Site icon Vistara News

Dharmasthala Deepotsava | ಭೇದ ಸೃಷ್ಟಿಸದೇ ಏಕತೆ ಕಾಯ್ದುಕೊಳ್ಳಬೇಕು: ಡಾ.ವೀರೇಂದ್ರ ಹೆಗ್ಗಡೆ

Dharmasthala Deepotsava

ಧರ್ಮಸ್ಥಳ (ದಕ್ಷಿಣ ಕನ್ನಡ): ಜಿಲ್ಲೆಯ ಬೆಳ್ತಂಗಡಿ ತಾಲೂಕು ಉಜಿರೆಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಯೋಜಿಸಿದ್ದ ಲಕ್ಷ ದೀಪೋತ್ಸವಕ್ಕೆ ಬುಧವಾರ ತೆರೆಬಿದ್ದಿದೆ. ದೀಪೋತ್ಸವ ಅಂಗವಾಗಿ ನ.19ರಿಂದ 23ರವೆರೆಗೆ ಜ್ಞಾನ, ವಿಜ್ಞಾನ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಿದ್ದು, ಲಕ್ಷಾಂತರ ಭಕ್ತರು ಆಗಮಿಸಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದಾರೆ.

ಲಕ್ಷ ದೀಪೋತ್ಸವ ಪಾದಯಾತ್ರೆ ಸಮಾವೇಶ
ನ.೧೯ರಂದು ಉಜಿರೆಯಿಂದ ಧರ್ಮಸ್ಥಳದವರೆಗೆ ನಡೆದ 10ನೇ ವರ್ಷದ ಲಕ್ಷ ದೀಪೋತ್ಸವ ಪಾದಯಾತ್ರೆ ನೆರವೇರಿತು. ನಂತರ 25 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದ ಸಮಾವೇಶದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ದಿಕ್ಸೂಚಿ ಭಾಷಣ ಮಾಡಿ, ಭಕ್ತಿಯ ಆವೇಶದಲ್ಲಿ ಉಜಿರೆಯಿಂದ ಇಲ್ಲಿಯವರೆಗೆ ಉತ್ಸಾಹದ ನಡಿಗೆಯೊಂದಿಗೆ ಬಂದಿದ್ದೀರಿ. ನಿಮಗೆ ಅಭಿನಂದನೆ. ಭಗವದ್ಗೀತೆ ಸೇರಿ ಬೇರೆ ಬೇರೆ ಜ್ಞಾನಸಂಪನ್ಮೂಲಗಳ ಮೂಲಕ ಜೀವನದ ಎಲ್ಲ ಸಂದರ್ಭಗಳನ್ನು ಎದುರಿಸುವ ಶಕ್ತಿಯನ್ನು ನಿಮ್ಮದಾಗಿಸಿಕೊಳ್ಳಿ. ಈ ಶಕ್ತಿ ನಿಮ್ಮ ಜೀವನದ ಉದ್ದೇಶವನ್ನು ಸ್ಪಷ್ಟಗೊಳಿಸುತ್ತದೆ. ಆಗ ಗೆಲುವು ತಾನಾಗಿಯೇ ಒಲಿಯುತ್ತದೆ ಎಂದರು.

ಇದನ್ನೂ ಓದಿ | Dharmasthala Deepotsava | ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರೆಗೆ ಭಕ್ತ ಸಾಗರ

