Site icon Vistara News

Deepavali 2023: ದೀಪಾವಳಿ ಭವಿಷ್ಯ; ಯಾವ ರಾಶಿಗೆ ಯಾವ ಫಲ?

bhavishya

bhavishya

ಬೆಂಗಳೂರು: ಅಂಧಕಾರವನ್ನು ಕಳೆದು ನಮ್ಮ ಜೀವನಕ್ಕೆ ಬೆಳಕನ್ನು ತರುವ ಹಬ್ಬ ದೀಪಾವಳಿ (Deepavali 2023). ಇದು ಸಮೃದ್ಧಿಯ ಹಬ್ಬವೂ ಹೌದು. ಈ ದೀಪಾವಳಿ ಸಂದರ್ಭದಲ್ಲಿ ಆಯಾ ರಾಶಿಯ ಭವಿಷ್ಯ ಹೇಗಿದೆ ಎನ್ನುವುದನ್ನು ಖ್ಯಾತ ಜ್ಯೋತಿಷ್ಯರೂ ಮತ್ತು ವಾಸ್ತು ತಜ್ಞರಾದ ಶಿವಸ್ವಾಮಿ ಆರ್‌.ಎಲ್‌. ಹೀಗೆ ವಿವರಿಸಿದ್ದಾರೆ.

ಮೇಷ

ಧನಾಧಿಪತಿಯಾದ ಶುಕ್ರ ನೀಚ ಸ್ಥಾನದಲ್ಲಿದ್ದು, ಕುಜ ಸಪ್ತಮ ಸ್ಥಾನದಲ್ಲಿದ್ದಾನೆ. ದ್ವಾದಶ ಸ್ಥಾನದಲ್ಲಿರುವ ರಾಹು ಖರ್ಚಿನ ಪ್ರಮಾಣವನ್ನು ಹೆಚ್ಚಿಸುತ್ತಾನೆ. ಇದ್ದಕ್ಕಿದ್ದ ಹಾಗೆ ಖರ್ಚು ಹೆಚ್ಚಾಗುತ್ತದೆ. ಅಲ್ಲದೆ ಮೇಷ ರಾಶಿಯವರಿಗೆ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಲಾಭದ ಜತೆಗೆ ನಷ್ಟದ ಅನುಭವವೂ ಆಗಲಿದೆ. ಒಟ್ಟಿನಲ್ಲಿ ಈ ರಾಶಿಯವರಿಗೆ ದೀಪಾವಳಿ ಮಿಶ್ರ ಫಲವನ್ನು ನೀಡುತ್ತದೆ. ಮಾನಸಿಕ ತೊಳಲಾಟ ಕಂಡುಬರುವ ಸಾಧ್ಯತೆ ಇದೆ. ಕರಿ ಉದ್ದನ್ನು ದಾನ ಮಾಡುವುದರಿಂದ ನಷ್ಟವನ್ನು ಕಡಿಮೆ ಮಾಡಬಹುದು. ಖರ್ಚು ಮಾಡುವ ಮುನ್ನ ಸಾಕಷ್ಟು ಆಲೋಚನೆ ಮಾಡುವುದನ್ನು ರೂಢಿಸಿಕೊಳ್ಳಿ.

ವೃಷಭ

ಏಕಾದಶ ಸ್ಥಾನದಲ್ಲಿ ರಾಹು ಇದ್ದಾನೆ. ಹನ್ನೆರಡನೆ ಸ್ಥಾನದಲ್ಲಿ ಗುರು ಇದ್ದಾನೆ. ಧಾರ್ಮಿಕ ಚಟುವಟಿಕೆಗಳಲ್ಲಿ ನೀವು ತೊಡಗಿಸಿಕೊಂಡಷ್ಟು ಧನ ವೃದ್ಧಿಯಾಗುತ್ತದೆ. ಶುಕ್ರ ನೀಚ ಸ್ಥಾನದಲ್ಲಿ ಕುಳಿತುಕೊಂಡಿರುವುದರಿಂದ ಯಾರಿಗೂ ಅನ್ಯಾಯ ಮಾಡಲು ಹೋಗಬೇಡಿ. ನ್ಯಾಯ ಮಾರ್ಗದಲ್ಲೇ ಸಾಗಿದರೆ ವೃಷಭ ರಾಶಿಯವರಿಗೆ ಲಕ್ಷ್ಮೀ ಕಟಾಕ್ಷ ದೊರೆಯಲಿದೆ.

