ಅಫ್ಸಾನಾ ಯಾಸ್ಮೀನ್, ಕಾರ್ಕಳ
ಮುಸ್ಲಿಮರ ಪವಿತ್ರ ಎರಡು ಈದ್ ಆಚರಣೆಗಳಲ್ಲಿ ಒಂದು ಈದುಲ್ ಅದ್ಹಾ ಬಕ್ರೀದ್ ಹಬ್ಬ. ಮತ್ತೊಂದು ಈದುಲ್ ಫಿತ್ರ್. ಒಂದು ತಿಂಗಳ ರಂಝಾನ್ ವ್ರತವನ್ನು ಪೂರ್ಣಗೊಳಿಸಿ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿ ಎರಡು ತಿಂಗಳ ಬಳಿಕ ಝುಲ್ ಹಿಜ್ಜ ಎಂಬ ತಿಂಗಳಲ್ಲಿ ಆಚರಿಸುವ ಹಬ್ಬವಾಗಿದೆ ಈದುಲ್ ಅದ್ಹಾ. ಪವಿತ್ರ ಕರ್ಮವಾದ ಹಜ್ ಅನ್ನು ಈ ತಿಂಗಳಲ್ಲಿ ನಿರ್ವಹಿಸಲಾಗುತ್ತದೆ.
ಹಜ್ ಕರ್ಮ ಮತ್ತು ಬಕ್ರೀದ್ ಹಬ್ಬಕ್ಕೆ ಇಸ್ಲಾಮಿನಲ್ಲಿ ಬಹಳ ಪಾವಿತ್ರ್ಯತೆ ಮತ್ತು ಇತಿಹಾಸವಿದೆ. ಪ್ರವಾದಿ ಹಝ್ರತ್ ಇಬ್ರಾಹಿಂ ಮತ್ತು ಇಸ್ಮಾಯಿಲ್ ಅ.ಸ ಅವರ ಜೀವನದ ಪ್ರಮುಖ ಘಟನೆಗಳ ಸ್ಮರಣೆ ಮತ್ತು ಪಾಲನೆ ಹಜ್ ಮತ್ತು ಬಕ್ರೀದ್ ಹಬ್ಬದ ಪ್ರಮುಖ ಭಾಗವಾಗಿದೆ. ಈ ಕುರಿತಾದ ಸಂಭವಿಸಿದ ಚಾರಿತ್ರಿಕ ಘಟನೆಗಳು ಹಿನ್ನೆಲೆಗಳು ಪವಿತ್ರ ಗ್ರಂಥ ಖುರಾನ್ ಮತ್ತು ಹದೀಸ್ ಇನ್ನಿತರ ಗ್ರಂಥಗಳಲಿ ಬಹಳ ವಿಸ್ತಾರವಾಗಿ ಉಲ್ಲೇಖಿಸಲಾಗಿದೆ.
ಏನಿದು ಮಹಾನ್ ತ್ಯಾಗದ ಕಥೆ?
ಪ್ರವಾದಿ ಹಜರತ್ ಇಬ್ರಾಹಿಂ ದೇವರ ಆರಾಧನೆಗೆ ತನ್ನನ್ನು ಸಮರ್ಪಿಸಿಕೊಂಡಿದ್ದರು. ಅಲ್ಲಾಹನು ಅವರ ಆರಾಧನೆಯಿಂದ ಎಷ್ಟು ಸಂತೋಷಪಟ್ಟಿದ್ದ ಎಂದರೆ ಒಂದು ದಿನ ಅಲ್ಲಾಹನು ಪ್ರವಾದಿ ಹಜರತ್ ಇಬ್ರಾಹಿಂರನ್ನು ಪರೀಕ್ಷಿಸಿಬೇಕೆಂದು ಅಂದುಕೊಂಡನು. ಅಲ್ಲಾಹನು ಇಬ್ರಾಹಿಂ ಬಳಿಗೆ ಬಂದು ನಿನಗೆ ಪ್ರಿಯವಾದ ವಸ್ತು ಅಥವಾ ವ್ಯಕ್ತಿ ಯಾರು ಎಂದು ಕೇಳುತ್ತಾರೆ. ಅದಕ್ಕೆ ಇಬ್ರಾಹಿಂ ಅವರು ತನ್ನ ಮಗ ಇಸ್ಮಾಯಿಲ್ ಎನ್ನುತ್ತಾರೆ. ಆಗ ದೇವರು ಆತನನ್ನು ನನಗಾಗಿ ಬಲಿ ನೀಡುವೆಯಾ ಎಂದು ಕೇಳುತಾರೆ. ಆಗ ಇಬ್ರಾಹಿಂ ಒಂದು ಕ್ಷಣವೂ ಯೋಚಿಸದೆ ತನ್ನ ಮಗನಾದ ಇಸ್ಮಾಯಿಲ್‌ನನ್ನು ಬಲಿ ನೀಡುವ ಮೂಲಕ ತ್ಯಾಗ ಮಾಡಲು ಮುಂದಾಗುತ್ತಾರೆ.
ಆಗ ಅಲ್ಲಾಹನು ಇವನು ನಿನ್ನ ಮಗ, ಈತನನ್ನೇ ಬಲಿ ಕೊಡುತ್ತೀಯಾ ಎಂದು ಕೇಳುತ್ತಾನೆ. ಆಗ ಪ್ರವಾದಿ ಹಜರತ್ ಇಬ್ರಾಹಿಂ ಅವರು ನನಗೆ ನನ್ನ ಮಗನಿಗಿಂತ ಪ್ರಿಯವಾದ ಮತ್ತು ಹೆಚ್ಚು ಅಮೂಲ್ಯವಾದುದು ಯಾವುದೂ ಇಲ್ಲವೆಂದು ಹೇಳಿ ಮಗನನ್ನು ಬಲಿ ನೀಡಲು ಮುಂದಾಗುತ್ತಾರೆ.
