ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ವ್ರತ ಎಂದರೆ ನಿಷ್ಠೆ ಎಂದು ಅರ್ಥ. ದೇವತೆಗಳಲ್ಲಿ ನಾವು ತೋರಿಸುವ ಭಕ್ತಿ ಗೌರವಗಳು ವ್ರತದ ಮೂಲಕ ಪೂಜಾರೂಪದಲ್ಲಿ ಆಚರಿಸಲ್ಪಡುತ್ತವೆ. ಪ್ರತಿ ವ್ರತದಲ್ಲಿ ಆಚರಣೆಗೆ ಪೂರ್ವಸಿದ್ಧತೆ ಆವಶ್ಯಕವಾಗಿರುತ್ತದೆ. ಕಾಲಕ್ಕೆ ತಕ್ಕಂತೆ ಪೂಜಾದ್ರವ್ಯಗಳನ್ನು ಬಳಸಿಕೊಂಡು ಕೆಲವು ವಿಶಿಷ್ಟ ನಿಯಮಗಳನ್ನು ಪಾಲಿಸಿ ವ್ರತಗಳನ್ನು ಮಾಡಬೇಕಾಗುತ್ತದೆ.
ನಮ್ಮ ಸನಾತನ ಹಿಂದೂಸಂಪ್ರದಾಯದಲ್ಲಿ ದೇವರು-ದೇವತೆಗಳ ಪೂಜೆ ಅಷ್ಟೇ ಅಲ್ಲದೇ ಪವಿತ್ರವಾದ ಕೆಲವು ಸಂಬಂಧಗಳನ್ನು ಪೂಜೆಮಾಡುವ ಮೂಲಕ ಆ ಸಂಬಂಧಗಳನ್ನು ಗೌರವಿಸುವ ಸಂಪ್ರದಾಯವು ಆಚರಣೆಯಲ್ಲಿದೆ. ಭಾರತೀಯ ಸಂಪ್ರದಾಯದಲ್ಲಿ ಪತಿಯನ್ನು ದೇವರೆಂದು ಭಾವಿಸಿ, ಪೂಜಿಸುವ ಸಂಪ್ರದಾಯಗಳು ಬಹಳ ಪುರಾತನ ಕಾಲದಿಂದಲೂ ಇದೆ. ಪತಿಯ ಆಯು, ಆರೋಗ್ಯವೃದ್ಧಿಯಾಗಬೇಕು, ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಸಿಗಬೇಕೆಂದು ಪ್ರಾರ್ಥಿಸಿ ಅನೇಕ ವ್ರತಗಳನ್ನು ಮಾಡುವ ಸಂಪ್ರದಾಯ ಬಂದಿದೆ.
ವಟ ಸಾವಿತ್ರಿ ಪೂಜೆ, ಮಂಗಳಗೌರೀ ಪೂಜೆ, ಗೌರೀಹರ ಪೂಜೆ ಹಾಗೆಯೇ ಈ ಭೀಮನ ಅಮಾವಾಸ್ಯೆಯು ಒಂದು. ಸ್ತ್ರೀಯರಿಗೆ ಕುಂಕುಮವೇ ಅಮೂಲ್ಯವಾದ ಆಭರಣ. ಪತಿಯ ಸಕಲ ಆಪತ್ತುಗಳೆಲ್ಲ ಕಳೆದು ದೀರ್ಘಾಯುಷ್ಯವನ್ನು ಹೊಂದಲಿ ಎಂದು ಉಮಾ-ಮಹೇಶ್ವರರಲ್ಲಿ ಪ್ರಾರ್ಥಿಸಿ ವಿಧಾನ ಪೂರ್ವಕವಾಗಿ ಪೂಜಿಸುವುದೇ ಈ ಭೀಮನ ಅಮಾವಾಸ್ಯೆ. ಉದ್ದೇಶ್ಯ ಒಂದೇ ಆದರೂ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನತೆ ಕಂಡುಬರುತ್ತದೆ. ಹಾಗೆಯೇ ಆಚರಣೆಯಲ್ಲಿಯೂ ವೈವಿಧ್ಯತೆಯನ್ನು ಕಾಣಬಹುದು.
