Site icon Vistara News

Deepavali 2022 | ದೀಪಾವಳಿಯಲ್ಲಿ ದೀಪಗಳನ್ನೇಕೆ ಹಚ್ಚಬೇಕು? ಯಾವ ಎಣ್ಣೆ ದೀಪ ಶ್ರೇಷ್ಠ?

Deepavali 2022

ವಿದ್ವಾನ್‌ ತೇಜಶಂಕರ ಸೋಮಯಾಜೀ ಕೆ.ಎಲ್.
ನಮ್ಮ ಭಾರತೀಯ ಸನಾತನ ಸಂಸ್ಕೃತಿಯು ಪ್ರಕೃತಿಯೊಡನೆ ನೇರವಾಗಿ ಹೊಂದಿಕೊಂಡು ಸಕಲಚರಾಚರಗಳಲ್ಲೂ ದೇವತಾಬುದ್ಧಿಯನ್ನು ಇಟ್ಟಂತಹ ವಿಶ್ವದ ಏಕೈಕ ಸಂಸ್ಕೃತಿ. ಅಂತಹ ನಮ್ಮ ಸಂಸ್ಕೃತಿಯಲ್ಲಿ ದೀಪವು (Deepavali 2022) ಸರ್ವೋಚ್ಛಸ್ಥಾನವನ್ನು ಹೊಂದಿದೆ. ಕತ್ತಲೆಯಲ್ಲಿರುವ ವಸ್ತುಗಳನ್ನು ನೋಡಲು ದೀಪವು ಸಹಾಯವನ್ನು ಮಾಡಿದರೆ, ದೀಪವನ್ನು ನೋಡಲು ಬೇರೆ ಯಾವುದರ ಸಹಾಯವೂ ಬೇಡ. ಇದನ್ನೇ ನಮ್ಮ ಪೂರ್ವಜರು ಉಪಮಾನವಾಗಿ ಬಳಸಿಕೊಂಡು ತಾನು ಸ್ವಾಭಿಮಾನದಿಂದ ಬದುಕುತ್ತಾ ಮತ್ತೊಬ್ಬರಿಗೆ ಉಪಕಾರಿಯಾಗಬೇಕು ಎಂಬ ಪಾಠವನ್ನು ಹೇಳಿದ್ದಾರೆ.

ದೀಪವನ್ನೇ ಪ್ರಧಾನವಾಗಿ ಹೊಂದಿರುವ ನಾನಾ ಧಾರ್ಮಿಕ ಆಚರಣೆಗಳನ್ನು ಸೇರಿಸಿ ದೀಪಾವಳಿ (Deepavali 2022 ) ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ನಂತರದ ಬಿದಿಗೆಯು ಯಮದ್ವಿತೀಯಾ ಎಂದು‌ ಪ್ರಸಿದ್ಧವಾಗಿ ದೀಪಾವಳಿ ಹಬ್ಬದ ಭಾಗವೇ ಆಗಿದೆ.