ದೇವರೆಲ್ಲರೂ ಒಗ್ಗಟ್ಟಾಗಿ ವಿಶ್ವಾತ್ಮಕ ಚೈತನ್ಯವನ್ನು ಹೆಚ್ಚಿಸುತ್ತಲೇ ಇರುತ್ತಾರೆ. ಭೇದಗಳನ್ನು ಸೃಷ್ಟಿಸದೇ ಈ ಸೃಷ್ಟಿಯಲ್ಲಿರುವ ಚೈತನ್ಯವನ್ನೇ ಮುಖ್ಯವಾಗಿಸಿಕೊಂಡು ಏಕತೆಯನ್ನು ಕಾಯ್ದುಕೊಳ್ಳಬೇಕು. ಭಾವೈಕ್ಯತೆಯನ್ನು ಉಳಿಸಿಕೊಂಡಾಗ ದೇವರ ಶಕ್ತಿ ಸೃಷ್ಟಿ ಚೈತನ್ಯದಲ್ಲಿ ಸಮ್ಮಿಳಿತಗೊಂಡು ನಮ್ಮೆಲ್ಲರ ಮೂಲಕ ಲೋಕಹಿತ ತೇಜಸ್ಸು ಹೆಚ್ಚಿಸುತ್ತದೆ. ಶ್ರೀ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಸಹಬಾಳ್ವೆ, ಸಾಮರಸ್ಯ ಹಾಗೂ ಸಹಜೀವನಕ್ಕೆ ಪ್ರಾಶಸ್ತ್ಯ ಕೊಟ್ಟಿದ್ದೇವೆ ಎಂದ ಅವರು, ಏಕತೆಯ ಸೂತ್ರವನ್ನು ಪ್ರತಿಯೊಬ್ಬರಲ್ಲೂ ಕಾಣುವುದೇ ಈ ಬಾರಿಯ ಪಾದಯಾತ್ರೆಯ ಉದ್ದೇಶವಾಗಿದೆ ಎಂದು ನುಡಿದರು.

ಡಾ. ಹೇಮಾವತಿ.ವಿ.ಹೆಗ್ಗಡೆ, ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪಸಿಂಹ ನಾಯಕ್, ಕೆ.ಹರೀಶ್ ಕುಮಾರ್, ಹಾಗೂ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಶರತ್ ಕೃಷ್ಣ ಪಡವೆಟ್ನಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಸಂತ್ ಭಟ್ ನಾರಾವಿ ನಿರೂಪಿಸಿದರೆ, ಶಾಸಕ ಹರೀಶ್ ಪೂಂಜಾ ಸ್ವಾಗತಿಸಿದರು, ಧರ್ಮಸ್ಥಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ವಂದಿಸಿದರು.

(ವರದಿ: ತೇಜಶ್ವಿನಿ ಕಾಂತರಾಜ್, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ. | ಚಿತ್ರ: ಶಶಿಧರ.ವಿ.ನಾಯ್ಕ್)

ಮನಸೆಳೆದ ಬಾಲ ರಾಮಾಯಣ

Dharmasthala Deepotsava@ ನವರಸಯಾನ

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದ ಮೂರನೇ ದಿನದಂದು ಅಮೃತ ವರ್ಷಿಣಿ ಮಂಟಪದಲ್ಲಿ ಲಲಿತಕಲಾ ಗೋಷ್ಠಿ ಕಾರ್ಯಕ್ರಮದ ಭಾಗವಾಗಿ ನಡೆದ ಬಾಲ ರಾಮಾಯಣ ಸೇರಿದ್ದ ಪ್ರೇಕ್ಷಕರನ್ನು ರಂಜಿಸಿತು. ಸ್ವಾತಿ ತಿರುನಾಳ್ ರಾಮೋವರ್ಮ ರಚಿಸಿರುವ ಕೃತಿಯ ಒಂದು ಭಾಗ ಭಾವಯಾಮಿ ರಘುರಾಮಮ್ ಆಗಿದ್ದು, ವಿದ್ವಾನ್ ಉನ್ನತ್ ಎಚ್.ಆರ್. ಅವರ ನಾಟ್ಯಕಲಾವಿಲಾಸ ತಂಡವು ಇದನ್ನು ನೃತ್ಯ ರೂಪಕದಲ್ಲಿ ತೋರಿಸುವಲ್ಲಿ ಯಶಸ್ವಿಯಾಯಿತು.

