Site icon Vistara News

Deepavali 2022 | ಆಧ್ಯಾತ್ಮಿಕವಾಗಿಯೂ ಮಹತ್ವ ಪಡೆದ ಪರ್ವ ಈ ದೀಪಾವಳಿ

Deepavali 2022

ಡಾ. ಮೋಹನ್ ರಾಘವನ್
ದೀಪಾವಳೀ ಇದು ಬೆಳಕಿನ ಹಬ್ಬ‌ (Deepavali 2022). ಇಡೀ ದೇಶ ಸಂಭ್ರಮ ಸಡಗರದಲ್ಲಿರುವ ಸಮಯ. ದೀಪಾವಳೀ ಒಂದೇ ಹಬ್ಬವಲ್ಲದೆ, ಹಬ್ಬಗಳ ಸಾಲು. ಅಶ್ವಯುಜ ಮಾಸದ ಕೃಷ್ಣಪಕ್ಷ ತ್ರಯೋದಶಿ ಮೊದಲ್ಗೊಂಡು ನರಕ ಚತುರ್ದಶೀ, ಅಮಾವಾಸ್ಯೆ ಲಕ್ಷ್ಮೀಪೂಜೆ, ಗೋವರ್ಧನಪೂಜೆ, ಬಲಿಪಾಡ್ಯಮಿ, ಭಾಯೀದೂಜ್, ಭಗಿನೀದ್ವಿತೀಯೆ, ಯಮದ್ವಿತೀಯಾ ಎಂಬ ಹಬ್ಬಗಳ ಸಾಲು. ದೀಪಬೆಳಗಿಸುವುದು ಪಟಾಕಿಸಿಡಿಸುವುದು, ಸಿಹಿ ಮತ್ತು ಉಡುಗೊರೆ ಹಂಚುವುದು ಈ ಹಬ್ಬಗಳ ಮಾಲೆಯಲ್ಲಿ ದೇಶದಾದ್ಯಂತ ಸರ್ವೇಸಾಮಾನ್ಯ. ಹಬ್ಬದಮುನ್ನ ಲಕ್ಷ್ಮೀದೇವಿಯನ್ನು ಸ್ವಾಗತಿಸಲು ಇಡೀ ಮನೆಯನ್ನು ಸ್ವಚ್ಛಗೊಳಿಸಿ ಸಿಂಗರಿಸುವ ಸಂಭ್ರಮ. 

ಉತ್ತರಭಾರತದಲ್ಲಿ ಧನ್ತೇರಸ್ ಹೊಸ ಮನೆ, ಆಭರಣ, ವಾಹನ ಮೊದಲಾದವುಗಳನ್ನು ಕೊಂಡು ಸಂಗ್ರಹಮಾಡುವ ಕಾಲ. ದಕ್ಷಿಣಭಾರತದಲ್ಲಿ ಸಾಂಪ್ರದಾಯಿಕವಾಗಿ ಉಷಃಕಾಲದಲ್ಲಿ ಅಭ್ಯಂಜನವನ್ನು ಮಾಡುವ ವಾಡಿಕೆ. ವ್ಯಾಪಾರವಹಿವಾಟು ಮಾಡುವ ಜನತೆಗಿದು ಲಕ್ಷ್ಮೀಪೂಜೆಯಿಂದ ಆರಂಭವಾಗುವ ಹೊಸಆರ್ಥಿಕ ವರುಷ. ಗೋವರ್ಧನಪೂಜೆ ಉತ್ತರಭಾರತದ ವೈಷ್ಣವ ಸಂಪ್ರದಾಯದವರಲ್ಲಿ ಪ್ರಚಲಿತ. ನರಕಾಸುರನಮೇಲೆ ಕೃಷ್ಣನ ಜಯಭೇರಿಯ ನೆನಪು ತಮಿಳುನಾಡಿನಲ್ಲಾದರೆ, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಲ್ಲಿ ವಾಮನ ತ್ರಿವಿಕ್ರಮ ಅವತಾರಗಳೊಂದಿಗೆ ಬಲಿಚಕ್ರವರ್ತಿಯ ನೆನಪಿನೊಡನೆ  ಕೊಂಡಾಡುವ ಸರ್ವೇಸಾಮಾನ್ಯ ಆಚರಣೆ. ಈ ಹಬ್ಬಗಳಸಾಲಿನ ಕೊನೆಯದಿನ ಅಂದರೆ ಕಾರ್ತಿಕಮಾಸದ ಶುಕ್ಲಪಕ್ಷದ ದ್ವಿತೀಯೆಯನ್ನು ಅಣ್ಣತಂಗಿಯರ ಹಬ್ಬವೆಂದು ಬೇರೆಬೇರೆ ಹೆಸರುಗಳಿಂದ ಆಚರಿಸುವ ವಾಡಿಕೆ. 

ಉತ್ತರಭಾರತದಲ್ಲಿ ಭಾಯಿ ದೂಜ್ ಎಂದು,ಮಹಾರಾಷ್ಟ್ರದಲ್ಲಿ ಭಾಊಬೀಜ್ ಎಂದೂ, ಭಗಿನಿ ದ್ವಿತೀಯೆ ಅಥವಾ ಯಮದ್ವಿತೀಯೆ ಎಂದು ದಕ್ಷಿಣಭಾರತದಲ್ಲಿ ಆಚರಿಸುತ್ತಾರೆ.  ಅನೇಕಾನೇಕ ಸಾಂಪ್ರದಾಯಿಕ ಶಿಷ್ಟಾಚಾರಗಳು ಇಂದಿನ ಬದಲಾಗುತ್ತಿರುವ ಅವಸರದ  ಜೀವನಶೈಲಿಯಲ್ಲಿ ಮರೆಯಾಗುತ್ತಿವೆ. ಉದಾಹರಣೆಗೆ ಅಮಾವಾಸ್ಯೆಯ ಹಿಂದಿನ ಮೂರುದಿನಗಳ ಗೋತ್ರಿರಾತ್ರವ್ರತ ಇಂದು ಕೆಲವೇ ಹಳ್ಳಿಗಳಲ್ಲುಳಿದು ಮತ್ತೆಲ್ಲೂ ಕಾಣಸಿಗುತ್ತಿಲ್ಲ. ಎತ್ತರದ ಮೇರುವಿನಲ್ಲಿ  ಬೆಳಗುವ ಜ್ಯೋತಿ ಮತ್ತು ಅದನ್ನು ಸುತ್ತುವರಿದು ಎಂಟುದಿಕ್ಕುಗಳಲ್ಲಿ ಚೆಲ್ಲುವ ಬೆಳಕಿನ ದೀಪ ಕಂಭಗಳು ಕೇವಲ ಶಾಸ್ತ್ರ ಗ್ರಂಥಗಳಲ್ಲಿ ಕಂಡುಬರುತ್ತವೆ. ಬಲೀಂದ್ರನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆತನನ್ನು ಸ್ವರ್ಣ ವರ್ಣ ಪುಷ್ಪಗಳಿಂದ ಅರ್ಚಿಸುವ ಪರಿಪಾಠ ಕೆಲವೇ ಸಂಪ್ರದಾಯವನ್ನು ಕಾಪಿಡುವ ಮನೆಗಳಲ್ಲಿ ಮಾತ್ರ ಕಾಣಬಹುದು.

ಸಂತೋಷ, ಸಂಭ್ರಮ, ಭೂರಿಭೋಜನ ಮತ್ತು ಮೋಜು ಸ್ವಾಗತವೇ. ಪ್ರತಿಯೊಂದು ಸಂಸ್ಕೃತಿಯೂ ಉತ್ಸವಗಳ ಆಚರಣೆಗೆ ತನ್ನದೇ ಆದ  ಪದ್ಧತಿಗಳನ್ನು   ರೂಪಿಸಿಕೊಂಡಿದೆ. ನೀರಸ ದಿನಚರಿಯಿಂದ ಬೇಸತ್ತ ಮನಸ್ಸನ್ನು ಮೇಲೆತ್ತುವ ಕಾಲ್ಪನಿಕ ಸಾಧನಗಳೆಂದು ಪರ್ವಗಳನ್ನು, ದೀಪಾವಳಿಯನ್ನು  ಪರಿಗಣಿಸಿ, ತಿರ್ಮಾನಿಸುತ್ತಾರೆ. ಪೌರಾಣಿಕ ಕಥೆಗಳಾದ ಕೃಷ್ಣ-ನರಕಾಸುರ, ಬಲಿ-ತ್ರಿವಿಕ್ರಮ, ಗೋವರ್ಧನ-ಕೃಷ್ಣ, ಇವೆಲ್ಲವೂ ಆ ಸಂದರ್ಭಕ್ಕೆ ಅರ್ಥಕೊಡಲು ಕಲ್ಪಿಸಿದ ಕಟ್ಟು ಕಥೆಗಳೆಂದು ಪ್ರಸ್ತುತ ಪಡಿಸುತ್ತಾರೆ. ಆಚಾರ – ಆಚರಣೆಗಳನ್ನು ಕತ್ತೆಲೆಗಿಂತ ಬೆಳಕು, ನೀರಸಕ್ಕಿಂತ ಉತ್ಸಾಹ, ದೌಷ್ಟ್ಯಕ್ಕಿಂತ ಸಾಧುತನದ ನಮ್ಮ ಸ್ವಾಭಾವಿಕ ಒಲವಿನ ಅಭಿವ್ಯಕ್ತಿ ಎಂದು ತಮ್ಮ ಔದಾರ್ಯದ ಪರಮಾವಧಿಯ ಮನೋಭಾವದಿಂದ ಒಪ್ಪಿಕ್ಕೊಳ್ಳುತ್ತಾರೆ.  ಮತ್ತು, ಇದರಲ್ಲಿನ ದುಷ್ಟ  ಶಿಷ್ಟದ ಅರ್ಥವ್ಯಾಪ್ತಿಯನ್ನು ಅವರವರ ಸಿದ್ಧಾಂತಕ್ಕೆ ತಕ್ಕಂತೆ ಬಾವಿಸಲಾಗುತ್ತದೆ.

