Site icon Vistara News

Chandra Grahan 2022 | ಚಂದ್ರ ಗ್ರಹಣ ಎಷ್ಟು ಹೊತ್ತಿಗೆ ಸಂಭವಿಸಲಿದೆ? ಆಹಾರ ಸೇವನೆ ಯಾವಾಗ?

Chandra Grahan 2022

ಸೂರ್ಯ ಗ್ರಹಣ ಮುಗಿಯುತ್ತಿದಂತೆಯೇ ಈಗ ಚಂದ್ರ ಗ್ರಹಣಕ್ಕೆ ದಿನ ಗಣನೆ ಆರಂಭವಾಗಿದೆ. ನವೆಂಬರ್‌ 8 ರಂದು ಅಂದರೆ ಕಾರ್ತಿಕ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯಂದು ಭರಣಿ ನಕ್ಷತ್ರದ ಮೇಷ ರಾಶಿಯಲ್ಲಿ ಚಂದ್ರನಿಗೆ ರಾಹುಗ್ರಸ್ತ ಪೂರ್ಣಗ್ರಾಸಗ್ರಸ್ತೋದಯ ಗ್ರಹಣವು (Chandra Grahan 2022) ಸಂಭವಿಸಲಿದೆ.

ಈ ಖಗೋಳ ವಿಸ್ಮಯವು ಜ್ಯೋತಿಷದ ಪ್ರಕಾರ ಹಾಗೂ ಧಾರ್ಮಿಕವಾಗಿ ಬಹಳ ಮಹತ್ವ ಪಡೆದಿದೆ. ಇದು ಮೂರು ವರ್ಷಗಳಿಗೆ ಒಮ್ಮೆ ನಡೆಯುವ ಸಂಪೂರ್ಣ ಚಂದ್ರ ಗ್ರಹಣವಾಗಿದೆ. ಮುಂದಿನ ಚಂದ್ರ ಗ್ರಹಣವು 2025ರ ಮಾರ್ಚ್‌ನಲ್ಲಿ ಸಂಭವಿಸಲಿದೆ.

ಈ ಚಂದ್ರ ಗ್ರಹಣವು ಹಗಲಿನಲ್ಲಿ ಸಂಭವಿಸುತ್ತಿದ್ದು, ನಮ್ಮ ದೇಶದ ಪೂರ್ವ ಭಾಗಗಳಲ್ಲಿ ಮಾತ್ರ ಸಂಪೂರ್ಣ ಚಂದ್ರ ಗ್ರಹಣವು ಗೋಚರಿಸಲಿದೆ. ನಮ್ಮ ರಾಜ್ಯ ಸೇರಿದಂತೆ ದೇಶಾದ್ಯಂತ ಭಾಗಶಃ ಚಂದ್ರ ಗ್ರಹಣ ಗೋಚರಿಸಲಿದೆ. ಕೋಲ್ಕತ್ತಾ, ಪಟನಾ, ಗುವಾಹಟಿ ಮತ್ತಿತರ ನಗರಗಳಲ್ಲಿ ಪೂರ್ಣ ಚಂದ್ರಗ್ರಹಣ ನೋಡಬಹುದು. ಇದು ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿದೆ.