ಕಾರ್ತಿಕ ಶುದ್ಧ ಪ್ರತಿಪತ್ ದಿನದಂದು ಗೋಪೂಜೆ, ಗೋಪಾಲಕ ಪೂಜೆ, ಗೋವರ್ಧನ ಪೂಜೆ, ಬಲೀಂದ್ರ ಪೂಜೆ ನಡೆಯುತ್ತದೆ. ಗೋವರ್ಧನದ ಹತ್ತಿರದಲ್ಲಿ ಇರುವವರು ಗೋವರ್ಧನಪರ್ವತಕ್ಕೇ ಪೂಜಿಸಬೇಕು ಎಂದು ಹೇಳಲಾಗಿದೆ. ಗೋಪಾಲಕನಾದ ಕೃಷ್ಣನ ಪೂಜೆಯೂ ಅಲ್ಲಲ್ಲಿ ರೂಢಿಯಲ್ಲಿದೆ. ದನ ಮತ್ತು ಕರುಗಳಿಗೆ ಸ್ನಾನವನ್ನು ಮಾಡಿಸಿ. ಅಲಂಕಾರವನ್ನು ಮಾಡಿ ಸವತ್ಸಗೋಸಾವಿತ್ರೀ ಎನ್ನುವ ಸಂಬೋಧನೆಯಿಂದ ಗೋವನ್ನು ಪೂಜಿಸಬೇಕು. ವಿಶೇಷವಾದ ಆಹಾರವನ್ನು ಕೊಟ್ಟು ಉಪಚರಿಸಬೇಕು. ಮಳೆಗಾಲದ ಸಮಯದಲ್ಲಿ ಸಂಪೂರ್ಣವಾಗಿ‌‌ ಕೃಷಿಚಟುವಟಿಕೆಗಳಿಗೆ ಸಹಕರಿಸಿದ ಶ್ರಮಿಸಿದ ಆ ಒಡನಾಡಿಗಳಿಗೆ‌ ಕೃತಜ್ಞತೆ ಸಲ್ಲಿಸುವಂತೆ ಭಾಸವಾಗುತ್ತದೆ ಈ ಆಚರಣೆ. ಬೆಳ್ಳಕ್ಕಿ (ಬಿಳಿಯ ಅಕ್ಕಿ) ಯ ಬಲಿ ಮೂರ್ತಿಯನ್ನು‌ ಮಾಡಿ ಬಲೀಂದ್ರ ಎನ್ನುವ ಸಂಬೋಧನೆಯಿಂದ ಪೂಜಿಸುವುದು ಶಾಸ್ತ್ರವಿಹಿತವಾಗಿದೆ.

Deepavali 2022

ದೀಪಾವಳಿಯ ಎಲ್ಲ ಹಬ್ಬಗಳಂದು ಸಾಲಾಗಿ ದೀಪಗಳನ್ನಿಟ್ಟು ಮನೆಯು ಬೆಳಗುವಂತೆ ಮಾಡುವುದು, ದೀಪದಿಂದಲೇ ಮನೆಯನ್ನು ಅಲಂಕರಿಸುವುದು, ಉಲ್ಕಾಹಸ್ತರಾಗುವುದು ಶ್ರೇಯಸ್ಸನ್ನು ಉಂಟುಮಾಡುತ್ತದೆ. ಉಲ್ಕಾಹಸ್ತ ಎಂದರೆ ಕೊಳ್ಳಿಯನ್ನು ಹಿಡಿದುಕೊಂಡ ಕೈ ಎಂದರ್ಥ. ಹೀಗೆ ಕೊಳ್ಳಿಗಳನ್ನು ಮನೆ, ಕೊಟ್ಟಿಗೆ, ಹಿತ್ತಲು, ಗದ್ದೆ, ತೋಟ ಈ ಎಲ್ಲಾ ಕಡೆಗಳಲ್ಲಿ ಇಡುವುದರಿಂದ ಮಹಾಲಯದಲ್ಲಿ ಯಮಾದಿ ಲೋಕಗಳಿಂದ ಭೂಮಿಗೆ ಬಂದ ಪಿತೃಗಳಿಗೆ ಪರಮಗತಿಯನ್ನು ಪಡೆಯುವ ದಾರಿಯನ್ನು, ಸ್ವರ್ಗದ ದಾರಿಯನ್ನು ತೋರಿಸಿದಂತಾಗುತ್ತದೆ ಎನ್ನುವುದು ಧರ್ಮಗ್ರಂಥಗಳಲ್ಲಿ ಹೇಳಲ್ಪಟ್ಟಿದೆ.