ನಮ್ಮ ಧಾರ್ಮಿಕ,ವಿಧಿ-ವಿಧಾನಗಳ, ಆಚಾರವಿಚಾರ ಸನ್ನಿವೇಶಗಳ ವೈಶಾಲ್ಯಗಳನ್ನು  ಬದಿಗೊತ್ತಿ, ಸರ್ವೇ ಸಾಮಾನ್ಯ ವಿಷಯಗಳನ್ನು ಒತ್ತಿಹೇಳಿ ಪ್ರಸ್ತುತಪಡಿಸುವ  ಪ್ರವೃತ್ತಿ,  ದೀಪಾವಳಿಯ ಆಚರಣೆಯಬಗ್ಗೆ ಬೆಳೆಯುತ್ತಿದೆ. ಜನಪ್ರಿಯವಾಗಿಸುವ ಯತ್ನಗಳನ್ನು ಸ್ವಾಗತಿಸಬಹುದಾದರೂ, ಆ ಪ್ರಯತ್ನಗಳ ಬೆಲೆ, ನಮ್ಮ ಸಂಸ್ಕೃತಿಯಲ್ಲಿನ ಅಧ್ಯಾತ್ಮನೆಲೆಯಾಗುವಂತಾಗಬಾರದು. “ಕರ್ಮಗಳನ್ನು ಮರ್ಮವರಿತು ಆಚರಿಸು” ಎಂದು ಶ್ರೀ ರಂಗ ಮಹಾಗುರುಗಳು ಹೇಳುತ್ತಿದ್ದರು. ಈ ರೀತಿ ಮಾಡುವುದಾದರೆ, ನಮ್ಮ ಸಂಸ್ಕೃತಿಯ ಸಾರವನ್ನುಕುಂದಿಸದೆ, ಅದರ ಮೇಲಿನ ನಿಗೂಢತೆಯ ತೆರೆಯನ್ನು ತೆರೆದು ತಿಳಿಯಾಗಿಸಿದಂತಾಗುತ್ತದೆ.

ಬರಿಯ ಹಬ್ಬಗಳನ್ನಷ್ಟೇ ಜನತೆಯ ಕಂಠಕ್ಕೆ ಬಲವಂತವಾಗಿ ಇಳಿಸದೆ, ಅವುಗಳ ಆಧ್ಯಾತ್ಮಿಕ ತಿರುಳನ್ನು ಸಾಮಾನ್ಯ ಜನರಿಗೂ ದೊರಕುವಂತೆಮಾಡಬೇಕು. ಈ ಲೇಖನದಲ್ಲಿ, ದೀಪಾವಳಿಯ ಬೇರೆ ಬೇರೆ ಮುಖಗಳ ಪ್ರಾಮುಖ್ಯತೆಯನ್ನು ಮತ್ತು ಅದು  ನಮ್ಮ ಜೀವನದಮೇಲೆ ಮಾಡುವ ಆಳವಾದ ಪ್ರಭಾವವನ್ನು ಸಂಕ್ಷಿಪ್ತವಾಗಿ ಕೊಡುವ ಪ್ರಯತ್ನವಾಗಿದೆ. ಹೊಸದೇನನ್ನೂ ಸೃಷ್ಟಿಸದೆ, ಋಷಿಮುನಿಗಳ ಚಿಂತನೆ, ಶಾಸ್ತ್ರದ ಆಧಾರ ಹಾಗೂ ಬೆಳಕನ್ನು ಕಂಡ ಯೋಗಿಗಳ ಪ್ರಮಾಣ ವಚನಗಳಮೇಲೆ ಈ ಯತ್ನ ಅವಲಂಬಿತವಾಗಿದೆ.

ನಮ್ಮ ಋಷಿಮುನಿಗಳು, ಮಾನವನ ಅಸ್ತಿತ್ವದ ಉದ್ದೇಶ ಇಬ್ಬಗೆ ಎಂದು ಗುರುತಿಸದರು – ಸುಖ ಸಮೃದ್ಧಿಗಳ ಹೊರಜೀವನ ಮತ್ತು ಶಾಂತಿ, ತೃಪ್ತಿ ಮತ್ತು ಆನಂದದಾಯಕ ಒಳಜೀವನ. ಈ ಎರಡು ಉದ್ದೇಶಗಳ ಸಮತೋಲನ, ನಾಜೂಕಾದ ವಿಷಯವೇ ಸರಿ. ಅರ್ಥಕಾಮಗಳನ್ನು ಅರಸುವಾಗ ಮೋಕ್ಷದ ದಾರಿಯನ್ನು ಮರೆಯದೇ ಇರುವುದು ಅಷ್ಟೇ ಮುಖ್ಯ. ಈ ಸಮತೋಲನವನ್ನು ಸಾಧಿಸುವ ಮಾನಸಿಕ ಸ್ಥಿತಿಯೇ ಧರ್ಮ. ನಾವು ಆಚರಿಸುವ ಪ್ರತಿಯೊಂದು ಕರ್ಮವೂ ಈ ಗುರಿಯೆಡೆಗೆ ಕರೆದುಕೊಂಡು ಹೋಗಬಹುದು ಅಥವಾ ಬೇರೆಬೇರೆ ಪ್ರಮಾಣದಲ್ಲಿ ದಾರಿತಪ್ಪಿಸಿ ಗೊಂಡಾರಣ್ಯಕ್ಕೆ  ಎಳೆಯಬಹುದು. ಕರ್ಮಗಳ ಪರಿಣಾಮ ಇಬ್ಬಗೆ – ಪಾಪ ಅಥವಾ  ಪುಣ್ಯ; ಪಾಪಗಳು ದಾರಿತಪ್ಪಿಸುವುವಾದರೆ ಪುಣ್ಯಗಳು ಸರಿದಾರಿಯಲ್ಲಿ ನಡೆಸುತ್ತವೆ.

ದಾರಿತಪ್ಪಿದವನನ್ನು ಮೊದಲು ಅರಣ್ಯದಿಂದ ಹೊರತಂದು, ನಂತರ ತನ್ನ ಊರು-ಮನೆಗಳಿಗೆ  ಮುಂದುವರಿಯಲು ಪ್ರೋತ್ಸಾಹಿಸಬೇಕಾಗುತ್ತದೆ.  ಆದ್ದರಿಂದ, ಅತ್ಯುನ್ನತ ಸ್ಥಾನದಲ್ಲಿರುವ ಮೋಕ್ಷವನ್ನು ಸಾಧಿಸಬೇಕಾದರೆ, ಪಾಪ ಕರ್ಮಗಳ ಪರಿಣಾಮಗಳನ್ನು ಮೊದಲು ಕ್ಷಯಗೊಳಿಸಿ, ನಂತರ ಹೆಚ್ಚಿನ ಪುಣ್ಯಕರ್ಮಗಳನ್ನು ಮಾಡಲು ಪ್ರೇರೇಪಿಸಬೇಕಾಗುತ್ತದೆ. ನಮ್ಮ ಋಷಿಮುನಿಗಳು, ಈ ಕಾಲಖಂಡವನ್ನು, ಪಾಪಪರಿಣಾಮಗಳನ್ನು ಕುಗ್ಗಿಸಲು ಹಾಗೂ ಪುಣ್ಯ ಪರಿಣಾಮಗಳನ್ನು ಹೆಚ್ಚಿಸಿ ಮೋಕ್ಷದೆಡೆಗೆ ಒಯ್ಯಲು ಶ್ರೇಷ್ಠವಾದ  ಸಮಯವೆಂದು ಗುರುತಿಸಿದರು. ದೀಪಗಳ ಆವಳಿ, ಗುಂಪು ಎಂದರೆ, ದಿವಿ ಅಥವಾ ಸ್ವರ್ಗದೆಡೆಗೆ ಸಾಗುವ ಹೆದ್ದಾರಿಗೆ ಬೆಳಕುಚೆಲ್ಲುವ ದೀಪಗಳಸಾಲು ಎಂಬರ್ಥ. ನಮ್ಮ ಪಾಪ ಕರ್ಮಗಳ ಗಂಟಿನ ಮೂಟೆಗಳನ್ನು ಕಿತ್ತೊಗೆಯಲು ದೀಪಾವಳಿ ಪ್ರೇರಣೆ ನೀಡುತ್ತದೆ.

ಜೊತೆ ಜೊತೆಗೆ, ಆರ್ಥಿಕ ಹೆಗ್ಗಳಿಕೆಯನ್ನು ಧರ್ಮಮಾರ್ಗವನ್ನು ಬಿಡದೆ ಆಸ್ವಾದಿಸುವ ಕಲೆಯನ್ನು ನಮ್ಮ ಮನೋಬುದ್ಧಿಗಳಿಗೆ ಕಲಿಸುತ್ತದೆ. ಪಾಪಕರ್ಮಗಳ ನಾಶ ಹಾಗೂ ಐಹಿಕ ಸುಖವನ್ನು ಧರ್ಮಮಾರ್ಗವನ್ನು ಬಿಡದೆ ಅನುಭವಿಸುವ ಈ ಎರಡೂ ಆಶಯಗಳು, ಒಂದೇ ಕೇಂದ್ರಬಿಂದುವಿನಲ್ಲಿ ಲಯವಾಗುತ್ತವೆ. ಅದೇ ಪರಂಜ್ಯೋತಿ, ಬೆಳಕು, ದೀಪ. ದೀಪಾವಳಿಯ ಉಗಮ ಸ್ಥಾನ.

ಮೋಕ್ಷದ ಸ್ಥಾನ, ಪರಮಪದ, ಪರಮೋನ್ನತ ಸ್ಥಿತಿಯನ್ನು ಬೆಳಕು ಅಥವಾ ಪರಂಜ್ಯೋತಿಯೆಂದೇ ವರ್ಣಿಸುತ್ತಾರೆ.ಹುಟ್ಟುಸಾವುಗಳ ಚಕ್ರದಿಂದ ಬಿಡುಗಡೆಯನ್ನು ಜೀವನದ ಪರಮ ಗುರಿ ಎಂದು ಪರಿಗಣಿಸುತ್ತಾರೆ. ಸಮಾಧಿಸ್ಥಿತಿಯನ್ನು ಏರುವ ಬ್ರಹ್ಮಜ್ಞಾನಿಯನ್ನು ಇಹದಲ್ಲೇ ಜೀವನ್ಮುಕ್ತ ಎಂದು ತಿಳಿಯಬೇಕು. ಶ್ರೀ ಶ್ರೀರಂಗ ಮಹಾಗುರುಗಳು ತಿಳಿಸಿದಂತೆ, ಅವರುಗಳು, ಪರಮಪದಕ್ಕೆ ಅತ್ಯಂತ ಸಮೀಪದಲ್ಲಿರುತ್ತಾರೆ. ಆ ಮಹಾತ್ಮರು, ಈ ಪ್ರಪಂಚದಲ್ಲಿ ವ್ಯವಹರಿಸುತಿದ್ದರೂ ಮುಕ್ತರೇ.