ಸಂಸ್ಕೃತಿ ಸಂಬಂಧಗಳ ಅರ್ಥಗಳನ್ನೇ ಮರೆತು ಬಿಟ್ಟಿರುವ ಇಂದಿನ ಯುವ ಪೀಳಿಗೆಗೆ ಸಂಬಂಧ, ಭಾವನೆಗಳ ಅರ್ಥವನ್ನು ರಾಮಾಯಣದ ಒಂದೊಂದು ಸನ್ನಿವೇಶವನ್ನು ನಮ್ಮ ಜೀವನದಲ್ಲಿ ಹೇಗೆ ರೂಢಿಸಿಕೊಳ್ಳಬೇಕು. ಅವರಲ್ಲಿರುವ ಆದರ್ಶ ಗುಣಗಳನ್ನು ನಾವು ಬೆಳೆಸಿಕೊಂಡು, ಜೀವನದಲ್ಲಿ ಹೇಗೆ ರೂಢಿಸಿಕೊಳ್ಳಬೇಕು. ತಪ್ಪು ಮಾಡಿದ ವ್ಯಕ್ತಿಗೂ ಒಂದು ಅವಕಾಶವನ್ನು ನೀಡಬೇಕೆನ್ನುವ ಸಂದೇಶವನ್ನು ನೃತ್ಯ ರೂಪಕದ ಮುಖಾಂತರ ರಾಮಾಯಣದ ಸನ್ನಿವೇಶವನ್ನು ಕಟ್ಟಿಕೊಡಲಾಯಿತು.

6 ವರ್ಷದ ಮಕ್ಕಳಿಂದ ಹಿಡಿದು ೭೦ ವರ್ಷದವರೂ ಅಭಿನಯಿಸಿರುವುದು ಇದರ ವಿಶೇಷತೆ. ಆಂಜನೇಯ ಪಾತ್ರಧಾರಿಯ ನಟನೆ ಪ್ರೇಕ್ಷಕರನ್ನು ಆಕರ್ಷಿಸಿತು. ಹಿನ್ನೆಲೆ ಗಾಯನಕಾರರು ಅದ್ಭುತವಾದ ಸಂಗೀತದ ಮೂಲಕ
ವಿದುಷಿ ವಿಭಾಶ್ರೀ (ಗಾಯನ), ವಿದುಷಿ ಸಮೃದ್ಧ (ಕೊಳಲು), ವಿದುಷಿ ವಿಕ್ರಂ (ಮೃದಂಗ), ವಿನಯ್ ರಂಗಧೋಳ್ (ರಿಧಂಪ್ಯಾಡ್), ವಿದ್ವಾನ್ ತುಮಕೂರು ಯಶಸ್ವಿ (ವಯೋಲಿನ್) ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋದರು.

ಕಾರ್ಯಕ್ರಮದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಕುಮಾರ್ ಹೆಗ್ಗಡೆ ಮತ್ತು ಹೆಗ್ಗಡೆ ಕುಟುಂಬದ ಸದಸ್ಯರು ಹಾಗೂ ಸಾವಿರಾರು ಜನರು ಉಪಸ್ಥಿತರಿದ್ದರು.
(ವರದಿ- ಕಾರ್ತಿಕ ಹೆಗಡೆ, ಚಿತ್ರಗಳು- ಭಾರತಿ ಹೆಗಡೆ)

ಲಲಿತಕಲಾ ವೈವಿಧ್ಯ; ಭಾವ-ಯೋಗ-ಗಾನ ಮಾಧುರ್ಯ

ಲಕ್ಷ ದೀಪೋತ್ಸವದ ಪ್ರಯುಕ್ತ ಅಮೃತವರ್ಷಿಣಿ ವೇದಿಕೆಯಲ್ಲಿ ಉಡುಪಿಯ ಭಾರ್ಗವಿ ಆರ್ಟ್ಸ್ ಆ್ಯಂಡ್ ಡಾನ್ಸ್ ಅಕಾಡೆಮಿಯ ತಂಡವು ನಡೆಸಿಕೊಟ್ಟ ಲಲಿತಕಲಾಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ‘ಭಾವ-ಯೋಗ-ಗಾನ’ದ ಝಲಕ್ ಪ್ರೇಕ್ಷಕರ ಗಮನ ಸೆಳೆಯಿತು.

