ಬಸವಣ್ಣನವರು ಕವಿ, ತತ್ವಜ್ಞಾನಿ, ಸಮಾಜ ಸುಧಾರಕ ಎಲ್ಲವೂ ಹೌದು. ಹುಟ್ಟಿ ಬೆಳೆದು ಸಾಧಿಸಿದ್ದೆಲ್ಲ 12ನೇ ಶತಮಾನದಲ್ಲಿ. ಆದರೆ ಅವರ ವಚನಗಳು ಇಂದಿಗೂ ಆದರ್ಶ. ಅವರು ನೀಡಿದ ಮಾರ್ಗದರ್ಶನ ಇಂದಿಗೂ ಅನುಸರಣೀಯ. ಕಲಚೂರ್ಯರ ಬಿಜ್ಜಳ ರಾಜನ ಆಸ್ಥಾನದಲ್ಲಿ ಮಹಾಮಂತ್ರಿಯಾಗಿದ್ದ ಅವರು ಕಲಿಯೂ ಹೌದು, ಕವಿಯೂ ಹೌದು. ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ಅವರು ಜಂಗಮ ಚಳವಳಿಯ ನೇತಾರರಾದರು. ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ಧರಾಮ, ಚನ್ನಬಸವಣ್ಣ ಮುಂತಾದವರು ಬಸವಣ್ಣನವರಿಗೆ ಈ ಕಾಯಕದಲ್ಲಿ ಸಾಂಗತ್ಯ ನೀಡಿದರು.
ಆಗಿನ ಕಾಲದಲ್ಲಿ ಸಾಮಾನ್ಯವಾಗಿದ್ದ ಜಾತಿ ತಾರತಮ್ಯ, ಢಾಂಬಿಕ ಭಕ್ತಿ ಎಲ್ಲದರ ವಿರುದ್ಧ ತಿರುಗಿ ಬಿದ್ದ ಬಸವಣ್ಣ, ತಮ್ಮದೇ ಆದ ರೀತಿಯಲ್ಲಿ ದಮನಕ್ಕೊಳಗಾದವರ ಧ್ವನಿಯಾಗಿ ನಿಂತರು. ಇಷ್ಟಲಿಂಗ ಮೂರ್ತಿಯ ಪರಿಕಲ್ಪನೆಯನ್ನು ನೀಡಿ ದೇವರನ್ನು ಎಲ್ಲರ ಕರಸ್ಥಲಕ್ಕೆ ತಂದರು. ಕಾಯಕವೇ ಕೈಲಾಸ ಎಂದು ಹೇಳಿ, ಎಲ್ಲರಲ್ಲೂ ದುಡಿಯುವ ಛಲ ಹುಟ್ಟು ಹಾಕಿದರು. ಅನುಭವ ಮಂಟಪ ಸ್ಥಾಪಿಸಿ, ಅದರಲ್ಲಿ ಎಲ್ಲರೂ ವಿಚಾರ ವಿನಿಮಯ ಮಾಡಲು ವೇದಿಕೆ ಕಲ್ಪಿಸಿದರು. ಕೆಳ ಜಾತಿಗಳಿಂದಲೂ ಬಂದ ಶರಣರು ಇಲ್ಲಿ ತಮ್ಮ ಚಿಂತನೆಗಳನ್ನು ಮಂಡಿಸಿ ಮನುಕುಲಕ್ಕೆ ಆದರ್ಶರೆನಿಸಿದರು.
1105ರಲ್ಲಿ ಜನಿಸಿದ ಬಸವೇಶ್ವರರು ಧರ್ಮ, ಸಮಾಜ, ತತ್ವಜ್ಞಾನ, ಸಾಹಿತ್ಯ, ರಾಜಕೀಯದಲ್ಲಿ ಕೈಗೊಂಡ ಎಲ್ಲ ಕಾರ್ಯಗಳೂ ಕ್ರಾಂತಿಕಾರಿ. ಲಿಂಗಾಯತ ಧರ್ಮದ ಮೂಲಪುರುಷರಾದ ಬಸವೇಶ್ವರರು ಕರ್ನಾಟಕದ ಬಸವಕಲ್ಯಾಣ ಮತ್ತು ಶ್ರವಣಬೆಳಗೊಳದಲ್ಲಿ ಅದನ್ನು ಪಸರಿಸಿದರು. ಲಿಂಗಾಯತ ಸಮುದಾಯವು ಬಸವೇಶ್ವರರನ್ನು ಶಿವನ ವಾಹನ ನಂದಿಯ ಮಾನವ ಅವತಾರ ಎಂದೇ ನಂಬುತ್ತದೆ.
ಉಳ್ಳವರು ಶಿವಾಲಯ ಮಾಡುವರು,
ನಾನೇನ ಮಾಡುವೆ ಬಡವನಯ್ಯಾ,
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ,
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ
ಎನ್ನುವ ಮೂಲಕ ಬಸವಣ್ಣನವರು ತಮ್ಮ ಸರ್ವವೂ ಕಾಯಕ ಹಾಗೂ ಭಕ್ತಿಗೆ ಮೀಸಲು ಎಂದು ಸಾರಿದರು. ಇದೇ ಪರಮ ಮುಕ್ತಿಯ ಸೋಪಾನ ಎಂದರು. ಉಳ್ಳವರ ಭಕ್ತಿಯ ಪೊಳ್ಳುತನವನ್ನು ವಿಡಂಬಿಸಿದರು.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದೊದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ
ಎನ್ನುವಲ್ಲಿ ಬಸವಣ್ಣನವರು ಹೊಂದಿದ್ದ ನಿರ್ಗುಣ ನಿರಾಕಾರ ಭಗವಂತನ ಪರಿಕಲ್ಪನೆ, ಪುರಾಣೋಪನಿಷತ್ತುಗಳು ಪರಿಕಲ್ಪಿಸಿದ ಮಹಾ ಭಗವತ್ ಕಲ್ಪನೆಯ ಬಗ್ಗೆ ಅವರಿಗೆ ಇದ್ದ ಒಲವು ವ್ಯಕ್ತವಾಗುತ್ತದೆ.
ನೀರ ಕಂಡಲ್ಲಿ ಮುಳುಗುವರಯ್ಯಾ,
ಮರನ ಕಂಡಲ್ಲಿ ಸುತ್ತುವರಯ್ಯಾ,
ಬತ್ತುವ ಜಲವ,ಒಣಗುವ ಮರನ
ಮಚ್ಚಿದವರು ನಿಮ್ಮನೆತ್ತ ಬಲ್ಲರು?
ಕೂಡಲಸಂಗಮದೇವಾ- ಎಂದು ಡಾಂಭಿಕ ಭಕ್ತಿ ತೋರುವವರನ್ನು ವಿಡಂಬಿಸಿದರು.
ಶರಣರ ಗುಣ ಹೇಗಿರಬೇಕು ಎಂಬುದನ್ನು ಅವರು ಮಾರ್ಮಿಕವಾಗಿ ವ್ಯಕ್ತಪಡಿಸಿರುವುದು ಹೀಗೆ:
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,
ಛಲಬೇಕು ಶರಣಂಗೆ ಲಿಂಗ ಜಂಗಮವನೊಂದೆಂಬ,
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.
ಇದನ್ನೂ ಓದಿ: ದಾನದ ಮಹತ್ವ ಎತ್ತಿ ಹಿಡಿಯುವ ರಂಜಾನ್