ಈ ಬೆಳಕಿನ ಅನುಭವವನ್ನು ಕೋಟಿಸೂರ್ಯಪ್ರಕಾಶ – ಕೋಟಿ ಕೋಟಿ ಸೂರ್ಯಪ್ರಕಾಶ, ಆದರೂ ಚಂದ್ರಕಿರಣಗಳಂತೆ ಶೀತಲ ಮತ್ತು ಆಹ್ಲಾದಕರ, ಸೂರ್ಯನಂತೆ ಸುಡುವ ಬಿಸಿಯಲ್ಲ ಎಂದು ಶ್ರೀರಂಗಮಹಾಗುರುಗಳು ವರ್ಣಿಸುತ್ತಿದ್ದರು. ಈ ಜ್ಯೋತಿಯೇ ಕತ್ತಲೆಯಾಚಿನ  ಬೆಳಕು, ಬೆಳಕಿನ ಒಳಬೆಳಕು, ಪರಂಜ್ಯೋತಿ. ಈ ವೇದಸಾರವಾದ, ಮುಕ್ತಿಯನ್ನು ದಯಪಾಲಿಸುವ  ಈ ದೀಪವೇ  ಋಷಿ-ಜ್ಞಾನಿಗಳು ತಮ್ಮ ಹೃದಯಾಲವಾಲದಲ್ಲಿ ಅನುಭವಿಸುವ ಪರಂಜ್ಯೋತಿ.

ಕೃಷ್ಣನಾಗಿ ಕಂಡ ವಿಷ್ಣುವನ್ನು  ಆಧ್ಯಾತ್ಮ ದೀಪವಾಗಿ ದೇವಕೀದೇವಿ ಅನುಭವಿಸಿದಳೆಂದು  ಶ್ರೀಮದ್ ಭಾಗವತವು ತಿಳಿಸುತ್ತದೆ. ದೀಪಾವಳಿಯಲ್ಲಿ ನಾವು ಮನೆಯಲ್ಲಿ  ಬೆಳಗುವ ದೀಪಗಳು, ನಮಗೆ ಆ ಅಧ್ಯಾತ್ಮದೀಪದ ನೆನಪನ್ನುಂಟುಮಾಡುವ ಪ್ರತೀಕಗಳು. ಆ ಆಧ್ಯಾತ್ಮ ದೀಪವೇ ದೀಪಾವಳಿಯ ಕೇಂದ್ರ ಬಿಂದು, ಉಗಮಸ್ಥಾನ. ಯಾರು ಈ ಅಂತರ್ದೀಪದ  ಬೆಳಕಿನಲ್ಲಿ ಮುಂದೆಸಾಗುತ್ತಾರೋ, ಅವರು ಇಹವನ್ನು ಅನುಭವಿಸುತ್ತಿದ್ದರೂ, ಭೋಗ್ಯ ವಸ್ತುಗಳ ಮಧ್ಯದಲ್ಲಿದ್ದರೂ, ಮೋಕ್ಷದೆಡೆಗೆ ಸಾಗುತ್ತಾರೆ.  ಅಂತಹ ಮನೋಬುದ್ಧಿಗಳು ಸ್ವಾಭಾವಿಕವಾಗಿಯೇ ಪಾಪಕರ್ಮಗಳ ಗೊಂಡಾರಣ್ಯದ ಕಡೆಗೆ ದಾರಿಯನ್ನು ಹರಿಯಬಿಡುವುದಿಲ್ಲ. ಇದೇ ದೀಪಾವಳಿ ಹಬ್ಬದ ತಿರುಳು.

ನಾವು ದೀಪಾವಳಿಯಲ್ಲಿ ಆಚರಿಸುವ – ಕೊಂಡಾಡುವ ವಿಧಿ-ಸಂಪ್ರದಾಯಗಳು, ಈ ಇಬ್ಬಗೆಯ ಗುರಿಗಳಿಗೆ -ಅಂದರೆ ಪಾಪಗಳ ನಾಶ, ಧರ್ಮಮಾರ್ಗದಿಂದ ಐಹಿಕಸುಖ ಹಾಗೂ ಮೋಕ್ಷ ಸಾಧನೆಗೆ ಹೇಗೆ ಸಹಾಯಕವಾಗಿವೆಯೆಂದು ನೋಡಬೇಕಾಗಿದೆ.

ಆಂತರಿಕ ಅನುಭವ ಮತ್ತು ಸಾಂಕೇತಿಕ ಸಂಪ್ರದಾಯ

ಭಾರತೀಯ ಸಂಸ್ಕೃತಿ ವಿಶದೀಕರಿಸುವಂತೆ, ಈ ಜೀವನದಗುರಿ ಯೋಗ-ಭೋಗಮಯವಾದ ಜೀವನ – ಯೋಗದಿಂದ ಒಳ ಶಾಂತಿ, ತೃಪ್ತಿ, ಆನಂದಗಳ ಅನುಭವ ಮತ್ತು ಇದನ್ನು ಅಪಾಯಕ್ಕೆ ಒಳಪಡಿಸದೆ ಭೋಗದಿಂದ ಇಂದ್ರಿಯ ಸುಖಾನುಭವ. ಶ್ರೀರಂಗಮಹಾಗುರುಗಳು ಈ ವೈವಿಧ್ಯವನ್ನು ಬೀಜ-ವೃಕ್ಷಗಳ ಉದಾಹರಣೆಯಿಂದ ವಿಶದಪಡಿಸುತ್ತಿದ್ದರು. ಬೀಜವೇ ವೃಕ್ಷದ ಮೂಲ. ಬೀಜವೇ ಸೂಕ್ಷ್ಮರೂಪದಲ್ಲಿರುವ ಪರಿಪೂರ್ಣ ವೃಕ್ಷ. ಆ ಬೀಜವು ನಮ್ಮ ಉಪಯೋಗಕ್ಕೆ ಬರಬೇಕಾದರೆ, ಅದು ಬೆಳೆದು, ವೃಕ್ಷವಾಗಿ, ಪುಷ್ಪಗಳೊಂದಿಗೆ ಪ್ರಫುಲ್ಲಿಸಿ ಹಣ್ಣುಗಳನ್ನು ಕೊಡಬೇಕಾಗುತ್ತದೆ. ಈ ದ್ವಿವಿಧತೆ ನಮ್ಮ ಸಂಸ್ಕತಿಯಲ್ಲಿನ ರೂಪಕ- ಸಂಕೇತಗಳು, ಉಪಮಾನ- ಉಪಮೇಯಗಳು, ಕಥೆ- ನುಡಿಗಳಲ್ಲಿ ಹಾಸುಹೊಕ್ಕಾಗಿ ಹೆಣೆದುಕೊಂಡಿದೆ.

ಈ ಬೀಜ-ವೃಕ್ಷಗಳನ್ನೇ, ವೇದಗಳಲ್ಲಿ ದ್ಯಾವಾ-ಪೃಥಿವಿಯಾಗಿಯೂ, ದಿವಿ-ಭುವಿಗಳಾಗಿಯೂ; ಶಾಸ್ತ್ರ- ಆಗಮ- ತಂತ್ರಗಳಲ್ಲಿ ಪುರುಷ-ಪ್ರಕೃತಿಗಳಾಗಿಯೂ, ಪುರಾಣಗಳಲ್ಲಿ ಶಿವ-ಶಕ್ತಿ, ಲಕ್ಷ್ಮೀ-ನಾರಾಯಣರಾಗಿಯೂ ಪ್ರಸ್ತುತಪಡಿಸಿದ್ದಾರೆ. ಇವುಗಳನ್ನು, ಶ್ರದ್ಧಾವಂತರು ದೈವೀ ಮಾತಾ-ಪಿತೃಗಳೆಂದೇ ಸಂಭೋದಿಸುತ್ತಾರೆ. ಇವುಗಳು ಬರಿಯ ಸಂಕೇತಗಳಲ್ಲದೆ, ಆಂತರಿಕ ಸತ್ಯಗಳ ಮತ್ತು ಅವುಗಳ ಅನುಭವಗಳ ಚಿತ್ರಣ – ನಿರೂಪಣೆಗಳಾಗಿವೆ. ಶಿವನನ್ನು ನಿರಂತರವಾಗಿ ಧ್ಯಾನದಲ್ಲಿ ತನ್ಮಯನಾಗಿರುವ ತಪಸ್ವಿಯಂತೆಯೂ, ನಾರಾಯಣನನ್ನು ಯೋಗನಿದ್ರೆಯಲ್ಲಿ ಮುಳುಗಿರುವ ಶೇಷಶಾಯಿಯಂತೆಯೂ ವರ್ಣಿಸಲಾಗುತ್ತದೆ. ಪಾರ್ವತೀ- ಲಕ್ಷ್ಮಿಯರು ಸಮೃದ್ಧಿ, ವಿದ್ಯೆ ಮತ್ತು ಐಶ್ವರ್ಯಗಳನ್ನು ಕರುಣಿಸುವ ದೈವೀಮಾತೆಯರು. ದೇವತೆಗಳೆಲ್ಲರೂ ಈ ದೈವೀ ದಂಪತಿಗಳ ಅನುಗ್ರಹ ಮತ್ತು ಶಕ್ತಿಗಳಿಂದ ವಿವಿಧವಾದ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.

ಸೂರ್ಯ ನಿಜಕ್ಕೂ ಪರಂಜ್ಯೋತಿಯ ಪ್ರಕಾಶ ಮತ್ತು ಪ್ರಭೆಗಳ ಪ್ರತಿಬಿಂಬ. ಪರಂಜ್ಯೋತಿಸೂರ್ಯನೊಂದಿಗೆ ಸಂಬಂಧ ನಾಶವಾಗದಂತೆ ಐಹಿಕ ಭೋಗಗಳನ್ನು ಅನುಭವಿಸಲು ಸಾಧ್ಯವಾಗಿಸುವಂತಹ ಧರ್ಮಸೇತುವೆಯ ಅವತಾರವೇ ಅವನ ಪ್ರತಿನಿಧಿ,  ಪುತ್ರ, ಯಮ. ದಂಡವನ್ನು ಕೈಯಲ್ಲಿ ಧರಿಸಿರುವ ಯಮಧರ್ಮರಾಯನ ಹೊಣೆಗಾರಿಕೆ ಮತ್ತು ಅಧಿಕಾರ, ಪಾಪ – ಪುಣ್ಯಗಳಿಗೆ ತಕ್ಕಂತೆ ನಮ್ಮ ಕರ್ಮಗಳ ಫಲಗಳನ್ನು ಪ್ರಸಾದಿಸುವುದು.  ಶ್ರೀರಂಗಮಹಾಗುರುಗಳು, ಯೋಗ ನಾಡಿಗಳು ಮತ್ತು ಅವುಗಳ ಮಾರ್ಗಗಳಿಗೆ ಮನೆಯಾದ ನಮ್ಮಬೆನ್ನುಮೂಳೆಯನ್ನು, ಮೇರುದಂಡವನ್ನು, ಈ ಯಮದಂಡವೆಂದು ಗುರಿತಿಸುತ್ತಾರೆ. ಆದ್ದರಿಂದ ಯಮ, ನಮ್ಮ ಪಾಪ -ಪುಣ್ಯಗಳಿಗನುಗುಣವಾಗಿ ಕರ್ಮಫಲಗಳನ್ನು, ಸ್ವರ್ಗ ಅಥವಾ ನರಕ ಎಂದು ವಿತರಣೆ ಮಾಡುತ್ತಾನೆ ಎಂದು ಹೇಳಬಹುದು. ಧಾರ್ಮಿಕವಾದ ಜೀವನ ನಡೆಸುವುದಕ್ಕೆ, ಆರೋಗ್ಯಕರವಾಗಿ, ಹದ್ದುಬಸ್ತಿನಲ್ಲಿರುವ ದೇಹೇಂದ್ರಿಯಗಳು ಮತ್ತು ಆಗಾಗ್ಗೆ ಯೋಗದಲ್ಲಿ ಮುಳುಗುವ ಮನೋಬುದ್ಧಿಗಳು ಅವಶ್ಯಕ.