ನೃತ್ಯದ ಜತೆ ಆಧ್ಯಾತ್ಮ, ಯೋಗ, ಗಾನ ಒಂದೇ ವೇದಿಕೆಯಲ್ಲಿ ಮೇಳೈಸಿ ಅಲ್ಲಿದ್ದ ಹಲವು ಕಲಾ ಆರಾಧಕರನ್ನು ಸೆಳೆಯಿತು. ನೃತ್ಯಕ್ಕೆ ಸಂಬಂಧಿಸಿದಂತೆ ಯಕ್ಷಗಾನ, ಕಥಕ್ಕಳಿ ಪ್ರಕಾರಗಳ ಅಭಿವ್ಯಕ್ತಿ ಇತ್ತು. ಯೋಗದ ವಿವಿಧ ಭಂಗಿಗಳ ಅನಾವರಣವಿತ್ತು. ಭಕ್ತಿಭಾವಗಳ ಕಾವ್ಯಾತ್ಮಕ ಸಾಲುಗಳೊಂದಿಗಿನ ಅಭಿನಯ ವೈಶಿಷ್ಟ್ಯ ರಂಜಿಸಿತು.

ಯಕ್ಷಗಾನ, ಕಥಕ್ಕಳಿ, ಕಾಳಿಂಗ ಮರ್ಧನ, ಶಿವ ತಾಂಡವ, ಕುಂಭ ನೃತ್ಯ, ನಟರಾಜ ನಮನ ಹೀಗೆ ವಿವಿಧ ರೀತಿಯ ನೃತ್ಯ ಪ್ರಸ್ತುತಿ ನಾಟ್ಯದ ಕುರಿತ ವಿವಿಧ ಆಯಾಮಗಳನ್ನು ಪರಿಚಯಿಸಿತು. ಸತತ 90 ನಿಮಿಷಗಳ ಕಾಲ ನಡೆದ ನೃತ್ಯವು ಎಲ್ಲರ ಗಮನ ಸೆಳೆಯಿತು.

ಆ್ಯಂಟಿ ಗ್ರ್ಯಾವಿಟಿ ನೃತ್ಯವು ಬಹಳ ಸೊಗಸಾಗಿ ಮೂಡಿಬಂತು. ಗುರುತ್ವಾಕರ್ಷಣೆ ಬಲದ ವಿರುದ್ಧವಾಗಿ ವೇದಿಕೆ ಮೇಲೆ ವಿವಿಧ ಭಂಗಿಗಳನ್ನು ಕಲಾವಿದರು ಪ್ರದರ್ಶಿಸಿದ್ದು ಮನಮೋಹಕವಾಗಿತ್ತು. ಕೃಷ್ಣ ಕಾಳಿಂಗ ಸರ್ಪವನ್ನು ವಧೆ ಮಾಡಿದ ದೃಶ್ಯವಂತೂ ಅಮೋಘವಾಗಿತ್ತು. ಕೈಯಲ್ಲಿ ದೀಪ ಹಿಡಿದುಕೊಂಡು ತಲೆಯ ಮೇಲೆ ಕುಂಭ ಹೊತ್ತು, ಕುಂಭಗಳ ಮೇಲೆ ನಿಂತು ವಿವಿಧ ರೀತಿಯ ಭಂಗಿಗಳನ್ನು ಪ್ರದರ್ಶಿಸಲಾಯಿತು. ಯಕ್ಷಗಾನದ ಜತೆ ಕಥಕ್ಕಳಿ, ಭರತ ನಾಟ್ಯ ಖುಷಿ ನೀಡಿದವು. ವೇದಿಕೆ ಮೇಲೆ ಚಿನ್ಮಯಿ ಭಟ್ ಹಾಡಿದ ‘ಸೋಜುಗಾದ ಸೂಜಿ ಮಲ್ಲಿಗೆ’ ಗೀತೆಯು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿತು.

