ನಮಗೆಲ್ಲರಿಗೂ ತಿಳಿದಿರುವಂತೆ ಸೂರ್ಯನು ಪ್ರತಿ ತಿಂಗಳು ಒಂದೊಂದು ರಾಶಿಯಲ್ಲಿ ಸಂಚರಿಸುತ್ತಾನೆ. ಚಾಂದ್ರಮಾನದ ಪ್ರಕಾರ ಸೂರ್ಯನು ಹೀಗೆ ಸಂಚರಿಸುವುದನ್ನು ಒಂದು ಮಾಸವೆಂದು ಪರಿಗಣಿಸಿ, ಮಾಸಕ್ಕೆ ಒಂದೊಂದು ಹೆಸರಿಟ್ಟು ಕರೆಯಲಾಗುತ್ತದೆ. ಚೈತ್ರ, ವೈಶಾಖ… ಹೀಗೆ 12 ಮಾಸಗಳು.
ಹಾಗೆಯೇ ಸೌರಮಾನದ ಪ್ರಕಾರ ಸೂರ್ಯನ ಸಂಚಾರವು ಒಂದೊಂದು ರಾಶಿಯಲ್ಲಿ ಆಗುತ್ತಿದ್ದಂತೆಯೇ ಆಯಾ ರಾಶಿಯ ಹೆಸರಿನಲ್ಲಿ ಆ ಮಾಸವನ್ನು ಕರೆಯಲಾಗುತ್ತದೆ. ಉದಾಹರಣೆಗೆ ಮೇಷ ಮಾಸ, ವೃಷಭ ಮಾಸ, ಮಿಥುನ….ಹೀಗೆ. ಆರು ತಿಂಗಳಿಗೊಮ್ಮೆ ಪಥ ಬದಲಿಸುವ ಸೂರ್ಯ ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದನ್ನು ಮಕರ ಸಂಕ್ರಮಣ ವೆಂತಲೂ. ಮಿಥುನರಾಶಿಯಿಂದ ಕಟಕ ರಾಶಿಗೆ ಪ್ರವೇಶಿಸುವುದನ್ನು ಕಾರ್ಕಟಕ ಸಂಕ್ರಮಣ ವೆಂತಲೂ ಕರೆಯುತ್ತಾರೆ. ಮಕರ ಸಂಕ್ರಮಣದ ನಂತರ ಸೂರ್ಯ ಉತ್ತರಕ್ಕೆ ಸಾಗುವುದನ್ನು ಉತ್ತರಾಯಣ ಎಂದು, ಕಾರ್ಕಟಕ ಸಂಕ್ರಮಣದ ನಂತರ ದಕ್ಷಿಣಾಯಣ (Dakshinayana 2023) ಎಂದು ಕರೆಯುತ್ತೇವೆ.
ಕಳೆದ ಆರು ತಿಂಗಳಿಂದ ಉತ್ತರ ದಿಕ್ಕಿನತ್ತ ಸಾಗಿದ್ದ ಸೂರ್ಯ ತನ್ನ ಈಗ ತನ್ನ ಪಥವನ್ನು ಬದಲಿಸಿ ದಕ್ಷಿಣದತ್ತ ಸಾಗುತ್ತಾನೆ. ಹಾಗಾಗಿ ದಕ್ಷಿಣಾಯನ ಕಾಲ ಆರಂಭವಾಗುತ್ತಿದೆ.
ಎಂದಿನಿಂದ ದಕ್ಷಿಣಾಯನ?