ಆಧಿ-ವ್ಯಾಧಿಗಳಿಂದ ಮುಕ್ತವಾದ ಬದುಕನ್ನು ಪ್ರಸಾದಿಸುವ ದಿವ್ಯವೈದ್ಯನೇ ಧನ್ವಂತರಿ ಮಹಾದೇವ. ನಮ್ಮನ್ನು ಪುಣ್ಯಕರ್ಮದೆಡೆಗೆ ಎಳೆಯುವ  ಶಕ್ತಿಗಳು ದೇವತೆಗಳಾದರೆ, ಪಾಪದತ್ತ ದೂಡುವ ಶಕ್ತಿಗಳು ಅಸುರರು, ಮೂರ್ತಿವೆತ್ತ ಅಧರ್ಮದ ರೂಪಗಳು. ದಯೆ, ದಾನ ಮೊದಲಾದವು ಪುಣ್ಯಕೆಲಸಗಳಾದರೂ, ಅವು ನಮ್ಮನ್ನು ಕರ್ಮ-ಫಲಗಳ ಚಕ್ರದಲ್ಲಿ ಬಂಧಿಸುತ್ತವೆ. ಮುಕ್ತಿ- ಮೋಕ್ಷವನ್ನು ನೇರವಾಗಿ ಹೊಂದಬೇಕಾದರೆ, ಪಾಪ-ಪುಣ್ಯ ರಹಿತವಾದ ಮಧ್ಯಯೋಗಮಾರ್ಗವನ್ನು ಅವಲಂಬಿಸಬೇಕು.
ಈ ತತ್ವಗಳ ಪೀಠಿಕೆಯನ್ನು ಮನಸ್ಸಿನಲ್ಲಿರಿಸಿಕೊಂಡು, ದೀಪಾವಳಿಗೆ ಸಂಬಂಧಿಸಿದ ಕೆಲವು ಕಥೆಗಳ ಅಂತರಾರ್ಥದೆಡೆಗೆ ಮನಸ್ಸನ್ನು ಹರಿಸೋಣ.

ಸಮುದ್ರ ಮಥನ – ಲಕ್ಷ್ಮೀಯ ಆವಿರ್ಭವ

ಸಮುದ್ರಮಥನವು ಯೋಗದ ಒಳ ಅನುಭವಗಳಿಂದ ತುಂಬಿ ಬಹುವಾಗಿ ಕೊಂಡಾಡಲ್ಪಟ್ಟಿರುವ ಕಥೆ. ಶ್ರೀರಂಗಮಹಾಗುರುಗಳು ಈ ಪೌರಾಣಿಕ ಕಥೆಯು ಯಾವ ಆಂತರಿಕ ಅನುಭವಗಳ ತಳಹದಿಯ ಮೇಲೆ ನಿಂತಿದೆಯೋ ಅವುಗಳನ್ನು ಕಥೆಯೊಂದಿಗೆ ವರ್ಣಿಸಿದ್ದಾರೆ. ನಮ್ಮ ಪುಣ್ಯ -ಪಾಪ ಕರ್ಮಗಳ ಜೀವನಜಂಜಾಟ, ದೇವತೆಗಳು ಮತ್ತು ಅಸುರರು ಮಾಡುವ ಕ್ಷೀರಸಾಗರದ ಮಥನವನ್ನು ಪ್ರತಿಬಿಂಬಿಸುತ್ತದೆ. ನಮ್ಮಲ್ಲಿನ ಮೇರುದಂಡವೇ, ಬೆನ್ನುಮೂಳೆಯೇ, ದೇವಾಸುರರ ಕಡೆಗೋಲು- ಮಂದರಪರ್ವತ.

ಕಡೆಗೋಲಿಗೆ ಬಿಗಿದುರುವ ಹಗ್ಗದ ಎರಡು ಅಂಚುಗಳೂ ದೃಢವಾಗಿ ಚಲಿಸಿದರೂ ಮೇರುದಂಡ ತನ್ನಸುತ್ತಲುಮಾತ್ರ ತಿರುಗುತ್ತಾ ಬೇರೆಚಲನವಿಲ್ಲದೆ ಸ್ವಸ್ಥಾನದಲ್ಲೇ ನಿಂತಿರುತ್ತದೆ. ಪುಣ್ಯ-ಪಾಪಗಳ ಚಾಲನೆಗಿಂತ ಭಿನ್ನವಾದ ಇದು, ಯೋಗದ ಒಳಪ್ರಯಾಣವನ್ನು ಬಿಂಬಿಸುತ್ತದೆ. ಹೇಗೆ ಕೂರ್ಮ ಸ್ವೇಚ್ಛೆಯಿಂದ ತನ್ನ ಅಂಗಗಳನ್ನು ಒಳಸೆಳೆದು ಸಂಯಮಿಸಿಕ್ಕೊಳ್ಳಬಲ್ಲದೋ, ಹಾಗೆಯೇ ಕಚ್ಛಪರೂಪಿಯಾದ ಮಹಾವಿಷ್ಣು ಇಂದ್ರಿಯಸಂಯಮವನ್ನು ಪ್ರತಿನಿಧಿಸುತ್ತಾನೆ. ಕೂರ್ಮ ಯಾವಾಗ ಸಹಕರಿಸುತ್ತಾನೆಯೋ ಆಗಷ್ಟೇ ನಿಜವಾಗಿ ಈ ಮಥನವು ಪ್ರಾರಂಭವಾಗುತ್ತದೆ ಮತ್ತು ಯೋಗದ ಆರೋಹಣ ಮೊದಲಾಗುತ್ತದೆ. ಇದರ ಮೊದಲ ಉತ್ಪತ್ತಿ ಹಾಲಾಹಲ ವಿಷ, ಅದನ್ನು ದೇವದೇವನಾದ ಶಿವ ಸ್ವೀಕರಿಸುತ್ತಾನೆ. ನಂತರ ಅನೇಕ ವಿಧವಾದ ಐಶ್ವರ್ಯಗಳು ಉತ್ಪತ್ತಿಯಾಗುವುವು. ಅವುಗಳಲ್ಲಿ ದಿವಿಯಗೋಮಾತೆ ಸುರಭಿ, ಉಚ್ಚೈಶ್ರವಸ್ ಎಂಬ ಅಶ್ವ, ಐರಾವತವೆಂಬ ಆನೆ ಪ್ರಮುಖ. ಅವುಗಳಲ್ಲೂ, ಗೋಮಾತೆಸುರಭಿ, ಧರ್ಮಮಾರ್ಗಕ್ಕೆ ಹೊಂದುವ ಅರ್ಥಗಳನ್ನು ಪ್ರತಿನಿಧಿಸುತ್ತಾಳೆ.

ಗೋವು, ಹಾಲು, ಬೆಣ್ಣೆ, ತುಪ್ಪ ಮೊದಲಾದ ಯಜ್ನೋಪಯೋಗಿಯಾದ ಪದಾರ್ಥಗಳನ್ನು ನೀಡುತ್ತಾಳೆ. ಅದರ ಸಾನ್ನಿಧ್ಯವೇ ನಮ್ಮಲ್ಲಿ ತಪಸ್ಸಿಗೆ ಅನುಕೂಲವಾಗುವಂತಹ ಸ್ಥಿತಿಯನ್ನುಂಟುಮಾಡುತ್ತದೆ. ಗೋವಿನಿಂದ ಉತ್ಪತ್ತಿಯಾಗುವ ಐದು ಪದಾರ್ಥಗಳ ಮಿಶ್ರಣ -ಪಂಚಗವ್ಯ, ನಮ್ಮ ಹಿಂದಿನ ಪಾಪಕರ್ಮಗಳ ಪರಿಣಾಮಗಳನ್ನು ಶೂನ್ಯಗೊಳಿಸುತ್ತದೆ. ಸಮುದ್ರಮಥನದಲ್ಲಿ ಮುಂದಿನದಾಗಿ ವಿಶ್ವದಲ್ಲಿನ ಎಲ್ಲ ಐಶ್ವರ್ಯಗಳಿಗೂ, ನಿಧಿಗಳಿಗೂ ಆಗರವಾದ ಮಹಾಲಕ್ಷ್ಮಿಯ ಉದಯವಾಗುತ್ತದೆ. ಅವಳು ಆವಿರ್ಭವಿಸುತ್ತಿದ್ದಂತೆಯೇ, ಎಲ್ಲ ಐಹಿಕ ಐಶ್ವರ್ಯಗಳೂ ಯೋಗದ ಆಂತರಿಕ ಸಂತೃಪ್ತಿಯನ್ನು ಪ್ರತಿನಿಧಿಸುವ ಶ್ರೀಹರಿಯ ಜೊತೆಜೊತೆಯಲ್ಲೇ ಮುಂದುವರಿಯಬೇಕೆಂಬುದನ್ನು ತೋರಗೂಡುತ್ತಾ ಶ್ರೀಹರಿಯನ್ನು ಸೇರುತ್ತಾಳೆ.

ಆಂತರಿಕ ಸಾಧನೆಗೆ ವಿಘ್ನವಾಗುವ ಅಥವಾ ಅದರಿಂದ ಬೇರ್ಗೊಳ್ಳುವ ಐಹಿಕ ಸುಖ-ಭೋಗಗಳನ್ನು, ಅ ಲಕ್ಷ್ಮೀ ಅಥವಾ ವಿರುದ್ಧಲಕ್ಷ್ಮೀ ಎಂದು ಕರೆಯುತ್ತಾರೆ. ಅಲಕ್ಷ್ಮೀ ದುಃಖದಲ್ಲಿ ಮತ್ತು ಬಂಧನದಲ್ಲಿ ಮುಳುಗಿಸುತ್ತದೆ. ಈ ಮಥನವು ಅಮೃತೋದ್ಭವದಲ್ಲಿ ಕೊನೆಗೊಳ್ಳುತ್ತದೆ – ಅಂದರೆ ಯೋಗಸಮಾಧಿಯ ಆನಂದದಲ್ಲಿ. ದೇವಧನ್ವಂತರಿ, ಅಮೃತದ ಘಟದೊಡನೆ ಆವಿರ್ಭವಿಸಿದನೆಂದು ಕಥೆ ಹೇಳುತ್ತದೆ. ಈ ಆನಂದದ ಕೃತಕೃತ್ಯತೆ ಸಾಧಕನ ಇಂದ್ರಿಯಗಳಿಗೆಲ್ಲಾ ಉಣಿಸಿ, ತಣಿಸಿ, ಅವನಲ್ಲೇ ಮನೆಮಾಡಿ, ಆತ ಹೋದೆಡೆಯೆಲ್ಲಾ, ಮಾಡುವಕರ್ಮಗಳಿಗೆಲ್ಲಾ ತನ್ನತಂಪನ್ನೂ,  ಕಂಪನ್ನೂ ಹರಡುತ್ತದೆ. ಆದ್ದರಿಂದ, ಈ ಅಮೃತ, ದೈಹಿಕ- ಮಾನಸಿಕ ವ್ಯಾಧಿಗಳನ್ನೆಲ್ಲಾ  ನಿವಾರಣೆ ಮಾಡುತ್ತದೆ.