ಉತ್ತರ ಕರ್ನಾಟಕದಲ್ಲಿ ದಿವಶೀ ಅಮಾವಾಸ್ಯೆ ಎಂದು, ದಕ್ಷಿಣಕನ್ನಡದಲ್ಲಿ ಆಟಿ ಅಮಾವಾಸ್ಯೆ ಎಂದು, ಉತ್ತರ ಕನ್ನಡದ ಕಡೆಗೆ ಕೊಡೆ ಅಮಾವಾಸ್ಯೆ ಎಂದು, ಮೈಸೂರು ಬೆಂಗಳೂರು ಪ್ರಾಂತ್ಯದಲ್ಲಿ ಭೀಮನ ಅಮಾವಾಸ್ಯೆ (Bheemana Amavasya) ಮತ್ತು ಪತಿಸಂಜೀವಿನೀವ್ರತ ಎಂದು ಹೀಗೆ ಅನೇಕ ಹೆಸರುಗಳಿಂದ ಈ ವ್ರತ ಪ್ರಸಿದ್ಧಿಪಡೆದಿದೆ.
ಈ ವ್ರತವನ್ನು ವಿವಾಹಿತರಷ್ಟೇ ಅಲ್ಲದೆ ಅವಿವಾಹಿತ ಕನ್ಯೆಯರೂ ಆಚರಿಸುವ ಪದ್ಧತಿಯುಂಟು. ವಿವಾಹಿತ ಹೆಣ್ಣುಮಗಳು ತನ್ನ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರೆ, ಅವಿವಾಹಿತ ಕನ್ಯೆಯರು ಸದ್ಗುಣಿಯಾದ ಪತಿದೊರೆಯಲಿ ದಾಂಪತ್ಯಜೀವನ ಗೌರೀಹರರಂತೆ ಇರಲಿ ಎಂದು ಪ್ರಾರ್ಥಿಸುತ್ತಾರೆ.
ವ್ರತದ ಹಿನ್ನೆಲೆ ಏನು?
ಹಿಂದೊಮ್ಮೆ ಋಷಿಗಳೆಲ್ಲರು ಸೂತರನ್ನು ಕೇಳಿದರು. “ಸರ್ವಶಾಸ್ತ್ರಗಳನ್ನು ಬಲ್ಲ ಮಹಾನುಭಾರವರಾದ ಸೂತರೆ ನಾರಿಯ ದೀರ್ಘಸೌಮಂಗಲ್ಯಕ್ಕಾಗಿ ಯಾವ ವ್ರತವನ್ನು ಆಚರಿಸಬೇಕುʼʼ ಎಂದು. ಅದಕ್ಕೆ ಸೂತರು ಭೀಮನ ಅಮಾವಾಸ್ಯೆ ಎಂಬ ಒಂದು ಪವಿತ್ರವಾದ ವ್ರತವನ್ನು ಉಪದೇಶಿಸಿದರು. ಇದನ್ನು ಆಷಾಢ ಕೃಷ್ಣ ಅಮಾವಾಸ್ಯೆಯಂದು ಹೆಣ್ಣುಮಕ್ಕಳು ತಮ್ಮ ದೀರ್ಘಸೌಮಾಂಗಲ್ಯಕ್ಕಾಗಿ ಆಚರಿಸಬೇಕು. ಹಾಗೆಯೇ ಅದರ ಹಿನ್ನೆಲೆಯನ್ನು ವಿವರಿಸುತ್ತ ಸೂತರು ಕಥೆಯೊಂದನ್ನು ಹೇಳುತ್ತಾರೆ. ಈ ಕಥೆ ಹೀಗಿದೆ;
