:: ಹಾಶಿಂ ಬನ್ನೂರು
ಮುಸ್ಲಿಮರು (Muslim) ಆಚರಿಸುವ ಹಬ್ಬಗಳ ಪೈಕಿ ಈದುಲ್ ಅಝ್ಹಾ (Eid UL Adha- Bakrid 2024) ಹಬ್ಬವು ಒಂದು. ಇದು ಬಹಳ ವಿಶೇಷತೆಯನ್ನು ಹೊಂದಿದೆ. ಜಾಗತಿಕ ವಲಯದಲ್ಲಿ ಸರ್ವ ಮುಸಲ್ಮಾನರು ಎಲ್ಲಾ ಹಬ್ಬಗಳ ಹಾಗೆ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಇದು ತ್ಯಾಗ ಮತ್ತು ಬಲಿದಾನ ಸಾವಿರಾರು ಹಿಂದಿನ ಐತಿಹಾಸಿಕ ಚಾರಿತ್ರಿಕ ಘಟನೆಯನ್ನು ಸ್ಮರಿಸುವ ಹಬ್ಬ. ಈ ಕುರಿತಾದ ಚರಿತ್ರೆಗಳು ಮತ್ತು ನೈಜ ಘಟನೆಗಳು ಖುರ್ ಆನ್ (Quran) ಹಾಗೂ ಇಸ್ಲಾಮಿನ ಧಾರ್ಮಿಕ ಗ್ರಂಥದಲ್ಲಿ ಪುರಾವೆ ಸಮೇತ ಉಲ್ಲೇಖವಿದೆ.
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಅರೇಬಿಕ್ ತಿಂಗಳ ಕೊನೇಯ ತಿಂಗಳ ಝುಲ್ ಹಿಜ್ಜ ಬಹಳ ಪವಿತ್ರ ತಿಂಗಳು. ಆರೋಗ್ಯ, ಸಂಪತ್ತು, ಸೌಕರ್ಯ ಹೊಂದಿ ಜವಾಬ್ದಾರಿ ಮುಕ್ತನಾಗಿರುವ ಮುಸ್ಲಿಂ ವ್ಯಕ್ತಿಯ ಮೇಲೆ ಇಸ್ಲಾಮಿನ ಐದು ಪಂಚ ಕರ್ಮಗಳಲ್ಲಿ ಒಂದಾದ ಹಜ್ ಕಡ್ಡಾಯವಾಗಿದೆ. ಅದರ ನಿರ್ವಹಣೆಗಿರುವ ಸಮಯ ಮತ್ತು ತಿಂಗಳು ಇದೇ ಝುಲ್ ಹಜ್ ಆಗಿರುತ್ತದೆ.
ಆಧ್ಯಾತ್ಮಿಕ ಶುದ್ಧೀಕರಣದೊಂದಿಗೆ ಮೆಕ್ಕಾದಲ್ಲಿರುವ ಪವಿತ್ರ್ ಭವನ ಕಅಬಾಗೆ ತೆರಳಿ ಕಅಬಾ ಭವನಕ್ಕೆ ಪ್ರದಕ್ಷಿಣೆ, ಸಫಾ ಮರ್ವಾ ಬೆಟ್ಟಗಳ ಮಧ್ಯೆ ನಡೆಯುವುದು, ಮಿನಾದಲ್ಲಿ ತಂಗುವುದು, ಅರಫಾ ಮೈದಾನಕ್ಕೆ ತೆರಳುವುದು, ಮುಝ್ದಲಿಫಾದಲ್ಲಿ ಇರುವುದು, ಜಮ್ರಾದಲ್ಲಿ ಕಲ್ಲೆಸೆಯುವುದು, ಮತ್ತೆ ಮಿನಾದಲ್ಲಿ ತಂಗಿ ಬಲಿ ನೀಡುವುದು ಈ ರೀತಿ ಕೆಲವೊಂದು ಕರ್ಮಗಳನ್ನು ಒಳಗೊಂಡ ಮಕ್ಕಾ ಪುಣ್ಯ ಯಾತ್ರೆಗೆ ಹಜ್ ಎಂದು ಕರೆಯುತ್ತೇವೆ. ಹಜ್ ನಂತೆಯೇ ಉಮ್ರಾ ಕೂಡ ಇದೇ ಕರ್ಮಗಳನ್ನು ಒಳಗೊಂಡಿವೆ. ಆದರೆ ಹಜ್ ವರ್ಷಕ್ಕೆ ಒಂದು ಬಾರಿ ಝುಲ್ ಹಿಜ್ಜ ತಿಂಗಳಲ್ಲಿ ಮಾತ್ರ. ಉಮ್ರಾ ವರ್ಷದ ಎಲ್ಲಾ ದಿನವು ಮಾಡಬಹುದಾಗಿದೆ.