ಈ ಮೇಲೆ ಹೇಳಿದ ತತ್ವಗಳ ಪ್ರತಿಬಿಂಬ ತ್ರಯೋದಶಿಯಂದು ಆಚರಿಸುವ ಆಚಾರ -ವ್ರತಗಳಲ್ಲಿ ಕಾಣಬಹುದು. ಮೊದಲು ನಾವು ಮನೆಯ ಕಸವೆನ್ನೆಲ್ಲ, ಅಲಕ್ಷ್ಮಿಯನ್ನೆಲ್ಲಾ, ಹೊರಗೆಸೆಯುತ್ತೇವೆ. ಇವು ನಮ್ಮನ್ನು ನರಕಕ್ಕೆ ದೂಡುವ ಪಾಪದ ವಾಸನೆಗಳು. ಆದರೆ, ಎಲ್ಲಕ್ಕೂ ಉತ್ಕೃಷ್ಟವಾದ ಮದ್ದು, ‘ದೀಪದ’ ದರ್ಶನ. ಶ್ರೀರಂಗಮಹಾಗುರುಗಳು, ಅನೇಕವಿಧವಾದ ದೀಪಗಳ ದರ್ಶನದ ಪರಿಣಾಮಗಳನ್ನು ವಿವರಿಸಿ, ಪ್ರಾಯೋಗಿಕವಾಗಿ ತೋರಿಸಿಕೊಡುತ್ತಿದ್ದರು. ಸ್ವರ್ಣವರ್ಣದ ಆಕಾರದ ಜ್ಯೋತಿ, ನಮ್ಮ ಪರಮಗುರಿಯನ್ನು ನೆನೆಪಿಗೆ ತಂದುಕೊಡುತ್ತದೆ. ಊರ್ಧ್ವಮುಖವಾಗಿ, ಶಾಂತವಾಗಿ, ನಿಶ್ಚಲವಾಗಿಬೆಳಗುವ ಜ್ಯೋತಿ, ಆಂತರಿಕ ಅಧ್ಯಾತ್ಮದೀಪದ ಹೊರ ಪ್ರತೀಕ. ಅದು ಪಾಪ-ನರಕಗಳ ನಿಕೃಷ್ಠ ವಿಷಹಾರಿ. ಆದ್ದರಿಂದಲೇ ಯಮನಿಗೆ ‘ ಮೃತ್ಯುನಾ …’ ಎಂದು ಮೊದಲಾಗುವ ಈ ಕೆಳಗಿನ ಶ್ಲೋಕದಿಂದ ದೀಪವನ್ನು ಅರ್ಪಿಸುವ ಪರಿಪಾಠ.

मृत्युना पाशदण्डाभ्याम कालेन श्यामया सह |
त्रयोदश्यां दीपदानात् सूर्यज: प्रीयतां मम ||  

ಅಲಕ್ಷ್ಮಿಗಳಾದ ಕಸವನ್ನು ನಮ್ಮಿಂದ ಹೊರಹಾಕಿ, ಯಮನನ್ನು ದೀಪದಾನದೊಡನೆ ಸಂತೃಪ್ತಿಗೊಳಿಸಿದಾಗ, ನಮ್ಮಲ್ಲಿನ ಧರ್ಮ ಪುಷ್ಟಿಗೊಳ್ಳುತ್ತದೆ. ಇದರ ಸ್ವಾಭಾವಿಕ ಫಲಿತಾಂಶ ‘ಲಕ್ಷ್ಮೀ’ಯೇ. ಆದ್ದರಿಂದ, ಅಂದಿನಿಂದ ನಮ್ಮ ಪ್ರಯತ್ನ, ಇಹ ಐಶ್ವರ್ಯ- ಭೋಗಗಳ ಗಳಿಕೆ, ಆದರೆ ಧರ್ಮಮಾರ್ಗದೊಂದಿಗೆ. ತ್ರಯೋದಶಿಯಿಂದ ಮೊದಲ್ಗೊಂಡು ಮೂರುದಿನ, ತ್ರಿರಾತ್ರ ವ್ರತ. ಆ ದಿನಗಳಲ್ಲಿ, ಧರ್ಮ ಮತ್ತು ಭೌತಿಕ ಐಶ್ವರ್ಯಗಳ ಸಮನ್ವಯವಾದ ಗೋಮಾತೆಯನ್ನು ಪೂಜಿಸುತ್ತೇವೆ. ದೇವಧನ್ವಂತ್ರಿ, ನಮಗೆ ನೇರವಾಗಿ ಅಮೃತತ್ವವನ್ನು ಕರುಣಿಸುತ್ತಾನೆ – ದೈಹಿಕ ಅರೋಗ್ಯ ಮತ್ತು ಆಧ್ಯಾತ್ಮಿಕ ಅಡಚಣೆಗಳ ನಿವಾರಣೆಯ ಮೂಲಕ. ಕರ್ನಾಟಕದಲ್ಲಿ ತ್ರಯೋದಶಿಯ ಸಂಜೆ ಶುದ್ಧಿಮಾಡಿದ ಹಂಡೆ-ಪಾತ್ರೆಗಳಲ್ಲಿ, “ನೀರುತುಂಬುವ” ಹಬ್ಬವನ್ನು ಆಚರಿಸುತ್ತಾರೆ. ಈ ಆಚರಣೆಯೂ, ಅಲಕ್ಷ್ಮೀ ನಾಶಪಡಿಸಿ, ಪವಿತ್ರತೆಯ ಸಾರವನ್ನು ಪ್ರತಿಬಿಂಬಿಸುವ ಗಂಗಾಮಾತೆಯನ್ನು ತುಂಬುವ ಪ್ರತೀಕ.

ನರಕಚತುರ್ದಶಿಯ ಸಂಕೇತಗಳು

ನರಕಾಸುರ ಗಾಢವಾದ ಪಾಪಗಳ,  ನರಕದ ಮೂರ್ತಸ್ವರೂಪ.  ಆತ ಸಮೃದ್ಧಿಯನ್ನೊಸಗುವ  ಪೃಥ್ವಿ  ಮಾತೆಯ ಪುತ್ರ. ಆದರೂ, ಅವನು, ದೇವತೆಗಳಮೇಲೆ ಲಗ್ಗೆಹತ್ತಿ, ದೇವಮಾತೆ ಅದಿತಿಯ ಆಭರಣಗಳನ್ನು ಅಪಹರಿಸುತ್ತಾನೆ. ‘ಪೃಥ್ವಿ’ ಯನ್ನು ಪ್ರತಿನಿಧಿಸುವ ಅರ್ಥ-ಸಂಪತ್ತನ್ನು ಗಳಿಸಿ -ಅನುಭವಿಸುವ  ಯತ್ನಗಳು, ಆಂತರಿಕ ಏಳಿಗೆಗೆ, ದಿವಿಯೆಡೆಗೆ, ಪರಂಜ್ಯೋತಿಯತಾಣಕ್ಕೆ ನಮ್ಮ ಪ್ರಯಾಣದ ಪ್ರಯತ್ನಗಳಿಗೆ ವಿಘ್ನಗಳನ್ನು ತರಬಾರದೆಂಬ ನಮ್ಮ ಹಿಂದಿನ ಮಾತನ್ನು ನೆನೆಸಿಕೊಳ್ಳುವ.

ನರಕಾಸುರನ ಈ ಕೃತ್ಯಗಳು, ಧರ್ಮದ ತತ್ವಗಳಿಗೆ ತದ್ವಿರುದ್ಧ  ಮತ್ತು ಆ ನಡತೆ, ನೇರವಾಗಿ ನರಕಕ್ಕೆ ಕೊಂಡೊಯ್ಯುತ್ತದೆ. ಆತ, ಅಂಕೆ -ಜವಾಬ್ದಾರಿಗಳಿಲ್ಲದ ಭೋಗ-ಕಾಮಾಸಕ್ತಿಯ ಮೂರ್ತರೂಪ, ಅಲ್ಲ, ನರಕದ ಸಾಕ್ಷಾತ್ ಸ್ವರೂಪವೇ ಸರಿ. ಆತನ ರಾಜಧಾನಿ ಪ್ರಾಗ್- ಜ್ಯೋತಿಷಪುರ.  ಅಂದರೆ, ಪೂರ್ವದಿಕ್ಕಿನಲ್ಲಿರುವ ಬೆಳಕಿನ ನಗರ. ಭಾರತತೀಯಪದ್ಧತಿಯಂತೆ, ಪೂರ್ವದಿಕ್ಕು –  ದಿನ, ಚಟುವಟಿಕೆ ಮತ್ತು ವಿಕಾಸಗಳನ್ನು ಪ್ರತಿನಿಧಿಸುತ್ತದೆ. ನಮ್ಮ ಹೊರಚಟುವಟಿಕೆಗಳನ್ನು  ವಿಸ್ತರಿಸುವ ಸಮಯವೂ ಸಹ.  ಇದಕ್ಕೆ ತದ್ವಿರದ್ಧವಾಗಿ, ಪ್ರತ್ಯಗ್ -ಜ್ಯೋತಿಷಪುರ-ಪಶ್ಚಿಮ, ಚಟುವಟಿಕೆಗಳ ವಿರಾಮ, ಅಂತರ್ಮುಖತೆ,  ಸಮಾಧಿಯ ಕಡೆಗಿನ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಪ್ರಾಗ್- ಜ್ಯೋತಿಷಪುರವು  ಇಂದ್ರಿಯಗಳ ತೃಪ್ತಿಪಡಿಸಲಾಗದ, ತಣಿಸಲಾಗದ, ಅಸಂಖ್ಯಾತ  ಆಸೆಗಳ ತೀರಿಸುವ ಪ್ರಯತ್ನವನ್ನು ಬಿಂಬಿಸುತ್ತದೆ.