ಹಿಂದೆ ಸೌರಾಷ್ಟ್ರದೇಶದಲ್ಲಿ ವಜ್ರಬಾಹು ಎಂಬ ರಾಜನಿದ್ದ. ಪರಮ ಧಾರ್ಮಿಕನು, ಪ್ರಜಾಪಾಲನಾತತ್ಪರನೂ ಆದ ಆ ರಾಜನಿಗೆ ಸರ್ವಶಾಸ್ತ್ರಸಂಪನ್ನನು, ಶತ್ರುನಿಗ್ರಹನಿಸ್ಸೀಮನೂ ಮತ್ತು ಅತಿಸುಂದರನಾದ ವಿಜಯಶೇಖರನೆಂಬ ಮಗನಿದ್ದನು. ವಿಜಯಶೇಖರನು ದುರ್ದೈವವಶಾತ್ ಅಕಾಲಮರಣವನ್ನು ಹೊಂದಿದನು. ದುಃಖದಿಂದ ಬಳಲಿದ ತಂದೆ-ತಾಯಿಗಳು ತಾರುಣ್ಯಕ್ಕೆ ಕಾಲಿಟ್ಟ ಮಗನ ವಿವಾಹವನ್ನೂ ನೋಡಲಿಲ್ಲ ಎಂದು ಪರಿತಪಿಸಿದರು. ಆಗ ಮಗನ ಮೃತದೇಹಕ್ಕೆ ವಿವಾಹ ಮಾಡೋಣ ಎಂದು ಯೋಚಿಸಿದರು. ಯಾರು ನಮ್ಮ ಮಗನ ಮೃತದೇಹದೊಂದಿಗೆ ವಿವಾಹವಾಗುತ್ತಾರೆ ಅವರಿಗೆ ಒಂದು ಲಕ್ಷಚಿನ್ನದ ನಾಣ್ಯಗಳನ್ನು ಕೊಡುವುದಾಗಿ ಪಟ್ಟಣದ ತುಂಬೆಲ್ಲ ಡಂಗುರ ಸಾರುತ್ತಾರೆ.
ಇದನ್ನು ಕೇಳಿದ ಮಾಧವ ಎಂಬಾತ ತನ್ನ ಹೆಂಡಿತಿ ಸುಶೀಲೆ ಎಂಬುವಳಿಗೆ ಈ ಎಲ್ಲ ವೃತ್ತಾಂತವನ್ನು ತಿಳಿಸುತ್ತಾನೆ. ಆ ದಂಪತಿಗಳಿಗೆ ಐದುಜನ ಹೆಣ್ಣು ಮಕ್ಕಳು ಮತ್ತು ಒಂಬತ್ತು ಜನ ಗಂಡುಮಕ್ಕಳು. ತುಂಬಾ ಬಡತನ. ದಾರಿದ್ರ್ಯದಿಂದ ವ್ಯಥೆಪಡುತ್ತಿರುವ ಆ ಮಾಧವ, ನಮ್ಮ ಒಬ್ಬ ಮಗಳನ್ನು ರಾಜನ ಮಗನಿಗೆ ವಿವಾಹಮಾಡೋಣವೇ ? ಅದರಿಂದ ಬಂದ ಧನದಿಂದ ಉಳಿದವರಾದರೂ ಸುಖದಿಂದ ಬಾಳಬಹುದಲ್ಲವೇ ಎಂದು ಹೆಂಡತಿಯನ್ನು ಕೇಳಿದ. ಅದಕ್ಕೆ ಅವಳು ಕುರೂಪಿಯಾಗಲಿ ಷಂಢನಾಗಲಿ ವೃದ್ಧನೇ ಆಗಲಿ ಆದರೆ ಬದುಕಿರುವವನಿಗೆ ಮಾತ್ರ ನಮ್ಮ ಮಗಳನ್ನು ಧಾರೆ ಎರೆಯೋಣ ಎನ್ನುತ್ತಾಳೆ.
