ಶೀಲಾ ಸಿ. ಶೆಟ್ಟಿ, ಬೆಂಗಳೂರು
ವರಮಹಾಲಕ್ಷ್ಮಿ ಹಬ್ಬಕ್ಕೆ ಥೇಟ್ ಲಕ್ಷ್ಮಿಯಂತೆ ಕಂಗೊಳಿಸಿ. ಇದು ಈ ಹಬ್ಬದ ಸೀಸನ್‌ನ ಫ್ಯಾಷನ್ ಥೀಮ್ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹೌದು. ವರಮಹಾಲಕ್ಷ್ಮಿ ಹಬ್ಬದಂದು ಎಥ್ನಿಕ್ ಲುಕ್‌ಗೆ ಸೈ ಎನ್ನಿ. ಟ್ರೆಡಿಷನಲ್ ಸೀರೆ ಹಾಗೂ ಆಭರಣಗಳು ಇದಕ್ಕೆ ಹೊಂದುವ ಮೇಕಪ್ ಮತ್ತು ಹೇರ್‌ಸ್ಟೈಲ್ ಮಾಡಿದಲ್ಲಿ ಕಣ್ತುಂಬಿಸಿಕೊಳ್ಳುವ ಲಕ್ಷ್ಮಿ ಲುಕ್ ನಿಮ್ಮದಾಗುವುದು ಎನ್ನುತ್ತಾರೆ ನಟಿ ಹಾಗೂ ಮಾಡೆಲ್ ಸೋನಿಕಾ ಗೌಡ. ಅವರು ಹೇಳುವಂತೆ, ಹಬ್ಬಗಳಂದು ವೆಸ್ಟರ್ನ್ ಔಟ್‌ಫಿಟ್‌ಗಳಿಗೆ ಬೈ ಬೈ ಹೇಳಿ, ಟ್ರೆಡಿಷನಲ್ ಲುಕ್ಕನ್ನು ತಮ್ಮದಾಗಿಸಿಕೊಳ್ಳಬೇಕು. ಆಗಷ್ಟೇ ಹಬ್ಬದ ಸಂಭ್ರಮ ಇಮ್ಮಡಿಯಾಗುವುದು.
ಶ್ರಾವಣ ಮಾಸಕ್ಕೆ ಗಾಡ್ಡೆಸ್ ಥೀಮ್
ಆಕರ್ಷಕ ರೇಷ್ಮೆ ಸೀರೆ ಇಲ್ಲವೇ ಲಂಗ-ದಾವಣಿ, ಇದಕ್ಕೆ ಸೂಕ್ತವೆನಿಸುವ ಮೇಕಪ್, ಕಣ್ಣಿಗೆ ಕಾಜಲ್, ಕಲರ್ಡ್ ವಿಂಗ್ ಐ ಲೈನರ್, ಡಿಸೈನರ್ ಡಾರ್ಕ್ ಶೇಡ್‌ನ ಅಗಲವಾದ ಬಂಗಾಲಿ ಬಿಂದಿ, ಕಿವಿಗೆ ಟ್ರಡಿಷನಲ್ ಬಿಗ್ ಜುಮ್ಕಾ, ಕತ್ತಿಗೆ ಮಲ್ಟಿಪಲ್ ಲೆಯರ್ಡ್ ಆ್ಯಂಟಿಕ್ ಹಾರ, ಬಿಗ್ ಚೋಕರ್, ಕೈತುಂಬಾ ಕಾಣುವ ಬ್ಯಾಂಗಲ್ ಸೆಟ್, ಬಳುಕುವ ಸೊಂಟವನ್ನು ಸುತ್ತುವ ಕಮರ್‌ಬಾಂದ್, ಕೈಗೆ ಬಾಜೂಬಂದ್. ಇವೆಲ್ಲಾ ಈ ಲುಕ್‌ಗೆ ಸಾಥ್ ನೀಡುತ್ತವೆ. ಥೇಟ್ ಲಕ್ಷ್ಮಿಯ ಪ್ರತಿರೂಪದಂತೆ ಮಾನಿನಿಯರನ್ನು ಪ್ರತಿಬಿಂಬಿಸುತ್ತವೆ.
“ಶ್ರಾವಣ ಮಾಸದಲ್ಲಿ ಸಾಕಷ್ಟು ಹಬ್ಬಗಳು, ವ್ರತಗಳು ಬರುವುದರಿಂದ ಎಥ್ನಿಕ್ ಫ್ಯಾಷನ್ ಲೋಕ ಕಂಪ್ಲೀಟ್ ಬದಲಾಗುತ್ತದೆ. ಅದರಲ್ಲೂ ಸೌತ್ ಇಂಡಿಯನ್ ಸ್ಟೈಲ್‌ಗೆ ಹೊಂದುವಂತೆ ಮಹಿಳೆಯರು ದೇವಿ ಲಕ್ಷ್ಮಿಯಂತೆ ಸಿಂಗರಿಸಿಕೊಳ್ಳುವುದು ಫೆಸ್ಟಿವ್ ಥೀಮ್ ಆಗಿ ಬದಲಾಗುತ್ತದೆ. ಅಂದರೆ, ಇದು ಇಂಡಿಯನ್ ಗಾಡ್ಡೆ
ಸ್ ಲುಕ್‌ನ ಥೀಮ್” ಎನ್ನುತ್ತಾರೆ ಯಶ್ವಿ ಸ್ಟುಡಿಯೋ ಡಿಸೈನರ್ಸ್.