ತದ್ವಿರುದ್ಧವಾಗಿ, ಪ್ರತ್ಯಗ್ -ಜ್ಯೋತಿಷಪುರ ನಮ್ಮಲ್ಲಿ ಬೆಳಗುವ ಆಂತರಿಕ ಜ್ಯೋತಿಯ ಅನ್ವೇಷಣೆಯನ್ನು ಸೂಚಿಸುತ್ತದೆ. ನರಕಾಸುರನ ಸರದಾರ, ಐದುಹೆಡೆಯ ಮುರ. ಆತನ ರಾಜಧಾನಿ ಐದು ಪ್ರಾಕಾರಗಳಿಂದ ಸುತ್ತುವರಿದಿದೆ  – ಕೋಟೆ, ನೀರಿನ ಕಂದಕಗಳು, ಬೆಂಕಿ, ಗಾಳಿ ಮತ್ತು ಕುಣಿಕೆಗಳು (noose). ಇದೆಲ್ಲವೂ, ನರಕಾಸುರನ ಪಾಂಚಭೌತಿಕತತ್ವಗಳಿಂದ  ನಿರ್ಮಿತವಾದ ವಸ್ತುಗಳ ಮೇಲಿನ ಆಸಕ್ತಿಯಯನ್ನು ತೋರಿಸುತ್ತದೆ. ಕೇವಲ ಭೌತಿಕ ವಸ್ತುಗಳೆಡೆಗೇ ಮುಖಮಾಡಿದ ಮಾನಸಿಕ ಸ್ಸ್ಥಿತಿಯನ್ನು, ಯೋಗೇಶ್ವರನಾದ ಕೃಷ್ಣನಲ್ಲಿ ನೆನೆಹಾಕಿ ಸರಿಪಡಿಸಬಹುದು. ನರಕಾಸುರನನ್ನು ವಧಿಸಿ, ಕೃಷ್ಣ, ಆತನು ಕಾರಾಗೃಹದಲ್ಲಿ ಬಂಧಿಸಿದ ೧೬೦೦೦ ಕನ್ಯೆಯರನ್ನು ಮುಕ್ತಗೊಳಿಸಿ, ವಿವಾಹವಾಗುತ್ತಾನೆ. ಇದು, ಯೋಗಕ್ಕೆ ಬೇಕಾದ ನಾಡೀಮುಖಗಳನ್ನು  ತೆರೆದು,  ಅರಳಿಸುವ ಕೆಲಸದ ಅನ್ಯೋಕ್ತಿ.

ನರಕಚತುರ್ದಶಿಯ ಆಚರಣೆ ಮತ್ತು ಲಕ್ಷ್ಮೀಪೂಜೆ

ಈ ಮೇಲೆ ತಿಳಿಸಿದ  ತತ್ವಗಳನ್ನು ಮನಸ್ಸಿನಲ್ಲಿರಿಸಿಕೊಳ್ಳುವ. ನರಕ ಚತುರ್ದಶಿಯ ಆಚರಣೆ ಉಷಃಕಾಲದಮೊದಲು,  ಸ್ತೋತ್ರ- ಧ್ಯಾನಗಳೊಡನೆ ಮೊದಲಾಗುತ್ತದೆ. ನಂತರ ಸಾಂಪ್ರದಾಯಿಕ ಅಭ್ಯಂಜನ. ಇದು  ಅಲಕ್ಷ್ಮಿಯನ್ನೂ , ಮೃತ್ಯುವನ್ನೂ  ತಡೆಗಟ್ಟುತ್ತದೆ  ಎಂದು ಶಾಸ್ತ್ರಗಳು ತಿಳಿಸುತ್ತವೆ . ಈ ಅಭ್ಯಂಜನಸ್ನಾನ, ವೈಜ್ಞಾನಿಕವಾಗಿದೆಯೆಂದೂ, ಆರೋಗ್ಯ ಮತ್ತು ದೀರ್ಘಾಯುಸ್ಸನ್ನು ಒದಗಿಸಿ, ಯೋಗ ಮಾರ್ಗದ ವಿಘ್ನಗಳನ್ನು ಪರಿಹಾರಮಾಡುತ್ತದೆಯೆಂದೂ  ಶ್ರೀರಂಗ ಮಹಾಗುರುಗಳು ಶ್ಲ್ಯಾಘಿಸುತ್ತಿದ್ದರು. ಅವರು, ಅದೆಷ್ಟೋಬಾರಿ, ಇದರ  ತಂತ್ರ- ಸೂಕ್ಷ್ಮಗಳನ್ನು ಪ್ರಯೋಗಿಕವಾಗಿ ತಮ್ಮ ಶಿಷ್ಯರಿಗೆ ತೋರಿಸುತ್ತಿದ್ದರು.

ನಸುಕಿನಲ್ಲಿ ಮಾಡುವ ಈ ಅಭ್ಯಂಜನ, ನಮ್ಮ ಮನೋ-ಬುದ್ಧಿಗಳನ್ನು ಮೇಲೇರಿಸುವುದರಿಂದ ಇದನ್ನು ಗಂಗಾಸ್ನಾನವೆಂದು ಕರೆಯುತ್ತೇವೆ. ಕೆಳಲೋಕಗಳಿಗೆ ಜಾರಿದ ಅಥವಾ ಊರ್ಧ್ವಲೋಕಗಳನ್ನು ಅರಸುವ ಪಿತೃಗಳಿಗೆ ದಾರಿತೋರಿಸಲು ಅಂದು ಸಂಜೆ ದೀವಟಿಗೆ- ಪಂಜುಗಳನ್ನು ಬೆಳಗಿಸಿ, ಆಕಾಶದೆಡೆಗೆ  ತೋರುತ್ತಾರೆ. ಆಕಾಶಕ್ಕೆ ಬೆಳಕು ಚೆಲ್ಲುವ ಪಟಾಕಿಗಳೂ ಈ ಅಭಿಪ್ರಾಯಕ್ಕೆ ಹೊಂದಿಕ್ಕೊಳ್ಳುತ್ತವೆ.

ಅಮಾವಾಸ್ಯೆಯ ಸ್ವಾಗತವೂ, ಸಾಂಪ್ರದಾಯಿಕ ಸ್ನಾನದೊಂದಿಗೆ. ಮೊದಲೇ ತಿಳಿಸಿದಂತೆ, ಅಂದು ಶಾಸ್ತ್ರೋಕ್ತವಾಗಿ  ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ. ವರ್ತಕ – ವ್ಯಾಪಾರಿಗಳಿಗೆ ಅಂದು ಸಂಜೆ ನಡೆಯುವ ಲಕ್ಷ್ಮೀಪೂಜೆ, ಹೊಸ ಆರ್ಥಿಕ ವರ್ಷಕ್ಕೆ ನಾಂದಿ. ಧನಕ್ಕೆ ಒಡೆಯನಾದ ಕುಬೇರನನ್ನೂ ಅಂದು ಅರ್ಚಿಸುವ   ವಾಡಿಕೆ ಉಂಟು. ಪವಿತ್ರವಾದ ಆ ರಾತ್ರಿ, ಭಗವಂತನ ನಿರಂತರ ಸ್ತೋತ್ರ – ಪೂಜೆಗಳೊಡನೆ ಪರಿಸಮಾಪ್ತಿಗೊಳ್ಳುತ್ತದೆ.

ಬಲಿಪಾಡ್ಯಮಿ ಹಾಗೂ ಗೋವರ್ಧನ ಪೂಜೆ

ಈ ಕಥೆ ಜನಜನಿತ. ಬಲಿ, ರಾಕ್ಷಸರ ರಾಜ ಮತ್ತು ಪ್ರಸಿದ್ಧನಾದ ಪ್ರಹ್ಲಾದನ ಮೊಮ್ಮಗ. ನರಕಾಸುರನಂತೆ, ಈತನೂ ನೈಸರ್ಗಿಕ ವ್ಯವಸ್ಥೆಯ, ಧರ್ಮದ, ವಿರುದ್ಧವಾಗಿ ದಿವಿಯನ್ನು ತನ್ನ ಆಧಿಪತ್ಯಕ್ಕೆ ಒಳಪಡಿಸಲು ಪ್ರಯತ್ನಿಸುತ್ತಾನೆ. ಆಗ ದಿವಿಯಾಳುವ  ದೇವತೆಗಳ ಮಾತೆಯಾದ ಅದಿತಿಯ ಪುತ್ರನಾಗಿ ಮಹಾವಿಷ್ಣುವು ಜನಿಸುತ್ತಾನೆ. ನಮ್ಮ ಪ್ರಕೃತಿಯೂ ಕಾಮ-ಕ್ರೋಧ  ಮೊದಲಾದ ಅರಿಗಳಿಂದ ತುಂಬಿ ಕೇವಲ ಪ್ರಾಪಂಚಿಕ ವಸ್ತುಗಳನ್ನು ಭೋಗಿಸಲು ಮೊದಲು ಮಾಡಿದರೆ ನಾವೂ ಬಲಿಯ ಮೂರ್ತರೂಪರಾಗುತ್ತೇವೆ.

ಆತನ ಇಂದ್ರಲೋಕದ ಜಯ, ಅಜ್ಞಾನದ ಕತ್ತಲೆ ನಮ್ಮಲ್ಲಿ ತುಂಬುವುದರ ಪ್ರತೀಕ. ಬಲಿಯು ಯಜ್ಞದಲ್ಲಿ ತೊಡಗಿರುವಾಗ ವಾಮನನು ತನ್ನ ಪಾದದಲ್ಲೇ ಮೂರು ಹೆಜ್ಜೆಗಳ ಜಾಗವನ್ನು ಬೇಡುತ್ತಾನೆ. ಬಲಿ  ಮಾತು ಕೊಡುತ್ತಾನೆ. ವಾಮನ ಬೃಹತ್ತಾಗಿ ಬೆಳೆದು, ಅನಾಯಾಸವಾಗಿ ದಿವಿ-ಭುವಿಗಳನ್ನು ತನ್ನ ಎರಡೇ ಹೆಜ್ಜೆಗಳಲ್ಲಿ ಆಕ್ರಮಿಸುತ್ತಾನೆ. ಒಂದು ಸಣ್ಣಕಿಡಿ ಕಾಳ್ಗಿಚ್ಚಾಗಿ ಹರಡುವಂತೆ, ಹೃದಯಮಧ್ಯದಲ್ಲಿ ಜ್ಞಾನಿಗಳು  ಕಾಣುವ ಅಂಗುಷ್ಠಮಾತ್ರದ ಆತ್ಮಜ್ಯೋತಿ, ಇಡೀ ಭುವಿ-ದಿವಿಗಳನ್ನು ಆಕ್ರಮಿಸಬಲ್ಲದು. ಈ ಅಂಗುಷ್ಠಮಾತ್ರದ ಜ್ಯೋತಿಯನ್ನು, ತಪಸ್ಸಿನಿಂದ ಬೆಳೆಸಿದರೆ, ಇಡೀ ದೇಹವನ್ನು ವ್ಯಾಪಿಸಿ ಬ್ರಹ್ಮಮಯವಾಗಿ ಮಾಡಬಲ್ಲದು.  ನಾವು ಪ್ರಾಪಂಚಿಕ ವ್ಯವಹಾರಗಳಲ್ಲಿ ಮಗ್ನರಾಗಿದ್ದಾಗ ನಮ್ಮ ಪ್ರಾಣಗಳು ದೇಹದಲ್ಲಿ ಹರಡಿರುವ ನಾಡೀಜಾಲದಲ್ಲಿ ಕೆಲಸಮಾಡುತ್ತವೆಯೆಂದು ಯೋಗಶಾಸ್ತ್ರವು ಹೇಳುತ್ತದೆ.

