Site icon Vistara News

Deepavali 2022 | ಬಹುಸಂಸ್ಕೃತಿಯ ಬೆಳಕಲ್ಲಿ ಬಹು ದೊಡ್ಡ ಹಬ್ಬ ದೀಪಾವಳಿ

Deepavali 2022

ಈ ಲೇಖನವನ್ನು ಇಲ್ಲಿ ಕೇಳಿ ಭಾಗ-1

https://vistaranews.com/wp-content/uploads/2022/10/WhatsApp-Ptt-2022-10-23-at-11.20.07-AM.ogg

ಡಾ. ಗಣಪತಿ ಆರ್ ಭಟ್
“ಅಸತೋ ಮಾ ಸದ್ಗಮಯ
ತಮಸೋ ಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂ ಗಮಯ”

ಕತ್ತಲೆಯಿಂದ ಬೆಳಕಿನೆಡೆಗೆ ಸಾಗುತ್ತಿರಬೇಕು ನಾವು.

ಕತ್ತಲೆಯು ನಮ್ಮೆದುರು ಇರುವುದನೆಲ್ಲ ಮರೆಮಾಚಿದರೆ, ಹಚ್ಚಿಟ್ಟ ಹಣತೆಯು ಸುತ್ತ ಇರುವುದನೆಲ್ಲ ಬೆಳಗುತ್ತದೆ. ಕತ್ತಲ ವಿರುದ್ಧ ದೀಪವು ನಡೆಸುವ ಯುದ್ಧದಲ್ಲಿ ದೀಪಕ್ಕೇ ಗೆಲುವು ಕಟ್ಟಿಟ್ಟಬುತ್ತಿ. ದೀಪವು ಕತ್ತಲನ್ನು ಹೋಗಲಾಡಿಸಬಹುದೇ ವಿನಃ ಕತ್ತಲು ದೀಪವನ್ನಲ್ಲ. ಜೀವನದುದ್ದಕ್ಕೂ ನಮ್ಮ ಆಂತರ್ಯದಲ್ಲಿ ಇಂಥಹುದೇ ಯುದ್ಧ ನಡೆಯುತ್ತಿರುತ್ತದೆ. ಅಜ್ಞಾನವು ಬದುಕಿನ ನಾನಾ ಸತ್ಯವನ್ನು ಮರೆಮಾಚಿದರೆ, ಜ್ಞಾನವು ಬದುಕಿನ ವಾಸ್ತವವನ್ನು ದರ್ಶನಮಾಡಿಸುತ್ತದೆ. ಅದಕ್ಕಾಗಿ ಹಿರಿಯರು ಬೆಳಕನ್ನು ಜ್ಞಾನದ ಸಂಕೇತವನ್ನಾಗಿ ಕಂಡಿದ್ದಾರೆ. ಪರಮಾತ್ಮನು ಜ್ಞಾನಮಯನು. ಹಾಗಾಗಿ ದೀಪವನ್ನು ಪರಮಾತ್ಮನ ಸ್ವರೂಪವೆಂದು ಭಾವಿಸಲಾಗಿದೆ.

ದೀಪಮೂಲೆ ತತೋ ಬ್ರಹ್ಮಾ ದೀಪಮಧ್ಯೇ ತತೋ ಹರಿಃ।
ದೀಪಾಗ್ರೇ ಶಂಕರಃ ಪ್ರೋಕ್ತಃ ಸಂಧ್ಯಾಜ್ಯೋತಿರ್ನಮೋಸ್ತುತೇ ।।

