Site icon Vistara News

Tumkur Siddaganga Mutt: ತುಮಕೂರಿನ ಸಿದ್ದಗಂಗಾ ಮಠ ಸೇರಿ ಶಾಖಾ ಮಠಗಳ ಉತ್ತರಾಧಿಕಾರಿಗಳಿಗೆ ಪಟ್ಟಾಭಿಷೇಕ

Coronation of successors of branch mutts including Tumkur Siddaganga Mutt

ತುಮಕೂರು: ತುಮಕೂರಿನ ಸಿದ್ದಗಂಗಾ ಮಠ (Tumkur Siddaganga Mutt), ರಾಮನಗರ ಜಿಲ್ಲೆ‌ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠ ಹಾಗೂ ವಿಜಯಪುರ ಬಸವಕಲ್ಯಾಣ ಮಠದ ಉತ್ತರಾಧಿಕಾರಿಗಳನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಅವರಿಗೆ ಭಾನುವಾರ (ಏಪ್ರಿಲ್‌ 23) ನಿರಾಭಾರಿ ನಿರಂಜನ ಜಂಗಮಪಟ್ಟಾಧಿಕಾರ ಮಹೋತ್ಸವವನ್ನು ಇಲ್ಲಿನ ಸಿದ್ದಗಂಗಾ ಮಠದಲ್ಲಿ ನೆರವೇರಿಸಿ, ಪಟ್ಟಾಭಿಷೇಕ ನೆರವೇರಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಉತ್ತರಾಧಿಕಾರಿಗಳ ನೂತನ ಅಭಿದಾನವನ್ನು ಘೋಷಣೆ ಮಾಡಲಾಯಿತು. ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ (ಪೂರ್ವಾಶ್ರಮದ ಹೆಸರು ಮನೋಜ್ ಕುಮಾರ್) ಬಂಡೇ ಮಠದ ಉತ್ತರಾಧಿಕಾರಿಯಾಗಿ ಶ್ರೀಮಹಾಲಿಂಗ ಸ್ವಾಮೀಜಿ (ಪೂರ್ವಾಶ್ರಮದ ಹೆಸರು ಹರ್ಷ), ದೇವನಹಳ್ಳಿಯ ಬಸವ ಕಲ್ಯಾಣ ಮಠದ ಉತ್ತರಾಧಿಕಾರಿಯಾಗಿ ಶ್ರೀ ಸದಾಶಿವ ಸ್ವಾಮೀಜಿ (ಪೂರ್ವಾಶ್ರಮದ ಹೆಸರು ಗೌರಿಶ್ ಕುಮಾರ್) ಅವರಿಗೆ ಅಭಿದಾನ ಘೋಷಣೆ ಮಾಡಲಾಯಿತು.

ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಹಾಗೂ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು, ಹಲವು ಮಠಾಧ್ಯಕ್ಷರು ಹಾಗೂ ಮಠದ ಪ್ರಮುಖರು ಭಾಗಿಯಾಗಿದ್ದರು. ಭಾನುವಾರ ಬಸವ ಜಯಂತಿ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಶ್ರೀ ಮಠದ ಭಕ್ತಾದಿಗಳು, ಸಾರ್ವಜನಿಕರು ಹಾಗೂ ಹಿತೈಷಿಗಳು ಭಾಗಿಯಾಗಿದ್ದರು.

ಶಿವಕುಮಾರ್ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುವ ಮೂಲಕ ನಿರಾಭಾರಿ ನಿರಂಜನ ಜಂಗಮಪಟ್ಟಾಧಿಕಾರ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಬೆಳಗಿನ ಜಾವದಿಂದಲೇ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು.

ಪಟ್ಟಾಭಿಷೇಕ ಪಡೆದ ವಟುಗಳ ತಂದೆ, ತಾಯಿಗೆ ಗೌರವ ನಮನ

ಇದಕ್ಕೂ ಮೊದಲು ನೂತನ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ಪಡೆದ ಮೂವರು ವಟುಗಳ ತಂದೆ ತಾಯಿಗೆ ಗೌರವ ನಮನ ಸಲ್ಲಿಸಲಾಯಿತು. ಸಿದ್ದಗಂಗಾ ಮಠದ ಆಡಳಿತ ಮಂಡಳಿ ವತಿಯಿಂದ ಶಾಲು ಹೊದಿಸಿ, ಗೌರವ ಸಲ್ಲಿಸಲಾಯಿತು.