ಹೀಗೆ ದೀಪವನ್ನು‌ ಬೆಳಗಿಸುತ್ತಾ ಅನಂತ ಸುಖ-ಸಂಪತ್ತುಗಳನ್ನು ನಾವು ಪಡೆಯುತ್ತಾ, ಪೂರ್ವಜರಿಗೆ ಮೋಕ್ಷವು ಲಭಿಸುವಂತೆಯೂ ಮಾಡಬಹುದು. ಈ ಪ್ರಸ್ತುತತೆಯ ಕಾರಣದಿಂದ ದೀಪಗಳ ಬಗ್ಗೆ ಸ್ವಲ್ಪ ವಿಶಿಷ್ಟವಾದ ಮಾಹಿತಿಯನ್ನು ಗಮನಿಸುವುದಾದರೆ, ಬೆಳಕಿನ ಮೂಲವೇ ಆಗಿರುವ ದೀಪವನ್ನು ಪ್ರದೀಪ, ಜ್ಯೋತಿ ಎಂಬ ಪ್ರಸಿದ್ಧ ಹೆಸರುಗಳ ಜೊತೆಗೆ ಜಿಡ್ಡನ್ನು ಹೀರಿಕೊಂಡು ಉರಿಯುವದರಿಂದ ಸ್ನೇಹಾಶಃ ಎನ್ನುವುದಾಗಿಯೂ, ಕಾಡಿಗೆಯನ್ನು ಬಾವುಟದಂತೆ ಹೊಂದಿರುವುದರಿಂದ “ಕಜ್ಜಲಧ್ವಜಃ “ಎಂತಲೂ, ಜುಟ್ಟಿನ ರೀತಿಯಲ್ಲಿ ಆಕಾರ ಇರುವುದರಿಂದ “ಶಿಖಾತರುಃ” ಎಂತಲೂ, ಮನೆಯ ಭೂಷಣವಾದ್ದರಿಂದ “ಗೃಹಮಣಿಃʼʼ ಎನ್ನುವುದಾಗಿ ಮತ್ತು ಕಣ್ಣಿಗೆ ಆನಂದ ಉಂಟುಮಾಡುವುದರಿಂದ “ನಯನೋತ್ಸವಃʼʼ ಎನ್ನುವುದಾಗಿಯೂ ಕರೆಯುತ್ತಾರೆ.

ಯಾವ ಎಣ್ಣೆಯಿಂದ ದೀಪ ಹಚ್ಚಬೇಕು?
ಹೀಗೆ ನಮ್ಮ ಆಚರಣೆಗಳಲ್ಲಿ ಉತ್ಕೃಷ್ಟಸ್ಥಾನವನ್ನು ಪಡೆದಿರುವ ದೀಪದ ವಿಷಯದಲ್ಲಿ ಹಲವಾರು ಗೊಂದಲಗಳೂ ಬರಬಹುದು. ದೀಪವನ್ನು ಯಾವ ಎಣ್ಣೆಯಿಂದ ಉರಿಸಬೇಕು, ಎಷ್ಟು ಬತ್ತಿಗಳನ್ನು ಉಪಯೋಗಿಸಬೇಕು, ಶ್ರೇಷ್ಠದೀಪವು ಯಾವುದು? ಮುಂತಾದ ಪ್ರಶ್ನೆಗಳು ಮನದಲ್ಲಿ‌ ಮೂಡುವುದು‌ ಸಹಜ. ಮಿತಿಯಲ್ಲಿರುವ ಸಂಶಯ‌ ಮತ್ತು ಕುತೂಹಲ, ಆಸಕ್ತಿಗಳೇ ವಿಷಯಗ್ರಹಿಕೆಯ ಮೊದಲ ಮೆಟ್ಟಿಲಲ್ಲವೇ?

ದೀಪಕ್ಕಾಗಿ ಯಾವ ಎಣ್ಣೆಯನ್ನು ಬಳಸಬೇಕು ಎಂಬ ಸಂಶಯಕ್ಕೆ ಉತ್ತರವಾಗಿ “ಘೃತಂ ತೈಲಂ ಚ ದೀಪಾರ್ಥೇ ಸ್ನೇಹಾನ್ಯನ್ಯಾನಿ ವರ್ಜಯೇತ್” ಎನ್ನುವ ವಾಕ್ಯವಿದೆ. ದೀಪಕ್ಕೋಸ್ಕರ ತುಪ್ಪ ಮತ್ತು ಎಳ್ಳೆಣ್ಣೆಯನ್ನು ಮಾತ್ರ ಬಳಸಬೇಕು ಬೇರೆಯ ಎಣ್ಣೆಯನ್ನು ಬಳಸಬಾರದು ಎಂದು ಇದರ ಅರ್ಥ. ಇದು ಪ್ರಧಾನವಾದ ಪಕ್ಷ. ಇದರ ಹೊರತಾಗಿ ಸಾಸಿವೆಎಣ್ಣೆ, ಕೊಬ್ಬರಿಎಣ್ಣೆ, ಹೊಂಗೆಎಣ್ಣೆ, ಗಂಧದ ಎಣ್ಣೆ ಇವುಗಳನ್ನೂ ದೀಪಕ್ಕಾಗಿ ಬಳಸುವುದು ಪದ್ಧತಿಯಲ್ಲಿದೆ. ಆದರೆ ಅದು ಸಾತ್ವಿಕ ಎನಿಸುವುದಿಲ್ಲ.

