್ಲಿ (Shankaracharya) ಯಾರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಪುರಿಯ ಗೋವರ್ಧನ ಮಠದ ಮಠಾಧೀಶರು ಇದೇ ರೀತಿ ಹೇಳಿರುವ ಒಂದು ದಿನದಲ್ಲಿ ಜ್ಯೋತಿರ್ಮಠಾಧೀಶರ ಈ ಹೇಳಿಕೆ ಬಂದಿದೆ. ನಿನ್ನೆ, ಜನವರಿ 22ರ ರಾಮಮಂದಿರದಲ್ಲಿ ವಿಗ್ರಹ ಪ್ರತಿಷ್ಠಾಪನೆಗೆ ಹಾಜರಾಗಲು ಪುರಿಯ ಗೋವರ್ಧನ ಮಠದ ಮಠಾಧೀಶರು ನಿರಾಕರಿಸಿದ್ದರು.
ಈ ಸಮಾರಂಭವನ್ನು ಪವಿತ್ರ ಹಿಂದೂ ಧರ್ಮಗ್ರಂಥಗಳಿಗೆ ವಿರುದ್ಧವಾಗಿ ನಡೆಸಲಾಗುತ್ತಿದೆ. ದೇವಾಲಯದ ನಿರ್ಮಾಣವು ಅಪೂರ್ಣವಾಗಿರುವುದರಿಂದ ಇದು ಶಾಸ್ತ್ರಗಳಿಗೆ ವಿರುದ್ಧವಾಗುತ್ತದೆ ಎಂದು ಮಠದ ಅಧಿಕೃತ ಸೋಶಿಯಲ್ ಮೀಡಿಯಾ ʼಎಕ್ಸ್ʼನ ಖಾತೆಯಲ್ಲಿ ವೀಡಿಯೊ ಮೂಲಕ ಅವರು ಹೇಳಿದ್ದಾರೆ.
ನಾಲ್ಕು ಜ್ಯೋತಿರ್ಮಠಗಳು 8ನೇ ಶತಮಾನದ ಹಿಂದೂ ಆಚಾರ್ಯ ಆದಿಶಂಕರರಿಂದ ಸ್ಥಾಪಿಸಲ್ಪಟ್ಟವುಗಳಾಗಿವೆ. ಹಿಂದೂ ಧರ್ಮದ ಅದ್ವೈತ ವೇದಾಂತ ಸಂಪ್ರದಾಯದ ಪ್ರಮುಖ ಭಾಗವಾಗಿ ಈ ನಾಲ್ಕು ಮಠಗಳಿವೆ. ಈಗಾಗಲೇ ಉತ್ತರಾಖಂಡದ ಜೋಶಿಮಠದ ಜ್ಯೋತಿರ್ಮಠ, ಪುರಿಯ ಗೋವರ್ಧನ ಮಠದ ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೆರಡು ಮಠಗಳೆಂದರೆ ಕರ್ನಾಟಕದ ಶೃಂಗೇರಿಯ ಶ್ರೀ ಶಾರದಾ ಪೀಠ, ಗುಜರಾತಿನ ದ್ವಾರಕಾ ಶಾರದಾ ಪೀಠ. ಈ ಮಠಗಳು ಹಾಗೂ ಪರಂಪರೆಯು ಶ್ರೀ ಆದಿಶಂಕರರ ಚಿಂತನೆಯಿಂದ ಪ್ರಭಾವಿತವಾಗಿವೆ. ಶೈವ ಹಿನ್ನೆಲೆಯಿದ್ದರೂ ಈ ಮಠಗಳು ರಾಮ, ಕೃಷ್ಣ ಮುಂತಾದ ವಿಷ್ಣುವಿನ ಅವತಾರಗಳನ್ನೂ ಆರಾಧಿಸುತ್ತವೆ.