ಅವನು ತನ್ನ ಮಗನನ್ನು ಬಲಿಕೊಡಲು ಬಯಸಿದ ತಕ್ಷಣ, ಅಲ್ಲಾಹನು ಇಬ್ರಾಹಿಂನ ಮಗನ ಸ್ಥಾನದಲ್ಲಿ ಕುರಿಯನ್ನು ಇಟ್ಟು, ಆತನಿಗೆ ಮಗನನ್ನು ಪುನಃ ಒಪ್ಪಿಸುತ್ತಾನೆ. ಬಲಿ ಪೀಠದಲ್ಲಿ ಕುರಿಯನ್ನು ನೋಡಿ ಆಶ್ಚರ್ಯಗೊಂಡ ಇಬ್ರಾಹಿಂ ನನ್ನ ಮಗನ ಎಲ್ಲಿ ಎಂದು ವಿಚಾರಿಸುತ್ತಾನೆ. ಆಗ ಅಲ್ಲಾಹು ನಿನ್ನ ನಿಷ್ಕಲ್ಮಶವಾದ ಭಕ್ತಿಗೆ ಮೆಚ್ಚಿದ್ದೇನೆ ಎಂದು ಆತನ ಮಗನನ್ನು ಆತನಿಗೆ ಹಿಂದಿರುಗಿಸುತ್ತಾನೆ.
ಈ ಭಕ್ತಿ, ಬಲಿದಾನ ಮತ್ತು ಇಸ್ಮಾಯಿಲ್‌ನ ಮರುಹುಟ್ಟನ್ನು ಮುಂದಿನ ಪೀಳಿಗೆಗೆ ತಿಳಿಸಲು ಈ ಘಟನೆಯನ್ನು ತಿಳಿದು ಇದರಿಂದ ನೈಜವಾದ ದೇವನ ಪಾದದಲ್ಲಿ ಸಂಚರಿಸುವ ಸ್ಮರಣಾರ್ಥವಾಗಿ ಮುಸ್ಲಿಂ ಬಾಂಧವರಿಗೆ ಹಜ್ ಕರ್ಮವನ್ನು ಕಡ್ಡಾಯಗೊಳಿಸಿದೆ. ಆರೋಗ್ಯ, ಹಣ ಮತ್ತು ಮೂಲ ಸೌಕರ್ಯ ಇವುಗಳನ್ನು ಹೊಂದಿದವನು ಕಡ್ಡಾಯವಾಗಿ ಹಜ್ ಕರ್ಮವನ್ನು ನಿರ್ವಹಿಸಬೇಕು ಎಂಬ ನಿಯಮವಿದೆ.
ಇದು ಇಸ್ಲಾಮಿನ ಪಂಚ ಸ್ಥಂಭದಲ್ಲಿ ಒಂದಾಗಿದೆ. ಆದ್ದರಿಂದ ಸಾದ್ಯವಾಗುವವರು ಝುಲ್ ಹಿಜ್ಜ ಈ ತಿಂಗಳಲ್ಲಿ ಪವಿತ್ರ ಮಕ್ಕಾ ಗೆ ತೆರಳಿ ಹಜ್ ಮತ್ತು ಉಮ್ರಾ ಎಂಬ ಆರಾಧನೆಯನ್ನು ಮಾಡುತ್ತಾರೆ. ಪವಿತ್ರ ಮಕ್ಕಾಗೆ ತೆರಳಿ ಹಜ್ ಮತ್ತು ಉಮ್ರಾ ಕರ್ಮವನ್ನು ನಿರ್ವಹಿಸಲು ಸಾದ್ಯವಾಗದವರು ಈದುಲ್ ಅದ್ಹಾ ದಿನದಂದು ತಮ್ಮ ತಮ್ಮ ನಾಡಿನಲ್ಲೇ ಬಕ್ರೀದ್ ಆಚರಣೆ ಮಾಡುತ್ತಾರೆ.
ಈದ್ ನಮಾಝ್ ಹಾಗೂ ಹೊಸ ಉಡುಪುಗಳನ್ನು ಧರಿಸಿ ಕುರಿ, ಮೇಕೆ ಇವುಗಳನ್ನು ಬಲಿ ನೀಡಿ ಬಡವರಿಗೆ ಹಂಚುವ ಮೂಲಕ ಸಡಗರ ಸಂಭ್ರಮದಿಂದ ಬಕ್ರೀದ್ ಹಬ್ಬವನ್ನುಆಚರಿಸಲಾಗುತ್ತದೆ. ಒಟ್ಟಿನಲ್ಲಿ ಶಾಂತಿ, ಸೌಹಾರ್ದತೆ, ಪ್ರೀತಿ, ಗೌರವ ಪರಸ್ಪರ ಹರಡುವುದೇ ಎಲ್ಲಾ ಹಬ್ಬಗಳ ಮುಖ್ಯ ಉದ್ದೇಶ.
ಇದನ್ನೂ ಓದಿ: Eid al Adha: 1 ಕೋಟಿ ಕೊಡ್ತೇವೆಂದ್ರೂ ಮುಸ್ಲಿಮರಿಗೆ ಈ ಕುರಿಮರಿ ಕೊಡ್ತಿಲ್ಲ ಅದರ ಮಾಲೀಕ; ವಿಶೇಷ ಕಾರಣವಿದೆ!