ಆದರೆ ದಾರಿದ್ರ್ಯದಿಂದ ಬೇಸತ್ತ ಮಾಧವ ತನ್ನ ಮಗಳನ್ನು ಕರೆದುಕೊಂಡು ಹೋಗಿ ರಾಜನ ಮಗನ ಮೃತದೇಹದೊಂದಿಗೆ ವಿವಾಹಮಾಡಿಸುತ್ತಾನೆ. ರಾಜನು ಸಕಲ ಮರ್ಯಾದೆ ವೈಭವಗಳಿಂದ ಸೊಸೆಯನ್ನು ಪಲ್ಲಕ್ಕಿಯಲ್ಲಿ ಕರೆತಂದು ಕೊನೆಗೆ ಸ್ಮಶಾನದಲ್ಲಿ ಮಗನ ಮೃತದೇಹದೊಂದಿಗೆ ಬಿಟ್ಟು ಹೋಗುತ್ತಾನೆ. ಸ್ಮಶಾನದಲ್ಲಿ ಗೂಬೆಗಳ ಧ್ವನಿಬಿಟ್ಟರೆ ಇನ್ನೊಂದು ಶಬ್ದವಿಲ್ಲ. ಅಲ್ಲಿಯೇ ಪತಿಯನ್ನು ಬಿಟ್ಟು ಹೋದರೆ ಪತಿವ್ರತಾಧರ್ಮ ಕೆಡುವುದೆಂಬ ಧರ್ಮಸಂಕಟ. ಏನು ಮಾಡಲಿ ಎಂದು ದುಃಖದಿಂದ ಪರಿತಪಿಸುತ್ತ ಭಕ್ತಿಯಿಂದ ಪರಮಾತ್ಮನನ್ನು ಪ್ರಾರ್ಥಿಸುತ್ತಾಳೆ.
“ಹೇ ಅನಾಥ ರಕ್ಷಕನೇ, ಮಾರ್ಕಾಂಡೇಯರನ್ನು ಬದುಕಿಸಿದಂತೆ ನನ್ನ ಪತಿಯನ್ನು ಬದುಕಿಸಿಕೊಡುʼʼ ಎಂದು ಪರಿಪರಿಯಾಗಿ ದುಃಖದಿಂದ ಪ್ರಾರ್ಥಿಸುತ್ತಾಳೆ. ಮೇಲುಧ್ವನಿಯಿಂದ ಬಹಳವಾಗಿ ರೋದಿಸುತ್ತಾಳೆ. ಆಗ ಆಕಾಶಮಾರ್ಗದಲ್ಲಿ ಸಂಚರಿಸುತ್ತಿರುವ ಶಿವಪಾರ್ವತಿಯರಿಗೆ ಅವಳ ಆರ್ತನಾದವು ಕೇಳಿಸುತ್ತದೆ. ಯಾರದೀ ಆಕ್ರಂದನ ಎಂದು ಪಾರ್ವತಿಯು ನೋಡುತ್ತಾಳೆ. ಆ ಬಾಲಿಕೆಯ ಪ್ರಕಾಶಮಾನವಾದ ತೇಜಸ್ಸು ಶಿವಪಾರ್ವತಿಯರನ್ನು ಅವಳೆಡೆಗೆ ಬರುವಂತೆ ಮಾಡುತ್ತದೆ.
ತಕ್ಷಣವೇ ಆ ಸ್ಮಶಾನದಲ್ಲಿ ಶಿವಪಾರ್ವತಿಯರು ಅವಳಿಗೆ ಪ್ರತ್ಯಕ್ಷರಾಗುತ್ತಾರೆ. ಅವರನ್ನುಕಂಡ ಆ ಬಾಲಕಿ ಸಾಷ್ಟಾಂಗವೆರಗಿ ತನ್ನ ದೀನಪರಿಸ್ಥಿತಿಯನ್ನು ತೊಡಿಕೊಳ್ಳುತ್ತಾಳೆ. ತನ್ನ ಗಂಡನನ್ನು ಹೇಗಾದರೂ ಬದುಕಿಸಬೇಕೆಂದು ಪರಿಪರಿಯಾಗಿ ಪ್ರಾರ್ಥಿಸುತ್ತಾಳೆ. ಅದಕ್ಕೆ ಈಶ್ವರನು ಕೇಳು ಮಗಳೆ ಸ್ತ್ರೀಯರಿಗೆ ದೀರ್ಘಸೌಮಂಗಲ್ಯದ ವೃದ್ಧಿಗೆ ಸಕಲ ಮಂಗಳಕರವಾದ ಪುತ್ರ-ಪೌತ್ರಾಭಿವೃದ್ಧಿಗೆ ಕಾರಣವಾದ ಒಂದು ವ್ರತವಿದೆ. ಅದನ್ನು ಹೇಳುವೆ ಭಕ್ತಿಯಿಂದ ಆ ವ್ರತವನ್ನಾಚರಿಸು. ಇಂದು ಅಮಾವಾಸ್ಯೆ ಆದ್ದರಿಂದ ಇಂದೇ ಈ ವ್ರತವನ್ನು ಆಚರಿಸು ಎಂದನು.