ಎನ್ನುತ್ತಾ ದೀಪದ ಆದಿಯಲ್ಲಿ ಬ್ರಹ್ಮನು, ಮಧ್ಯದಲ್ಲಿ ವಿಷ್ಣುವು, ಮೇಲ್ಭಾಗದಲ್ಲಿ ಶಿವನು ಹೀಗೆ ತ್ರಿಮೂರ್ತಿಮಯ ದೀಪಕ್ಕೆ ನಮಸ್ಕರಿಸುತ್ತ ಪ್ರತಿನಿತ್ಯ ದೀಪ ಹಚ್ಚವುದು ನಮ್ಮೆಲ್ಲರ ಸಂಸ್ಕೃತಿ. ಪರಮಾತ್ಮನ ಇರುವಿಕೆಯನ್ನು ದೀಪದ ಮೂಲಕ ಕಾಣುವುದೇ ನಮ್ಮ ಭಾರತೀಯ ಆಧ್ಯಾತ್ಮದ ವೈಶಿಷ್ಟ್ಯ. ಹೀಗೆ ದೀಪದ ಮಹತ್ವವನ್ನು ಮನಗಂಡು ನಿತ್ಯ ದೀಪವನ್ನು ಹಚ್ಚುವುದಲ್ಲದೆ, ಅದರ ಆರಾಧನೆಗೆಂತಲೇ ದೀಪಾವಳಿ (Deepavali 2022) ಪರ್ವವನ್ನು ಆಚರಿಸುವುದು ಅತ್ಯಂತ ವಿಶೇಷವಾದುದು. ‘ದೀಪಾನಾಮ್ ಆವಲಿಃ’ ಎಂಬುದಾಗಿ ದೀಪಾವಳಿಯೆಂದರೆ ದೀಪಗಳನ್ನು ಹಚ್ಚಿ ಸಾಲು ಸಾಲಾಗಿ ಜೋಡಿಸುವ, ಸಂಭ್ರಮಿಸುವ ಸಂದರ್ಭವೆಂದು ‘ದೀಪಾವಳಿ’ ಹೆಸರಲ್ಲೇ ಗೊತ್ತಾಗುತ್ತದೆ. ಅದಕ್ಕೆ ಪೂರಕವೆಂಬಂಥಹ ಅನೇಕ ಪೌರಾಣಿಕ ಪ್ರಸಂಗಗಳು ಈ ದೀಪಾರಾಧನೆಗೆ ಹಿನ್ನೆಲೆಯನ್ನು ಒದಗಿಸುತ್ತವೆ.

ಇಂದಿನ ದಿನಮಾನದಲ್ಲಿ ಸಂಕುಚಿತಗೊಂಡು ಮೂರೇ ದಿನ ಆಚರಿಸಲ್ಪಡುವ ದೀಪಾವಳಿಯು ವಾಸ್ತವದಲ್ಲಿ ಆಶ್ವಯುಜ ಮಾಸದ ಕೃಷ್ಣ ತ್ರಯೋದಶಿಯಿಂದ ಆರಂಭವಾಗಿ ಕಾರ್ತಿಕ ಮಾಸದ ದ್ವಿತೀಯಾವರೆಗೆ ಐದು ದಿನಗಳವರೆಗೆ ನಡೆಯುವ ದೊಡ್ಡ ಹಬ್ಬ. ಅಲ್ಲದೆ, ಅಲ್ಲಿಂದ ಮೊದಲ್ಗೊಂಡು ಕಾರ್ತಿಕ ಮಾಸದ ಪೂರ್ಣಿಮೆಯವರೆಗೆ ಅಂದರೆ ಮುಂದೆ ಹದಿನಾಲ್ಕು ದಿನಗಳ ಕಾಲ ಈ ದೀಪಾರಾಧನೆ ನಡೆಯುತ್ತದೆ. ದೀಪವೇ ಈ ಸಂದರ್ಭದಲ್ಲಿ ಪ್ರಮುಖ ಆರಾಧ್ಯ ವಿಷಯವಾಗುವುದು ನಮ್ಮ ಭಾರತೀಯ ಧರ್ಮದ ವಿಷಯ ಸೌಕ್ಷ್ಮ್ಯದ ದ್ಯೋತಕವೇ ಸರಿ. ಸನಾತನವಾದ ನಮ್ಮ ಸಂಸ್ಕೃತಿಯಲ್ಲಿ ಬೆಳಕಿಗೆ ಮತ್ತು ಅದು ಸಂಕೇತಿಸುವ ಜ್ಞಾನಕ್ಕೆ ಎಷ್ಟೆಲ್ಲ ಮಹತ್ವ ಕೊಡಲಾಗಿದೆ ಎಂಬುದಕ್ಕೆ ದೀಪಾವಳಿ ಮತ್ತು ಕಾರ್ತಿಕ ಮಾಸದ ದೀಪೋತ್ಸವಗಳೇ ನಿದರ್ಶನ.