ಧರ್ಮ ಪ್ರಚಾರ
ಇಸ್ಲಾಂ ದರ್ಮದ ಪ್ರಚಾರಕರಾಗಿ ಆಯುಕ್ತರಾಗಿದ್ದ ಒಂದು ಲಕ್ಷಕ್ಕಿಂತಲೂ ಅಧಿಕ ಪ್ರವಾದಿಗಳ ಪೈಕಿ ಅಲ್ಲಾಹನ ಇಷ್ಟ ದಾಸರಾಗಿ ವಿಶೇಷ ಸ್ಥಾನಮಾನ ಪಡೆದ ಮಹಾನರಾಗಿದ್ದರು ಹಜ್ರತ್ ಇಬ್ರಾಹಿಮ್ ಅಲೈಹಿಸ್ಸಲಾಮ್, ಅವರು ಪ್ರವಾದಿಯಾದ ಬಳಿಕ, ಧರ್ಮ ಪ್ರಚಾರಕ್ಕಿಳಿಯುತ್ತಾರೆ. ಈ ವೇಳೆ ದೇವರು ಇಬ್ರಾಹಿಮ್ ಅವರನ್ನು ಹಲವಾರು ಪರೀಕ್ಷೆಗಳಿಗೆ ಒಳಪಡಿಸುತ್ತಾನೆ. ಏಕದೇವ ವಿಶ್ವಾಸದ ಅನುಷ್ಠಾನಕ್ಕಾಗಿ ಸ್ವಂತ ಹೆತ್ತವರು, ಕುಟುಂಬ, ಮನೆ, ಆಸ್ತಿ, ಊರು ಎಲ್ಲವನ್ನೂ ತ್ಯಾಗ ಮಾಡಿ ದೇಶಾಂತರ ಹೊರಟು, ಸಂತಾನ ಭಾಗ್ಯ ಇಲ್ಲದೆ ಕೊರಗುತ್ತಿದ್ದ ಪ್ರವಾದಿ ಇಬ್ರಾಹಿಂ ಮತ್ತು ಹಾಜರ ಬೀವಿ ಅವರಿಗೆ ಪವಾಡದಂತೆ ವೃದ್ಧಾಪ್ಯದಲ್ಲಿ ಲಭಿಸಿದ ಗಂಡು ಮಗು ಇಸ್ಮಾಯಿಲ್ ಸ್ವಂತ ಮಗನನ್ನೂ ದೇವರ ಆದೇಶದಂತೆ ಬಲಿ ಕೊಡಲು ಮುಂದಾಗುತ್ತಾರೆ. ನಿರ್ಜಲ, ನಿರ್ಜನ ಮರುಭೂಮಿಯಲ್ಲಿ ಪುಟ್ಟ ಮಗುವನ್ನು ಮಡದಿಯನ್ನು ಏಕಾಂಗಿಯಾಗಿ ಬಿಟ್ಟು ಬಿಡುತ್ತಾರೆ.
ಅಲ್ಲಾಹನ ಎಲ್ಲಾ ಆಜ್ಞೆಗಳನ್ನು ಈಡೇರಿಸಿ ಪರೀಕ್ಷೆಗಳನ್ನು ಎದುರಿಸಿ ದೇವ ಪ್ರೀತಿಗೆ ಪಾತ್ರರಾಗಿ ಪ್ರವಾದಿ ಇಬ್ರಾಹಿಂ ಮತ್ತು ಮಡದಿ ಹಾಜರ ಮಗ ಇಸ್ಮಾಯಿಲ್ ತ್ಯಾಗ ಮತ್ತು ಅಛಲ ವಿಶ್ವಾಸ ಸ್ನೇಹ ನಂಬಿಕೆಯ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಪ್ರವಾದಿ ಇಬ್ರಾಹಿಂ ಅವರ ನಂತರ ತಮ್ಮ ಮಗ ಇಸ್ಮಾಯಿಲ್ ಪ್ರವಾದಿ ಪಟ್ಟವನ್ನು ಸ್ವೀಕರಿಸುತ್ತಾರೆ. ಹಝ್ರತ್ ಇಬ್ರಾಹಿಂ ಅವರಿಗೆ ಖಲೀಲುಲ್ಲಾಹ್ ಅಲ್ಲಾಹನ ಸ್ನೇಹಿತ ಎಂಬ ಗೌರವ ಪದವಿಯನ್ನು ನೀಡಿ ಗೌರವಿಸುತ್ತಾನೆ. ಪ್ರವಾದಿ ಇಬ್ರಾಹಿಂ ಅವರ ಜೀವನ ಬದುಕು ಇತಿಹಾಸವನ್ನು ನೆನಪಿಸುವುದೇ ಹಜ್ ಬಕ್ರೀದ್ ಆಚರಣೆಯ ಉದ್ದೇಶ.
ಇದನ್ನೂ ಓದಿ:Govt Holidays : 2024ರಲ್ಲಿ ಸರ್ಕಾರಿ ನೌಕರರಿಗೆ ಭರ್ಜರಿ ರಜೆ; ಇಲ್ಲಿದೆ ಸರ್ಕಾರಿ ರಜೆಗಳ ಪಟ್ಟಿ