ಶುದ್ಧ ಸ್ನಾನಾದಿಗಳನ್ನು ಮಾಡಿ ಪೂಜೆಯ ಸ್ಥಳವನ್ನು ಶೋಧಿಸಿ ಸರ್ವತೋಭದ್ರಮಂಡಲವನ್ನು ಬರೆದು ಅಕ್ಕೆಯ ರಾಶಿಯ ಮೇಲೆ ಮಣ್ಣಿನಿಂದ ಎರಡು ದೀಪಸ್ಥಂಭಗಳನ್ನು ಮಾಡಿ ಪಾರ್ವತಿಸಮೇತನಾದ ಜ್ಯೋತಿರ್ನಾಮಕನಾದ ನನ್ನನ್ನು ಪೂಜಿಸು. ಗೋದೀಹಿಟ್ಟಿನಿಂದ ಮಾಡಿದ ಪದಾರ್ಥವನ್ನು ನಿವೇದಿಸು. ಹೀಗೆ ಮಾಡಿದಲ್ಲಿ ಸಕಲ ಇಷ್ಟಾರ್ಥವನ್ನು ಹೊಂದುವೆ ಎಂದು ಶಿವ ನುಡಿದನು. ಅಂತೆಯೇ ಆ ಬಾಲೆ ಚಾಚೂತಪ್ಪದಂತೆ ಭಾಗೀರಥಿಯಲ್ಲಿ ಮಿಂದು ಭಕ್ತಿಯಿಂದ ಆ ವ್ರತವನ್ನು ಆಚರಿಸುತ್ತಾಳೆ. ಕೊನೆಯಲ್ಲಿ ಗೋಧೀಹಿಟ್ಟಿನಿಂದ ಮಾಡಿದ ಬೇಳೆ ಭಂಡಾರವನ್ನು ನಿವೇದಿಸುತ್ತಾಳೆ.
ಅಣ್ಣತಮ್ಮಂದಿರಿದ್ದರೆ ಆ ಭಂಡಾರವನ್ನು ಒಡೆದು ಕೊಡುತ್ತಿದ್ದರು ಎಂದು ದುಃಖಿಸಿದಾಗ ಸಾಕ್ಷಾತ್ ನಂದಿವಾಹನನಾದ ಶಿವನೇ ಅವಳಿಗೆ ಬೇಳೆ ಭಂಡಾರವನ್ನು ಒಡೆದು ಕೊಡುತ್ತಾನೆ. ಹೀಗೆ ಜ್ಯೋತಿಸ್ಥಂಭವನ್ನು ಪೂಜಿಸಿ ಗೌರೀಹರರ ಕೃಪೆಗೆ ಪಾತ್ರಳಾಗಿ ಮೃತನಾದ ತನ್ನ ಪತಿಯನ್ನು ಬದುಕಿಸಿಕೊಳ್ಳುತ್ತಾಳೆ. ನಂತರ ಶಿವನ ಅನುಗ್ರಹದಿಂದ ಅಲ್ಲಿಯೇ ಅವರಿಗೊಂದು ಪಟ್ಟಣವೂ ನಿರ್ಮಾಣವಾಗುತ್ತದೆ. ಸಕಲ ಐಶ್ವರ್ಯಗಳನ್ನು ಹೊಂದಿ ಅನೇಕವರ್ಷಗಳಕಾಲ ಸಂತೋಷದಿಂದ ಜೀವನ ಸಾಗಿಸುತ್ತಾರೆ. ಇದು ಭವಿಷ್ಯೋತ್ತರಪುರಾಣದಲ್ಲಿ ಬಂದ ದೀಪಸ್ತಂಭ ಗೌರೀ ವ್ರತ. ಇದೇ ಭೀಮನ ಅಮಾವಾಸ್ಯೆ ಎಂದು ಪ್ರಸಿದ್ಧಿಯನ್ನು ಪಡೆಯಿತು.