ಗ್ರಹಣದ ಸ್ಪರ್ಶ-ಮೋಕ್ಷ ಎಷ್ಟು ಹೊತ್ತಿಗೆ?
ಗ್ರಹಣ ಸ್ಪರ್ಶ : ಮಧ್ಯಾಹ್ನ 02-39
ಗ್ರಹಣ ಮಧ್ಯಕಾಲ : ಸಂಜೆ 04-29
ಸೂರ್ಯಾಸ್ತ ಸಂಜೆ : 05-58
ಚಂದ್ರೋದಯ : ಸಂಜೆ 6.00
ಸಂಮ್ಮಿಲನ : ಮಧ್ಯಾಹ್ನ 06-20, ಉನ್ಮಿಲನ : ಸಂಜೆ 05-12
ಗ್ರಹಣ ಆದ್ಯಂತ ಪುಣ್ಯ ಕಾಲ: 19 ನಿಮಿಷಗಳು ಮಾತ್ರ ( ಸಂಜೆ 6-00 ಗಂಟೆಯಿಂದ 6-19 ನಿಮಿಷಗಳವರೆಗೆ ಪರ್ವಪುಣ್ಯಕಾಲ)
ದೃಶ್ಯ ಪುಣ್ಯಕಾಲ 0-22 ನಿಮಿಷ, ಗ್ರಹಣ ಮೋಕ್ಷ: 6-20
ಗಮನಿಸಿ: ಆಯಾಯಾ ಊರಿನ ಸೂರ್ಯಾಸ್ತದ ಪ್ರಕಾರ ಗ್ರಹಣದ ಮತ್ತು ಅನುಷ್ಠಾನದ ಸಮಯ ಸ್ವಲ್ಪ ಬದಲಾಗಲಿದೆ.
ಬೆಂಗಳೂರಿನಲ್ಲಿ ಭಾಗಶಃ ಚಂದ್ರ ಗ್ರಹಣವು ಸಂಜೆ 05-53 ಕ್ಕೆ ಆರಂಭವಾಗಿ 6-18ಕ್ಕೆ ಕೊನೆಗೊಳ್ಳಲಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಯಾವಾಗ ಆಹಾರ ಸೇವಿಸಬಹುದು?
ಈ ಚಂದ್ರ ಗ್ರಹಣವು ಹಗಲು ಮೂರನೇಯ ಯಾಮದಲ್ಲಿ ಸಂಭವಿಸುತ್ತಿರುವುದರಿಂದ ಗ್ರಹಣ ಸ್ಪರ್ಶಕ್ಕಿಂತ ಮೂರು ಯಾಮ ಅಂದರೆ ಸೂರ್ಯೋದಯದಿಂದಲೇ ಗ್ರಹಣ ನಿಷಿದ್ಧಗಳು ಜಾರಿಯಾಗಲಿವೆ. ಈ ದಿನ ಪೂರ್ತಿ ಭೋಜನಕ್ಕೆ, ಫಲಾಹಾರ ಸೇವನೆಗೆ ಅವಕಾಶವಿರುವುದಿಲ್ಲ. ಸಂಜೆ ಗ್ರಹಣ ಬಿಟ್ಟ ಮೇಲೆ ಸ್ನಾನವನ್ನು ಮಾಡಿ, ಆಹಾರ ಸೇವಿಸಬಹುದು.

ಮಕ್ಕಳು, ವೃದ್ಧರು, ಗರ್ಭಿಣಿಯರು, ಅಶಕ್ತರು, ಅನಾರೋಗ್ಯ ಪೀಡಿತರು ಮಾತ್ರ ಬೆಳಗ್ಗೆ 11.39 ಗಂಟೆಯ ಒಳಗೆ ಆಹಾರವನ್ನು ಸೇವಿಸಬಹುದು. ನಂತರ ಗ್ರಹಣ ಬಿಟ್ಟ ಮೇಲೆ ಸ್ನಾನವನ್ನು ಮಾಡಿ, ಆಹಾರ ಸೇವನೆ ಮಾಡಬಹುದು ಎಂದು ಪಂಚಾಂಗದಲ್ಲಿ ಹೇಳಲಾಗಿದೆ.

ಗ್ರಹಣ ಕಾಲದಲ್ಲಿ ಏನು ಮಾಡಬಹುದು?
ಗ್ರಹಣದ ಸ್ಪರ್ಶಕಾಲದಿಂದ ಹಿಡಿದು ಮೋಕ್ಷ ಕಾಲದವರೆಗೆ ಯಾವ ವಸ್ತುವಿನ ಸಂಪರ್ಕವನ್ನು ಮಾಡದೇ, ಉಟ್ಟ ಬಟ್ಟೆಯೊಂದಿಗೆ ಸ್ನಾನವನ್ನು ಮಾಡಬೇಕು. ಯಾವುದೇ ರೀತಿಯ ಪಾನಿಯ-ಆಹಾರವನ್ನು ಸೇವಿಸಬಾರದು. ಶೌಚಾಲಯ ಬಳಸಬಾರದು. ಸ್ನಾನ ಮಾಡಿ ಗಾಯತ್ರೀ ಜಪ, ಇಷ್ಟ ನಾಮ ದೇವರ ಜಪ, ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ, ದೇವರ ಪೂಜೆ, ತರ್ಪಣ, ಇತ್ಯಾದಿ ಚಟುವಟಿಕೆಗಳನ್ನು ಮಾಡಬಹುದು. ಗ್ರಹಣದ ಕೊನೆಯ ಭಾಗದಲ್ಲಿ ದೇವಸ್ಥಾನಗಳಿಗೆ ಹೋಗಿ ನಮಸ್ಕಾರ, ದಾನ-ಧರ್ಮಾಗಳನ್ನು ಮಾಡಬಹುದು.

ಇದನ್ನೂ ಓದಿ| ಭಾವಾಶ್ರಿತ ಗ್ರಹಫಲ | ಚಂದ್ರನು ನೀಡುವ ಫಲಗಳೇನು?

Exit mobile version