Deepavali 2022

ಐದುದಿನ, ಎರಡು ಮಾಸ
ಭಾರತೀಯ ಹಬ್ಬ-ಹರಿದಿನಗಳ ಪೈಕಿ ದೊಡ್ಡಹಬ್ಬವಾದ ಈ ದೀಪಾವಳಿಯು, ಅನೇಕ, ಪೌರಾಣಿಕ ಪ್ರಸಂಗಗಳನ್ನು ಹೊಂದಿಸಿಕೊಂಡ, ಅನೇಕ ದಿನಗಳವರೆಗೆ ವಿಸ್ತರಿಸಿಕೊಂಡ, ಮಹತ್ತರವಾದ ತತ್ವವನ್ನು ಒಳಗೊಂಡ, ವಿಶೇಷ ಹಬ್ಬವೇ ಹೌದು. ಬೇರೆಲ್ಲ ಹಬ್ಬಗಳು ಯಾವುದಾದರೂ ಒಂದು ಹಿನ್ನಲೆಯಿಂದ ಆಚರಿಸಲ್ಪಟ್ಟರೆ ಐದು ದಿನಗಳ ಕಾಲ ಆಚರಿಸಲ್ಪಡುವ ದೀಪಾವಳಿಯಲ್ಲಿ ಒಂದೊಂದು ದಿನಕ್ಕೂ ಒಂದೊಂದು ಬಗೆಯ ಹಿನ್ನೆಲೆಯಿದೆ. ಇನ್ನೂ ಒಂದು ವಿಶೇಷವೆಂದರೆ ಆಶ್ವಯುಜ ಮಾಸದ ಬಹುಳ ತ್ರಯೋದಶಿಯಿಂದ ಆರಂಭವಾಗಿ, ಕಾರ್ತಿಕ ಮಾಸದ ಶುದ್ಧ ದ್ವಿತೀಯಾವರೆಗೆ ಈ ಹಬ್ಬವು ಒಟ್ಟೂ ಐದು ದಿನಗಳಲ್ಲಿ ಎರಡು ಮಾಸಗಳನ್ನು ಸಂಧಿಸುತ್ತದೆ.

ಧನಲಾಭಕ್ಕಾಗಿ ಧನತ್ರಯೋದಶಿ
ನರಕ ಚತುರ್ದಶಿಯ ಹಿನ್ನಾದಿನವನ್ನು ಧನತ್ರಯೋದಶಿಯೆಂದು ಕರೆಯಲಾಗುತ್ತದೆ. ಉತ್ತರ ಭಾರತದಲ್ಲಿ ಈ ದಿನಕ್ಕೆ ಧನ್ ತೆರಾಸ್ ಎಂಬ ಹೆಸರಿದೆ.

ಪೂಜನೀಯಾ ತಥಾ ಲಕ್ಷ್ಮೀರ್ವಿಜ್ಞೇಯಾ ಸುಖಸುಪ್ತಿಕಾ।
ಸುಖರಾತ್ರ್ಯಾಂ ಪ್ರದೋಷೇ ತು ಕುಬೇರಂ ಪೂಜಯನ್ತಿ ಹಿ।।

ಈ ಲೇಖನವನ್ನು ಇಲ್ಲಿ ಕೇಳಿ ಭಾಗ-2

https://vistaranews.com/wp-content/uploads/2022/10/WhatsApp-Ptt-2022-10-23-at-11.20.08-AM-1.ogg

ಧನಲಾಭಕ್ಕಾಗಿ ಸಂಪತ್ತಿನ ಒಡೆಯ ಕುಬೇರನನ್ನು, ಧನದ ದೇವತೆಯಾದ ಲಕ್ಷ್ಮಿಯ ಜೊತೆಗೂಡಿ ಆವಾಹಿಸಿ ಪೂಜೆ ಮಾಡಲಾಗುವುದು. ಅಂದೇ ಆಯುರ್ವೇದದ ಪಿತಾಮಹನಾದ ಧನ್ವಂತರಿಯು ಆವಿರ್ಭವಿಸಿದ ದಿನವೂ ಹೌದು. ಆಯುರೋಗ್ಯ ವೃದ್ಧಿಗಾಗಿ ಧನ್ವಂತರಿಯ ಪೂಜೆ ಮಾಡಲಾಗುವುದಲ್ಲದೆ ಬಹುತೇಕ ಕಡೆಗಳಲ್ಲಿ ಅಂದು ಸಂಜೆಯ ವೇಳೆ ಹಂಡೆ, ಬಾನಿ ಇತ್ಯಾದಿಗಳಲ್ಲಿ ನೀರು ತುಂಬುವ ಸಂಪ್ರದಾಯವಿದೆ. ನಮ್ಮ ನಾಡಿನ ಮಲೆನಾಡು ಭಾಗಗಳಲ್ಲಿ ನೀರಿನ ಹಂಡೆಯನ್ನು ಬಿಳಿಮಣ್ಣು, ಕೆಮ್ಮಣ್ಣುಗಳಿಂದ ಅಲಂಕರಿಸಿ ಹೊಸನೀರು ತುಂಬಿ ಹಂಡೆಯ ಬಾಯಿಯನ್ನು ಬಾಳೆಎಲೆ ಮತ್ತು ಶಿಂಡ್ಲೆ ಎಂಬ ಕಹಿಯಾದ ಹಣ್ಣಿನಬಳ್ಳಿಯಿಂದ ಕಟ್ಟಲಾಗುತ್ತದೆ.