ವ್ರತ ಆಚರಣೆ ಹೇಗೆ?
ಆಷಾಢ ಕೃಷ್ಣ ಅಮಾವಾಸ್ಯೆಯಂದು ಸ್ತ್ರೀಯರು ಶುದ್ಧವಾಗಿ ಎಣ್ಣೆಸ್ನಾನಾದಿಗಳನ್ನು ಮಾಡಿ, ಶುದ್ಧಬಟ್ಟೆಯನ್ನು ತೊಟ್ಟು ಎರಡು ದೀಪಸ್ತಂಭಗಳನ್ನು ಸ್ಥಾಪಿಸಬೇಕು. ಜೊತೆಗೆ ಉಮಾಮಹೇಶ್ವರರ ಚಿತ್ರವನ್ನು ಇಡಬೇಕು. ತುಪ್ಪ ಅಥವಾ ಎಳ್ಳೆಣ್ಣೆಯಿಂದ ದೀಪವನ್ನು ಪ್ರಜ್ವಾಲಿಸಬೇಕು. ಸರ್ವವಿಘ್ನಪರಿಹಾರಕನಾದ ಮಹಾಗಣಪತಿಯನ್ನು ಮೊದಲು ಪೂಜಿಸಬೇಕು. ದೀಪಸ್ತಂಭದಲ್ಲಿ ಶಿವಪಾರ್ವತಿಯರ ಧ್ಯಾನ ಆವಾಹನಾದಿಗಳನ್ನು ಮಾಡಿ ಷೋಡಶೋಪಚಾರ ಪೂಜೆಯನ್ನು ಮಾಡಬೇಕು.
ಒಂಬತ್ತು ಎಳೆಯ ದಾರವನ್ನು ಅರಿಶಿನ ಕುಂಕುಮದಿಂದ ಪೂಜಿಸಿ ಅದಕ್ಕೆ ಒಂಬತ್ತು ಗಂಟುಗಳನ್ನು ಹಾಕಬೇಕು. ಗೋದೀಹಿಟ್ಟಿನಿಂದ ಮಾಡಿದ ಕಡುಬು (ಹೂರಣ ತುಂಬಿದ ಕಡಬು) ನೈವೇದ್ಯ ತೋರಿಸಬೇಕು. ಮನೆಯ ಹೊಸ್ತಿಲ ಮೇಲೆ ಬೇಳೆಯ ಭಂಡಾರವನ್ನಿಟ್ಟು ಅಣ್ಣತಮ್ಮಂದಿರ ಮೊಳಕೈಯಿಂದ ಆ ಭಂಡಾರವನ್ನು ಒಡಿಸಿ ಅವರ ಕೈಯಿಂದಲೇ ಆಶೀರ್ವಾದರೂಪವಾಗಿ ಅದನ್ನು ಸ್ವೀಕರಿಸುವ ಸಂಪ್ರದಾಯವೂ ಇದೆ. ಪೂಜಿಸಿದ ದಾರವನ್ನು ಬಲಗೈಗೆ ಕಟ್ಟಿಕೊಳ್ಳಬೇಕು. ನಂತರ ಗೌರಿಗೆ ಉಡಿಯನ್ನು ತುಂಬಿ ಹೂರಣದ ಆರತಿಯನ್ನು ಮಾಡಬೇಕು.