22 जनवरी के प्रतिष्ठा के पूर्व रामानन्द सम्प्रदाय को मन्दिर सौंपे रामजन्मभूमि तीर्थ क्षेत्र ट्रस्ट –
— 1008.Guru (@jyotirmathah) January 9, 2024
रामजन्मभूमि तीर्थ क्षेत्र ट्रस्ट के महासचिव चंपतराय जी के इस बयान पर पूज्यपाद ज्योतिष्पीठाधीश्वर जगद्गुरु शंकराचार्य स्वामिश्रीः अविमुक्तेश्वरानंदः सरस्वती '१००८' की प्रतिक्रिया… pic.twitter.com/h0IqLN8wFe
ಜ್ಯೋತಿರ್ಮಠದ 46ನೇ ಶಂಕರಾಚಾರ್ಯರಾದ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ತಮ್ಮ ವೀಡಿಯೊದಲ್ಲಿ, “ನಾಲ್ಕು ಶಂಕರಾಚಾರ್ಯರ ನಿರ್ಧಾರವನ್ನು ʼಮೋದಿ ವಿರೋಧಿʼ ಎಂದು ಅರ್ಥೈಸಬಾರದು ಎಂದಿದ್ದಾರೆ. ತಾವು ಶಾಸ್ತ್ರ ವಿರೋಧಿ ಆಗಲು ಬಯಸದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
“ನಾವು ಹೋಗದಿರಲು ಕಾರಣವೇನು? ಯಾವುದೇ ದ್ವೇಷದಿಂದಲ್ಲ. ಆದರೆ ಶಾಸ್ತ್ರ-ವಿಧಿಯನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವುದು ಶಂಕರಾಚಾರ್ಯರ ಕರ್ತವ್ಯವಾಗಿದೆ. ಇಲ್ಲಿ ಶಾಸ್ತ್ರ-ವಿಧಿಯನ್ನು ಕಡೆಗಣಿಸಲಾಗುತ್ತಿದೆ. ದೇವಾಲಯವು ಇನ್ನೂ ಅಪೂರ್ಣವಾಗಿರುವಾಗ ಪ್ರಾಣ ಪ್ರತಿಷ್ಠಾ (ಅಭಿಷೇಕ) ಮಾಡುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಮತ್ತು ನಾವು ಇದನ್ನು ಹೇಳಿದರೆ, ನಮ್ಮನ್ನು ʼಮೋದಿ ವಿರೋಧಿ’ ಎಂದು ಕರೆಯಲಾಗುತ್ತದೆ. ಇಲ್ಲಿ ಮೋದಿ ವಿರೋಧಿ ಎಂದರೇನು?” ಎಂದು ಅವರು ಪ್ರಶ್ನಿಸಿದ್ದಾರೆ.
ಪುರಿಯ ಗೋವರ್ಧನ ಮಠದ ಮುಖ್ಯಸ್ಥ ನಿಶ್ಚಲಾನಂದ ಸರಸ್ವತಿ (Swami Shree Nishchalanand Saraswati) ಅವರು “ತಮ್ಮ ಸ್ಥಾನದ ಘನತೆಯ ಬಗ್ಗೆ ಜಾಗೃತರಾಗಿರುವ ಕಾರಣ” ಸಮಾರಂಭದಿಂದ ಹೊರಗುಳಿಯುವುದಾಗಿ ಘೋಷಿಸಿದ ದಿನಗಳ ನಂತರ ಪುರಿ ಶ್ರೀಗಳ ಈ ಹೇಳಿಕೆ ಬಂದಿವೆ. “ನಾನು ಅಲ್ಲಿ ಹೋಗಿ ಏನು ಮಾಡಬೇಕು? ಮೋದಿಜಿ ಉದ್ಘಾಟಿಸಿ ಮೂರ್ತಿ ಮುಟ್ಟಿಸುವಾಗ ನಾನು ಅಲ್ಲಿ ನಿಂತು ಚಪ್ಪಾಳೆ ತಟ್ಟಬೇಕೆ? ನನಗೆ ಸ್ಥಾನಮಾನ ಬೇಡ. ನಾನು ಈಗಾಗಲೇ ದೊಡ್ಡ ಸ್ಥಾನ ಹೊಂದಿದ್ದೇನೆ. ನನಗೆ ಸ್ಥಾನಮಾನ ಅಗತ್ಯವಿಲ್ಲ. ಆದರೆ ಶಂಕರಾಚಾರ್ಯರು ಅಲ್ಲಿ ಹೋಗಿ ಏನು ಮಾಡಬೇಕು?” ಎಂದು ನಾಗಾಲ್ಯಾಂಡ್ ಕಾಂಗ್ರೆಸ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಗೋವರ್ಧನ ಮಠದ ಶ್ರೀಗಳು ಪ್ರಶ್ನಿಸಿದ್ದಾರೆ.