ಮಾರನೇ ದಿನ ಅದೇ ನೀರನ್ನು ಸ್ನಾನ ಮಾಡಿ ಮನೆ ಮಂದಿಯಲ್ಲ ಹಬ್ಬಕ್ಕೆ ಅಣಿಯಾಗುತ್ತಾರೆ. ಕಲಶದಲ್ಲಿ ನೀರು ತುಂಬುವ ಹವ್ಯಕರ ಬೂರೆಹಬ್ಬವೂ ಅಂದೇ ಇರುತ್ತದೆ. ಇನ್ನು ತ್ರಯೋದಶಿಯ ದಿನ ಸಂಜೆಯ ಹೊತ್ತು ಯಮರಾಜನನ್ನು ನೆನೆಯುತ್ತಾ ಮನೆಯ ಹೊರಗಡೆ ದೀಪವನ್ನು ಹಚ್ಟಿಡಬೇಕು. ಇದರಿಂದ ಯಮಧರ್ಮರಾಜನು ಖುಷಿಗೊಂಡು ಅಪಮೃತ್ಯುವನ್ನು ನಿವಾರಿಸುತ್ತಾನೆ ಎಂದು ಸ್ಕಾಂದ ಪುರಾಣದಲ್ಲಿ ಹೇಳಲಾಗಿದೆ. ಇದನ್ನು ‘ಯಮದೀಪ’ ಎನ್ನಲಾಗಿದೆ.

ನರಕ ಚತುರ್ದಶಿ
ದೀಪಾವಳಿಯ (Deepavali 2022) ಎರಡನೇ ದಿನವು ಅಂದರೆ ಆಶ್ವಯುಜ ಮಾಸದ ಕೃಷ್ಣಚತುರ್ದಶಿಯ ದಿನವು “ನರಕ ಚತುರ್ದಶಿ” ಎಂದು ಪ್ರಸಿದ್ಧವಾಗಿದೆ. ಕೃಷ್ಣನು ನರಕಾಸುರನನ್ನು ಕೊಂದು ಹದಿನಾರು ಸಾವಿರ ರಾಜಕುವರಿಯರ ಜೀವ, ಮಾನ ಕಾಪಾಡಿದನೆಂದು ನಂಬಲಾಗುತ್ತದೆ. ನರಕನ ಅಸುರಿತನ ನಿರ್ನಾಮವಾಗಿ ದೈವೀಶಕ್ತಿ ರಾರಾಜಿಸಿದುದರ ಸಂಕೇತವಾಗಿ ದೀಪ ಹಚ್ಚಿ ಸಂಭ್ರಮಿಸುವ ಪದ್ಧತಿ ಬಂತು ಎಂಬುದು ಪ್ರತೀತಿ. ಅಂದು ಮೈಗೆಲ್ಲ ಎಣ್ಣೆಯನ್ನು ಹಚ್ಚಿಕೊಂಡು ಅಭ್ಯಂಗ ಸ್ನಾನ ಮಾಡಿದರೆ ಸಕಲ ಪಾಪಗಳೆಲ್ಲ ಕಳೆದು ಹೋಗುವುದು ಎಂಬುದು ನಂಬಿಕೆ. ಶರತ್ ಕಾಲವಾಗಿರುವುದರಿಂದ ಚಳಿಗಾಲದ ಸಮಯದಲ್ಲಿ ತ್ವಚೆಯ ರಕ್ಷಣೆ ಮತ್ತು ಇನ್ನಿತರ ಆರೋಗ್ಯ ಲಾಭಕ್ಕಾಗಿ ಹಬ್ಬದ ಆಚರಣೆಯಲ್ಲಿಯೇ ಆರೋಗ್ಯಸೂತ್ರವನ್ನೂ ಹೇಳಿರುವುದು ಗಮನಾರ್ಹ ವಿಚಾರ.

