Site icon Vistara News

Kumbha Mela | ಇನ್ನು ಮುಂದೆ ರಾಜ್ಯದಲ್ಲಿ 12 ವರ್ಷಕ್ಕೊಮ್ಮೆ ಮಹಾಕುಂಭ ಮೇಳ: ಸಿಎಂ ಬೊಮ್ಮಾಯಿ

Kumbha Mela

ಮಂಡ್ಯ: ನದಿಗಳ ಸಂಗಮ ಸ್ಥಳ ನಮಗೆ ಪವಿತ್ರ ಸ್ಥಳವಾಗಿದೆ. ಹೀಗಾಗಿ ರಾಜ್ಯದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಮಹಾಕುಂಭ ಮೇಳ(Kumbha Mela) ಆಯೋಜನೆ ಮಾಡಲು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗುತ್ತದೆ. ಅಲ್ಲದೆ ತ್ರಿವೇಣಿ ಸಂಗಮದಲ್ಲಿ ಸ್ನಾನಘಟ್ಟ ಸೇರಿ ಇನ್ನಿತರ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಕ್ಷಿಣ ಭಾರತದ ಮಹಾ ಕುಂಭ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮಂಡ್ಯ ಎಂದರೆ ಇಂಡಿಯಾ ಎನ್ನುತ್ತಾರೆ, ಹಾಗಾಗಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಹಲವು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲೂ ಭಾರಿ ಮಳೆ ಮುಂದುವರಿದಿದೆ. ಕಳೆದ ಬಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಬೆಳೆ‌ನಷ್ಟ ಅನುಭವಿಸಿದ ರೈತರಿಗಾಗಿ ನೀಡಲಾಗಿದೆ. ಈ ಬಾರಿಯ ಬೆಳೆ ನಷ್ಟದ ಅಂದಾಜು ಸಿದ್ಧ ಪಡಿಸಿ ಪರಿಹಾರದ ಹಣವನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ | Kumbha mela | ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ಯತಿವರ್ಯರಿಂದ ಪುಣ್ಯ ಸ್ನಾನ, ಪಂಚ ಕಲಶ ವಿಸರ್ಜನೆ

ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಟಿ.ನರಸೀಪುರದಲ್ಲಿ ಮೂರು ವರ್ಷಕ್ಕೆ ಒಮ್ಮೆ ತ್ರಿವೇಣಿ ಸಂಗಮದಲ್ಲಿ ಕುಂಭ ಮೇಳ ನಡೆಸಲಾಗುತ್ತಿದೆ. ಆದರೆ, ಅಂಬಿಗರಹಳ್ಳಿಯಲ್ಲಿ 2013ರಲ್ಲಿ ಮೊದಲ ಬಾರಿಗೆ ಕುಂಭ ಮೇಳ ಆಯೋಜನೆ ಮಾಡಲಾಗಿತ್ತು. ಈಗ 9 ವರ್ಷಗಳ ನಂತರ ಮಹಾ ಕುಂಭ ಮೇಳ ನಡೆದಿದೆ. ದೇಶದ ಪವಿತ್ರ ಸ್ಥಳಗಳಲ್ಲಿ ಈ ತ್ರಿವೇಣಿ ಕ್ಷೇತ್ರವೂ ಒಂದಾಗಿದೆ ಎಂದು ತಿಳಿಸಿದರು.