“ಘೃತಪ್ರದೀಪಃ ಪ್ರಥಮಸ್ತಿಲತೈಲೋದ್ಭವಸ್ತತಃʼʼ ಎನ್ನುವ ಮಾತೂ ತುಪ್ಪ ಮತ್ತು ಎಳ್ಳೆಣ್ಣೆಯ ಶ್ರೇಷ್ಠತೆಯನ್ನು ತಿಳಿಸುತ್ತದೆ. ದೇವರ ಬಲಭಾಗದಲ್ಲಿ ತುಪ್ಪದ ದೀಪವನ್ನು, ಎಡಭಾಗದಲ್ಲಿ ಎಣ್ಣೆಯ ದೀಪವನ್ನು ಸ್ಥಾಪಿಸಬೇಕು. ಪ್ರತಿನಿತ್ಯವೂ ಹೀಗೆ ದೀಪವನ್ನು ಹಚ್ಚುವವರು ಅಶ್ವಮೇಧಯಾಗದ ಫಲವನ್ನು ಹೊಂದುತ್ತಾರೆ.

ಘೃತೇನ ದೀಪಕಂ ಯಸ್ತು ತಿಲತೈಲೇನ ವಾ ಪುನಃ|
ಜ್ವಾಲಯೇನ್ಮುನಿಶಾರ್ದೂಲ ಅಶ್ವಮೇಧೇನ ತಸ್ಯ ಕಿಮ್||

ಎನ್ನುವ ಶ್ಲೋಕವು ಇದಕ್ಕೆ ಆಧಾರವಾಗಿದೆ.

ಗೋ ಘೃತೇನ ಸಮಾಯುಕ್ತಃ ಸಾತ್ವಿಕೋ ದೀಪ ಉಚ್ಯತೇ|
ರಾಜಸಸ್ತಿಲತೈಲೇನ ನಾಲಿಕೇರೇಣ ತಾಮಸಃ ||

ಎನ್ನುವ ಶ್ಲೋಕದಿಂದ ಹಸುವಿನ ತುಪ್ಪದಿಂದ ಹಚ್ಚಿದ ದೀಪ ಸಾತ್ವಿಕವೆಂದೂ, ಎಳ್ಳೆಣ್ಣೆಯ ದೀಪವು ರಾಜಸವೆಂದೂ, ಕೊಬ್ಬರಿಎಣ್ಣೆಯ ದೀಪವು ತಾಮಸವೆಂದೂ ತಿಳಿಯುತ್ತದೆ. ತುಪ್ಪ, ಎಳ್ಳೆಣ್ಣೆ ಇತ್ಯಾದಿಗಳು ದೀಪಕ್ಕೆ ಶ್ರೇಷ್ಠವಾದರೂ ಕೂಡ ಎಣ್ಣೆಗಳನ್ನು ಪರಸ್ಪರ ಮಿಶ್ರ ಮಾಡದೆ ಉಪಯೋಗಿಸಬೇಕು. ಮಿಶ್ರವಾಗಿರುವಂಥ ಎಣ್ಣೆಯಿಂದ ಹಚ್ಚಿದ ದೀಪವು ನರಕಪ್ರಾಪ್ತಿಯನ್ನು ತರುತ್ತದೆ.