ಲಕ್ಷ್ಮೀಪೂಜೆ
ಅಮಾವಾಸ್ಯೆಯ ದಿನ ಪ್ರದೋಷಕಾಲದಲ್ಲಿ ಮನೆ, ಅಂಗಡಿ, ಕಛೇರಿ ಇನ್ನಿತರ ವ್ಯವಹಾರ ಕೇಂದ್ರಗಳಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಪೂಜಿಸಲಾಗುವುದು.
“ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ..”
ಎಂಬುದಾಗಿ ಬಂಗಾರದ ಬಣ್ಣವುಳ್ಳ ಲಕ್ಷ್ಮಿಯನ್ನು ಕರೆತಾರೆಂದು ಅಗ್ನಿಯಲ್ಲಿ ಪ್ರಾರ್ಥಿಸುವ ಮಂತ್ರವು ಸೊಗಸಾಗಿದೆ.
ವೈಶ್ಯರಿಗೆ ದೀಪಾವಳಿಯು ವಿಶೇಷ ಹಬ್ಬ. ವ್ಯಾಪಾರಿಗಳು ತಮ್ಮ ಹಳೆಯ ಲೆಕ್ಕಪಟ್ಟಿಯನ್ನು ಸಮಾಪನಗೊಳಿಸಿ ಹೊಸ ಲೆಕ್ಕಪಟ್ಟಿಯನ್ನು ಇದೇ ದಿನ ಆರಂಭಿಸುತ್ತಿದ್ದರು ಎಂಬುದು ಕೂಡ ತಿಳಿದು ಬರುತ್ತದೆ.

ಪಿತೃಗಳ ದಾರಿದೀಪಕ್ಕಾಗಿ ಸಿಡಿಮದ್ದು: ಕುಲದ ಪೂರ್ವಜರನ್ನು ಸಂಸ್ಮರಿಸಿ ಅವರ ಪರಮಗತಿಗಾಗಿ ಪ್ರಾರ್ಥಿಸಿ ನರಕಚತುರ್ದಶೀ ಮತ್ತು ಅಮವಾಸ್ಯೆಯ ದಿನಗಳಂದು ಪಂಜು ಅಥವಾ ಕೊಳ್ಳಿಯನ್ನು ಹೊತ್ತಿಸಬೇಕು ಮತ್ತು ಬೆಂಕಿಕಿಡಿಗಳನ್ನು ಸಿಡಿಸಿ ಪಿತೃಗಳಿಗೆ ಆಕಾಶಮಾರ್ಗದಲ್ಲಿ ಸಂಚರಿಸಲು ದೀಪ ತೋರಿಸಬೇಕು ಎಂದು
ಉಲ್ಕಾಹಸ್ತಾಃ ನರಾಃ ಕುರ್ಯುಃ ಪಿತೃಣಾಂ ಮಾರ್ಗದರ್ಶನಮ್।
ಉಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತು ವ್ರಜಂತು ತೇ।।

ಎಂಬುದಾಗಿ ಸ್ಕಾಂದಪುರಾಣದ ವೈಷ್ಣವಖಂಡದಲ್ಲಿ ಹೇಳಲಾಗಿದೆ. ಈ ಅಂಶವನ್ನು ಮನಗಂಡೇ ಕ್ರಮೇಣ ದೀಪಾವಳಿಯ ಸಂದರ್ಭದಲ್ಲಿ ಪಟಾಕಿ, ಸಿಡಿಮದ್ದು ಸಿಡಿಸುವ ವಾಡಿಕೆ ಬಂತು ಎಂಬ ಅಭಿಪ್ರಾಯವೂ ಇದೆ.