ಟ್ರೆಡಿಷನಲ್ ಸೀರೆ ಅಥವಾ ಉಡುಪು
ಹಬ್ಬದಂದು ಟ್ರಡಿಷನಲ್ ಲುಕ್‌ಗೆ ಸಾಥ್ ನೀಡುವ ಬಾರ್ಡರ್ ರೇಷ್ಮೆ ಸೀರೆ ಅಥವಾ ಎಥ್ನಿಕ್ ಲುಕ್ ನೀಡುವ ಲೆಹೆಂಗಾ, ಲಂಗ-ದಾವಣಿಯಂತಹ ಡ್ರೆಸ್‌ಕೋಡ್‌ಗೆ ಯೆಸ್ ಎನ್ನಿ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ
ಫಂಕಿ ಹಾಗೂ ಜಂಕ್ ಜುವೆಲರಿಗಳನ್ನು ಆವಾಯ್ಡ್ ಮಾಡಿ. ಆದಷ್ಟೂ ಟ್ರೆಡಿಷನಲ್ ಆಭರಣಗಳಾದ ಜುಮಕಿ, ಮಾಟಿ, ಮಾಂಗ್‌ಟೀಕಾ, ನೆಕ್‌ಲೇಸ್, ಹಾರ, ಬಳೆ ಸೆಟ್, ಸೊಂಟವನ್ನು ಸುತ್ತುವ ಡಾಬು, ಬಾಜುಬಂದ್‌ನಂತವನ್ನು ಧರಿಸಿ. ಕಾಲಿಗೆ ಗೆಜ್ಜೆ, ಕಾಲುಂಗುರ ಹಾಕಿಕೊಳ್ಳಿ. ಎಥ್ನಿಕ್ ಲಿಕ್ ನಿಮ್ಮದಾಗುವುದು.
ಆಕರ್ಷಕ ಹೇರ್‌ಸ್ಟೈಲ್
ಇನ್ನು ಹೂವಿನ ಜಡೆ, ಮೊಗ್ಗಿನ ಜಡೆ, ಜಡೆ ಬಿಲ್ಲೆ ಹಬ್ಬದಂದು ಧರಿಸಬಹುದಾದ ಹೇರ್‌ಸ್ಟೈಲ್. ಕೂದಲು ಗಿಡ್ಡವಾಗಿದ್ದರೂ ಇದೀಗ ಮಾರುಕಟ್ಟೆಯಲ್ಲಿ ಸಿಗುವ ಆಕ್ಸೆಸರೀಸ್‌ಗಳಿಂದ ಎಥ್ನಿಕ್ ಸ್ಟೈಲ್‌ಗೆ ಸೂಟ್ ಆಗುವಂತಹ ನಾನಾ ಬಗೆಯ ಜಡೆಯ ಸಿಂಗಾರ ಮಾಡಿಕೊಳ್ಳಬಹುದು. ಇದು ಕೂಡ ಟ್ರೆಡಿಷನಲ್ ಲುಕ್ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಹಬ್ಬದ ಮೇಕಪ್ ಹೀಗಿರಲಿ
ಹಬ್ಬಕ್ಕೆ ಮೇಕಪ್‌ನಲ್ಲಿ ಮೊದಲ ಪ್ರಾಮುಖ್ಯತೆ ಹಣೆಗಿಡುವ ಬಿಂದಿಗಿದೆ. ನಂತರ ಕಂಗಳ ಸೌಂದರ್ಯ ಹೆಚ್ಚಿಸುವ ಕಾಡಿಗೆಗಿದೆ. ಸದ್ಯಕ್ಕೆ ಫಂಕಿ ಮೇಕಪ್‌ಗಳನ್ನು ತೊರೆದು ಡಿಸೆಂಟ್ ಲುಕ್ ನೀಡುವ ಫೆಸ್ಟಿವ್ ಮೇಕಪ್ ಮಾಡಿಕೊಳ್ಳುವುದು ಉತ್ತಮ. ಉಡುವ ಸೀರೆಗೆ ಮ್ಯಾಚ್ ಆಗುವಂತಹ ಬಿಂದಿ ಹಚ್ಚಿ. ಐ ಲೈನರ್, ಮಸ್ಕರಾ ಬಳಸಿ. ಲಿಪ್‌ಸ್ಟಿಕ್ ಸ್ಕಿನ್ ಟೋನ್‌ಗೆ ತಕ್ಕಂತೆ ಲೇಪಿಸಿ. ಮಳೆನೀರಿಗೆ ಹಾಳಾಗದ ಮಾನ್ಸೂನ್ ಮೇಕಪ್ ತಮ್ಮದಾಗಿಸಿಕೊಳ್ಳಿ ಎನ್ನುತ್ತಾರೆ ಸೌಂದರ್ಯ ತಜ್ಞೆ ಶ್ವೇತಾ ಮಹಾದೇವ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Festive Fashion: ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಡಿಷನಲ್ ಲೆಹೆಂಗಾ ಎಂಟ್ರಿ