ಬೆಂಗಳೂರು: ದೇವಾಲಯದ ಒಳಗೆ ವಸ್ತ್ರ ಸಂಹಿತೆ (Dress Code in Temples) ಪಾಲಿಸುವಂತೆ, ವಿದೇಶಿ ವಸ್ತ್ರಗಳು ಹಾಗೂ ತುಂಡುಡುಗೆ ಧರಿಸಿದವರಿಗೆ ದೇವಾಲಯದ ಒಳಗೆ ಪ್ರವೇಶಕ್ಕೆ ಅವಕಾಶ ನೀಡದಂತೆ ಆರಂಭಿಸಲಾದ ʼಟೆಂಪಲ್ ಇನ್ಸೈಡ್ ನೋ ವೆಸ್ಟರ್ನ್ ಡ್ರೆಸ್ʼ (Temple inside no western dress) ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ. ಇಂದಿನಿಂದ ರಾಜಧಾನಿಯ ದೇವಾಲಯಗಳಲ್ಲಿ ಅಧಿಕೃತವಾಗಿ ವಸ್ತ್ರಸಂಹಿತೆ ಜಾರಿಯಾಗುತ್ತಿದೆ.
ಕರ್ನಾಟಕ ದೇವಸ್ಥಾನ- ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಈ ಹಿಂದೆಯೂ ಇದಕ್ಕೆ ಒತ್ತಾಯ ಮಾಡಲಾಗಿತ್ತು. ಇದನ್ನು ಹಿಂದೂ ಸಂಘಟನೆಗಳು ಬೆಂಬಲಿಸಿದ್ದವು. ದೇವಾಲಯಗಳಲ್ಲಿ ತುಂಡು ಬಟ್ಟೆಗಳನ್ನು ಧರಿಸಿ ಬರುವ ಯುವಕ ಯುವತಿಯರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಲಾಗಿತ್ತು.
ಕಳೆದ ತಿಂಗಳು ರಾಜ್ಯದ ಎಲ್ಲಾ ಖಾಸಗಿ ದೇವಾಲಯ ಮತ್ತು ಮಠಗಳ ಅರ್ಚಕರು ಮತ್ತು ಟ್ರಸ್ಟಿಗಳ ಸಭೆ ಮಾಡಲಾಗಿತ್ತು. ಸಭೆಯಲ್ಲಿ ರಾಜ್ಯದ ಎಲ್ಲಾ ಅರ್ಚಕರು ಹಾಗೂ ಟ್ರಸ್ಟಿಗಳು ಜನವರಿಯಿಂದ ಈ ನಿಯಮವನ್ನು ಜಾರಿ ಮಾಡಬೇಕೆಂದು ತೀರ್ಮಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯದ ದೇವಾಲಯಗಳು, ರಾಜಧಾನಿಯ ದೇವಾಲಯಗಳಲ್ಲಿ ಭಾರತೀಯ ಉಡುಪುಗಳನ್ನು ಧರಿಸಿ ಬರುವವರಿಗೆ ಮಾತ್ರ ದೇವರ ದರ್ಶನ ಮಾಡುವ ಅವಕಾಶ ಕಲ್ಪಿಸಲಾಗುತ್ತಿದೆ.
ಇಂದಿನಿಂದ ಪುರುಷರು ದೇವಾಲಯಕ್ಕೆ ಚಡ್ಡಿ, ಬರ್ಮುಡಾ, ಹರಿದ ಜೀನ್ಸ್, ಎದೆ ಕಾಣುವ ಟಿಶರ್ಟ್ ಧರಿಸಿಕೊಂಡು ಬರುವಂತಿಲ್ಲ. ಮಹಿಳೆಯರು ಸ್ಕರ್ಟ್, ಮಿಡಿ, ಹರಿದ ಜೀನ್ಸ್, ಶಾರ್ಟ್ಸ್ ಹಾಕಿಕೊಂಡು ಬಂದರೆ ಟೆಂಪಲ್ಗೆ ನೋ ಎಂಟ್ರಿ. ಸಭ್ಯವಾದ ಭಾರತೀಯ ಉಡುಗೆಗಳಿಗೆ ಮಾತ್ರ ಅವಕಾಶ. ಸ್ತ್ರೀಯರು ಸೀರೆ, ಚೂಡಿದಾರ್, ಕುರ್ತಾ ಧರಿಸಬೇಕು. ಪುರುಷರ್ ಪಂಚೆ, ಶೇರ್ವಾನಿ, ಪ್ಯಾಂಟ್, ಅಂಗಿ ಧರಿಸಬೇಕು. ಬಿಗಿಯಾದ ಜೀನ್ಸ್ಗಳನ್ನು ಧರಿಸುವಂತಿಲ್ಲ.
ಈ ಕುರಿತು ದೇವಸ್ಥಾನದ ಎದುರು ಬೋರ್ಡ್ಗಳನ್ನು ಹಾಕುವ ಅಭಿಮಾನ ಇಂದಿನಿಂದ ಶುರುವಾಗುತ್ತಿದೆ. ಇಂದು ಬೆಳಿಗ್ಗೆ 11 ಗಂಟೆಗೆ ವಸಂತನಗರದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಾಲಯದಿಂದ ಈ ವಸ್ತ್ರ ಸಂಹಿತೆ ಬೋರ್ಡ್ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಹಿಂದೂ ಸಂಘಟನೆಗಳಿಂದ ಈ ಬಗ್ಗೆ ಅಭಿಯಾನ ನಡೆಯಲಿದೆ.
ಕೇರಳದ ಹಲವಾರು ದೇವಾಲಯಗಳಲ್ಲಿ ಈ ಬಗ್ಗೆ ಬಿಗಿಯಾದ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಕೇರಳದ ಕೆಲವು ಕಡೆ ಹಾಗೂ ದಕ್ಷಿಣ ಕನ್ನಡ- ಉಡುಪಿಯ ಕೆಲವು ದೇವಾಲಯಗಳಲ್ಲಿ ಪುರುಷರು ಅಂಗಿ ಧರಿಸಿ ದೇವಾಲಯದ ಒಳಗೆ ಪ್ರವೇಶಿಸುವಂತಿಲ್ಲ. ಮುಜರಾಯಿ ಇಲಾಖೆ ಈ ಬಗ್ಗೆ ಯಾವುದೇ ನಿರ್ದೇಶನ ಹೊಂದಿಲ್ಲ. ಆದರೆ ಆಯಾ ದೇವಸ್ಥಾನದ ಆಚಾರಸಂಹಿತೆಗೆ ಅನುಗುಣವಾಗಿ ನಿಯಮಗಳನ್ನು ಪಾಲಿಸಲಾಗುತ್ತಿದೆ.
ಇದನ್ನೂ ಓದಿ: Ram Mandir: ರಾಮಮಂದಿರ ಲೋಕಾರ್ಪಣೆ; ಜ.22ಕ್ಕೆ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