ಬಲಿ ಪಾಡ್ಯಮಿ ಮತ್ತು ದ್ಯೂತ ಪ್ರತಿಪದಾ
ಮಹಾನ್ ದಾನಿಯೆಂದು ವಿಖ್ಯಾತನಾಗಿದ್ದ ಬಲಿಯ ಅಸುರಿತನವನ್ನು ಕೊನೆಗಾಣಿಸಲು ಮಹಾನ್ ವಿಷ್ಣುವು ವಾಮನಾವತಾರ ತಾಳಿ ಬಂದ ಕಥೆ ಪುರಾಣ ಪ್ರಸಿದ್ಧ.
ಬಲಿಯು ರಾಕ್ಷಸನಾದರೂ ದಾನಶೀಲನು. ಹಾಗಾಗಿಯೇ ವಾಮನಾವತಾರಿ ವಿಷ್ಣುವಿನಿಂದ ಪಾತಾಳಕ್ಕೆ ನೂಕಲ್ಪಟ್ಟರೂ ವರ್ಷದಲ್ಲಿ ಮೂರುದಿನ ಭೂಲೋಕದಲ್ಲಿ ಅವನಿಗೆ ಪೂಜೆ ಸಲ್ಲುವುದೆಂದು ಸ್ವತಃ ವಿಷ್ಣುವೇ ವರ ನೀಡಿದ. ದೀಪಾವಳಿಯ ಮೂರು ದಿನ ಬಲೀಂದ್ರ ಪೂಜೆ ಪ್ರಮುಖವಾದುದು. ಇಂದಿಗೂ ಕಾರ್ತಿಕ ಮಾಸದ ಶುದ್ಧ ಪಾಡ್ಯದ ದಿನವು ಬಲಿಪಾಡ್ಯವೆಂದೇ ಪ್ರಸಿದ್ಧ.

ಮಲೆನಾಡಿನ ಭಾಗಗಳಲ್ಲಿ ಅಡಿಕೆಯ ಸಿಂಗಾರ, ಸವತೆಕಾಯಿ ಇತ್ಯಾದಿ ಬೆಳೆಗಳನ್ನು ದೇವರ ಕೋಣೆಯಲ್ಲಿಟ್ಟು, ಬಲೀಂದ್ರನ ರೂಪದಲ್ಲಿ ಪೂಜಿಸುತ್ತಾರೆ. ಅದೇ ದಿನ ಜೂಜಾಡುವ ಪದ್ಧತಿಯೂ ಇದೆ. ಕಾರಣವಿಷ್ಟೆ. ಅಂದು ಪಾರ್ವತಿದೇವಿ ತನ್ನ ಪತಿ ಶಿವನನ್ನು ಪಗಡೆಯಾಟದಲ್ಲಿ ಸೋಲಿಸಿ ಖುಷಿಪಟ್ಟಳು. ಬ್ರಹ್ಮಪುರಾಣವಲ್ಲದೆ ಈ ಪ್ರಸಂಗವನ್ನು ಎಲ್ಲೋರಾದ ಗುಹೆಯಲ್ಲಿ ಕೂಡ ಕೆತ್ತಲಾಗಿದೆ. ಅಂದು ಜೂಜನ್ನಾಡಿ ಗೆದ್ದರೆ ವರ್ಷವಿಡೀ ನಲಿವಿನಿಂದಿರಬಹುದೆಂಬ ನಂಬಿಕೆಯಿಂದ ಜೂಜು ಆಡಿ ದ್ಯೂತಪ್ರತಿಪದಾ ಆಚರಿಸುವ ಪದ್ಧತಿ ಬಂತು.

