Site icon Vistara News

ಪರ್ಮಿಷನ್‌ ಕೊಡೋಕೆ ಜಮೀರ್‌ ಯಾರು? ಮೈದಾನ ಏನು ಅವರಪ್ಪಂದಾ ಎಂದು ಕೇಳಿದ ಸಿ.ಟಿ ರವಿ

CT RAVI - ZAMEER

ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶನನ್ನು ಕೂರಿಸಬೇಡಿ, ಪರ್ಮಿಷನ್‌ ಕೊಡಲ್ಲ ಅಂತ ಹೇಳೋಕೆ ಜಮೀರ್‌ ಅಹಮದ್‌ ಯಾರು? ಮೈದಾನ ಏನು ಅವರಪ್ಪನ ಆಸ್ತೀನಾ?- ಹೀಗೆಂದು ನೇರವಾಗಿ ಕೇಳಿದ್ದಾರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ.

ಮಾಧ್ಯಮಗಳ ಜತೆ ಮಾತನಾಡಿದ ಬಿಜೆಪಿ ನಾಯಕರು, ʻʻಗಣೇಶನನ್ನು ಇಡಲು ಅನುಮತಿ ಕೊಡಲ್ಲ ಅಂತ ಹೇಳೋಕೆ ಜಮೀರ್ ಯಾರು? ಅನುಮತಿ ಕೊಡೋದು ಬಿಬಿಎಂಪಿ. ಈಗ ಅದು ಕಂದಾಯ ಇಲಾಖೆಗೆ ಸೇರಿದ ಆಸ್ತಿ. ಅದು ಸರ್ಕಾರದ ಆಸ್ತಿ, ಅಲ್ಲಿ ಗಣೇಶೋತ್ಸವ ಅದ್ದೂರಿಯಾಗಿ ಮಾಡ್ತೀವಿ. ಅದೇನೋ ಗಾದೆ ಇದೆಯಲ್ಲ, ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಾ? ಅಂತ. ಜಮೀರ್‌ ಖಾನ್‌ ಯಾವ ಸೀಮೆ ದೊಣ್ಣೆ ನಾಯಕ. ನಮ್ಮ ದೇಶದಲ್ಲಿ ಗಣಪತಿ ಇಡ್ಬೇಕಾ, ಬೇಡ್ವಾ ಅಂತ ಜಮೀರ್ ಅನುಮತಿ ಕೇಳಬೇಕಾ?ʼʼ ಎಂದೆಲ್ಲ ನೇರವಾಗಿ ವಾಗ್ದಾಳಿ ನಡೆಸಿದರು.

ಚಾಮರಾಜ ಪೇಟೆ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವಕ್ಕೆ ಅವಕಾಶ ಕೊಡುತ್ತೇವೆ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ಜಮೀರ್‌ ಖಾನ್‌ ಇತ್ತೀಚೆಗೆ ಹೇಳಿದ್ದರು. ಅದಕ್ಕೆ ಸಿ.ಟಿ. ರವಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ʻʻಜಮೀರ್ ಖಾನ್‌ ಕೇಳಿ ಗಣೇಶೋತ್ಸವ ಮಾಡಬೇಕಾ? ನಮಗೆ ತಾಕತ್ತಿದೆ. ನಾವು ಗಣೇಶನನ್ನು ಕೂರಿಸಿಯೇ ಕೂರಿಸ್ತೇವೆ. ಅದ್ದೂರಿಯಾಗಿ ಆಚರಣೆ ಮಾಡ್ತೀವಿ, ಬಂದು ಯಾರು ತಡೀತಾರೆ ಬರಲಿ ನೋಡೋಣʼʼ ಎಂದು ಕೇಳಿದರು ಸಿ.ಟಿ. ರವಿ.

