ಬೆಂಗಳೂರು: ಈಗ ಕಂದಾಯ ಇಲಾಖೆ ಆಸ್ತಿ ಎಂದು ಘೋಷಣೆಯಾಗಿರುವ ಚಾಮರಾಜಪೇಟೆಯ ವಿವಾದಿತ ಈದ್ಗಾ ಮೈದಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂಬ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರ ವಿರುದ್ಧ ದೂರು ನೀಡಲಾಗಿದೆ.
ಶ್ರೀರಾಮ ಸೇನೆಯ ಬೆಂಗಳೂರು ಘಟಕದ ವತಿಯಿಂದ ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರಿನ ಪ್ರತಿಯನ್ನು ಪೊಲೀಸ್ ಕಮೀಷನರ್, ಪಶ್ಚಿಮ ವಿಭಾಗದ ಡಿಸಿಪಿಯವರಿಗೂ ಸಲ್ಲಿಸಲಾಗಿದೆ.
ಚಾಮರಾಜ ಪೇಟೆ ಮೈದಾನವು ಕಂದಾಯ ಇಲಾಖೆಗೆ ಸೇರಿದ ಜಾಗ ಎಂದು ಬಿಬಿಎಂಪಿಯು ಇತ್ತೀಚೆಗೆ ಹೇಳಿತ್ತು. ಅದರ ಮರುದಿನವೇ ಜಮೀರ್ ಖಾನ್ ಅವರು ಹೇಳಿಕೆ ನೀಡಿ, ಇಲ್ಲಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬಹುದು. ಧಾರ್ಮಿಕ ಹಬ್ಬಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಶಾಸಕರ ಈ ಮಾತು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಹಲವಾರು ಮಂದಿ ಜಮೀರ್ ಮೇಲೆ ಮುಗಿಬಿದ್ದಿದ್ದರು.
ಚಾಮರಾಜ ಪೇಟೆ ಮೈದಾನ ಸರಕಾರದ ಆಸ್ತಿ. ಇದರಲ್ಲಿ ಗಣೇಶೋತ್ಸವ ಅಚರಿಸಲು ಅವಕಾಶ ಕೊಡುವುದಿಲ್ಲ ಎಂದು ಹೇಳಲು ಜಮೀರ್ ಖಾನ್ ಯಾರು, ಮೈದಾನ ಏನು ಜಮೀರ್ ಅವರ ಅಪ್ಪನ ಆಸ್ತೀನಾ ಎಂದು ಪ್ರಶ್ನಿಸಿದ್ದರು. ಇದರ ನಡುವೆ, ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಜಮೀರ್ ಅವರ ವಿರುದ್ಧ ಕೋಮು ದ್ವೇಷ ಬಿತ್ತುವ ಆರೋಪದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಅದರ ಬೆನ್ನಿಗೇ ಶ್ರೀರಾಮ ಸೇನೆ ಬೆಂಗಳೂರು ಘಟಕ ದೂರು ನೀಡಿದೆ.
ʻʻಶಾಸಕರೊಬ್ಬರು ಇಂಥ ಹೇಳಿಕೆ ಕೊಟ್ಟಿರೋದು ಸರಿಯಲ್ಲ ಎನ್ನುವುದು ನಮ್ಮ ಅಭಿಪ್ರಾಯ. ಕೂಡಲೇ ಜಮೀರ್ ವಿರುದ್ದ ಕ್ರಮ ಕೈಗೊಳ್ಳಬೇಕುʼʼ ಎಂದು ಶ್ರೀರಾಮ ಸೇನೆ ಆಗ್ರಹಿಸಿದೆ. ಅವರು ಕೋಮುವಾದಿ ಮತ್ತು ಶಾಂತಿ ಸೌಹಾರ್ದ ಕದಡುವ ಹೇಳಿಕೆ ನೀಡಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಚಾಮರಾಜಪೇಟೆಯ ಈ ಮೈದಾನದ ವಿಚಾರದಲ್ಲಿ ವಕ್ಫ್ ಬೋರ್ಡ್ ಮತ್ತು ಬಿಬಿಎಂಪಿ ನಡುವೆ ಬಹುಕಾಲದಿಂದ ಜಾಗದ ಹಕ್ಕಿನ ಬಗ್ಗೆ ಜಗಳವಿದೆ. ವಕ್ಫ್ ಬೋರ್ಡ್ ಈ ಜಾಗ ತನ್ನದು ಎನ್ನುವುದಕ್ಕೆ ದಾಖಲೆಗಳಿವೆ ಎಂದು ಹೇಳಿತ್ತು. ಬಿಬಿಎಂಪಿ ದಾಖಲೆ ತಂದು ಕೊಡಲು ಕಾಲಾವಕಾಶ ನೀಡಿತ್ತು. ಆದರೆ, ಸಕಾಲದಲ್ಲಿ ದಾಖಲೆ ನೀಡದೆ ಇದ್ದಾಗ ಮೈದಾನವನ್ನು ಕಂದಾಯ ಇಲಾಖೆಯ ಆಸ್ತಿ ಎಂದು ಘೋಷಿಸಲಾಗಿದೆ. ಅದಾದ ಬಳಿಕ ಹಿಂದೂ ಸಂಘಟನೆಗಳು ಇದೇ ಮೈದಾನದಲ್ಲಿ ಗಣೇಶೋತ್ಸವ ಸಹಿತ ಎಲ್ಲ ಧಾರ್ಮಿಕ ಕಾರ್ಯಕ್ರಮ ನಡೆಸಬೇಕು ಎಂದು ಪಟ್ಟು ಹಿಡಿದಿವೆ. ಅದಕ್ಕೆ ಜಮೀರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಜಾರೋಹಣ ವಿವಾದ | ಮಾಣಿಕ್‌ಷಾ ಪರೇಡ್ ಗ್ರೌಂಡ್‌ಗಿಂತ ಚಾಮರಾಜಪೇಟೆ ಮೈದಾನವೇ ಈಗ ಕೇಂದ್ರಬಿಂದು!