Deepavali 2022

ಗೋವರ್ಧನಗಿರಿ ಉತ್ಸವ ಹಾಗೂ ಗೋಪೂಜೆ
ದೀಪಾವಳಿಯಲ್ಲಿ ಕೇವಲ ಭಗವಂತನಿಗಷ್ಟೇ ಪೂಜೆ ಸಲ್ಲುವುದಿಲ್ಲ. ಕೃಷಿ ಹಾಗೂ ಪಶುಸಂಪತ್ತುಗಳನ್ನೂ ಪೂಜಿಸಿ ಧನ್ಯತಾಭಾವವನ್ನು ಹೊಂದಲಾಗುತ್ತದೆ.
ಕೃಷ್ಣನು ಗೋವರ್ಧನ ಗಿರಿಯನ್ನು ತನ್ನ ಕಿರು ಬೆರಳಲ್ಲಿ ಎತ್ತಿ ಗೋವು ಹಾಗೂ ಗೋಕುಲವಾಸಿಗಳನ್ನು ಕಾಪಾಡಿದ ವಿಚಾರವು ಭಾಗವತ ಪುರಾಣದಿಂದ ತಿಳಿದುಬರುತ್ತದೆ. ಉತ್ತರ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರಪ್ರದೇಶದ ವೃಂದಾವನದ ಬಳಿ ಗೋವರ್ಧನ ಗಿರಿಯ ಬಳಿ ಇಂದಿಗೂ ಇದನ್ನು ದೊಡ್ಡ ಉತ್ಸವವಾಗಿ ಆಚರಿಸಲಾಗುತ್ತದೆ. ಗೋವರ್ಧನ ಪರ್ವತವನ್ನು ಅನ್ನದಿಂದ ನಿರ್ಮಿಸಿ ಪೂಜಿಸುವ ಕ್ರಮವೂ ಇದೆ. ಇದನ್ನು ‘ಅನ್ನಕೂಟ’ ಎಂದು ಕರೆದಿದ್ದಾರೆ.

ಕೃಷ್ಣನು ಪಶು ಸಂರಕ್ಷಣೆಯನ್ನು ಮಾಡಿದ ಇಂತಹ ಸಂದರ್ಭದಲ್ಲಿ ಜನರು ಕೊಟ್ಟಿಗೆಯನ್ನು ಶುಚಿಗೊಳಿಸಿ ಹಸುಗಳನ್ನು ಅಲಂಕರಿಸಿ ‘ಗೋಪೂಜೆ’ ಮಾಡುವ ವಾಡಿಕೆಯಂತೂ ಭಾರತದಾದ್ಯಂತ ಎಲ್ಲೆಡೆ ಇದೆ. ಕರ್ನಾಟಕದ ಮಲೆನಾಡು ಭಾಗಗಳಲ್ಲಿ ಗೋಪೂಜೆಯ ದಿನ ಸಾಯಂಕಾಲ ಹೋರಿಗಳನ್ನು ಸಿಂಗರಿಸಿ ದನದಬಯಲು ಆಚರಿಸುವ ಪದ್ಧತಿಯಿದೆ. ರಾಸುಗಳನ್ನು ಕಾಡು ಮೃಗಗಳು ಕೊಂದು ತಿನ್ನದಂತೆ ಹುಲಿಯಪ್ಪನನ್ನು ಪ್ರಾರ್ಥಿಸಲಾಗುತ್ತದೆ. ಇನ್ನು ಹಲವೆಡೆ ದರ್ಭೆಯಿಂದ ಹಗ್ಗ ಮಾಡಿ ಊರರಸ್ತೆಗಳಲ್ಲಿ ಕಟ್ಟಲಾಗುತ್ತದೆ. ಮಾರ್ಗಪಾಲೀ ದೇವಿಯು ಮಾರ್ಗಗಳ ರಕ್ಷಣೆ ಮಾಡುತ್ತಾಳೆ ಎಂಬುದು ನಂಬಿಕೆ. ಒಟ್ಟಾರೆ ಜಾನಪದ ಹಾಗೂ ವೈದಿಕ ಸಂಸ್ಕೃತಿಗಳೆರಡೂ ಪರಸ್ಪರ ಸಮ್ಮಿಲಿತಗೊಂಡು ದೀಪಾವಳಿಯಲ್ಲಿ ಬಗೆ ಬಗೆಯ ಆಚರಣೆಗಳು ಬಂದಿರುವುದು ಬಹಳವೇ ವಿಶೇಷ.

