Site icon Vistara News

Chikkalluru Siddappaji Temple : ಚಿಕ್ಕಲ್ಲೂರಲ್ಲಿ ಪೂಜೆ ವಿಚಾರಕ್ಕೆ ತ್ರಿಶೂಲದಲ್ಲಿ ಹೊಡೆದಾಟ; ಮೂವರು ಅರ್ಚಕರಿಗೆ ಗಾಯ

Chikkalluru Siddappaji temple

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಸ್ಥಳ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನದಲ್ಲಿ (Chikkalluru Siddappaji Temple) ಪೂಜೆ ವಿಚಾರಕ್ಕೆ ತ್ರಿಶೂಲಗಳಲ್ಲಿ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಮೂವರು ಅರ್ಚಕರಿಗೆ ಗಂಭೀರ ಗಾಯವಾಗಿದೆ. ಚಿಕ್ಕಲೂರು ದೇವಸ್ಥಾನದ ಅರ್ಚಕ ಶಂಕರಪ್ಪ (65), ಶಿವಕುಮಾರಸ್ವಾಮಿ (40) ಹಾಗೂ ನಂಜುಂಡಸ್ವಾಮಿ (32) ಗಂಭೀರ ಗಾಯಗೊಂಡವರು.

ಪೂಜೆ ಹಾಗೂ ದೀಕ್ಷೆ ಕೊಡುವ ವಿಚಾರಕ್ಕೆ ಅರ್ಚಕರ ಗುಂಪಿನಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ಹೋಗಿ, ಸಿದ್ದಪ್ಪಾಜಿ ದೇವಸ್ಥಾನದ ಬೆತ್ತ ಮತ್ತು ತ್ರಿಶೂಲಗಳನ್ನು ಹಿಡಿದುಕೊಂಡು ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ.

ಸದ್ಯ ಕೊಳ್ಳೆಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದಪ್ಪಾಜಿ ದೇವರ ಗುಡ್ಡ ದೀಕ್ಷೆ ನೀಡುವ ವಿಚಾರಕ್ಕೆ ಅರ್ಚಕರ ಗುಂಪಿನ ನಡುವೆ ಗಲಾಟೆ ನಡೆದಿದೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Physical Abuse : ವೈದ್ಯಾಧಿಕಾರಿ ಅಶ್ಲೀಲ ವರ್ತನೆ; ರಾತ್ರಿಯಾದರೆ ವಿಡಿಯೊ ಕಾಲ್‌ನಲ್ಲಿ ವೈದ್ಯೆಗೆ ಟಾರ್ಚರ್‌‌

ದೇವಸ್ಥಾನಕ್ಕೆ ನುಗ್ಗಿ ಆಂಜನೇಯ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿಗಳು

ವಿಜಯನಗರ: ಆಂಜನೇಯ ಮೂರ್ತಿಯನ್ನು ವಿರೂಪಗೊಳಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ದುಷ್ಕರ್ಮಿಗಳ ಕೃತ್ಯಕ್ಕೆ ಆಂಜನೇಯ ಪ್ರತಿಮೆ ತುಂಡಾಗಿದೆ. ವಿಜಯನಗರ (Vijayanagara News) ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸ ಹಂಪಿ ಗ್ರಾಮದಲ್ಲಿ ಘಟನೆ ನಡೆದಿದೆ.

ತಡರಾತ್ರಿ ಕಾರ್ಯಸಿದ್ಧಿ ಶ್ರೀ ಆಂಜನೇಯ ಸ್ವಾಮಿ ದೇಗುಲದ ಬೀಗ ಮುರಿದು, ಒಳ ನುಗ್ಗಿರುವ ದುಷ್ಟರು ಮೂರ್ತಿಯನ್ನು ಒಡೆದು ಹಾಕಿದ್ದಾರೆ. ಮುಂಜಾನೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಬೆರಳಚ್ಚು ವಿಭಾಗ ತಜ್ಞರು, ಶ್ವಾನದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಹೊಸಪೇಟೆ ಡಿವೈಎಸ್‌ಪಿ ಶರಣಬಸವೇಶ್ವರ, ಹಂಪಿ ಪ್ರವಾಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೇವರ ಹರಕೆ ಕುರಿಯನ್ನೇ ಕದ್ಯೊಯ್ದ ಕಳ್ಳರು

ದಾವಣಗೆರೆ ದೇವರ ಹರಕೆಗಾಗಿ ತಂದಿದ್ದ ಕುರಿಯನ್ನೇ ಕಳ್ಳರು (Theft Case) ಹೊತ್ತೊಯ್ದಿದ್ದಾರೆ. ದಾವಣಗೆರೆ (Davanagere news) ತಾಲೂಕಿನ ಮಾಯಾಕೊಂಡದಲ್ಲಿ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ‌ ಕಿರಾತಕರು ರಾತ್ರೋ ರಾತ್ರಿ ಕುರಿಯನ್ನು ಕದ್ದಿದ್ದಾರೆ.

ಸುಮಾರು 8 ಮಂದಿ ಖದೀಮರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಯಾಕೊಂಡದ ನಿವಾಸಿ ಪ್ರಭು ಎಂಬುವರಿಗೆ ಸೇರಿದ ಕುರಿಯನ್ನು ಬೆಳಗಿನ‌ ಜಾವ 3ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದು ಎಗರಿಸಿದ್ದಾರೆ. ಸದ್ಯ ಪ್ರಭು ಅವರು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಖದೀಮರನ್ನು ಹಿಡಿಲು ಮುಂದಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version