Site icon Vistara News

ಕಾಲಕಾಲಕ್ಕೆ ವೀರಶೈವ ಗುರುಪೀಠಗಳು ರಾಜ್ಯಕ್ಕೆ ಮಾರ್ಗದರ್ಶನ ನೀಡುತ್ತ ಬಂದಿವೆ ಎಂದ ಬಿಎಸ್‌ವೈ

ಬಿಎಸ್‌ವೈ

ಹಾಸನ: ಕರ್ನಾಟಕ ರಾಜ್ಯವು ಬಹುದೊಡ್ಡ ಧಾರ್ಮಿಕ ಪರಂಪರೆಯನ್ನು ಹೊಂದಿದೆ. ಬಸವಣ್ಣನವರ ಕ್ರಾಂತಿಯ ಬಗ್ಗೆ ನಾವೆಲ್ಲ ತಿಳಿದಿದ್ದೇವೆ. ವೀರಶೈವ ಗುರುಪೀಠಗಳು ಕಾಲದಿಂದ ಕಾಲಕ್ಕೆ ರಾಜ್ಯಕ್ಕೆ ಮಾರ್ಗದರ್ಶನ ನೀಡುತ್ತ ಬಂದಿದ್ದು, ಈ ನಿಟ್ಟಿನಲ್ಲಿ ಬಾಳೆ ಹೊನ್ನೂರು ರಂಭಾಪುರಿ ಪೀಠದ 121ನೇ ಪೀಠಾಧ್ಯಕ್ಷ ಶ್ರೀ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳೂ ಕಾರ್ಯನಿರತರಾಗಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಜಿಲ್ಲೆಯ ಬೇಲೂರಿನಲ್ಲಿ ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿ, ವೀರಶೈವ ಸಮಾಜದವರು ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವದರ ಜತೆಗೆ ರಾಜಕೀಯವಾಗಿ ಶ್ರೀಗಳು ಹಲವರಿಗೆ ಮಾರ್ಗದರ್ಶನ ಮಾಡುತ್ತ ಬಂದಿದ್ದಾರೆ. ಧರ್ಮದಲ್ಲಿ ರಾಜಕೀಯವಿರಬಾರದು, ಆದರೆ ರಾಜಕೀಯದೊಳಗೆ ಧರ್ಮ ಇರಬೇಕೆಂದುಕೊಂಡವನು ನಾನು ಎಂದರು.

ಇದನ್ನೂ ಓದಿ | ರಾಜಕೀಯದ ಆಟ ಬಿಟ್ಟು ನಂಜನಗೂಡಿನಲ್ಲಿ ಮಕ್ಕಳ ಜತೆ ವಾಲಿಬಾಲ್‌ ಆಡಿದ ಡಿಕೆಶಿ

ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅಧರ್ಮವೇ ಮೇಲುಗೈ ಸಾಧಿಸಿರುವುದನ್ನು ನೋಡುತ್ತಿದ್ದೇವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಮಠಗಳನ್ನು ಸಮಾನವಾಗಿ ಕಂಡಿದ್ದೆ. ನಾಡಿನ ರೈತ ಸಮುದಾಯ ನೆಮ್ಮದಿಯಿಂದ ಇರಲು ಹಲವು ಯೋಜನೆಗಳನ್ನು ಕೊಟ್ಟಿದ್ದೇನೆ ಎಂದು ಹೇಳಿದರು.

ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳೇ ಮೈಸೂರಿಗೆ ಬಂದು ಚಾಮುಂಡೇಶ್ವರಿ ತಾಯಿ ದರ್ಶನ ಪಡೆದು ದಸರಾಗೆ ಚಾಲನೆ ಕೊಟ್ಟಿದ್ದಾರೆ. ಪೂಜ್ಯ ರಂಭಾಪುರಿ ಜಗದ್ಗುರುಗಳು ಪ್ರತಿ ವರ್ಷವೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಬಹಳ ವಿಜೃಂಭಣೆಯಿಂದ ನವರಾತ್ರಿ ಆಚರಣೆ ಮಾಡುತ್ತ ಬಂದಿದ್ದಾರೆ. ಕಳೆದ ಭಾರಿ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿತ್ತು, ಆಗ ಕಾರ್ಯಕ್ರಮವನ್ನು ನಾನೇ ಉದ್ಘಾಟನೆ ಮಾಡಿದ್ದೆ ಎಂದು ತಿಳಿಸಿದರು.

ಈ ಬಾರಿಯೂ ಬೇಲೂರಿನಲ್ಲಿ ಹಮ್ಮಿಕೊಂಡಿರುವ ಧರ್ಮ ಸಮ್ಮೇಳನವನ್ನು ನಾನೇ ಉದ್ಘಾಟನೆ ಮಾಡಿರುವುದು ಬಹಳ‌ ಸಂತೋಷ ತಂದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಜನಪರ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಿದೆಯೋ ಅವೆಲ್ಲವನ್ನೂ ಮಾಡುತ್ತಿದ್ದಾರೆ. ಅವರೂ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು. ಆದರೆ ಮೈಸೂರು ದಸರಾ ಕಾರ್ಯಕ್ರಮ ಮುಗಿಸಿ, ಅನಿವಾರ್ಯ ಕಾರಣಗಳಿಂದ ಬೆಂಗಳೂರಿಗೆ ಹೋಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | ಕನ್ನಡ ಅಭಿವೃದ್ಧಿ ವಿಧೇಯಕ ಜಾರಿಯಲ್ಲಿ ಕಸಾಪ ಅಧ್ಯಕ್ಷರನ್ನು ಕೈಬಿಟ್ಟಿರುವುದು ಸರಿಯಲ್ಲ: ಮಹೇಶ ಜೋಶಿ

Exit mobile version