ಆದರೆ, ಯೋಗಮಾರ್ಗದಲ್ಲಿ ಸಾಗಲು ಪ್ರಾಣಗಳು ಕೆಳಗಿನ ಮುಲಾಧಾರಚಕ್ರದಿಂದ ಉನ್ನತಸ್ಥಾನದಲ್ಲಿರುವ ಸಹಸ್ರಾರದವರೆಗೆ ವ್ಯಾಪಿಸಿರುವ ಮೇರುದಂಡದ(ಬೆನ್ನುಮೂಳೆ) ಮಧ್ಯದಲ್ಲಿರುವ ಸುಷುಮ್ನಾ ನಾಡಿಯಲ್ಲಿ ಚಲಿಸಬೇಕಾಗುತ್ತದೆ. ಈ ಯೋಗಮಾರ್ಗವು, ಭೊ: – ಭುವ: – ಸುವ:  ಎಂಬ  ಮೂರುಲೋಕಗಳನ್ನೂ ವ್ಯಾಪಿಸಿರುತ್ತದೆ. ಇದೇ  ತ್ರಿವಿಕ್ರಮನ  ಮೂರೂ ಹೆಜ್ಜೆಗಳು. ಇದರಲ್ಲಿ ಸ್ವರ್ಲೋವು ಪರಂಜ್ಯೋತಿಯ ಪವಿತ್ರಸ್ಥಾನ. ಈ ಜ್ಞಾನಸೂರ್ಯನನ್ನು ಜ್ಞಾನಿಗಳು  ತಮ್ಮ  ಮಸ್ತಿಷ್ಕದ  ಉನ್ನತಸ್ಥಾನದಲ್ಲಿ ಕಾಣುತ್ತಾರೆ. ತ್ರಿವಿಕ್ರಮನು, ತನ್ನ ಮೂರನೆಯ ಹೆಜ್ಜೆಯನ್ನು, ಬಲಿಯ ಶಿರಸ್ಸಿನಮೇಲಿರಿಸಿ, ಜ್ಞಾನದ ಪರಮೋನ್ನತ ಅನುಭವವನ್ನು ಕರುಣಿಸಿ,  ಆತನ ಆಸುರೀ ವಾಸನೆಗಳೆನ್ನೆಲ್ಲಾ ನಾಶಮಾಡಿದುದರ ಅತ್ಯಂತ ಸುಂದರ ಚಿತ್ರಣ.  ಸದ್ಯದ ಸನ್ನಿವೇಶದಲ್ಲಿ, ಮುಂದೆ ನಡೆಯುವುದು ಇನ್ನಷ್ಟು ಸುಸಂಬದ್ಧ. ಏನೇ ಕೊರತೆಗಳಿದ್ದರೂ ಬಲಿ ಮಹಾವಿಷ್ಣುವಿನ ಪರಮಭಕ್ತ. ಆದ್ದರಿಂದ, ವಿಷ್ಣುವು ಆತನನ್ನು ಅನುಗ್ರಹಿಸಿ ಅವನಿರಬೇಕಾದ, ಐಶ್ವರ್ಯಪೂರಿತ ಸುತಲಲೋಕಕ್ಕೆ ಕಳುಹಿಸುತ್ತಾನೆ.

ಯಾವ ನಾಡಿಗಳು ವ್ಯಾಪಾರಮಾಡಿದರೆ ವಿಶ್ವದ ಉತ್ಕೃಷ್ಟವಾದ ಭೋಗಗಳನ್ನು ಸಂಪೂರ್ಣವಾಗಿ ಅನುಭವಿಸಬಹುದೋ, ಅಂತಹಲೋಕಕ್ಕೆ ಅವನನ್ನು ಕಳುಹಿಸುತ್ತಾನೆ. ಆದರೆ ಪರಂಜ್ಯೋತಿಯ ಅನುಭವದಿಂದ ಪಾವನನಾದ ಬಲಿ ಮಾನಸಿಕ ಸಮತೋಲನದ ಸ್ಥಿತಿಯಿಂದ ಆ ಐಶ್ವರ್ಯವೆಲ್ಲವನ್ನೂ ಅನುಭವಿಸುತ್ತಾನೆ. ಅದಲ್ಲದೇ, ಬಲಿಯನ್ನು ಆಸುರೀ ಪ್ರವೃತ್ತಿಗಳಿಂದ ಕಾಯಲು ಸ್ವಯಂ ನಾರಾಯಣನೇ ಆತನ ಬಾಗಿಲ ಕಾವಲುಗಾರನಾಗುತ್ತಾನೆ. ಇದರ ಜೊತೆಗೆ, ಬಲಿ  ಮುಂದೆ ಸ್ವರ್ಗಕ್ಕೇರಿ ಇಂದ್ರಪದವಿಯನ್ನು ಗಳಿಸುತ್ತಾನೆಂಬ ವರವೂ  ಕೂಡ ನೀಡಲಾಗುತ್ತದೆ. 

ಈ ಕಥೆಯು  ನಾರಾಯಣನು ನಮ್ಮ ಆಸುರೀ ವಾಸನೆಗಳನ್ನು  ಹೇಗೆ ಕಳೆಯುತ್ತಾನೆ ಎನ್ನುವುದಕ್ಕೆ ಒಂದು ನಿದರ್ಶನ. ಕೆಲವೊಮ್ಮೆ ನರಕಾಸುರನನ್ನು ನಿಗ್ರಹಿಸಿ – ಅನುಗ್ರಹಿಸಿದಂತೆ ನಿಗ್ರಹಿಸುತ್ತಾನೆ, ಅನುಗ್ರಹ ಮಾಡುವುದಕ್ಕೋಸ್ಕರ. ಆದರೆ ಇಲ್ಲಿ ಅಧರ್ಮದಿಂದ ಪಡೆದ ಸ್ಥಾನವನ್ನು ಉಪಾಯದಿಂದ ಕಸಿದು ಬಲಿಯನ್ನು ಅನುಗ್ರಹಿಸುತ್ತಾನೆ.     

ಶ್ರೀ ಶ್ರೀರಂಗ ಮಹಾಗುರುಗಳು ಕೊಟ್ಟ ನೋಟ ಒಂದಿಲ್ಲದಿದ್ದರೆ, ಈ ಕಥೆಯ ಅಂತರಾರ್ಥವನ್ನು ತರ್ಕಬದ್ಧವಾಗಿ ಅರಿಯುವುದು ಕಷ್ಟಸಾಧ್ಯವೇ ಸರಿ. ಉದಾಹರಣೆಗೆ, ವಿಶ್ವವನ್ನೆಲ್ಲಾ ಆಕ್ರಮಿಸಿದ ತ್ರಿವಿಕ್ರಮನ ಎರಡು ಹೆಜ್ಜೆಗಳು, ಬಲಿಯ ತಲೆಯನ್ನೂ ಆಕ್ರಮಿಸಿದಂತಾಗಲಿಲ್ಲವೇ? ಈ ರೀತಿಯಲ್ಲಿ ಏಳುವ ಅನೇಕ ಪ್ರಶ್ನೆಗಳಿಗೆ ಸಮಾಧಾನವನ್ನು ಕೊಡಲಾಗದು. ಪೌರಾಣಿಕ ಕಥೆಗಳ ಹಿಂದೆ ಅಡಗಿರುವ ತತ್ವಗಳನ್ನು ಅರ್ಥೈಸಲು, ಅಧ್ಯಾತ್ಮಾನುಭವದ ನೋಟದಿಂದ ಮಾತ್ರ ಸಾಧ್ಯ.

ಗೋವರ್ಧನಗಿರಿಧಾರಿ

ಬಲಿಯ ಕಥೆ  ಇಂದ್ರಪದವಿಯನ್ನು ಆಕ್ರಮಿಸಲುದ್ಯುಕ್ತನಾದ ಅಸುರನನ್ನು  ಶಿಕ್ಷಿಸುವುದಾದರೆ,  ಗೋವರ್ಧನಗಿರಿಯ ಕಥೆ  ಇಂದ್ರನನ್ನೇ ದಂಡಿಸುವ ಕಥೆ. ಎರಡಕ್ಕೂ, ‘ಪರಮಾತ್ಮ-ಪರಂಜ್ಯೋತಿ ಎಲ್ಲಕ್ಕೂ ಸರ್ವೋಚ್ಛ’  ಎಂಬುದನ್ನು ಮರೆಯಿಸುವ ಅಹಂಕಾರವೇ ಕಾರಣ. ಇಂದ್ರನು ಇಂದ್ರಿಯಗಳ ಪ್ರಭು ಮತ್ತು ಅವುಗಳನ್ನು ಧರ್ಮಮಾರ್ಗದಲ್ಲಿ ನಿಯಂತ್ರಿಸುತ್ತಾನೆ. ತಾನು ವಿಶ್ವಬೀಜದ ಒಂದು ಶಾಖೆಯೆಂದು ಮರೆತು, ಸ್ವೇಚ್ಛೆಯಿಂದ ವ್ಯವಹರಿಸಿದರೆ ಅವನಲ್ಲಿಯೂ ಆಸುರೀವೃತ್ತಿಗಳೇ  ಬೆಳೆಯುತ್ತವೆ.