Dharmasthala Deepotsava@ ನವರಸಯಾನ

(ವರದಿ: ಐಶ್ವರ್ಯ ಕೋಣನ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ | ಚಿತ್ರಗಳು: ಗ್ಲೆನ್ ಮೋನಿಸ್)

ʼನಾಗಸ್ವರ ವಾದನ’ ಸೇವೆ

Dharmasthala Deepotsava@ ನವರಸಯಾನ

ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಮೂರನೇ ದಿನದ ಲಕ್ಷ ದೀಪೋತ್ಸವದ ಪ್ರಯುಕ್ತ ಸೋಮವಾರ ಲಲಿತಾಕಲಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಸೇಲಂನ ಮುನಿರತ್ನ ಹಾಗೂ ಚಿತ್ತೂರಿನ ಬಿ.ಎಂ ಶಂಕರಪ್ಪ ತಂಡದಿಂದ ‘ನಾಗಸ್ವರ ವಾದನ’ ನಡೆಯಿತು.

ಸತತ ಒಂದು ಗಂಟೆ ಕಾಲ ನಡೆದ ಕಾರ್ಯಕ್ರಮದಲ್ಲಿ ಸೇಲಂನ ತಂಡದಿಂದ ಮುನಿರತ್ನ ಜತೆ ಶಂಕರ್, ತಿರುವೆಂಕಟ (ನಾಗಸ್ವರ), ಮಾದಲಿಂಗಮ್ ಹಾಗೂ ಮಾದೇಶ (ತವಿಲ್), ನಂತರ ಚಿತ್ತೂರು ತಂಡದಿಂದ ಬಿ.ಎಂ ಶಂಕರಪ್ಪ ಜತೆ ಸುಬ್ರಮಣ್ಯಮ್ (ತವಿಲ್), ಹೀರಪ್ಪ, ಸೋಮ್ನೇಶ್,ಮಂಜುನಾಥ (ನಾಗಸ್ವರ), ಸುಬ್ರಹ್ಮಣ್ಯಂ ಹಾಗೂ ಪರಂಧಾಮ (ಸ್ಯಾಕ್ಸೋಫೋನ್) ಸಾಥ್ ನೀಡಿದರು.

ಧರ್ಮಸ್ಥಳ ದೇವಸ್ಥಾನದ ನಾದಸ್ವರ ವಾದಕ ವಿದ್ವಾನ್ ಡಿ.ಅಣ್ಣು ದೇವಾಡಿಗ ಹಾಗೂ ಭಕ್ತಾಭಿಮಾನಿಗಳು ಭಾಗಿಯಾಗಿದ್ದರು. ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ‘ನಾಗಸ್ವರವಾದನ’ ಪ್ರದರ್ಶಿಸಿದ ಕಲಾವಿದರನ್ನು ಗೌರವಿಸಿದರು. ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುವೀರ್ ಜೈನ್ ವಂದಿಸಿದರು.

(ವರದಿ: ಕ್ರೀಷ್ಮಾ ಆರ್ನೋಜಿ, ದ್ವಿತೀಯ ವರ್ಷದ ಪತ್ರಿಕೋದ್ಯಮ, ಎಸ್.ಡಿ.ಎಂ ಸ್ನಾತಕೋತ್ತರ, ಕೇಂದ್ರ, ಉಜಿರೆ. | ಚಿತ್ರ ಕೃಪೆ: ಗ್ಲೆನ್)