Deepavali 2022

ದೀಪವೂ ಒಂದು ಉಪಚಾರ
ದೀಪಗಳಲ್ಲಿ ನಾನಾ ಬಗೆಗಳಿವೆ. ನಂದಾದೀಪ, ಆರತಿದೀಪ, ತೂಗುದೀಪ, ಕಾಲುದೀಪ, ಮುಂತಾದವು. ದೇವರ ಮುಂದೆ ಶಾಶ್ವತವಾಗಿ ಬೆಳಗುವ ದೀಪವೇ ನಂದಾದೀಪ. ಪೂಜೆಗಾಗಿ ಉಪಯೋಗಿಸುವ ದೀಪವು ಅರ್ಚನಾ ದೀಪವೆಂದು ಕರೆಯಲ್ಪಡುತ್ತದೆ. ಇದು ಸದಾಕಾಲ ಇರುವಂತಾಗಿ ನಂದಾದೀಪವಾದಾಗ ಅತ್ಯುತ್ಕೃಷ್ಟವಾದ ಫಲವನ್ನು ಕೊಡುತ್ತದೆ. ಷೋಡಶೋಪಚಾರ ಪೂಜೆಯಲ್ಲಿ ದೀಪವೂ ಒಂದು ಉಪಚಾರ.

ಸುಗಂಧಧೂಪವನ್ನು ಸಮರ್ಪಿಸಿ ನಂತರ ದೀಪವನ್ನು ಅರ್ಪಿಸಲಾಗುತ್ತದೆ. ಇದಾದ ನಂತರ ನೈವೇದ್ಯ, ತದನಂತರದಲ್ಲೇ ಮಂಗಳಾರತಿ ಅಥವಾ ನೀರಾಜನ. ಪೂಜೆಯ ಮಧ್ಯೆ ಈ ಎರಡು ಅಂಶಗಳಲ್ಲಿ ದೀಪಕ್ಕೆ ವಿಶೇಷ ಸ್ಥಾನವಿದೆ. “ಧೂಪಾದ್ಧರತಿ ಪಾಪಾನಿ ಕಾಂತಿರ್ದೀಪಪ್ರದಾನತಃ” ಎನ್ನುವ ವಾಕ್ಯದಿಂದ ದೇವರಿಗೆ ಸಮರ್ಪಿಸುವ ದೀಪದ ಉಪಚಾರವು ಭಕ್ತನಿಗೆ ಕಾಂತಿಯನ್ನು ನೀಡುತ್ತದೆ ಎಂದು ತಿಳಿಯುತ್ತದೆ. ಈ ಸಮಯದಲ್ಲಿ ಕೇವಲ ಒಂದು ಬತ್ತಿಯಿಂದ ದೀಪವನ್ನು ಬೆಳಗಬಾರದು. ನಂದಾದೀಪದಲ್ಲಿ ಎರಡು ಬತ್ತಿ, ಧೂಪದೀಪದ ಸಮಯದಲ್ಲಿನ ದೀಪಕ್ಕೆ ಮೂರು ಬತ್ತಿ, ಆರತಿಗೆ ಐದು ಬತ್ತಿಗಳು ಉತ್ತಮ. ಇದರ ಜೊತೆಗೆ ದೀಪವನ್ನು ಎಂದೂ ನೆಲದ ಮೇಲೆ ಇರಿಸಬಾರದು ಎನ್ನುವುದನ್ನು ಮರೆಯುವಂತಿಲ್ಲ.