ಮಿಥುನ

ಒಂಬತ್ತರ ಸ್ಥಾನದಲ್ಲಿ ಶನಿ ಇದ್ದಾನೆ. ಅಂದರೆ ಲಾಭದ ಸ್ಥಾನದಲ್ಲಿದ್ದಾನೆ. ಧನಾಭಿವೃದ್ಧಿ ಉತ್ತಮವಾಗಿದ್ದರೂ ಅಹಂನಿಂದ ಆ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಅಹಂ ಅನ್ನು ಕಡಿಮೆ ಮಾಡಿಕೊಳ್ಳುವುದು ಅಗತ್ಯ. ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಆರಾಧನೆಯಿಂದ ಉಳಿತಾಗುತ್ತದೆ.

ಕಟಕ

ಈ ದೀಪಾವಳಿ ಕಟಕ ರಾಶಿಯವರಿಗೆ ಅಷ್ಟೇನೂ ಅಭಿವೃದ್ಧಿ ತಂದು ಕೊಡುವುದಿಲ್ಲ. ಕಷ್ಟ, ನಷ್ಟ ಬರುವ ಸಾಧ್ಯತೆ ಇದೆ. ಇದ್ದಕ್ಕಿದ್ದ ಹಾಗೆ ಅವಘಡ ಸಂಭವಿಸುವ ಸಾಧ್ಯತೆ ಇರುವುದರಿಂದ ಜಾಗರೂಕರಾಗಿರಬೇಕು. ದುರ್ಗಾ ಆರಾಧನೆ ಮಾಡಬೇಕು. ಜತೆಗೆ ಲಕ್ಷ್ಮೀಯ ಅಷ್ಟೋತ್ತರವನ್ನು ಪಠಿಸಬೇಕು. ಮಿಶ್ರಫಲ ಇರುವುದರಿಂದ ಎಚ್ಚರಿಕೆ ವಹಿಸುವುದು ಒಳಿತು.

ಸಿಂಹ

ಸಿಂಹ ರಾಶಿಯವರಿಗೆ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇದೆ. ಇದ್ದಕ್ಕಿಂತೆ ಆಪತ್ತು ಎದುರಾಗಬಹುದು. ತಲೆಗೆ ಪೆಟ್ಟು ಬೀಳುವ ಅಪಾಯವಿದೆ. ಮಹಾಲಕ್ಷ್ಮೀಯ ಆರಾಧನೆಯಿಂದ ಒಳಿತನ್ನು ಪಡೆಯಬಹುದು.

ಕನ್ಯಾ

ಈ ರಾಶಿಯವರಿಗೆ ಲಕ್ಷ್ಮೀ ಕಟಾಕ್ಷ ದೊರೆಯುವ ಸಾಧ್ಯತೆ ಇದೆ. ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಬಿಟ್ಟು ಸಾವಧಾನದಿಂದ ಆಲೋಚಿಸಿದರೆ ಲಕ್ಷ್ಮೀಯ ಅನುಗ್ರಹ ದೊರೆಯಲಿದೆ. ಲಕ್ಷ್ಮೀಯ ಅಷ್ಟೋತ್ತರ ಪಠಿಸುವುದರಿಂದ ಇನ್ನಷ್ಟು ಧನ ಲಾಭ ಪಡೆಯಬಹುದು.

ತುಲಾ

ಮೊದಲು ಕಷ್ಟ ಎದುರಾಗಿ ಬಳಿಕ ಯಶಸ್ಸು ಸಿಗಲಿದೆ. ಲಾಭ ಗಳಿಸಲು ಸನ್ಮಾರ್ಗದಲ್ಲಿ ಸಾಗುವುದನ್ನು ರೂಢಿಸಿಕೊಳ್ಳಿ. ತಪ್ಪು ಮಾಡಿದರೆ ಶನಿಯ ಏಟು ಬೀಳಬಹುದು. ದುರ್ಗಾರಾಧನೆ ಅಥವಾ ಲಕ್ಷ್ಮೀ ಮಂತ್ರದ ಪಠಣದಿಂದ ಉಳಿತಾಗುತ್ತದೆ.

ವೃಶ್ಚಿಕ

ವಿಪರೀತ ಬುದ್ಧಿ ವಿನಾಶಕ್ಕೆ ಕಾರಣವಾಗಲಿದೆ. ಈ ರಾಶಿಯವರಿಗೆ ಅತಿಯಾದ ಆಸೆ ಕಾಡಲಿದ್ದು, ಇದು ಸಮಸ್ಯೆಗೆ ಕಾರಣವಾಗಲಿದೆ. ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ. ಧರ್ಮ ಕಾರ್ಯದಲ್ಲಿ ನಡೆದರೆ ಉತ್ತಮ ಫಲ ದೊರೆಯಲಿದೆ. ತೊಗರಿ ಬೇಳೆ, ಕೆಂಪು ಕಲ್ಲು ಸಕ್ಕರೆ ದಾನ ಮಾಡಿದರೆ ಉತ್ತಮ. ಲಕ್ಷ್ಮೀ ಅಷ್ಟೋತ್ತರ ಪಠಣೆ ಮಾಡಿ.

