ಬೆಂಗಳೂರು: ಪ್ರಗತಿಪರ ಚಿಂತನೆಗಳಿಗೆ ಹೆಸರಾದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಈಗ ಮುಖ್ಯಮಂತ್ರಿ ಕಚೇರಿಯಲ್ಲೇ (Chirf ministers office) ಆಚರಣೆಯಲ್ಲಿದ್ದ ಮೌಢ್ಯವೊಂದಕ್ಕೆ ಬ್ರೇಕ್ ಹಾಕಿದ್ದಾರೆ. ವಾಸ್ತು ಸರಿ (Vastu problem) ಇಲ್ಲ ಎಂಬ ಕಾರಣಕ್ಕಾಗಿ ಮುಚ್ಚಿದ್ದ ಸಿಎಂ ಕಚೇರಿಯ ದಕ್ಷಿಣದ ಬಾಗಿಲನ್ನು (South enctrance door) ತೆರೆಸಿದ್ದಾರೆ.
ವಿಧಾನ ಸೌಧದ ಮೂರನೇ ಮಹಡಿಯಲ್ಲಿರುವ (Third floor of vidhana soudha) ಮುಖ್ಯಮಂತ್ರಿಗಳ ಕಚೇರಿಗೆ ಪಶ್ಚಿಮ ಮತ್ತು ದಕ್ಷಿಣದಲ್ಲಿ ಬಾಗಿಲುಗಳಿವೆ. ಬಹುತೇಕ ಎಲ್ಲ ಸಿಎಂಗಳು ಪಶ್ಚಿಮ ದ್ವಾರದಿಂದಲೇ ಪ್ರವೇಶ ಮಾಡಿದ್ದರು. ಸಿದ್ದರಾಮಯ್ಯ ಅವರು ಕೂಡಾ ಪಶ್ಚಿಮ ದ್ವಾರದಿಂದಲೇ ಒಳಗೆ ಹೋಗುತ್ತಿದ್ದರು. ದಕ್ಷಿಣದ ದ್ವಾರ ಯಾವತ್ತೂ ಮುಚ್ಚಿಯೇ ಇತ್ತು.
ಇತ್ತೀಚೆಗೆ ಸಿದ್ದರಾಮಯ್ಯ ಅವರು ಯಾಕೆ ದಕ್ಷಿಣದ ಬಾಗಿಲು ಯಾವತ್ತೂ ಮುಚ್ಚಿಯೇ ಇರುತ್ತದಲ್ವಾ ಎಂದು ಕೇಳಿದ್ದರು. ಅದಕ್ಕೆ ಅಧಿಕಾರಿಗಳು ದಕ್ಷಿಣ ದ್ವಾರದ ವಾಸ್ತು ಸರಿ ಇಲ್ಲ. ಮನೆ ಸೇರಿದಂತೆ ಯಾವುದಕ್ಕೂ ದಕ್ಷಿಣ ದ್ವಾರ ಒಳ್ಳೆಯದಲ್ಲ ಎಂಬ ಅಭಿಪ್ರಾಯವಿದೆ. ದಕ್ಷಿಣ ದ್ವಾರ ಪ್ರವೇಶ ವಾಸ್ತು ಪ್ರಕಾರ ಒಳ್ಳೆಯದಲ್ಲ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಹಾಗಾಗಿ ದಕ್ಷಿಣ ದ್ವಾರವನ್ನು ಮುಚ್ಚಿದ್ದೇವೆ ಎಂದು ಹೇಳಿದ್ದರು.
ಅಧಿಕಾರಿಗಳ ಮಾತುಗಳನ್ನು ಕೇಳಿಸಿಕೊಂಡ ಮುಖ್ಯಮಂತ್ರಿಗಳು ದಿಕ್ಕುಗಳ ವಿಷಯದಲ್ಲಿ ಈ ರೀತಿಯ ಮೌಢ್ಯ ಸರಿಯಲ್ಲ. ನಾನು ಅಲ್ಲಿಂದಲೇ ಒಳಗೆ ಹೋಗುತ್ತೇನೆ ಎಂದು ದಕ್ಷಿಣದ ಬಾಗಿಲಿನಿಂದಲೇ ಪ್ರವೇಶಿಸಲು ಮುಂದಾದರು.