ಉತ್ತರಾಯಣ ಸಾಮಾನ್ಯವಾಗಿ ಪ್ರತಿ ವರ್ಷದ ಜನವರಿ 14, 15ರಂದು ಬರುತ್ತದೆ. ದಕ್ಷಿಣಾಯನ ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ 15, 16 ಅಥವಾ 17 ರಂದು ಬರುತ್ತದೆ. ದಕ್ಷಿಣಾಯನ ಹಾಗೂ ಉತ್ತರಾಯನವನ್ನು ಯಾವುದೇ ತಿಥಿಗಳ ಆಧಾರದಲ್ಲಿ ಲೆಕ್ಕಾಚಾರ ಹಾಕಿ ಹೇಳಲಾಗುವುದಿಲ್ಲ. ಸೂರ್ಯನ ಸಂಚಾರದ ಲೆಕ್ಕಾಚಾರದಲ್ಲಿ ಹೇಳಲಾಗುತ್ತದೆ. ಸೂರ್ಯನು ಭೂಮಧ್ಯ ರೇಖೆಯ ಉತ್ತರದಲ್ಲಿ ಕಾಣಿಸಿಕೊಂಡಾಗ ಅದನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. ಹಾಗೇ ಸೂರ್ಯನು ಭೂಮಧ್ಯ ರೇಖೆಯ ದಕ್ಷಿಣಕ್ಕೆ ಪ್ರಯಾಣಿಸಿದಾಗ ಅದನ್ನು ದಕ್ಷಿಣಾಯನ ಎಂದು ಕರೆಯಲಾಗುತ್ತದೆ. ಸೂರ್ಯನು ಕಟಕ ರಾಶಿ ಪ್ರವೇಶಿಸುತ್ತಿದ್ದಂತೆಯೇ ದಕ್ಷಿಣಾಯನ ಆರಂಭವಾಗುತ್ತದೆ.
ಸೂರ್ಯನ ಈ ಉತ್ತರಾಯಣ ಮತ್ತು ದಕ್ಷಿಣಾಯಣ ಚಲನೆಯಿಂದಾಗಿ ಹಗಲು ಮತ್ತು ರಾತ್ರಿಯ ವೇಳೆಯಲ್ಲಿ ಬದಲಾವಣೆಗಳಾಗಲಿವೆ. ಉತ್ತರಾಯನದ ಸಮಯದಲ್ಲಿ ಹಗಲು ದೀರ್ಘ ವಾಗಿರುತ್ತದೆ ಮತ್ತು ರಾತ್ರಿಯ ಅವಧಿ ಕಡಿಮೆಯಾಗಿರುತ್ತದೆ. ಆದರೆ ದಕ್ಷಿಣಾಯನದ ಸಮಯದಲ್ಲಿ ರಾತ್ರಿಯ ಅವಧಿ ಹೆಚ್ಚಾಗಿರುತ್ತದೆ ಮತ್ತು ಹಗಲಿನ ವೇಳೆ ಕಡಿಮೆಯಾಗಿರುತ್ತದೆ.
ಈ ವರ್ಷ ದಕ್ಷಿಣಾಯನವು ಜುಲೈ 17 ರಂದು ಆರಂಭವಾಗಲಿದೆ. ಸೂರ್ಯನು ಸಂಜೆ 5.11ಕ್ಕೆ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಆದ್ದರಿಂದ 20 ಘಳಿಗೆ ಮುನ್ನವೇ ಪರ್ವಕಾಲ ಆರಂಭವಾಗುತ್ತದೆ. ದಕ್ಷಿಣಾಯನ ಪುಣ್ಯಕಾಲವು ಮಧ್ಯಾಹ್ನ 12 ರಿಂದ ಆರಂಭವಾಗಲಿದೆ ಎಂದು ಕೆಲ ಪಂಚಾಂಗದಲ್ಲಿ ಹೇಳಿದ್ದರೆ, ಇನ್ನು ಕೆಲವು ಪಂಚಾಂಗದ ಪ್ರಕಾರ ದಕ್ಷಿಣಾಯನ ಪುಣ್ಯಕಾಲವು ಬೆಳಗ್ಗೆ 9.11 ರಿಂದ ಸಂಜೆ 5.11ರ ವರೆಗೆ ಇರಲಿದೆ.