ಆದ್ದರಿಂದ ಬಲಿಗೆ ಒದಗಿದ ಗತಿಯೇ ಇವನಿಗೂ ಒದಗುತ್ತದೆ. ಕೃಷ್ಣನು ಗೋವರ್ಧನಗಿರಿಯೇ ಅವರ ಗೋವುಗಳ ಮತ್ತು ಜೀವನಕ್ಕೆ ಆಧಾರವೆಂದು ಗ್ರಾಮದ ಹಿರಿಯರ ಮನಒಲಿಸುತ್ತಾನೆ. ಇಂದ್ರನು ತನ್ನ ಕ್ರೋಧವನ್ನು ಗ್ರಾಮಸ್ಥರ, ಅವರ ಬಂಧು-ಬಳಗದವರ ಮತ್ತು ಆಕಳುಗಳಮೇಲೆ ತಿರುಗಿಸಿದಾಗ ಕೃಷ್ಣನು ಗೋವರ್ಧನಗಿರಿಯನ್ನೆತ್ತಿ ಅದರಡಿಯಲ್ಲಿ ಇವರೆಲ್ಲರನ್ನೂ ಇರಿಸಿ ಸಂರಕ್ಷಿಸುತ್ತಾನೆ. ಈ ಚಿತ್ರ, ಗೋವರ್ಧನಗಿರಿ ಪ್ರತಿನಿಧಿಸುವ ಎಲ್ಲ ಭೋಗ-ಸಮೃದ್ಧಿಗಳೂ ಅನಾದಿಯಾದ ಕೃಷ್ಣತತ್ತ್ವದ  ಆಧಾರದಮೇಲೆ ನಿಂತಿದೆಯೆಂದು ತೋರಿಸುತ್ತದೆ. (ಗೋವರ್ಧನಗಿರಿ ಗೋವುಗಳ ವೃದ್ಧಿ ಅದರಿಂದೊದಗುವ ಸಮೃದ್ಧಿಯ ಸಂಕೇತ). ನಂತರ, ಆತನ ಅನುಗ್ರಹ-ರಕ್ಷಣೆಯಲ್ಲಿ ಎಲ್ಲರೂ ಸಂತೋಷವಾಗಿರುತ್ತಾರೆ.

ಸಂಭ್ರಮ-ಸವೃದ್ಧಿಗಳನ್ನು ಒದಗಿಸುವ ದೀಪಾವಳಿಯ ಆಚರಣೆಯಲ್ಲಿ ಇವುಗಳು ಯಾವ ಮೂಲದಿಂದ ಒದಗಿಬಂದಿವೆಯೆಂದೂ, ಅವುಗಳನ್ನು  ಧರ್ಮಮಾರ್ಗದಿಂದ ಅನುಭವಿಸಬೇಕೆಂದೂ ಈ ಕಥೆಯು ನೆನೆಪಿಗೆ ತಂದುಕೊಡುತ್ತದೆ. ಈ ಸುಂದರಕಥಾನಿರೂಪಣೆಯು ಇಂದ್ರನು ಶ್ರೀಕೃಷ್ಣನನ್ನು ಅರ್ಚಿಸಿ ಸಂಪನ್ನಗೊಳಿಸುವ ಗೋವಿಂದಪಟ್ಟಾಭಿಷೇಕ ಮಹೋತ್ಸವದಲ್ಲಿ ಪರಿಸಮಾಪ್ತಿಗೊಳ್ಳುತ್ತದೆ. 

ಬಲಿಪಾಡ್ಯಮಿ ಮತ್ತು ಗೋವರ್ಧನಪೂಜೆಗಳ ಆಚರಣೆ

ಬಲಿಪಾಡ್ಯಮಿ ಎಂದಿನಂತೆ ಅಭ್ಯಂಗದೊಡನೆ ಮೊದಲಾಗುತ್ತದೆ. ಬಲಿ ಮತ್ತು ಅವನ ಪರಿವಾರದವರ  ಪೂಜೆ ರಾತ್ರಿಯ ಮುಖ್ಯ ಕಾರ್ಯಕ್ರಮ. ಮತ್ತು ಆ ಪೂಜೆ, ” ಬಲಿರಾಜ ನಮಸ್ತುಭ್ಯಮ್ …” ಎಂಬ ಈ ಕೆಳಗಿನ ಸ್ತೋತ್ರದಿಂದ ಆರಂಭಗೊಳ್ಳುತ್ತದೆ. 

ಬಲಿರಾಜ ನಮಸ್ತುಭ್ಯಂ ವಿರೋಚನಸುತ ಪ್ರಭೋ |
ಭವಿಷಯೇಂದ್ರ ಸುರಾರಾತೇ ವಿಷ್ಣುಸಾನ್ನಿಧ್ಯದೋ ಭವ ||   

ಈಸ್ತೋತ್ರ ಬಲಿಯ ಹೆಗ್ಗಳಿಕೆಯಾದ ವಿಷ್ಣುವಿನ ಸಾನ್ನಿಧ್ಯವನ್ನು ಹೊಂದಿಸುವುದಕ್ಕಾಗಿ.  ಬಲಿಯಪೂಜೆಯಲ್ಲಿ, ‘ಹೊನ್ನಾವರಿಕೆ’ ಎಂಬ ಉತ್ಕೃಷ್ಠ ಪುಷ್ಪವನ್ನು ಉಪಯೋಗಿಸುತ್ತಾರೆ. ಈ ಸುವರ್ಣವರ್ಣ ಪುಷ್ಪವನ್ನು, ‘ಹೊನ್ನು-ಹೊನ್ನು’ ಎಂದು ಉದ್ಗರಿಸುತ್ತಾ ಅಂಗಳದ ಸುತ್ತಲೂ ಹರಡುತ್ತಾರೆ. ಇದು ಬಲಿಯ ಅಧ್ಭುತ ಜ್ಞಾನಸೂರ್ಯನ ಅನುಭವವನ್ನು ನೆನೆಪಿಗೆ ತಂದುಕೊಡುತ್ತದೆ. ಕೆಲವು ಮನೆಗಳಲ್ಲಿ ಪೂಜೆಯನಂತರ ಬಲಿಯ ವಿಗ್ರಹವನ್ನು ಪಶ್ಚಿಮದೆಡೆಗೆ ತಿರುಗಿಸಿಡುವ  ಪರಿಪಾಠ. ಈ ಪರಿಪಾಠ ನಾವು ಇದುವರೆವಿಗೂ ಮನಸ್ಸಿಗೆ ತಂದುಕೊಂಡ ತತ್ವಗಳಿಗೆ ಸರಿಹೊಂದುತ್ತದೆ – ಪಶ್ಚಿಮದೆಡೆಗೆ ತಿರುಗುವುದೆಂದರೆ ಒಳಮಾರ್ಗವನ್ನಧಿಕರಿಸಿ ಬಲಿ  ಇಂದ್ರ ಪದವಿಯನ್ನು ಪಡೆಯುವುದರ ಸಂಕೇತ.

ಉತ್ತರಭಾರತದಲ್ಲಿ, ಅದರಲ್ಲೂ ವೈಷ್ಣವ ಸಂಪ್ರದಾಯದವರ ಮನೆಗಳಲ್ಲಿ, ಗೋವರ್ಧನ  ಪೂಜೆಯನ್ನು ‘ಅನ್ನಕೂಟ’ವೆಂದು ಕರೆಯುತ್ತಾರೆ. ಗೋವರ್ಧನ ಗಿರಿಯ ಸೂಕ್ಷ್ಮ ಪ್ರತಿರೂಪವನ್ನು ಸ್ಥಾಪಿಸಿ ಅರ್ಚಿಸುತ್ತಾರೆ. ವಿಧವಿಧವಾದ, ಭಕ್ಷ್ಯ-ಭೋಜ್ಯಗಳನ್ನು ಸಮೃದ್ಧಿಯ ಕುರುಹಾಗಿ ಕೃಷ್ಣನಿಗೆ ಅರ್ಪಿಸಿ, ಪ್ರಸಾದವಾಗಿ ಸ್ವೀಕರಿಸುವ ವಾಡಿಕೆ.

ಯಮದ್ವಿತೀಯೆ – ಭಗಿನೀ ದ್ವಿತೀಯೆ

ಇದನ್ನು ಬಲಿಪಾಡ್ಯಮಿಯ ಮರುದಿನ ಆಚರಿಸುವುದು ರೂಢಿ. ಅಂದು ಸಹೋದರರು ಸಹೋದರಿಯರಿಗೆ ಉಡುಗೊರೆಗಳನ್ನು ಕೊಡುವ ಮತ್ತು ಸಹೋದರಿಯರು ಅವರನ್ನು ಭಕ್ಷ್ಯ – ಭೋಜ್ಯಗಳಿಂದ ತೃಪ್ತಿಪಡಿಸುವ ವಾಡಿಕೆ. ಮೊದಲೇ ಹೇಳಿದಂತೆ, ಯಮ ಪರಂಜ್ಯೋತಿ ಸೂರ್ಯನಾರಾಯಣನ ಪುತ್ರ. ಅವನು ಧರ್ಮದ ರಾಜ ಮತ್ತು ನಮ್ಮ ಕರ್ಮಗಳಿಗೆ ತಕ್ಕಂತೆ ದಂಡವಿಧಿಸುವ ಪ್ರಭು. ಅವನ ಸ್ಮರಣೆಯು ಧರ್ಮಕ್ಕೆ ಹೊಂದದ  ಅರ್ಥ-ಕಾಮಗಳನ್ನು ಅನಿಭವಿಸಿದರೆ ಏನು ಗತಿ ಕಾದಿದೆಯೆಂಬುದನ್ನು ನೆನೆಪಿಸುತ್ತದೆ. ಅವನ ಸ್ವಂತ  ತಂಗಿ, ಯಮಿ- ಯಮುನೆ, ಸೂರ್ಯನಾರಾಯಣ ಪುತ್ರಿ. ಆಕೆ, ಜೀವನಧಾತ್ರಿ ಮತ್ತು ಸ್ತ್ರೀಸಹಜವಾದ ಔಚಿತ್ಯ- ಔದಾರ್ಯ – ಘನತೆ -ಸೌಂದರ್ಯ- ಲಾವಣ್ಯಗಳ ಪ್ರತಿಮೂರ್ತಿ. ಯಮ-ಯಮಿಯರು, ನಾವು ಹಿಂದೆ ನೆನೆಪಿಸಿಕೊಂಡ ಪುರುಷ-ಪ್ರಕೃತಿಯ ಪ್ರತಿನಿಧಿಗಳು. ಅವರ ಈ ಸಂಧಿ ಭೋಗಗಳ ಹಾಗೂ ಧರ್ಮದ ಸಮ್ಮಿಲನವನ್ನು ಸೂಚಿಸುವುದಾಗಿದೆ. ಅಂತೆಯೇ ಅಧ್ಯಾತ್ಮಕ್ಷೇತ್ರದಲ್ಲಿ ಈ  ಮಿಲನವು ಸಮಾಧಿಯ ಪರಮೋನ್ನತ ಸ್ಥಿತಿಯಲ್ಲಾಗುವ ಪ್ರಕೃತಿ -ಪುರುಷರ ವಿಲಯದ ಸಂಕೇತ.

ಲೇಖಕರು: ಸಂಸ್ಕೃತಿ ಚಿಂತಕರು,
 ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ | Deepavali 2022 | ಬಹುಸಂಸ್ಕೃತಿಯ ಬೆಳಕಲ್ಲಿ ಬಹು ದೊಡ್ಡ ಹಬ್ಬ ದೀಪಾವಳಿ

Exit mobile version