ಭೂಮಿಯು ಎಲ್ಲಾ ಭಾರವನ್ನು ಸಹಿಸಿದರೂ ಕಾರಣವಿಲ್ಲದೇ ಸುಮ್ಮನೆ ಪಾದದಿಂದ ಕುಟ್ಟುವುದನ್ನು, ಮತ್ತು‌ ನೆಲದ ಮೇಲಿಟ್ಟ ದೀಪದ ತಾಪವನ್ನು ಸಹಿಸಲಾರಳು ಎಂದು ಶಾಸ್ತ್ರಕಾರರು ಹೇಳಿದ್ದಾರೆ. ಆದ್ದರಿಂದ ದೀಪವನ್ನು ದೀಪ ದಕಂಬಗಳ‌ ಮೇಲೆ ಇಡಲಾಗುತ್ತದೆ. ಕೊನೆಯಪಕ್ಷ ಸಣ್ಣತಟ್ಟೆದನ್ನಾದರೂ ದೀಪಕ್ಕೆ ಆಧಾರವಾಗಿ ಇಡಬಹುದು. ದೀಪ ದಾನವು ಸದಾಕಾಲ ಶ್ರೇಷ್ಠವಾದರೂ, ಕಾರ್ತಿಕ ಮಾಸದಲ್ಲಿ ಮಾಡುವ ದೀಪದಾನವು ಅತ್ಯಂತ ಮಹತ್ತರವಾದುದು. ಪಿತೃಪ್ರೀತಿಯೂ ದೇವಪ್ರೀತಿಯೂ ಉಂಟಾಹುತ್ತದೆ. ಜೊತೆಗೆ ದೀಪದಾನ ಮಾಡಿದವರ ಪಿತೃಗಳಿಗೆ ಸಂತೃಪ್ತಿಯ ಜೊತೆಗೆ ಸ್ವರ್ಗಪ್ರಾಪ್ತಿಯೂ ಕಾರ್ತಿಕದೀಪದಾನದಿಂದ ಉಂಟಾಗುತ್ತದೆ.

ಹೀಗೆ ನಾನಾ ರೀತಿಯ ವಿಚಾರಗಳಿಂದ ಶ್ರೇಷ್ಠವಾದ ದೀಪವು ಅಜ್ಞಾನವೆಂಬ ಅಂಧಕಾರವನ್ನು‌ ನಾಶಪಡಿಸುತ್ತಾ‌ ಜ್ಞಾನವೆಂಬ ಬೆಳಕನ್ನು ಸೂಸುವ ಮೂಲಕ ಪ್ರತಿಯೊಬ್ಬರ ಮನದಲ್ಲೂ ಪ್ರತಿನಿತ್ಯವೂ ಸತ್ಕರ್ಮಗಳೆಂಬ ಸದ್ವಿಚಾರಗಳೆಂಬ ಸಾಲು ಸಾಲು ದೀಪಗಳು ಬೆಳಗಲು ಕಾರಣವಾಗಲಿ. ಒಂದು‌ ದೀಪದಿಂದ ಹೇಗೆ ಬೇರೆಲ್ಲಾ ದೀಪಗಳನ್ನು ಬೆಳಗಿಸಲು ಸಾಧ್ಯವೋ ಅದೇರೀತಿಯಾಗಿ ನಮ್ಮ ಬುದ್ಧಿಯು ಆಧ್ಯಾತ್ಮಿಕಮಾರ್ಗದಲ್ಲಷ್ಟೇ ಅಲ್ಲದೆ ಸಾಮಾಜಿಕವಾಗಿಯೂ ಸತ್ಪ್ರೇರಣೆಗಳನ್ನು‌ ನೀಡಿ ಕೇವಲ ಒಬ್ಬರ ಬಾಳನಲ್ಲದೇ, ಸರ್ವರ‌ ಬಾಳನ್ನೂ ಬೆಳಗಲಿ ಬೆಳಗಿಸಲಿ. ಸ್ವಾಭಿಮಾನಿಯಾದರೂ ಸ್ವಾರ್ಥಿಯಾಗದೇ, ಪರೋಪಕಾರದ ಬದುಕನ್ನು ನಡೆಸುವಂತಾಗಲಿ ಎಂಬ ಲೇಖಕನ ಪ್ರಾರ್ಥನೆಯೊಂದಿಗೆ ಈ ಅಕ್ಷರಸಾಲುಗಳು ವಿರಮಿಸುತ್ತವೆ.

ಲೇಖಕರು ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥರು,
ಅಂಬಿಕಾ ಮಹಾವಿದ್ಯಾಲಯ, ಬಪ್ಪಳಿಗೆ, ಪುತ್ತೂರು.

ಇದನ್ನೂ ಓದಿ | Deepavali 2022 | ಆಧ್ಯಾತ್ಮಿಕವಾಗಿಯೂ ಮಹತ್ವ ಪಡೆದ ಪರ್ವ ಈ ದೀಪಾವಳಿ

Exit mobile version