ಸಿಎಂ ಅವರ ಸೂಚನೆಯ ಪ್ರಕಾರ, ಅಧಿಕಾರಿಗಳು ಕಚೇರಿ ಒಳಗಿನಿಂದ ಬಾಗಿಲು ತೆರೆದು ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟರು.
ಆರೋಗ್ಯಕರ ಮನಸ್ಸು, ಸ್ವಚ್ಛ ಹೃದಯ, ಜನಪರ ಕಾಳಜಿ, ಒಳ್ಳೆಯ ಗಾಳಿ ಬೆಳಕು ಬರುವಂತಿದ್ದರೆ ಅದೇ ಉತ್ತಮ ವಾಸ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಪಾಠ ಮಾಡಿದರು.
ಕಾಗೆ ವಿಚಾರದಲ್ಲಿ ಮೌಢ್ಯ ಪಾಲಿಸಿದ್ದರಾ ಸಿದ್ದರಾಮಯ್ಯ
ದಕ್ಷಿಣ ದ್ವಾರದ ವಿಚಾರದಲ್ಲಿ ಮೌಢ್ಯ ಮುರಿದ ಸಿಎಂ ಸಿದ್ದರಾಮಯ್ಯ ಅವರು 2016ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕಾಗೆ ಕೂತಿದೆ ಎಂಬ ಕಾರಣಕ್ಕೆ ಕಾರನ್ನೇ ಬದಲಿಸಿ ಸುದ್ದಿ ಮಾಡಿದ್ದರು. ಕಾರಿನ ಮೇಲೆ ಕಾಗೆಯೊಂದು ಕೂತಿದ್ದು ಅಪಶಕುನ ಎಂದು ಆಗ ಚರ್ಚೆಯಾಗಿತ್ತು. ಆದರೆ, ಅಂಥ ಮೂಢನಂಬಿಕೆಗಳನ್ನು ನಂಬುವುದಿಲ್ಲ ಎಂದು ಹೇಳಿದ್ದ ಅವರು ಬಳಿಕ ಕೆಲವು ದಿನಗಳ ನಂತರ ತಾಂತ್ರಿಕ ಕಾರಣ ಕೊಟ್ಟು ಕಾರು ಚೇಂಜ್ ಮಾಡಿದ್ದರು.
ವಾಸ್ತು ಪ್ರಕಾರ ದಕ್ಷಿಣಕ್ಕೆ ಬಾಗಿಲು ಯಾಕಿರಬಾರದು
ವಾಸ್ತು ಶಾಸ್ತ್ರದ ಪ್ರಕಾರ, ಯಮ ದಕ್ಷಿಣ ದಿಕ್ಕಿನ ಅಧಿಪತಿ ಮತ್ತು ಈ ದಿಕ್ಕಿನ ಗ್ರಹ ಮಂಗಳ, ಕೆಲವರಿಗೆ ಈ ಮಂಗಳಗ್ರಹ ಒಳ್ಳೆಯದಲ್ಲ. ಇದರಿಂದ ದಕ್ಷಿಣ ಮುಖವಾಗಿ ಬಾಗಿಲು ಇದ್ದರೆ ಮನೆಯವರಿಗೆ ಕೆಲವು ಆರ್ಥಿಕ ಮತ್ತು ಆರೋಗ್ಯದ ಸಮಸ್ಯೆಗಳು ನಿರಂತರವಾಗಿ ಕಾಡುತ್ತದೆ ಎನ್ನುತ್ತಾರೆ. ಹಾಗಾಗಿ ಹೆಚ್ಚಿನವರು ದಕ್ಷಿಣಕ್ಕೆ ಬಾಗಿಲಿರುವ ಮನೆಗಳನ್ನು ನಿರಾಕರಿಸುತ್ತಾರೆ.
ಇದನ್ನೂ ಓದಿ: Rice Politics: ಇನ್ನೂ ಮುಗಿಯದ ಅಕ್ಕಿ ಬೇಟೆ, ಜುಲೈ ತಿಂಗಳಲ್ಲಂತೂ ಸಿಗೋದು ಡೌಟೆ