ಧನುಸ್ಸು

ಈ ರಾಶಿಯವರಿಗೆ ಲಕ್ಷ್ಮೀಯ ಅನುಗ್ರಹ ದೊರೆಯುವ ಸಾಧ್ಯತೆ ಅಧಿಕ. ಪ್ರಯಾಣದ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ಕೇತು ಸಮಸ್ಯೆಯನ್ನೂ ತರುವ ಸಾಧ್ಯತೆ ಇದೆ. ಆದ್ದರಿಂದ ಸನ್ಮಾರ್ಗದಲ್ಲಿ ಸಾಗಿದರೆ ಧನ ಯೋಗ, ಸಿಂಹಾಸನ ಯೋಗ ದೊರೆಯುತ್ತದೆ.

ಮಕರ

ಮಕರ ರಾಶಿಯವರಿಗೆ ಈ ದೀಪಾವಳಿ ಬಹಳ ವಿಶೇಷವಾಗಿರಲಿದೆ. ಶಿವ ದೇವಸ್ಥಾನಕ್ಕೆ ತೆರಳಿ ಆಗಾಗ ಕ್ಷೀರಾಭಿಷೇಕ ಮಾಡಿಸುವುದರಿಂದ ತಮ್ಮ ಪ್ರಯತ್ನಕ್ಕೆ ಖಂಡಿತವಾಗಿಯೂ ಜಯ ಸಿಗಲಿದೆ.

ಕುಂಭ

ಧನ ಸ್ಥಾನದಲ್ಲಿ ರಾಹು ಇದ್ದು, ದುಷ್ಟ ಚಟಗಳಿಗೆ ತುತ್ತಾಗುವ ಸಾಧ್ಯತೆ ಇರುವುದರಿಂದ ಹೆಚ್ಚು ಜಾಗರೂಕರಾಗಿರಬೇಕು. ಪ್ರಯತ್ನ ಪಟ್ಟರೂ ಹೇಳುವಷ್ಟರ ಮಟ್ಟಿಗೆ ಧನ ಲಾಭ ಸಿಗಲಾರದು. ಭಾಗ್ಯ ನಷ್ಟವೂ ಆಗಲಿದೆ. ಒಟ್ಟಿನಲ್ಲಿ ಸಾಧಾರಣ ಫಲವಿದೆ. ಲಕ್ಷ್ಮೀಯ ಅಷ್ಟೋತ್ತರವನ್ನು ಪಠಿಸಿ. ಒಂಬತ್ತು ವರ್ಷದ ಮಕ್ಕಳಿಗೆ ಹಳದಿ ಸಿಹಿಯನ್ನು ನೀಡಿ. ಬೀಸಾ ಯಂತ್ರವನ್ನು ಕಪಾಟಿನಲ್ಲಿ ಮತ್ತು ಜೇಬಿನಲ್ಲಿಡಿ.

ಮೀನ

ಮೀನ ರಾಶಿಯವರಿಗೆ ಈ ದೀಪಾವಳಿಯ ಸಂದರ್ಭದಲ್ಲಿ ಲಕ್ಷ್ಮೀಯ ಅನುಗ್ರಹ ಅಷ್ಟಾಗಿ ದೊರೆಯಲಾರದು. ನಷ್ಟ ಎದುರಾಗಬಹುದು. ವೈವಾಹಿಕ ಜೀವನದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಕಣ್ಣಿಗೆ ತೊಂದರೆಯಾಗಬಹುದು. ಆದ್ದರಿಂದ ಜಾಗರೂಕರಾಗಿರಬೇಕು. ಶನಿವಾರ ಎಳ್ಳೆಣ್ಣೆ ದಾನ ಮಾಡಿ. ಲಕ್ಷ್ಮೀ ಅಷ್ಟೋತ್ತರವನ್ನು ಪ್ರತಿದಿನ ಪಠಿಸಿ.

ಇದನ್ನೂ ಓದಿ: Deepavali 2023: ದೀಪಾವಳಿಯಂದು ಅಭ್ಯಂಗ ಸ್ನಾನ ಮಾಡುವುದೇಕೆ? ಇದರ ಪ್ರಯೋಜನ ತಿಳಿದಿರಲಿ

Exit mobile version