ಶಿವಕುಮಾರ ಶ್ರೀಗಳ ಬದುಕು, ಸಾಧನೆ ವಿಸ್ಮಯ, ಆಶ್ಚರ್ಯ: ಸಿದ್ದಲಿಂಗ ಸ್ವಾಮೀಜಿ

ಇಂದು ಬಸವ ಜಯಂತಿ ಪವಿತ್ರ ಸಮಾರಂಭದ ವೇಳೆ ಮಠದಲ್ಲಿ ಮಂಗಳ ಸಮಾರಂಭ ನಡೆದಿದೆ. ಉತ್ತರಾಧಿಕಾರಿ ನೇಮಕದ ಚಿಂತನೆ ಮಾಡಿ ಮನೋಜ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ನಿಮಿತ್ತವಾಗಿ ಶ್ರೀ ಶಿವಸಿದ್ದೇಶ್ವರ ಎಂದು ಅಭಿದಾನ ಮಾಡಿದ್ದೇವೆ. ಶಿವಕುಮಾರ ಶ್ರೀಗಳ ಉತ್ತರಾಧಿಕಾರಿಯಾಗಿ ನಾನು ಹೇಗೆ ಆಯ್ಕೆ ಆದೆ ಎಂಬುದೇ ನನಗೆ ಗೊತ್ತಿಲ್ಲ. ನನಗೆ ವಿದ್ಯೆ, ರೂಪ, ಬುದ್ಧಿ ಏನೂ ಇರಲಿಲ್ಲ. ನನ್ನಲ್ಲಿನ ಯಾವ ಗುಣ ಶಿವಕುಮಾರ ಶ್ರೀಗಳಿಗೆ ಇಷ್ಟ ಆಯಿತೋ ಗೊತ್ತಿಲ್ಲ. ಅಂತೂ ನಾನು ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾದೆ‌. ಶಿವಕುಮಾರ ಶ್ರೀಗಳ ಬದುಕು, ಸಾಧನೆ ವಿಸ್ಮಯ, ಆಶ್ಚರ್ಯಕರ ಎಂದು ಸಿದ್ದಗಂಗಾ ಮಠದ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಸಿದ್ದಗಂಗಾ ಮಠದಲ್ಲಿ ವಠುಗಳ ತಂದೆ-ತಾಯಿಗಳಿಗೆ ಗೌರವ ನೀಡಿದ ವಿಡಿಯೊ ಇಲ್ಲಿದೆ

ಶಿವಕುಮಾರ ಶ್ರೀಗಳ ಆಶಯದಂತೆ ಆಶೀರ್ವಾದದಂತೆ ಮಠ ನಡೆಯುತ್ತಿದೆ. ನೀತಿ ಸಂಹಿತೆಯಿಂದಾಗಿ ಇಂದು ಸರಳವಾಗಿ ಕಾರ್ಯಕ್ರಮವನ್ನು ನಡೆಸಲಾಗಿದೆ. ನಮ್ಮ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮಿಗಳು, ಶಿವಕುಮಾರ ಶ್ರೀಗಳ ಕಾರುಣ್ಯಕ್ಕೆ ಒಳಗಾದವರು. ಹಾಗಾಗಿ ಶಿವಕುಮಾರ ಶ್ರೀಗಳು ಹೇಳುತ್ತಿದ್ದುದನ್ನು ನಾನಿಲ್ಲಿ ಹೇಳಬಯಸುತ್ತೇನೆ. ನಾನು ಅಲ್ಪ ಆಯುಷಿ ಎಂದು ಶಿವಕುಮಾರ ಶ್ರೀಗಳು ನನಗೆ ಹೇಳುತ್ತಿದ್ದರು. ಹಾಗಾಗಿ ಅವರೇ ನನ್ನ ಉತ್ತರಾಧಿಕಾರಿಯನ್ನು ನೇಮಿಸಿಕೊಳ್ಳುವಂತೆ ಹೇಳುತ್ತಿದ್ದರು. ಆದರೆ ನಾನು ಒಪ್ಪಿರಲಿಲ್ಲ. ಈ ವಿಚಾರ ನೆನಪಿಸುತ್ತಲೇ ಸಿದ್ದಲಿಂಗ ಸ್ವಾಮೀಜಿಗಳು ಗದ್ಗದಿತರಾದರು.

ಶಿವಕುಮಾರ ಶ್ರೀಗಳು ಅಧಿಕಾರ ಹಸ್ತಾಂತರ ಮಾಡಿದರೂ ಸಹ ಅವರೇ ಎಲ್ಲವನ್ನೂ ನೋಡಿಕೊಳ್ಳುತಿದ್ದರು. ನಾನು ಯಾವತ್ತು ಅಧಿಕಾರ‌ ಕುರ್ಚಿಗಾಗಿ ಆಸೆ ಪಟ್ಟವನಲ್ಲ, ಪಡುವವನೂ ಅಲ್ಲ. ನೂತನ ಉತ್ತರಾಧಿಕಾರಿ ನೇಮಕದಿಂದ ನನ್ನ ಕಾರ್ಯ ಬಾಹುಳ್ಯ ಕಡಿಮೆ ಆಗಬಹುದು ಎಂದು ಹೇಳಿದರು.

Exit mobile version