ವಿವಾಹಿತ ಸ್ತ್ರೀಯರು ತಮ್ಮ ಪತಿಯ ಪಾದತೋಳೆದು ತಿಲಕವಿಟ್ಟು ನಮಸ್ಕರಿಸಿ ದೀರ್ಘಸೌಮಂಗಲ್ಯವನ್ನು ಪ್ರಾರ್ಥಿಸಿ ಆರತಿಯನ್ನು ಮಾಡಬೇಕು. ನಂತರ ಎಲ್ಲ ಗುರುಹಿರಿಯರಿಗೆ ನಮಸ್ಕರಿಸಿ ಎಲ್ಲರ ಆಶೀರ್ವಾದವನ್ನು ಪಡೆಯಬೇಕು. ಸಾಯಂಕಾಲದ ಸಮಯದಲ್ಲಿ ಮನೆಗೆ ಮುತ್ತೈದೆಯರನ್ನು ಕರೆದು ಅರಶಿನ ಕುಂಕುಮ ಬಳೆ ಕುಪ್ಪುಸದ ಖಣ ಎಲೆ ಅಡಿಕೆ ದಕ್ಷಿಣೆ ಇತ್ಯಾದಿ ಮಂಗಳ ದ್ರವ್ಯಗಳನ್ನು ಕೊಟ್ಟು ಆಶೀರ್ವಾದ ಪಡೆಯಬೇಕು. ಪಾರ್ವತಿಯು ಸಂತಾನ, ಸಮೃದ್ಧಿ, ಪಾತಿವ್ರತ್ಯ, ಹಾಗೂ ಶಕ್ತಿಯ ಸಂಕೇತಳು. ಆದ್ದರಿಂದ ಸ್ತ್ರೀಯರು ಆ ದಿನದಂದು ದಾಂಪತ್ಯಕ್ಕೆ ಅಭಿಮಾನಿಗಳಾದ ಉಮಾಮಹೇಶ್ವರರ ಪೂಜೆಯನ್ನು ವಿಶೇಷವಾಗಿ ಮಾಡುತ್ತಾರೆ.
ಏನೆಂದು ಪ್ರಾರ್ಥಸಿಬೇಕು?
ಮೃತ್ಯುಂಜಯ ನಮಸ್ತುಭ್ಯಂ ತವ ಮೇ ಸೂತ್ರಧಾರಣಾತ್ |
ಸೌಭಾಗ್ಯಂ ಧನಧಾನ್ಯಂ ಚ ಪ್ರಜಾವೃದ್ಧಿಂ ಸದಾ ಕುರು ||
ಉಮಾ ವೈ ವಾಕ್ ಸಮುದ್ದಿಷ್ಟಾ ಮನೋ ರುದ್ರ ಉದಾಹೃತಃ |
ತದೇತತ್ ಮಿಥುನಂ ಜ್ಞಾತ್ವಾ ನ ದಾಂಪತ್ಯಾತ್ ವಿಹೀಯತೇ ||
ನಮ್ಮ ಭಾರತೀಯ ಸಂಪ್ರದಾಯವೆಂದರೆ ಸಕಲ ಜಾತಿಮತಧರ್ಮಗಳನ್ನು ಏಕತೆಯಿಂದ ಕಾಣುವ ಸಂಸ್ಕೃತಿ. ಆದ್ದರಿಂದ ಈ ಪೂಜೆಯು ಯಾವುದೇ ಒಂದು ಧರ್ಮಕ್ಕಾಗಲಿ ಜಾತಿಗಾಗಲಿ ಸೀಮಿತಗೊಂಡಿಲ್ಲ. ಎಲ್ಲ ಸುಮಂಗಲಿಯರೂ ಅವಶ್ಯವಾಗಿ ಆಚರಿಸಬಹುದಾದ ವ್ರತ ಇದು.
ನಮ್ಮ ನಮ್ಮ ಅನುಕೂಲಗಳಿಗೆ ತಕ್ಕಂತೆ ವೈಭವ ಅವಶ್ಯವಾಗಿ ಮಾಡಬೇಕು. ಆದರೆ ವೈಭವ ಆಡಂಬರಗಳೆ ಮುಖ್ಯವಲ್ಲ. ಪೂಜೆಯಲ್ಲಿ ಬೇಕಾದ ಮುಖ್ಯಸಾಮಗ್ರಿ ಭಕ್ತಿ. ಆದ್ದರಿಂದ ಯಥಾಯೋಗ್ಯವಾಗಿ ಭಕ್ತಿವಿಶ್ವಾಸಗಳಿಂದ ಪೂಜೆಯನ್ನು ಮಾಡುವುದೇ ಅತಿ ಪ್ರಧಾನ.
ಇದನ್ನು ಓದಿ | Soma Pradosham 2022 | ಇಂದು ಸೋಮ ಪ್ರದೋಷ; ಇದರ ಮಹತ್ವವೇನು? ಪೂಜೆ ಹೇಗೆ?