ಕಲಾತ್ಮಕ ಸವಾಲೆಸೆದ `ಸಿರಿಯ’ ನವರಸಯಾನ

Dharmasthala Deepotsava@ ನವರಸಯಾನ

ಇದೇ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿರಿ ವಾನಳ್ಳಿ ಅವರ ಏಕ ವ್ಯಕ್ತಿ ನಾಟಕ ಪ್ರೇಕ್ಷಕರನ್ನು ರಂಜಿಸಿತು. ಸುಮಾರು ಒಂದೂವರೆ ಗಂಟೆ ವೇದಿಕೆಯ ಮೇಲೆ ಏಕಾಂಗಿಯಾಗಿ, ಸ್ಪಷ್ಟವಾಗಿ, ನಿರರ್ಗಳವಾಗಿ, ಗಟ್ಟಿಧ್ವನಿಯಲ್ಲಿ ಸಂಭಾಷಣೆಯ ಮೂಲಕ ಪ್ರೇಕ್ಷಕರಿಗೆ ನವರಸ ಉಣಬಡಿಸುತ್ತಿದ್ದ ಸಿರಿ ವಾನಳ್ಳಿ ಅವರ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಇವರು ಆನಂದ ಭಾಮಿನಿ ಏಕವ್ಯಕ್ತಿ ನಾಟಕದಲ್ಲಿ ʼಸಾವಿತಿ’್ರ ಆಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. 19ನೇ ಶತಮಾನದ ʼಸಾವಿತ್ರಿ’ಯು ಪ್ರೇಮ ಎಂಬುದು ಬಂಧನವಾಗದೆ ಬಿಡುಗಡೆಯ ಆಯಾಮವಾಗಲು ಪ್ರೇಮಿಗಳಿಗೆ ಇರಬೇಕಾದ ಎಲ್ಲ ಆದರ್ಶಗಳನ್ನು ತನ್ನ ದೃಷ್ಟಿಕೋನದಲ್ಲಿ ಪ್ರಿಯಕರನ ಬಳಿ ಪ್ರಶ್ನಿಸುತ್ತಾ ಹೋಗುತ್ತಾಳೆ. ಆತನ ಪತ್ರವನ್ನು ಓದಿ ಅವನಿಗೆ ಪತ್ರವನ್ನು ಬರೆಯುತ್ತಾ, ಆಕೆ ಮೆಲುಕು ಹಾಕುವ ಸನ್ನಿವೇಶವೇ ಸುಂದರ ನಾಟಕವಾಗಿ ಹೊರಹೊಮ್ಮಿದೆ.

ಅನುಭವಗಳು, ಬೆಳವಣಿಗೆ, ಬದಲಾವಣೆ, ಹೆಣ್ತನದ ಘನತೆಯ ಸೂಕ್ಷ್ಮತೆಗಳು, ನೈಜ ಪ್ರೇಮದ ಸ್ವರೂಪಗಳು, ಯುದ್ಧದ ತಲ್ಲಣಗಳು, ಶಾಂತಿಯ ಮಹತ್ವ ಮತ್ತು ಆಕೆ ಕೇಳುವ ಪ್ರಶ್ನೆಗಳಿಗೆ ಆಕೆಯೇ ಉತ್ತರವಾಗಿ ಸ್ತ್ರೀತನದ ವಿವಿಧ ಆಯಾಮಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ಈ ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಗಿರಿಜಾ ಶಾಸ್ತ್ರಿ ಅವರು ಅನುವಾದಿಸಿದ್ದಾರೆ. ರಂಗ ಸ್ವರೂಪವನ್ನು ಸುಧಾ ಆಡುಕಳ ನೀಡಿದ್ದಾರೆ.