ʻʻನಾವೇನು ಅರಬ್‌ ದೇಶದಲ್ಲಿ ಹೋಗಿ ಗಣೇಶನನ್ನು ಕೂರಿಸ್ತಿದ್ದೀವಾ? ಅಲ್ಲಿ ಕೂರಿಸೋದಾದ್ರೆ ಜಮೀರ್ ಮತ್ತು ಅವರ ಪೂರ್ವಜರ ಅನುಮತಿ ಪಡೆಯೋಣʼʼ ಎಂದು ಕಟುವಾಗಿ ಹೇಳಿದರು ರವಿ.

ಕಾಂಗ್ರೆಸ್‌ನ ಪಾಪ ಹೋಗಲ್ಲ
ʻʻಸಿದ್ದರಾಮಯ್ಯ ಅವರು ರಾಷ್ಟ್ರಧ್ವಜದ ಬಗ್ಗೆ ಪಾಠ ಮಾಡ್ತಾರೆ. ಜಮೀರ್‌ ರಾಷ್ಟ್ರ ಧ್ವಜ ಹಾರಿಸೋದಕ್ಕೆ ಪರ್ಮಿಷನ್‌ ಬಗ್ಗೆ ಮಾತಾಡ್ತಾರೆ. ನೆನಪಿಡಿ, ನಾವು ರಾಷ್ಟ್ರ ಧ್ವಜದ ಹೋರಾಟದಲ್ಲಿ ಐದು ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ. ಕಾಂಗ್ರೆಸ್‌ ಸರ್ಕಾರ ಇದ್ದಾಗ ರಾಷ್ಟ್ರ ಧ್ವಜ ಹಿಡಿದುಕೊಂಡು, ವಂದೇ ಮಾತರಂ ಗೀತೆ ಹಾಡುವಾಗ ಗೋಲಿಬಾರ್ ಮಾಡಲಾಗಿತ್ತುʼʼ ಎಂದು ಹೇಳಿದರು ಸಿ.ಟಿ. ರವಿ.

ʻʻರಾಷ್ಟ್ರ ಧ್ವಜ ಹಾರಿಸಿದವರ ಮೇಲೆ ಗುಂಡು ಹಾರಿಸಿದ ಪಾದ ಏಳು ಸಮುದ್ರದಲ್ಲಿ ಸ್ನಾನ ಮಾಡಿ ಬಂದರೂ ಹೋಗುವುದಿಲ್ಲ. ಅದು ನಿರಂತರವಾಗಿ ತಟ್ಟುತ್ತಲೇ ಇರುತ್ತದೆʼʼ ಎಂದು ಸಿ.ಟಿ. ರವಿ ಹೇಳಿದರು.

ಚಾಮರಾಜ ಒಡೆಯರ್‌ ಹೆಸರು ಇರಲಿ
ಚಾಮರಾಜಪೇಟೆ ಮೈದಾನವನ್ನು ಇಟ್ಟು ಈದ್ಗಾ ಮೈದಾನವೆಂದು ಕರೆಯಬಾರದು. ಚಾಮರಾಜ ಪೇಟೆಗೆ ಆ ಹೆಸರು ಬರಲು ಕಾರಣವಾಗಿದ್ದು ಚಾಮರಾಜೇಂದ್ರ ಒಡೆಯರ್ ಅವರು. ಹಾಗಾಗಿ ಮೈದಾನಕ್ಕೆ ಚಾಮರಾಜ ಒಡೆಯರ್‌ ಅವರ ಹೆಸರನ್ನೇ ಇಡಬೇಕು ಎಂದು ಸಲಹೆ ನೀಡಿದರು ಸಿ.ಟಿ. ರವಿ.

ಇದನ್ನೂ ಓದಿ | ಈದ್ಗಾ ಮೈದಾನದಲ್ಲೇ ಗಣೇಶೋತ್ಸವ: ಶಾಸಕ ಜಮೀರ್‌ ಖಾನ್‌ಗೆ ಸವಾಲು ಹಾಕಿದ ಮುತಾಲಿಕ್

Exit mobile version