ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಂತೆ ಸದ್ಯಕ್ಕೆ ಯಥಾಸ್ಥಿತಿ ಪಾಲನೆಗೆ ಸಿದ್ಧ. ಆದರೆ, ಒಕ್ಕೂಟದಲ್ಲಿ ಚರ್ಚಿಸಿ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಚಾಮರಾಜ ಪೇಟೆ ನಾಗರಿಕ ಒಕ್ಕೂಟ ವೇದಿಕೆ ಅಧ್ಯಕ್ಷ ರಾಮೇಗೌಡರು ಹೇಳಿದ್ದಾರೆ.
ಚಾಮರಾಜಪೇಟೆ ಮೈದಾನವನ್ನು ಕಂದಾಯ ಇಲಾಖೆಯ ಆಸ್ತಿ ಎಂದು ಘೋಷಿಸಿ ಆದೇಶ ನೀಡಿದ ಬಿಬಿಎಂಪಿ ಜಂಟಿ ಆಯುಕ್ತರ ಆದೇಶವನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಲು ಸೂಚಿಸಿತ್ತು. ಮತ್ತು ವಿಚಾರಣೆಯನ್ನು ಸೆಪ್ಟೆಂಬರ್ ೨೩ಕ್ಕೆ ಮುಂದೂಡಲಾಗಿದೆ.
ಮಧ್ಯಂತರ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ರಾಮೇಗೌಡ ಅವರು, ನಮ್ಮ ಒಕ್ಕೂಟದ ಸದಸ್ಯರ ಜೊತೆ ಸಭೆ ನಡೆಸಿ ಮುಂದಿನ ತೀರ್ಮಾನ ಮಾಡುತ್ತೇವೆ. ನಾವು ಚಾಮರಾಜಪೇಟೆಯಲ್ಲೇ ಗಣೇಶೋತ್ಸವ ಆಚರಣೆಗೆ ನಿರ್ಧಾರ ಮಾಡಿದ್ದೆವು. ಈಗ ಅದಕ್ಕೆ ಅವಕಾಶ ಸಿಗಲಾರದು ಎಂದು ಒಪ್ಪಿಕೊಂಡರು.
ʻʻಕೋರ್ಟ್ ಯಥಾಸ್ಥಿತಿ ಕಾಪಾಡಿ ಅಂದ್ರೆ ಅಲ್ಲಿ ಆಟ ಆಡಿಕೊಂಡು ಹೋಗ್ಬೋದು. ವರ್ಷಕ್ಕೆ ಎರಡು ಸಾರಿ ಪ್ರಾರ್ಥನೆ ಮಾಡ್ಕೊಂಡು ಹೋಗ್ಬೇಕು.. ಇದರ ಬಗ್ಗೆ ಸರ್ಕಾರ ಮುಂದೆ ಏನು ನಿರ್ಧಾರ ಕೈಗೊಳ್ಳುತ್ತದೆ ನೋಡಬೇಕು. ಅದರ ನಿರ್ಧಾರಕ್ಕೆ ನಾವು ಬೆಂಬಲ ನೀಡುತ್ತೇವೆʼʼ ಎಂದು ಹೇಳಿದರು.
ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕೋರ್ಟ್‌ನ ಏಕ ಸದಸ್ಯ ಪೀಠ ಮಧ್ಯಂತರ ಆದೇಶ ನೀಡಿರುವುದರಿಂದ ಮುಂದೆ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಮುಂದಿನ ದಿನಗಳು ೨೩ರೊಳಗೆ ಒಕ್ಕೂಟದಿಂದಲೂ ಅರ್ಜಿ ಸಲ್ಲಿಸುತ್ತೇವೆ. ಯಾಕೆಂದರೆ, ಹಾಲಿ ವಿಚಾರಣೆಯಲ್ಲಿ ನಾವು ಪಾರ್ಟಿ ಆಗಿರಲಿಲ್ಲ. ವಕ್ಫ್ ಬೋರ್ಡ್, ಬಿಬಿಎಂಪಿ ಮತ್ತು ಸರಕಾರ ಮಾತ್ರವಿತ್ತು. ಮುಂದಿನ ಬಾರಿ ನಮ್ಮನ್ನೂ ಪಾರ್ಟಿ ಎಂದು ಪರಿಗಣಿಸಲು ಮನವಿ ಮಾಡುತ್ತೇವೆʼʼ ಎಂದರು
ʻʻಸರಕಾರ ಡಬಲ್ ಬೆಂಚ್‌ಗೆ ಹೋಗುತ್ತದೋ ಅಥವಾ ನೇರವಾಗಿ ಸುಪ್ರೀಂಕೋರ್ಟ್‌ಗೆ ಹೋಗುತ್ತದೋ ನೋಡೋಣ. ನಾವು ಅದಕ್ಕೆ ಬೆಂಬಲ ಕೊಡುತ್ತೇವೆ. ನಾವು ಕೂಡಾ ಕಾನೂನಬದ್ಧ ಹೊರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲʼʼ ಎಂದರು ರಾಮೇಗೌಡರು.
ಗಣೇಶೋತ್ಸವ ಆಚರಿಸಬಹುದು ಎಂದ ನೇಸರ್ಗಿ
ಈ ನಡುವೆ ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಅವರು ಪ್ರತಿಕ್ರಿಯಿಸಿ, ಯಥಾಸ್ಥಿತಿ ಇದ್ದರೂ ಎಲ್ಲರೂ ಜತೆಗೂಡಿದರೆ ಗಣೇಶೋತ್ಸವಕ್ಕೆ ಅವಕಾಶ ಸಿಗಬಹುದು ಎಂದಿದ್ದಾರೆ.
ʻʻನಾನು, ಶಾಸಕರಾದ ಜಮೀರ್ ಖಾನ್ ಎಲ್ಲರೂ ಜತೆ ಸೇರಿ ಸಭೆ ಮಾಡಿದಾಗ ಈ ಮೈದಾನದಲ್ಲಿ ಗಣೇಶ ಉತ್ಸವ, ರಂಜಾನ್, ದಸರಾ ಉತ್ಸವ ಎಲ್ಲವೂ ಆಗ್ಬೇಕು ಅಂತಾ ಮಾತಾಡಿಕೊಂಡಿದ್ದೆವು. ಅದು ಯಥಾಸ್ಥಿತಿ ಅಂತಾ ನಾವು ಅಂದ್ಕೊಂಡಿದ್ದೆವು. ಈಗ ಹೈ ಕೋರ್ಟ್ ಯಥಾಸ್ಥಿತಿ ಇರಲಿ ಎಂದು ಆದೇಶ ನೀಡಿದೆ. ಇದೊಂದು ಮೈದಾನ. ಇದರಲ್ಲಿ ಆಟ ಆಡಬಹುದು ಎಂದು ಹೇಳಿದೆ. ಈ ಜಾಗ ಸಾರ್ವಜನಿಕರ ಜಾಗ. ವಕ್ಫ್ ಬೋರ್ಡ್ ಜಾಗ ಅಲ್ಲ. ಕಾರ್ಪೊರೇಷನ್ ಜಾಗವೂ ಅಲ್ಲ.. ಹಾಗಾದರೆ ಇದು ಸರ್ಕಾರದ ಜಾಗ. ಹಾಗಾಗಿ ಈ ಮೈದಾನದಲ್ಲಿ ಏನೂ ಮಾಡಬಹುದು. ಹೈಕೋರ್ಟ್ ಹಬ್ಬಗಳನ್ನು ಮಾಡಬಾರದು ಎಂದೇನೂ ಹೇಳಿಲ್ಲʼʼ ಎಂದು ನೇಸರ್ಗಿ ಹೇಳಿದರು.
ಇದನ್ನೂ ಓದಿ| ಚಾಮರಾಜಪೇಟೆ ಮೈದಾನ ವಿವಾದ| ಸುಪ್ರೀಂ ಆದೇಶದ ಆಧಾರದಲ್ಲಿ ಇಲ್ಲೂ ಗೆಲುವು ಸಿಕ್ಕಿತು ಎಂದ ವಕ್ಫ್ ಬೋರ್ಡ್