ಸಿರಿ ವಾನಳ್ಳಿ ಅವರ ಅಭಿನಯ ವೇದಿಕೆಗೆ ಗಣೇಶ್ ಬೆಳಕು ಮತ್ತು ರಂಗ ನಿರ್ವಹಣೆಯನ್ನು ಮಾಡಿದರೆ, ಸಿದ್ಧಾಂತ ಮೈಸೂರು ಸಂಗೀತವನ್ನು ನೀಡಿದರು. ಈ ಸಂದರ್ಭಕ್ಕೆ ಸಾಕಷ್ಟು ಕಲಾಭಿಮಾನಿಗಳು ಸೇರಿದಂತೆ ನೂರಾರು ಜನರು ಸಾಕ್ಷಿಯಾದರು.

(ವರದಿ: ಪ್ರಸೀದ್ ಭಟ್, ಪತ್ರಿಕೋದ್ಯಮ ವಿಭಾಗ, ದ್ವಿತೀಯ ವರ್ಷ, ಎಸ್ ಡಿ ಎಮ್ ಸ್ನಾತಕೋತ್ತರ ಕೇಂದ್ರ. ಉಜಿರೆ.
ಚಿತ್ರ ಕೃಪೆ: ವಿವೇಕ್ ಸಿ. ಪಿ., ಪತ್ರಿಕೋದ್ಯಮ ವಿಭಾಗ, ದ್ವಿತೀಯ ವರ್ಷ, ಎಸ್ ಡಿ ಎಮ್ ಸ್ನಾತಕೋತ್ತರ ಕೇಂದ್ರ. ಉಜಿರೆ)

ಗಮನ ಸೆಳೆದ ಶಿವಶಕ್ತಿ ನೃತ್ಯ ರೂಪಕ

ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಳದ ಲಕ್ಷ ದೀಪೋತ್ಸವದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಲಕ್ಷದೀಪೋತ್ಸವದ ವಸ್ತು ಪ್ರದರ್ಶನ ಮಂಟಪದಲ್ಲಿ ಬೆಂಗಳೂರಿನ ಮಹಾವೀರ ಲಲಿತಾ ಕಲಾ ಅಕಾಡೆಮಿ ನಾಗರಬಾವಿಯ ಕಲಾವಿದೆಯರು ನವರಸಗಳನ್ನು ನಾಟ್ಯ ಭಾವಗಳಲ್ಲಿ ಅಭಿನಯಿಸುವ ಮೂಲಕ ಕಲಾಭಿಮಾನಿಗಳ ಮನ ಗೆದ್ದರು.

ಬೆಂಗಳೂರಿನ ವಿದುಷಿ ತನುಜಾ ಜೈನ್ ಮತ್ತು ತಂಡ ಭಕ್ತಿ ಆಧಾರಿತ ನೃತ್ಯ ರೂಪಕ ‘ಶಿವಶಕ್ತಿ ‘ಯನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ವೇದಿಕೆಯಲ್ಲಿ ಪ್ರಸ್ತುತ ಪಡಿಸಿದರು. ನಾದಯೋಗ ಪ್ರಿಯನೆಂದು ಶಿವನನ್ನು ವರ್ಣಿಸುವ ನಟೇಶ ಕೌಸ್ತುಭ, ಹಂಸಧ್ವನಿ ರಾಗ, ಏಕತಾಳದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಆದಿಶಕ್ತಿಯ ಸ್ತುತಿಯಾದ ‘ಸರ್ವಮಂಗಳ ಮಾಂಗಲ್ಯೆ’ ಕಲಾಭಿಮಾನಿಗಳ ಚಪ್ಪಾಳೆಗೆ ಪಾತ್ರವಾಯಿತು. ವಿದುಷಿ ತನುಜಾ ಜೈನ್ ಪದವರ್ಣ ನೃತ್ಯ ಬಂಧದ ಉತ್ತರಾರ್ಧವನ್ನು ಮಾಧ್ಯಮ ಕಾಲದಲ್ಲಿ ವರ್ಣ ರಾಗಮಾಲಿಕೆ, ಆದಿ ತಾಳದಲ್ಲಿ ಪ್ರಸ್ತುತಪಡಿಸಿದರು. ಪೂರ್ವಿ ಕಲ್ಯಾಣಿ ರಾಗದಲ್ಲಿ ಶಿವ ತಾಂಡವ, ಪುರುಷ, ಸ್ತ್ರೀ ತತ್ವಗಳನ್ನು ಬಿಂಬಿಸುವ ಅರ್ಧನಾರೀಶ್ವರ ನೃತ್ಯ ಬಂಧ ಶಿವ ಮತ್ತು ಪ್ರಕೃತಿಯ ಆರಾಧನೆಯನ್ನು ಬಿಂಬಿಸುವ ನೃತ್ಯ ರೂಪಕವು ಮೂಡಿಬಂತು.