ಧರ್ಮ, ರಾಜಕಾರಣ ಮತ್ತು ಜನರು ಸೇರಿ ಈ ಕಾರ್ಯಕ್ರಮ ಮಾಡುತ್ತಿರುವುದರಿಂದ ಇದು ಒಂದು ರೀತಿಯ ತ್ರಿವೇಣಿ ಸಂಗಮವಾಗಿದೆ. ಭಗವಂತ ಹಾಗೂ ಭಕ್ತನ ನಡುವಿನ ಸಂಬಂಧ ತಾಯಿ ಮಗುವಿನ ಸಂಬಂಧ ಇದ್ದ ಹಾಗೆ. ಕಾರ್ಯಕ್ರಮ ಯಶಸ್ವಿಯಾಗಲು ಇಬ್ಬರು ಸಚಿವರು, ಜಿಲ್ಲಾ ಮಟ್ಟದ ಅಧಿಕಾರಿಗಳು ಶ್ರಮ ವಹಿಸಿದ್ದಾರೆ. ಮಲೈ ಮಹದೇಶ್ವರರು ಶ್ರೇಷ್ಠರು, ಅವರು ಮೊದಲು ಪಾದ ಸ್ಪರ್ಶ ಮಾಡಿದ ಸ್ಥಳವೇ ಅಂಬಿಗರಹಳ್ಳಿ. ಮಲೈ ಮಹದೇಶ್ವರ ಬೆಟ್ಟದ ಶ್ರೀಗಳು ಅಮವಾಸ್ಯೆ ಅಥವಾ ಹುಣ್ಣಿಮೆಯಂದು ಇಲ್ಲಿಗೆ ಬಂದು ಆಶೀರ್ವಚನ ನೀಡಿದರೆ ಭಕ್ತರಿಗೆ ಅನುಕೂಲ ಆಗುತ್ತದೆ ಎಂದರು.

ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಸಂಗಮದಲ್ಲಿ ಮುಳುಗಿ ಕೇವಲ ದೇಹ ಶುದ್ಧಿ ಮಾಡಿಕೊಳ್ಳುವುದಲ್ಲ. ಮನಸ್ಸಿನ ಕೊಳೆಯನ್ನು ತೆಗೆದು ಹಾಕಬೇಕು. ಒಂದು ಬೊಗಸೆ ಮಣ್ಣನ್ನು ತೆಗೆದು ಬೇರೆಡೆ ಹಾಕಿದರೆ ಉಬ್ಬು ತಗ್ಗು ನಿರ್ಮಾಣ ಆಗುತ್ತದೆ. ಆದರೆ, ಬೊಗಸೆ ನೀರು ತೆಗೆದು ಪಕ್ಕಕ್ಕೆ ಸುರಿದರೆ ನದಿಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಅಲ್ಲಿ ತಕ್ಷಣದಲ್ಲಿ ಸಂಚಲನ ಆಗುತ್ತದೆ. ಅದೇ ರೀತಿ ಸಮಾಜದಲ್ಲಿ ಮನುಷ್ಯ ನೀರಿನಂತೆ ಕಷ್ಟದಲ್ಲಿರುವವರ ನೆರವಿಗೆ ಬರಬೇಕು. ಆ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ತಿಳಿಸಿದರು.

ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಕೋವಿಡ್ ನಂತರ ಸಾಕಷ್ಟು ಮಳೆ ಆಗಿದ್ದು, ಹಲವು ಸವಾಲುಗಳ ನಡುವೆ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧನ್ಯವಾದ. ಮಳೆಯಿಂದಾಗಿ ಹಲವರು ಮನೆಗಳನ್ನು ಕಳೆದುಕೊಂಡಿದ್ದಾರೆ. ಬೆಳೆ ಹಾನಿಯಾಗಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಜನರಿಗೆ ಪರಿಹಾರ ಘೋಷಣೆ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಾಮಗಾರಿಯಿಂದ ಕೆಲವು ಕಡೆ ತೊಂದರೆಗಳು ಆಗಿವೆ. ಅದನ್ನು ಮನಗಂಡು ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಜರುಗಿಸಬೇಕು. ಮಳವಳ್ಳಿ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ಏನೇ ಕೊಟ್ಟರೂ ಅವರ ಸಂಕಟ ಭರಿಸಲು ಸಾಧ್ಯವಿಲ್ಲ. ಪೋಕ್ಸೋ ಅಡಿ ಇರುವ ಕಾನೂನುಗಳನ್ನು ಬಳಸಿ ಆರೋಪಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | Kumbhamela | ಜಲಕ್ಕೆ ಕೃತಜ್ಞತೆ ಸಲ್ಲಿಸೋಣ; ನೀರಿನ ಮಹತ್ವ ಬಗ್ಗೆ ಪಾಠ ಮಾಡಿದ ಡಾ. ವೀರೇಂದ್ರ ಹೆಗ್ಗಡೆ

Exit mobile version