ಧಾರ್ಮಿಕವಾಗಿ ಈ ಸಂಕ್ರಮಣದ ನಂತರ ದೇವತೆಗಳಿಗೆ ರಾತ್ರಿ ಕಾಲ ಆರಂಭವಾಗುತ್ತದೆ. ಮಾನವರಿಗೆ ಒಂದು ವರ್ಷವಾದರೆ, ಅದು ದೇವತೆಗಳಿಗೆ ಒಂದು ದಿನಕ್ಕೆ ಸಮ. ಉತ್ತರಾಯನ ಹಗಲಾದರೆ, ದಕ್ಷಿಣಾಯನ ರಾತ್ರಿಯ ಸಮಯ. ಸಾಮಾನ್ಯವಾಗಿ ಈ ದಕ್ಷಿಣಾಯನ ಪುಣ್ಯಕಾಲವನ್ನು ಸಂಪ್ರದಾಯವಾದಿಗಳು ಮಾತ್ರ ಆಚರಿಸುತ್ತಾರೆ. ಜಪ ಮಾಡುವುದು, ತರ್ಪಣ ನೀಡುವುದು ಮಾಡುತ್ತಾರೆ. ಹೆಚ್ಚಾಗಿ ಸಾಮಾನ್ಯ ಜನರು ಯಾವ ಆಚರಣೆಯನ್ನೂ ಮಾಡುವುದಿಲ್ಲ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ವಿಶೇಷವಾದ ದಿನ
ಕಾರ್ಕಟಕ ಸಂಕ್ರಮಣವು ಬಹಳ ವಿಶೇಷವಾದ ದಿನ. ಅಮಾವಾಸ್ಯೆಯಂದು ಈ ಸಂಕ್ರಮಣ ಸಂಭವಿಸುತ್ತಿದೆ. ಈ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಅಲ್ಲದೆ, ದಿವಸೀ ಅಮಾವಾಸ್ಯೆ, ನಾಗನ-ಭೀಮನ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಇಂದು ದೀಪಸ್ತಂಭಗೌರೀ ವತ್ರ, ಸೋಮವತೀವ್ರತ, ಮಂಗಳಗೌರೀ ವ್ರತ (ನವ ವಧುಗಳಿಂದ) ಆಚರಿಸಲಾಗುತ್ತದೆ.
ಈ ದಿನ ಪದ್ಮಕಯೋಗವಿದ್ದು, ಈ ದಿನ ದಾನ, ಹೋಮಾದಿಗಳನ್ನು ಆಚರಿಸುವುದರಿಂದ ನೂರಾರು ಗ್ರಹಣಗಳಲ್ಲಿ ಮಾಡಿದ ಕಾರ್ಯದ ಪುಣ್ಯಫಲ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಇದನ್ನೂ ಓದಿ : Prerane : ದೇವರ ಅವತಾರ; ಏನಿದೆ ಇದರ ಹಿಂದಿನ ವಿಚಾರ?
ಪುಣ್ಯ ಸಂಚಯನದ ಕಾಲ
ದಕ್ಷಿಣಾಯನವನ್ನು ಪುಣ್ಯ ಸಂಚಯನಕಾಲ ಎಂದು ಕರೆಯಲಗಿದೆ. ಈ ಸಮಯದಲ್ಲಿ ವ್ರತಗಳ ಆಚರಣೆ ಹೆಚ್ಚು. ಚಾತುರ್ಮಾಸ್ಯ ಆಚರಣೆಯ ಜತೆ ಹಬ್ಬ ಹರಿದಿನಗಳ ಸಡಗರವೂ ಇರುತ್ತದೆ. ಈ ಪುಣ್ಯ ಪರ್ವಕಾಲದಲ್ಲಿ ಎಷ್ಟು ಶ್ರದ್ದೆಯಿಂದ ಪೂಜೆ ಪುನಸ್ಕಾರಗಳನ್ನು ನಾವು ಮಾಡುತ್ತೇವೆಯೋ ಅದಕ್ಕೂ ಹೆಚ್ಚಿನ ಫಲ ದೊರೆಯಲಿದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ಶುಭಕಾರ್ಯಗಳಿಗೆ ಪ್ರಶಸ್ತವಾದದ್ದು ಉತ್ತರಾಯಣವಾದರೆ ತರ್ಪಣಾದಿಗಳಿಗೆ ಪ್ರಶಸ್ತವಾದದ್ದು ದಕ್ಷಿಣಾಯನ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ಕಾಲದಲ್ಲಿ ಪುಣ್ಯಸ್ನಾನ, ಪೂಜೆ, ಜಪ, ದಾನಗಳನ್ನು ಮಾಡಿದರೆ, ತರ್ಪಣ ಕೊಟ್ಟರೆ ಸಮಸ್ತ ಪಾಪಗಳು ದೂರವಾಗುತ್ತವೆ, ಪುಣ್ಯವನ್ನು ಪಡೆಯಬಹುದು. ದಕ್ಷಿಣಾಯನ ಪುಣ್ಯಕಾಲದಲ್ಲಿ ಪಿತೃತರ್ಪಣ ಮಾಡುವುದರಿಂದ ಪಿತೃಗಳಿಗೆ ತೃಪ್ತಿ ದೊರೆಯುತ್ತದೆ ಎಂದು ಕೂಡ ಶಾಸ್ತ್ರಗಳಲ್ಲಿ ವಿವರಿಸಲಾಗಿದೆ.