ಪುರಂದರ ದಾಸರ ಕೀರ್ತನೆ ‘ಚಂದ್ರಚೂಡ ಶಿವಶಂಕರ ಪಾರ್ವತಿ’ಯನ್ನು ಆದಿ ತಾಳದಲ್ಲಿ ಪ್ರದರ್ಶಿಸುವ ಮೂಲಕ ಕಲಾವಿದೆಯರು ಮನ್ಮಥ ದಹನ, ಸಮುದ್ರ ಮಥನ ಕಾಲದಲ್ಲಿ ರುದ್ರನು ವಿಷಕಂಠನಾಗುವುದು ಮುಂತಾದ ಶಿವ ಲೀಲೆಗಳನ್ನು ಪ್ರೇಕ್ಷಕರೆದುರು ನೃತ್ಯದಲ್ಲಿ ಚಿತ್ರಿಸಿದರು. ಶೀಘ್ರ ಗತಿಯ ತಿಲ್ಲಾನದೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು. ಕಲಾ ತಂಡದ ಸಂಗೀತ ಗುರು ವಿನೂತ ಸುರೇಶ್‌ ಅವರ ನಿರೂಪಣೆ ರೂಪಕಕ್ಕೆ ಮೆರುಗು ನೀಡಿತು.

(ವರದಿ: ವಿವೇಕ್ ಸಿ ಪಿ, ದ್ವಿತೀಯ ವರ್ಷ, ಸ್ನಾತಕೋತ್ತರ ಕೇಂದ್ರ ಸಮೂಹ ಸಂವಹನ ವಿಭಾಗ, ಉಜಿರೆ ಮತ್ತು ಶ್ರವಣ್ ಕುಮಾರ್, ಎಸ್ ಡಿ ಎಂ ಪದವಿ ಕಾಲೇಜು, ಉಜಿರೆ. | ಚಿತ್ರಗಳು: ಆಶಿಶ್ ಜಿ ಯಾದವ್)

ಪ್ರಿಯ ಓದುಗರೇ,
ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ-ಸೂಚನೆ, ನಾಗರಿಕ ಸಮಸ್ಯೆ ಇತ್ಯಾದಿ ಸಂಗತಿಗಳನ್ನು ಹೇಳಿಕೊಳ್ಳಲು ‘ವಿಸ್ತಾರʼದಲ್ಲಿ ನಿಮಗೆ ಮುಕ್ತ ಅವಕಾಶ ಇದೆ. ಸಾಂದರ್ಭಿಕ ಲೇಖನಗಳನ್ನೂ ನೀವು ಬರೆದು ಕಳುಹಿಸಬಹುದು. ಬರಹದ ಜತೆ ನಿಮ್ಮದೊಂದು ಫೋಟೊ ಕೂಡ ಇರಲಿ.
ನಮ್ಮ ಇಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | Sabarimala News | ಅಭಿಷೇಕ ಪ್ರಿಯ ಅಯ್ಯಪ್ಪ ಸ್ವಾಮಿಗೆ ನೆಯ್ಯಾಭಿಷೇಕ ಹೇಗೆ ನಡೆಯುತ್ತದೆ ಗೊತ್ತೇ?

Exit mobile version