ಯಮದ್ವಿತೀಯಾ
ಕಾರ್ತಿಕಮಾಸದ ಎರಡನೇಯ ದಿನ ಯಮ ದ್ವಿತೀಯ ಎಂದು ಆಚರಿಸುವ ವಾಡಿಕೆಯಿದೆ. ಉತ್ತರಭಾರತದೆಲ್ಲೆಡೆ ಇದನ್ನು ‘ಭಾಯ್ ದೂಜ್’ ಎಂದು ಕರೆಯಲಾಗಿದೆ. ಯಮಧರ್ಮರಾಜನನ್ನು ಅವನ ಸಹೋದರಿ ಯಮುನೆಯು ತನ್ನ ಮನೆಗೆ ಕರೆದು ಔತಣ ಮಾಡಿ ಸತ್ಕರಿಸಿದ ದಿನವೆಂಬ ಪ್ರತೀತಿಯಿದೆ. ಅಂದು ಸಹೋದರರು ತಮ್ಮ ಸಹೋದರಿಯ ಮನೆಯಲ್ಲಿ ಆತಿಥ್ಯ ಸ್ವೀಕರಿಸುವರು. ಕುಟುಂಬಪ್ರಾಧಾನ್ಯತೆ ಇರುವ ನಮ್ಮ ದೇಶದ ಸಂಸ್ಕೃತಿಯನ್ನು ಸಾರುವ ಆಚರಣೆಯಿದು. ಅಣ್ಣ-ತಂಗಿಯರ ವಾತ್ಸಲ್ಯದ ದ್ಯೋತಕವೇ ಆಗಿದ್ದ ಈ ಆಚರಣೆ ಇಂದು ಕ್ರಮೇಣ ಕಣ್ಮರೆಯಾಗುತ್ತಿರುವುದು ಖೇದಕರ.

ದೀಪಾವಳಿಯ (Deepavali 2022 ) ಆಚರಣೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ ಭಿನ್ನವಾಗಿದೆ. ಮಂದಿರದಲ್ಲಿ ದೀಪಹಚ್ಚಿ ಪಶ್ಚಿಮ ಬಂಗಾಳದಲ್ಲಿ ಕಾಳಿಪೂಜೆ ಅಥವಾ ಶ್ಯಾಮಾಪೂಜೆಯನ್ನು ಮಾಡಿದರೆ ಗಂಗಾತಟದಲ್ಲಿ ರಂಗವಲ್ಲಿ ಬಿಡಿಸಿ, ದೀಪ ಹಚ್ಟಿ ಉತ್ತರ ಪ್ರದೇಶದಲ್ಲಿ ‘ದೇವ ದೀಪಾವಲೀ’ ಆಚರಿಸಲಾಗುತ್ತದೆ. ಓಡಿಶಾದಲ್ಲಿ ಸೆಣಬಿನ ಪಂಜನ್ನು ಉರಿಸಿ ಪೂರ್ವಜರಿಗೆ ಗೌರವಸಲ್ಲಿಸಿ ‘ಕೌನ್ರಿಯಾ ಕಥಿ’ ಆಚರಿಸಿದರೆ ಮಹಾರಾಷ್ಟ್ರದಲ್ಲಿ ಗೋವುಗಳನ್ನು ಪೂಜಿಸಿ ‘ವಸುಬರಸ್’ ಆಚರಿಸುತ್ತಾರೆ. ಹೀಗೆ ಇಡೀ ದೇಶದಲ್ಲಿ ದೀಪಾವಳಿ ಹಬ್ಬವನ್ನು ಬಗೆ ಬಗೆಯಿಂದ ಆಚರಿಸಿದರೂ ಎಲ್ಲಿಗೇ ಹೋದರೂ ಕಾಣುವುದು ದೀಪ ಮಾತ್ರ.

ದೀಪಾವಳಿಯ ಹಿನ್ನಲೆ ನೂರಾರು ಇರಬಹುದು. ಪದ್ಧತಿಯಂತೂ ಸಾವಿರಾರು ಇರಬಹುದು. ಹಣತೆಯಲ್ಲಿ ಹಚ್ಚಿಟ್ಟ ದೀಪ ಮಾತ್ರ ಯಾವ ವ್ಯತ್ಯಾಸವೂ ಇಲ್ಲದೆ ಅಖಂಡತೆಯನ್ನೇ ಸಾರುವುದು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ ನಮ್ಮ ದೇಶ ಎನ್ನುವುದಕ್ಕೆ ನಮ್ಮ ಹಬ್ಬಗಳೇ ಸಾಕ್ಷಿ. ಏನಂತೀರಿ?

ಲೇಖಕರು ಸಂಸ್ಕೃತ ಪ್ರಾಧ್ಯಾಪಕರು

ಇದನ್ನೂ ಓದಿ | Diwali In Ayodhya | 17 ಲಕ್ಷ ದೀಪ, ಲೇಸರ್‌ ಶೋ ಮೂಲಕ ಅಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮ, ವಿಡಿಯೊ ನೋಡಿ

Exit mobile version