Modi Ji will inaugurate, touch the idol, and I will applaud there with a resounding victory chant…
— Nagaland Youth Congress (@IYCNagaland) January 3, 2024
– The supreme spiritual leader of Hinduism, the head of Govardhan Math Puri, 'Shankaracharya' Swami Shri Nishchalanand Saraswati Ji Maharaj pic.twitter.com/61HPm0HzCM
“ಮೋದಿ ಅವರು ಧಾರ್ಮಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ” ಎಂದು ಆರೋಪಿಸಿದ ಗೋವರ್ಧನ ಮಠದ ಶ್ರೀಗಳು, “ಆದರೆ ಅಯೋಧ್ಯೆಯ ಬಗ್ಗೆ ತಮಗೆ ಯಾವುದೇ ದ್ವೇಷವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. “ಇದು ಅಹಂಕಾರವಲ್ಲ. ಆದರೆ ನನ್ನ ಸ್ಥಾನದ ಘನತೆಯ ಬಗ್ಗೆ ನನಗೆ ಅರಿವಿದೆ. ಅದಕ್ಕಾಗಿಯೇ ನಾನು ಹೋಗುತ್ತಿಲ್ಲ. ನಾನು ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋಗಬಹುದು ಎಂದು ನನಗೆ ಆಮಂತ್ರಣ ಬಂದಿದೆ. ನಾನು ಒಬ್ಬನೇ ವ್ಯಕ್ತಿಯನ್ನು ಏಕೆ ಕರೆದುಕೊಂಡು ಹೋಗಬೇಕು?” ಎಂದು ಅವರು ಕೇಳಿದ್ದಾರೆ.
ಅಯೋಧ್ಯೆ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಗಾಗಿ ಸ್ಥಾಪಿಸಲಾದ ಟ್ರಸ್ಟ್‌ನ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಮ್ಮ ಒಂದು ಹೇಳಿಕೆಯಲ್ಲಿ “ರಾಮ ಮಂದಿರವು ವೈಷ್ಣವ ಪಂಥವಾದ ರಮಾನಂದ ಸಂಪ್ರದಾಯಕ್ಕೆ ಸೇರಿದ್ದು. ಸನ್ಯಾಸಿಗಳಿಗೆ, ಶೈವ ಅಥವಾ ಶಕ್ತಿ ಪಂಥಗಳಿಗೆ ಸೇರಿದ್ದಲ್ಲ” ಎಂದು ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಅವಿಮುಕ್ತಾನಂದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಮ್ಮ ನಿರ್ಧಾರ ಈಗ ಬಹಿರಂಗಪಡಿಸುತ್ತೇವೆ. ಚಂಪತ್ ರೈ ಅವರು ಇಲ್ಲಿ ಶಂಕರಾಚಾರ್ಯರು ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಯಾಕೆಂದರೆ ಇದು ರಮಾನಂದ ಸಂಪ್ರದಾಯಕ್ಕೆ ಸೇರಿದೆ ಎಂದಿದ್ದಾರೆ. ಈ ದೇವಾಲಯ ರಮಾನಂದ ಪಂಗಡಕ್ಕೆ ಸೇರಿದ್ದರೆ, ಚಂಪತ್ ರೈ ಅಲ್ಲಿ ಏಕಿದ್ದಾರೆ? ನೃಪೇಂದ್ರ ಮಿಶ್ರಾ (ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ) ಏಕೆ ಇದ್ದಾರೆ? ರಾಜಾ ಸಾಹಬ್ (ಬಿಮ್ಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ, ಹಿಂದಿನ ಅಯೋಧ್ಯೆಯ ರಾಜಮನೆತನ ಮತ್ತು ದೇವಾಲಯದ ಟ್ರಸ್ಟಿ) ಏಕೆ ಅಲ್ಲಿದ್ದಾರೆ? ಇವರು ರಾಜೀನಾಮೆ ನೀಡಬೇಕು ಮತ್ತು ಪ್ರಾಣ ಪ್ರತಿಷ್ಠೆಯ ಮೊದಲು ರಮಾನಂದ ಸಂಪ್ರದಾಯಕ್ಕೆ ದೇವಸ್ಥಾನವನ್ನು ಹಸ್ತಾಂತರಿಸಬೇಕು” ಎಂದು ಅವರು ಹೇಳಿದ್ದಾರೆ.
ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಪ್ರಕಾರ, ಧಾರ್ಮಿಕ ವ್ಯಕ್ತಿಗಳನ್ನು ಉದ್ದೇಶಪೂರ್ವಕವಾಗಿ ಬದಿಗಿಟ್ಟು, ಈ ಕಾರ್ಯಕ್ರಮವನ್ನು ರಾಜಕೀಯಗೊಳಿಸಲಾಗಿದೆ. “ಅವರು ದೇಣಿಗೆ ತೆಗೆದುಕೊಳ್ಳುವಾಗ ದೇವಾಲಯವು ರಮಾನಂದ ಸಂಪ್ರದಾಯಕ್ಕೆ ಸೇರಿದ್ದು ಎಂದು ಏಕೆ ಘೋಷಿಸಲಿಲ್ಲ? ಆ ಸಮಯದಲ್ಲಿ ನೀವು ದೇಶಾದ್ಯಂತ ಇರುವ ಸನಾತನ ಧರ್ಮಿಗಳಿಂದ ದೇಣಿಗೆ ತೆಗೆದುಕೊಂಡಿದ್ದೀರಿ. ನೀವು ನಮ್ಮಿಂದಲೂ ದೇಣಿಗೆ ತೆಗೆದುಕೊಂಡಿದ್ದೀರಿ. ದೇವಾಲಯವು ಶಂಕರಾಚಾರ್ಯರಿಗೆ ಸೇರದಿರುವಾಗ, ನೀವು ನಮ್ಮಿಂದ ದೇಣಿಗೆಯನ್ನು ಏಕೆ ಸ್ವೀಕರಿಸಿದ್ದೀರಿ?” ಎಂದು ಅವರು ಪ್ರಶ್ನಿಸಿದ್ದಾರೆ.
“ಹಿಂದೆ ನಿರ್ಮೋಹಿ ಅಖಾಡದವರು ಅಲ್ಲಿ ಪೂಜೆ ಮಾಡುತ್ತಿದ್ದರು. ಆ ಜವಾಬ್ದಾರಿಯನ್ನು ಅವರಿಗೇ ನೀಡಬೇಕು. ನೀವು ಹೆಚ್ಚಿನ ಅರ್ಚಕರನ್ನು ಏಕೆ ನೇಮಿಸಿಕೊಳ್ಳುತ್ತಿದ್ದೀರಿ? ನೀವು ಪೂಜೆಯನ್ನು ನಿರ್ಮೋಹಿ ಅಖಾಡಕ್ಕೆ ಮತ್ತು ದೇವಾಲಯದ ವ್ಯವಸ್ಥೆಯನ್ನು ರಮಾನಂದ ಸಂಪ್ರದಾಯಕ್ಕೆ ಒಪ್ಪಿಸಿ. ಅದನ್ನು ನಾವು ಒಪ್ಪುತ್ತೇವೆ. ನಾಲ್ಕೂ ಶಂಕರಾಚಾರ್ಯರಿಗೆ ಇದರಿಂದ) ಸಂತೋಷವಾಗುತ್ತದೆ” ಎಂದಿದ್ದಾರೆ.
ಇದನ್ನೂ ಓದಿ: Ram Janmabhoomi: ಅಯೋಧ್ಯೆ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ, ಖರ್ಗೆ ಹೋಗದಿರುವುದೇ ಸರಿ: ಸಿಎಂ